ಚಾಮರಾಜನಗರ

ಪಟ್ಟಣ, ನಗರ ಅಭಿವೃದ್ಧಿಗೆ ಒತ್ತು ಕೊಟ್ಟಿದ್ದೇ ಬಿಜೆಪಿ

Published On :

ಚಾಮರಾಜನಗರ: ರಾಜ್ಯದ ನಗರಪಾಲಿಕೆಗಳು, ನಗರ ಹಾಗೂ ಪಟ್ಟಣ ಪ್ರದೇಶಗಳಿಗೆ ಹೆಚ್ಚಿನ ಒತ್ತು ಕೊಟ್ಟು, ಅಲ್ಲಿನ ಮೂಲಭೂತ ಸಮಸ್ಯೆಗಳ ಪರಿಹಾರಕ್ಕೆ ಕೋಟ್ಯಂತರ ರು.ಗಳನ್ನು ಬಿಡುಗಡೆ ಮಾಡಿದ್ದೇ ಬಿಜೆಪಿ ಸರ್ಕಾರ ಎಂದು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಹೇಳಿದರು.
ಜಿಲ್ಲಾ ಕೇಂದ್ರ ಚಾಮರಾಜನಗರ ನಗರಸಭೆಗೆ ಮಾ.7ರಂದು ನಡೆಯುವ ಚುನಾವಣೆ ಸಂಬಂಧ ಪಕ್ಷದ ಅಭ್ಯರ್ಥಿಗಳ ಪರ ಮತಯಾಚನೆ ಮಾಡಿ ಮಾತನಾಡಿ, ನಗರಸಭಾ ವ್ಯಾಪ್ತಿಯ ಅಭಿವೃದ್ಧಿಗೆ 30 ಕೋಟಿ, ಪಪಂಗಳಿಗೆ 4ರಿಂದ 5 ಕೋಟಿ ಹಣ ನೀಡಿ, ಕುಡಿಯುವ ನೀರು, ಚರಂಡಿ, ರಸ್ತೆ ಅಭಿವೃದ್ಧಿಪಡಿಸಲಾಗಿದೆ. ಕಳೆದ 65 ವರ್ಷಗಳಿಂದ ಯಾವುದೇ ಸರ್ಕಾರ ನಗರ ಹಾಗೂ ಪಟ್ಟಣ ಪ್ರದೇಶಗಳಿಗೆ ಇಷ್ಟೊಂದು ಹಣ ನೀಡಿ, ಮೂಲ ಸಮಸ್ಯೆಗಳನ್ನು ಪರಿಹರಿಸಲಿಲ್ಲ. ಇದನ್ನು ಪ್ರಜ್ಞಾವಂತ ಮತದಾರ ಅರಿತುಕೊಳ್ಳಬೇಕು. ಜಿಲ್ಲೆಯ 2 ನಗರಸಭೆ, 1 ಪುರಸಭೆ ಹಾಗೂ 2 ಪಪಂಗಳ ಅಭಿವೃದ್ಧಿ ದೃಷ್ಟಿಯಿಂದ ಮತದಾರರು ಬಿಜೆಪಿಯನ್ನು ಗೆಲ್ಲಿಸಬೇಕೆಂದು ಮನವಿ ಮಾಡಿದರು.
ಜಿಲ್ಲೆಯ ಅಭಿವೃದ್ಧಿಗೆ ಸರ್ಕಾರ ಬಜೆಟ್‌ನಲ್ಲಿ 100 ಕೋಟಿ ವಿಶೇಷಾನುದಾನ ನೀಡಿದೆ. ಜಿಲ್ಲಾ ಕೇಂದ್ರಕ್ಕೆ ಮುಖ್ಯಮಂತ್ರಿಗಳು ಬರಲು ಹೆದರುತ್ತಿದ್ದರು. ಆ ಕಳಂಕ ತೊಡೆದು ಹಾಕಲು ಮುಖ್ಯಮಂತ್ರಿ ಶೆಟ್ಟರ್ ಬಂದರು. ಈಗಾಗಲೇ ನಗರಸಭಾ ವ್ಯಾಪ್ತಿಯಲ್ಲಿ ಮೂಲಭೂತ ಸೌಕರ್ಯಗಳಾದ ಕುಡಿಯುವ ನೀರು, ರಸ್ತೆ, ಚರಂಡಿಗಳ ಅಭಿವೃದ್ಧಿಗೆ 30 ಕೋಟಿ ನೀಡಿದ್ದು, ಶೀಘ್ರದಲ್ಲೇ ಇನ್ನೂ 30 ಕೋಟಿ ನೀಡಲಾಗುವುದು ಎಂದರು.
ಜಿಲ್ಲಾ ಕೇಂದ್ರವನ್ನು ಒಂದು ಪ್ರತಿಷ್ಠೆಯ ತಾಣವನ್ನಾಗಿ ಮಾಡುವ ಗುರಿ ಹೊಂದಲಾಗಿದ್ದು, ಇದಕ್ಕೆ ಎಲ್ಲರ ಸಹಕಾರ ಅಗತ್ಯ. ಇಲ್ಲಿ ಆ ಪಕ್ಷ ಈ ಪಕ್ಷ ಅನ್ನುವುದಕ್ಕಿಂತ, ಅಭಿವೃದ್ಧಿ ದೃಷ್ಟಿಯಿಂದ ಬಿಜೆಪಿ ಬೆಂಬಲಿಸುವಂತೆ ಮತದಾರರಲ್ಲಿ ಮನವಿ ಮಾಡಿದರು.
ಚುನಾವಣಾ ಗಿಮಿಕ್: ಕೇಂದ್ರ ಸರ್ಕಾರ ಮಂಡಿಸಿರುವ ಬಜೆಟ್ ಚುನಾವಣಾ ಗಿಮಿಕ್ ಆಗಿದ್ದು, ಇದರಿಂದ ರೈತ, ಬಡ ಹಾಗೂ ಮಧ್ಯಮ ವರ್ಗಕ್ಕೆ ಯಾವುದೇ ಅನುಕೂಲವಿಲ್ಲ. ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಪಿ.ಚಿದಂಬರಂ ಬುದ್ಧಿವಂತಿಯಿಂದ ಮಂಡಿಸಿದ್ದಾರೆ. ಆದರೆ ರೈತಾಪಿ ವರ್ಗಕ್ಕಂತೂ ಯಾವುದೇ ಪ್ರಯೋಜನವಿಲ್ಲ ಎಂದರು. ರಾಜ್ಯ ಅಂಬೇಡ್ಕರ್ ಅಭಿವೃದ್ಧಿ ನಿಗಮದ ಅಧ್ಯಕ್ಷ ಎ.ಆರ್. ಕೃಷ್ಣಮೂರ್ತಿ, ಕೆಎಸ್‌ಐಸಿ ಅಧ್ಯಕ್ಷ ನೂರೊಂದು ಶೆಟ್ಟಿ, ಜಿಲ್ಲಾ ಬಿಜೆಪಿ ಅಧ್ಯಕ್ಷ ಹುಂಡೀಪುರ ಮಲ್ಲಿಕಾರ್ಜುನಸ್ವಾಮಿ, ಚುಡಾ ಅಧ್ಯಕ್ಷ ಬಾಲಸುಬ್ರಹ್ಮಣ್ಯಂ, ಪಕ್ಷದ ಅಭ್ಯರ್ಥಿಗಳು, ಮುಖಂಡರಾದ ವಕೀಲ ಬಾಲಸುಬ್ರಹ್ಮಣ್ಯಂ, ಗಣೇಶ್ ದೀಕ್ಷಿತ್, ಶಿವಣ್ಣ, ರಂಗಸ್ವಾಮಿ, ನಿತ್ಯಾಪ್ರವೀಣ್, ಪ್ರವೀಣ್, ಸೋಮನಾಯಕ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.