ಚಾಮರಾಜನಗರ

ಕಾಟಾಚಾರದ ಬಜೆಟ್ ಪೂರ್ವಭಾವಿ ಸಭೆ

Published On :

ಹೊಳೆನರಸೀಪುರ: ಇಲ್ಲಿನ ಪುರಸಭೆಯಲ್ಲಿ ವಿನೋದ ಅವರ ಅಧ್ಯಕ್ಷತೆಯಲ್ಲಿ ಸೋಮವಾರದಂದು ನಡೆದ ಬಜೆಟಟ್ ಮೇಲಿನ ಪೂರ್ವಭಾವಿ ಸಭೆಯು ಕೇವಲ ನಾಲ್ವರು ಸಾರ್ವಜನಿಕರನ್ನು ಹೊರತುಪಡಿಸಿ, ಇನ್ನುಳಿದಂತೆ ಕೆಲವು ಸದಸ್ಯರುಗಳ ಸಮ್ಮುಖದಲ್ಲಿ ನಡೆಯಿತು.
ಕೆಲವು ನಿಮಿಷಗಳಾದರೂ, ಸಭೆಯ ತುಂಬೆಲ್ಲಾ ಸದಸ್ಯರು ಹಾಗೂ ಇನ್ನಿತರರು ಪಟ್ಟಣದಲ್ಲಿನ ಕುಂದುಕೊರತೆಗಳ ಬಗ್ಗೆಯೇ ಹೆಚ್ಚಿನದಾಗಿ ಗಮನ ಸೆಳೆದ ಕಾರಣದಿಂದಾಗಿ ಇದು ಬಜೆಟ್ ಪೂರ್ವಭಾವಿ ಸಭೆಯೋ ಅಥವಾ ಕುಂದುಕೊರತೆ ಪರಿಶೀಲನಾ ಸಭೆಯೋ ಎಂಬ ಅನುಮಾನ ಕಾಡಿತು.
ಪುರಸಭೆಯ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಇಲ್ಲಿನ ಪುರಸಭೆಗೆ ಸಂಬಂಧಿಸಿದಂತೆ ನಿರೀಕ್ಷಿತ ಜಮಾ ಮತ್ತು ಖರ್ಚಿನ ತನಿಖೆಯ ಕುರಿತಂತೆ ಪೂರ್ವಬಾವಿಯಾಗಿ ಚರ್ಚಿಸಲು ಸಭೆ ಕರೆಯಲಾಗಿತ್ತು.
ಪಟ್ಟಣದ ಯಾವುದೇ ಸಂಘ-ಸಂಸ್ಥೆಗಳಾಗಲೀ, ಜನಪ್ರತಿನಿಧಿಗಳಾಗಲೀ, ವಿಚಾರವಂತರಾಗಲೀ ಯಾರೊಬ್ಬರೂ ಹಾಜರಿರದೆ, ಕೇವಲ ನಾಲ್ವರು ಸಾರ್ವಜನಿಕರು ಮಾತ್ರವೇ ಹಾಜರಿದ್ದರು.
ಇನ್ನುಳಿದವರೆಲ್ಲರೂ ಪುರಸಭೆಯ ಸದಸ್ಯರೇ ಆಗಿದ್ದು, ಎಲ್ಲರೂ ಹಿಂದಿನ ಸಭೆಗಳಲ್ಲಿ ತಲೆಯಾಡಿಸಿ ಸಮ್ಮತಿ ಸೂಚಿಸಿ ಹೋಗುತ್ತಿದ್ದ ರೀತಿಯಲ್ಲಿಯೇ ಇಂದಿನ  ಸಭೆಯು ಕೂಡ ಕೇವಲ ಕಾಟಾಚಾರಕ್ಕಾಗಿ ಕರೆದ ಸಭೆಯಂತಿತ್ತು.
2013-14ನೇ ಸಾಲಿಗೆ ತಯಾರಿಸಲಾಗಿದ್ದ ಬಜೆಟ್ ಅಂದಾಜು ಪಟ್ಟಿಯಲ್ಲಿ ನಿರೀಕ್ಷಿತ ಜಮೆಯ ಅಂದಾಜು 10.45ಕೋಟಿ ರು.ಗಳಾದರೆ, ನಿರೀಕ್ಷಿತ ಖರ್ಚುಗಳ ಅಂದಾಜು ಪಟ್ಟಿಯು 10.24 ಕೋಟಿ ರು.ಗಳಷ್ಟನ್ನು ಸಿದ್ದಪಡಿಸಿಕೊಂಡು ಚರ್ಚೆಗೆ ಕರೆಯಲಾಗಿತ್ತು.
ಸಭೆಯ ಮಧ್ಯದಲ್ಲಿಯೇ ಈ ಬಾರಿ ಬಜೆಟ್‌ನಲ್ಲಿ ಕ್ರೀಡೆ ಹಾಗೂ ಸಾಸಂಸ್ಕೃತಿಕ ಚಟುವಟಿಕೆಗಳಿಗೆ ಯಾವುದೆ ಅನುದಾನವನ್ನೂ ಮೀಸಲಿರಿಸಿಲ್ಲ ಎಂದು ಎಸ್‌ಎಲ್‌ಎನ್ ಯುವಕ ಸಂಘದ ಎಚ್.ಕೆ.ಪ್ರಸನ್ನಕುಮಾರ್ ಆಕ್ಷೇಪಿಸಿದರು.
