ವೈಮನಸ್ಸು ಬಿಡಿ, ಪಕ್ಷ ಸಂಘಟನೆಗೆ ಗಮನ ಕೊಡಿ
ಚಾಮರಾಜನಗರ: ಮೊದಲು ಎಲ್ಲರೂ ಒಟ್ಟಾಗಿ ಪಕ್ಷ ಸಂಘಟಿಸೋಣ. ಯಾರಲ್ಲೂ ವೈಮನಸ್ಸು ಬೇಡ. ಚುನಾವಣೆ ಸಮೀಪಿಸುತ್ತಿರುವುದರಿಂದ ಪಕ್ಷ ಬಲಗೊಳಿಸಲು ಸಂಘಟಿತರಾಗೋಣ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಆಪ್ತ ಸಹಾಯಕ ಹಾಗೂ ಕೆಜೆಪಿ ರಾಜ್ಯ ಸಂಚಾಲಕ ಕಾ.ಪು. ಸಿದ್ದಲಿಂಗಸ್ವಾಮಿ ಕರೆ ನೀಡಿದರು.
ನಗರದ ಜೋಡಿ ರಸ್ತೆಯಲ್ಲಿ ನೂತನ ಜಿಲ್ಲಾ ಕೆಜೆಪಿ ಕಾರ್ಯಾಲಯ ಉದ್ಘಾಟಿಸಿ ಮಾತನಾಡಿ, ಯಡಿಯೂರಪ್ಪನವರಿಗೆ ಅಧಿಕಾರ ಹಂಚಿಕೆಯಲ್ಲಿ ಅನ್ಯಾಯವಾದಾಗ ಮೊದಲ ಕೂಗು ಎದ್ದದ್ದೇ ಚಾಮರಾಜನಗರ ಜಿಲ್ಲೆಯಿಂದ. ಇದರಿಂದಾಗಿ ರಾಜ್ಯಾದ್ಯಂತ ಯುಡಿಯೂರಪ್ಪರಿಗೆ ಭಾರಿ ಬೆಂಬಲ ದೊರೆಕಿತು. ಮುಖ್ಯಮಂತ್ರಿಯಾಗಲು ಸಾಧ್ಯವಾಯಿತು. ಆದರೆ ಹೆಚ್ಚಿನ ಹುಮ್ಮಸ್ಸಿನಿಂದಾಗಿ ಈ ಜಿಲ್ಲೆಯಲ್ಲಿ ಕಳೆದ ಚುನಾವಣೆಯಲ್ಲಿ ಅನುಕೂಲವಾಗಲಿಲ್ಲ. ಈ ಬಾರಿ ಹಾಗಾಗುವುದು ಬೇಡ. ಎಲ್ಲರೂ ಒಟ್ಟಾಗಿ ಶ್ರಮಿಸಿ ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರಗಳಲ್ಲಿ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸೋಣ ಎಂದರು.
ಜಿಲ್ಲೆಯಲ್ಲಿ ಯಡಿಯೂರಪ್ಪ ಅಭಿಮಾನಿಗಳು ಹೆಚ್ಚಿದ್ದಾರೆ. ಆದ್ದರಿಂದ ಆವರು, ಇವರು ಎನ್ನದೆ ಒಟ್ಟಾಗಿ ದುಡಿದು ಅವರನ್ನು ಸಂಘಟಿಸೋಣ, ಈಗಿನಿಂದಲೇ ಕಾರ್ಯೋನ್ಮಖರಾಗಲು ಜಿಲ್ಲಾ ಕೇಂದ್ರದಲ್ಲಿ ಪಕ್ಷದ ಕಚೇರಿ ಸ್ಥಾಪಿಸಲಾಗಿದೆ ಎಂದರು.
ಯಡಿಯೂರಪ್ಪನವರ ನಾಯಕತ್ವದಿಂದಾಗಿಯೇ ದಕ್ಷಿಣ ಭಾರತದಲ್ಲಿ ಮೊದಲ ಬಾರಿಗೆ ಬಿಜೆಪಿ ಅಧಿಕಾರ ಹಿಡಿಯಿತು. ಕೆಲವರ ಕುತಂತ್ರದಿಂದಾಗಿ ಪಕ್ಷ ಅವರನ್ನು ಸರಿಯಾಗಿ ನಡೆಸಿಕೊಳ್ಳದೇ ನೋವುಂಟು ಮಾಡಿತು. ಇದರಿಂದಾಗಿ ಅವರ ಸಹವಾಸವೇ ಬೇಡ ಎಂದು ರಾಜ್ಯದ ಅಭ್ಯುದಯಕ್ಕಾಗಿ ಪ್ರಾದೇಶಿಕ ಪಕ್ಷ ಸ್ಥಾಪಿಸಿದ್ದಾರೆ. ಇದಕ್ಕೆ ಅಭೂತಪೂರ್ವ ಬೆಂಬಲ ದೊರೆತಿದೆ. ಜನರು ಸ್ವಯಂ ಪ್ರೇರಿತರಾಗಿ ಪಕ್ಷಕ್ಕೆ ಬರುತ್ತಿದ್ದಾರೆ. ಆದರೆ ಯಡಿಯೂರಪ್ಪನವರಿಂದಲೇ ಅನುಕೂಲ ಪಡೆದು, ಅಧಿಕಾರ ಅನುಭವಿಸುತ್ತಿರುವ ಕೆಲವರು ಅವರ ಬೆನ್ನಿಗೆ ಚೂರಿ ಹಾಕಿದ್ದಾರೆ ಎಂದರು.
