ನೀತಿ ಸಂಹಿತೆ ಮೀರಿದರೆ ಹುಷಾರ್!
ಚಾಮರಾಜನಗರ: ಜಿಲ್ಲೆಯಲ್ಲಿ ನಗರ ಸ್ಥಳೀಯ ಸಂಸ್ಥೆಗಳ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿದ್ದು, ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಹಾಗೂ ಅಭ್ಯರ್ಥಿಗಳು ಕಟ್ಟುನಿಟ್ಟಾಗಿ ಪಾಲನೆ ಮಾಡಬೇಕೆಂದು ಜಿಲ್ಲಾಧಿಕಾರಿ ಎಂ.ವಿ.ಸಾವಿತ್ರಿ ಸೂಚನೆ ಹೊರಡಿಸಿದ್ದಾರೆ.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಸ್ಥಳೀಯ ಸಂಸ್ಥೆ ಚುನಾವಣೆ ಸಂಬಂಧ ಕರೆಯಲಾಗಿದ್ದ ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಫೆ.15ರಿಂದ ಮಾರ್ಚ್ 11ರವರೆಗೆ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿದ್ದು, ಈ ಅವಧಿಯಲ್ಲಿ ರಾಜಕೀಯ ಪಕ್ಷಗಳು, ಸ್ಪರ್ಧಿಗಳು, ಅವರ ಪ್ರತಿನಿಧಿಗಳು ನೀತಿಸಂಹಿತೆ ಉಲ್ಲಂಘನೆಯಾಗದಂತೆ ಎಚ್ಚರ ವಹಿಸಬೇಕೆಂದು ತಿಳಿಸಿದರು.
ಯಾವುದೇ ಸರ್ಕಾರಿ ಕಟ್ಟಡ, ಸಾರ್ವಜನಿಕ ಸ್ಥಳ ಅಥವಾ ಖಾಸಗಿ ವ್ಯಕ್ತಿಗಳಿಗೆ ಸೇರಿದ ಕಟ್ಟಡ, ನಿವೇಶನ ಇನ್ನಿತರ ಸ್ಥಳಗಳಲ್ಲಿ ಅನುಮತಿ ಪಡೆಯದೆ ಚುನಾವಣಾ ಪ್ರಚಾರ ಭಿತ್ತಿಪತ್ರ, ಬ್ಯಾನರ್, ಫ್ಲೆಕ್ಸ್ಗಳನ್ನು ಪ್ರದರ್ಶಿಸಲು ಅವಕಾಶವಿಲ್ಲ. ಅಭ್ಯರ್ಥಿಗಳು ಚುನಾವಣೆಗಾಗಿ ಮಾಡಬೇಕಿರುವ ಗರಿಷ್ಠ ವೆಚ್ಚವನ್ನು ನಿಗದಿಪಡಿಸಲಾಗಿದೆ. ನಗರಸಭೆಗೆ ಸ್ಪರ್ಧಿಸುವ ಅಭ್ಯರ್ಥಿಯು 2 ಲಕ್ಷ, ಪುರಸಭೆ ಅಭ್ಯರ್ಥಿ 1.50 ಲಕ್ಷ ಹಾಗೂ ಪಪಂ ಸ್ಪರ್ಧಿ 1 ಲಕ್ಷದವರೆಗೆ ವೆಚ್ಚ ಮಾಡಲು ಅವಕಾಶವಿದೆ. ಅಭ್ಯರ್ಥಿಯ ವೆಚ್ಚ ತಪಾಸಣೆಗಾಗಿ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ. ಪ್ರತಿ ಅಭ್ಯರ್ಥಿ ಪ್ರತಿನಿತ್ಯ ಚುನಾವಣಾ ವೆಚ್ಚ ಭರಿಸಿದ ವಿವರವನ್ನು ವೆಚ್ಚ ತಪಾಸಣೆ ಅಧಿಕಾರಿಗೆ ನೀಡಿ ದೃಢೀಕರಿಸಿಕೊಳ್ಳಬೇಕು ಎಂದರು.
ಅಭ್ಯರ್ಥಿಯ ಪರವಾಗಿ ರಾಜಕೀಯ ಮುಖಂಡರು ನಡೆಸುವ ಸಾರ್ವಜನಿಕ ಸಭೆ ವೆಚ್ಚವನ್ನು ಆಯಾ ಅಭ್ಯರ್ಥಿಯ ಲೆಕ್ಕಕ್ಕೆ ಸೇರ್ಪಡೆ ಮಾಡಲಾಗುತ್ತದೆ. ಅಭ್ಯರ್ಥಿಯು ಚುನಾವಣಾ ವೆಚ್ಚದ ಲೆಕ್ಕ ವಿವರಗಳನ್ನು ಫಲಿತಾಂಶ ಘೋಷಿಸಿದ ದಿನಾಂಕದಿಂದ 30 ದಿನದೊಳಗೆ ಸಲ್ಲಿಸಬಹುದು. ಸಕಾಲದಲ್ಲಿ ಲೆಕ್ಕಪತ್ರಗಳನ್ನು ಸಲ್ಲಿಸಲು ವಿಫಲರಾಗುವ ಅಭ್ಯರ್ಥಿಯನ್ನು 3 ವರ್ಷದ ಅವಧಿಯವರೆಗೆ ಅನರ್ಹಗೊಳಿಸಲಾಗುತ್ತದೆ ಎಂದರು.
