ಒಂದು ಮತದಿಂದ ಗೆದ್ದು ಸೋತವರ ನಡುವೆ ಮತ್ತೆ ಸ್ಪರ್ಧೆ
ಕೊಳ್ಳೇಗಾಲ: ಒಂದು ಮತದ ಅಂತರದಿಂದ ಗೆದ್ದು- ಸೋತವರಿಬ್ಬರೂ ಈ ಚುನಾವಣೆಯಲ್ಲಿ ಮತ್ತೆ ಒಂದೇ ವಾರ್ಡ್ನಲ್ಲಿ ಕಣಕ್ಕಿಳಿದಿರುವುದು ಈ ಬಾರಿ ನಡೆಯುವ ನಗರಸಭಾ ಚುನಾವಣೆಯ ವಿಶೇಷವಾಗಿದ್ದು, ವಾರ್ಡ್ ನಂ.15ರಲ್ಲಿ ಈ ಇಬ್ಬರು ಅಭ್ಯರ್ಥಿಗಳು ತಮ್ಮ ಅದೃಷ್ಟ ಪರೀಕ್ಷೆಗೆ ಸಜ್ಜಾಗಿದ್ದಾರೆ.
2002ರ ಚುನಾವಣೆಯಲ್ಲಿ ಸಿಂಗಾರಿ ಪರಮೇಶ್ ಅಲಿಯಾಸ್ ಪರಮೇಶ್ವರ ಮತ್ತು ಎ.ಪಿ.ಶಂಕರ್ ಅವರ ನಡುವೆ 21ನೇ ವಾರ್ಡ್ನಲ್ಲಿ ತೀವ್ರ ಪೈಪೋಟಿ ನಡೆದು 1 ವೋಟ್ನಿಂದ ಸಿಂಗಾರಿ ಪರಮೇಶ್ ಗೆಲವು ಸಾಧಿಸಿದ್ದರು. ನಂತರ 2007ರ ಚುನಾವಣೆಯಲ್ಲಿ 13ನೇ ವಾರ್ಡ್ಗೆ ಜೆಡಿಎಸ್ನಿಂದ ಸಿಂಗಾರಿ ಪರಮೇಶ್ ಸ್ಪರ್ಧಿಸಿ ಪಕ್ಷೇತರ ಅಭ್ಯರ್ಥಿ ನಾರಾಯಣ ವಿರುದ್ಧ 2 ಮತಗಳಿಂದ ಸೋತಿದ್ದರು.
ಇದೀಗ 15ನೇ ವಾರ್ಡ್ನಲ್ಲಿ ಎ.ಪಿ. ಶಂಕರ್ ಕಾಂಗ್ರೆಸ್ನಿಂದ ಸಿಂಗಾರಿ ಪರಮೇಶ್ ಪಕ್ಷೇತರವಾಗಿ ಸ್ಪರ್ಧಿಸಿದ್ದಾರೆ. 2002ರಲ್ಲಿ ಮತ ಎಣಿಕೆ ಸಂದರ್ಭದಲ್ಲಿ ಶಂಕರ್ ಮತ್ತು ಸಿಂಗಾರಿ ಪರಮೇಶ್ ಇಬ್ಬರಿಗೂ ಸಮ ಮತಗಳು ಬಂದವು. ಇದರಿಂದ ಚೀಟಿ ತೆಗೆದು ಆಯ್ಕೆ ಪ್ರಕ್ರಿಯೆ ನಡೆಸಲು ಅಂದಿನ ತಹಸಿಲ್ದಾರ್ ಶಿವಣ್ಣ ಮುಂದಾದರು. ಆದರೆ, ಇದಕ್ಕೆ ಗಲಾಟೆ ಪ್ರಾರಂಭವಾದ ತಕ್ಷಣ ಮರು ಎಣಿಕೆಗೆ ಮುಂದಾಗಲಾಯಿತು. ಎಣಿಕೆ ಮುಗಿದಾಗ ಸಿಂಗಾರಿ ಪರಮೇಶ್ಗೆ 1 ಮತ ಹೆಚ್ಚಾಗಿ ದೊರೆತಿತ್ತು.
ಈಗ 2013ರ ಚುನಾವಣೆಯಲ್ಲೂ ಇಬ್ಬರೂ ಒಂದೇ ವಾರ್ಡ್ನಿಂದ ಕಣಕ್ಕಿಳಿದು ಗಮನ ಸೆಳೆದಿದ್ದಾರೆ. ಮಾತ್ರವಲ್ಲ, ಇಬ್ಬರು ಅಭ್ಯರ್ಥಿಗಳಿಗೂ ಜೆಡಿಎಸ್ನಿಂದ ಕಳೆದ ಬಾರಿ ಇದೇ ವಾರ್ಡ್ನಿಂದ ಪ್ರಬಲ ಪೈಪೋಟಿ ನೀಡಿ ಪರಾಭವ ಹೊಂದಿದ್ದ ಚಿಂತು ಪರಮೇಶ್ ಪೈಪೋಟಿ ನೀಡುತ್ತಿದ್ದಾರೆ. ಈ ವಾರ್ಡ್ ತ್ರಿಕೋನ ಸ್ಪರ್ಧೆಯ ಅಖಾಡವಾಗಿ ಪರಿವರ್ತನೆಯಾಗಿದೆ.
ಈ ವಾರ್ಡ್ನಲ್ಲಿ ಸಿಂಗಾರಿ ಪರಮೇಶ್ ಪಕ್ಷೇತರರಾಗಿ, ಎ.ಪಿ.ಶಂಕರ್ ಕಾಂಗ್ರೆಸ್ ಅಭ್ಯರ್ಥಿಯಾಗಿ, ಚಿಂತು ಪರಮೇಶ್ವರಯ್ಯ ಜೆಡಿಎಸ್, ಶಶಿಧರ್ ಕೆಜೆಪಿಯಿಂದ ಸ್ಪರ್ಧೆಗಿಳಿದು ಅದೃಷ್ಟ ಪರೀಕ್ಷೆಗೆ ಸಜ್ಜಾಗಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