ಪ್ರಾದೇಶಿಕ ಪಕ್ಷಗಳ ಮಹತ್ವ: ಇಂದು ದೇಶದಲ್ಲಿ ಪ್ರಾದೇಶಿಕ ಪಕ್ಷಗಳಿಗೆ ಹೆಚ್ಚಿನ ಮಹತ್ವವಿದೆ. ಪ್ರಸ್ತುತ ಆಯ್ಕೆಯಾಗಿರುವ ಸಂಸದರಲ್ಲಿ ಹೆಚ್ಚಿನವರು ಪ್ರಾದೇಶಿಕ ಪಕ್ಷಗಳವರೇ. ರಾಷ್ಟ್ರೀಯ ಪಕ್ಷಗಳು ಸರ್ಕಾರ ರಚಿಸಬೇಕಾದರೆ ಪ್ರಾದೇಶಿಕ ಪಕ್ಷಗಳನ್ನೇ ನೋಡಬೇಕಾದ ಅವಶ್ಯಕತೆ ಇದೆ. ಇದರ ಜೊತೆ ಸ್ಥಳೀಯ ಸಮಸ್ಯೆಗಳ ನಿವಾರಣೆಗೆ ಪ್ರಾದೇಶಿಕ ಪಕ್ಷಗಳ ಅವಶ್ಯಕತೆ ಹೆಚ್ಚಿರುವುದನ್ನು ಗಮನಿಸಿ, ಕೆಜೆಪಿ ಸ್ಥಾಪಿಸಲಾಗಿದೆ ಎಂದರು.
ಸ್ಥಳೀಯರಿಗೆ ಆದ್ಯತೆ: ಬರುವ ವಿಧಾನಸಭಾ ಚುನಾವಣೆಯಲ್ಲಿ ಸ್ಥಳೀಯರಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು. ಸ್ಥಳೀಯವಾಗಿ ಹೆಚ್ಚಿನ ಜನ ಬೆಂಬಲವಿರುವ, ಸೇವಾ ಮನೋಭಾವವುಳ್ಳ ವ್ಯಕ್ತಿಯನ್ನು ವರಿಷ್ಠರು, ವರದಿ ತರಿಸಿಕೊಂಡು ಆಯ್ಕೆ ಮಾಡುವರು. ಆದ್ದರಿಂದ ಯಾರೂ ತಲೆ ಕೆಡಿಸಿಕೊಳ್ಳದೆ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಂಡು ನಿಮ್ಮ ಕಾರ್ಯವೈಖರಿಯನ್ನು ಮನದಟ್ಟು ಮಾಡಿಕೊಡಿ ಎಂದರು.
ಕೆಜೆಪಿ ಮುಖಂಡರಾದ ಮಲ್ಲೇಶ್, ಕೆ.ಪಿ.ಮಹದೇವಸ್ವಾಮಿ, ಮೈಸೂರು ಘಟಕದ ಯು.ಎಸ್.ಶೇಖರ್, ಜಿಲ್ಲಾಧ್ಯಕ್ಷ ಕೊಡಸೋಗೆ ಶಿವಬಸಪ್ಪ, ಜಿಪಂ ಸದಸ್ಯರಾದ ಎ.ಸಿ.ರಾಜಶೇಖರ್, ಚಂದ್ರಕಲಾಬಾಯಿ ಮಾತನಾಡಿ ಯಾರಿಗೆ ಟಿಕೆಟ್ ನೀಡಿದರೂ ಒಟ್ಟಾಗಿ ಕೆಲಸ ಮಾಡುವುದಾಗಿ ತಿಳಿಸಿದರು.
ಉಮ್ಮತ್ತೂರು ಇಂದೂಶೇಖರ್, ಆಲೂರು ಮಲ್ಲು, ಬಸವನಪುರ ರಾಜಶೇಖರ್, ಗೋವಿಂದಶೆಟ್ಟಿ ಮತ್ತಿತರರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