ಮತದಾನದಂದು ಮತಗಟ್ಟೆಗಳಿಗೆ ಪೋಲಿಂಗ್ ಏಜೆಂಟರನ್ನು ನಿಯೋಜಿಸಲು ಹೆಸರು ನೀಡಬೇಕು. ಈ ಏಜೆಂಟರು ಪಾಲನೆ ಮಾಡಬೇಕಿರುವ ನಿಯಮಗಳ ಬಗ್ಗೆ ಮನವರಿಕೆ ಮಾಡಬೇಕು. ಮತದಾನ ಕೇಂದ್ರದ ಒಳಗೆ ಪ್ರವೇಶಿಸಿದ ನಂತರ ಆಗಿಂದಾಗ್ಗೆ ಹೊರಹೋಗಲು ಪೋಲಿಂಗ್ ಏಜೆಂಟರಿಗೆ ಅವಕಾಶ ಇರುವುದಿಲ್ಲ ಎಂದರು.
ಮತಗಟ್ಟೆ ಅಧಿಕಾರಿ ಹೊರತುಪಡಿಸಿ ಇನ್ನಾವುದೇ ಸಿಬ್ಬಂದಿ ಮತಗಟ್ಟೆಯೊಳಗೆ ಮೊಬೈಲ್ ಫೋನ್ ತೆಗೆದುಕೊಂಡು ಹೋಗುವುದನ್ನು ನಿಷೇಧಿಸಲಾಗಿದೆ. ಚುನಾವಣಾ ಆಯೋಗದ ನಿರ್ದೇಶನದ ಅನುಸಾರ ನೀತಿಸಂಹಿತೆಯನ್ನು ಉಲ್ಲಂಘನೆಯಾಗದಂತೆ ನೋಡಿಕೊಳ್ಳಲು ಅಧಿಕಾರಿಗಳನ್ನು ನೇಮಿಸಲಾಗಿದೆ. ಯಾವುದೇ ಭಾಗದಲ್ಲಿ ಮತದಾರರಿಗೆ ಆಮಿಷವೊಡ್ಡುವ ಪ್ರಕರಣಗಳು, ನೀತಿಸಂಹಿತೆ ಉಲ್ಲಂಘನೆ ಪ್ರಕರಣಗಳು ಕಂಡುಬಂದಲ್ಲಿ ಮುಕ್ತವಾಗಿ ಯಾವುದೇ ವೇಳೆ ದೂರು ಸಲ್ಲಿಸಬಹುದು ಎಂದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ.ರಾಜೇಂದ್ರಪ್ರಸಾದ್ ಮಾತನಾಡಿ, ಸಾರ್ವಜನಿಕ ಸಭೆ, ಸಮಾರಂಭಗಳಲ್ಲಿ ಚುನಾವಣಾ ಪ್ರಚಾರ ವೇಳೆ ಮೈಕ್ ಬಳಸಲು ಅನುಮತಿ ಪಡೆಯುವುದು ಕಡ್ಡಾಯ. ಯಾವುದೇ ಧರ್ಮ, ಜನಾಂಗ, ಕೋಮು ಭಾವನೆಗೆ ಧಕ್ಕೆಯಾಗುವ ಹಾಗೆ ವರ್ತಿಸುವಂತಿಲ್ಲ. ಪ್ರಚೋದನಕಾರಿ ಭಾಷಣ ಮಾಡುವಂತಿಲ್ಲ. ಚುನಾವಣಾ ವ್ಯಾಪ್ತಿಯ ವಾರ್ಡ್ಗಳಲ್ಲಿ ಪೊಲೀಸ್ ಸಿಬ್ಬಂದಿ ನಿಯೋಜಿತರಾಗಿದ್ದು ಎಲ್ಲವನ್ನೂ ಗಮನಿಸಲಿದ್ದಾರೆ ಎಂದರು.
ಚುನಾವಣಾ ವೀಕ್ಷಕರಾದ ಜಯಪ್ರಕಾಶ್ ರಾವ್, ಹೆಚ್ಚುವರಿ ಜಿಲ್ಲಾಧಿಕಾರಿ ಡಿ. ಭಾರತಿ, ಉಪವಿಭಾಗಾಧಿಕಾರಿ ಸತೀಶ್ಬಾಬು, ಪ್ರೊಬೆಷನರಿ ಉಪವಿಭಾಗಾಧಿಕಾರಿ ಜಗದೀಶ್, ರಾಜಕೀಯ ಪಕ್ಷಗಳ ಮುಖಂಡರಾದ ಮಲ್ಲಿಕಾರ್ಜುನ್, ಅರಕಲವಾಡಿ ನಾಗೇಂದ್ರ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