 ಆಗ ಸಭೆಯಲ್ಲಿ ಕ್ರೀಡೆ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಿಗಾಗಿ 2ಲಕ್ಷ ರು.ಗಳನ್ನು ಮೀಸಲಿಡಲು ತೀರ್ಮಾನಿಸಲಾಯಿತು. ಅಲ್ಲದೇ ಪಟ್ಟಣದಾದ್ಯಂತ ದಿನೇ ದಿನೆ ಹದಗೆಡುತ್ತಿರುವ ಒಳಚರಂಡಿ ಹಾಗೂ ಕಲುಷಿತಗೊಂಡಿರುವ ನೀರಿನ ಸರಬರಾಜಿನ ಬಗ್ಗೆ ಗಮನ ನೀಡುವಂತೆ ಸಲಹೆಗಳು ವ್ಯಕ್ತವಾದವು.
ಪಟ್ಟಣದ ಯಾವುದೇ ಸ್ಥಳದಲ್ಲೂ ವಾಹನಗಳಿಗೆ ಪಾರ್ಕಿಂಗ್ ಸೌಲಭ್ಯವನ್ನು ಪುರಸಭೆಯು ಕಲ್ಪಿಸುವ ಸೌಜನ್ಯ ತೋರದ ಕುರಿತಂತೆಯೂ ಸಭೆಯಲ್ಲಿ ಆಕ್ಷೇಪಗಳು ವ್ಯಕ್ತವಾಯಿತಲ್ಲದೇ, ಸಾರ್ವಜನಿಕ ಸ್ಥಳಗಳಲ್ಲಿ ಎಲ್ಲ ಸಾರ್ವಜನಿಕರಿಗೂ ಅನುಕೂಲಕರವಾಗುವ ನಿಟ್ಟಿನಲ್ಲಿ ಸಾರ್ವಜನಿಕ ಶೌಚಾಲಯಗಳನ್ನು ನಿರ್ಮಿಸಿ ಸೂಕ್ತವಾಗಿ ಸ್ವಚ್ಛತೆ ಕಾಪಾಡಲು ಅನುಕೂಲವಾಗುವ ಕಾರ್ಯ ಕೈಗೊಳ್ಳುವಂತೆಯೂ ಸಲಹೆಗಳು ವ್ಯಕ್ತವಾದವು.
ಇದೇ ಸಂದರ್ಭದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಚ್.ಎಸ್.ಪುಟ್ಟಸೋಮಪ್ಪ ಅವರು ಪಟ್ಟಣದಲ್ಲಿ ಇರುವ ಪರಿಷತ್ತಿನ ನಿವೇಶನದಲ್ಲಿ ಸಾಹಿತ್ಯ ಭವನ ನಿರ್ಮಿಸಲು 10ಲಕ್ಷ ರು.  ಅನುದಾನ ನೀಡಿ ಕನ್ನಡ ಸೇವೆಗೆ ಸಹಕರಿಸುವಂತೆ ಕೋರಿದರು.         
ನಂತರ ಮಾತನಾಡಿದ ಪುರಸಭೆಯ ಪ್ರಭಾರಿ ಮುಖ್ಯಾಧಿಕಾರಿಗಳೂ ಆದ ತಹಸೀಲ್ದಾರ್ ಕೆ.ಪಿ.ಈಶ್ವರಪ್ಪ ಅವರು ಬಜೆಟ್ ಮೇಲಿನ ಚರ್ಚೆಯ ಪೂರ್ವಭಾವಿ ಸಭೆಗೆ ಸಾರ್ವಜನಿಕರು ಹಾಗೂ ಸಂಘ-ಸಂಸ್ಥೆಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳದಿರುವುದು ವಿಷಾಧನೀಯ ಎಂದರು.
ಪುರಸಭೆ ಅಧ್ಯಕ್ಷೆ ವಿನೋದ, ಸ್ಥಾಯಿ ಸಮಿತಿ ಅಧ್ಯಕ್ಷ ಟಿ.ಮಲ್ಲೇಶ್ ಹಾಗೂ ಸದಸ್ಯರು ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.