ಶಿವರಾತ್ರಿ ಜಾತ್ರೆಗೆ ಮಹದೇಶ್ವರ ಬೆಟ್ಟ ಸಜ್ಜು
ಚಾಮರಾಜನಗರ: ರಾಜ್ಯದ ಪ್ರಸಿದ್ಧ ಧಾರ್ಮಿಕ ತಾಣ, ಜಿಲ್ಲೆಯ ಪ್ರಸಿದ್ಧ ಯಾತ್ರಾಸ್ಥಳ ಮಲೆ ಮಹದೇಶ್ವರ ಬೆಟ್ಟದಲ್ಲಿ ಮಾ.10ರಿಂದ 12ರವರೆಗೆ ಶಿವರಾತ್ರಿ ಹಬ್ಬದ ಜಾತ್ರೆ ನಡೆಯಲಿದ್ದು, ಜಿಲ್ಲಾಡಳಿತದಿಂದ ಸಕಲ ವ್ಯವಸ್ಥೆ ಕಲ್ಪಿಸಲು ಸಿದ್ಧತೆ ನಡೆಸಲಾಗಿದೆ ಎಂದು ಜಿಲ್ಲಾಧಿಕಾರಿ ಎಂ.ವಿ.ಸಾವಿತ್ರಿ ತಿಳಿಸಿದರು.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮಾ.10ರಂದು ಭಾನುವಾರ ಮಹಾಶಿವರಾತ್ರಿ, ಎಣ್ಣೆ ಮಜ್ಜನ ಹಾಗೂ ಜಾಗರಣೆ ಉತ್ಸವ, ಮಾ.11ರಂದು ಅಮಾವಾಸ್ಯೆ ಉತ್ಸವ ಮತ್ತು ರಾತ್ರಿ 7ಕ್ಕೆ ಬಂಗಾರದ ರಥೋತ್ಸವ ಮತ್ತು ಮಾ.12ರಂದು ಮಹಾರಥೋತ್ಸವ ಬೆಳಗ್ಗೆ 10-05ರಿಂದ ಮ. 12 ಗಂಟೆವರಗೆ ನಡೆಯಲಿದೆ ಎಂದು ತಿಳಿಸಿದರು.
ರಾಜ್ಯ ಮತ್ತು ನೆರೆ ರಾಜ್ಯದ ಭಕ್ತರ ಅನುಕೂಲಕ್ಕಾಗಿ 400 ಬಸ್ ವ್ಯವಸ್ಥೆ ಮಾಡಲಾಗಿದ್ದು, ಮಹದೇಶ್ವರ ಬೆಟ್ಟದ ಬಸ್ ನಿಲ್ದಾಣದಿಂದ ಕರ್ನಾಟಕ, ತಮಿಳುನಾಡು ಸಾರಿಗೆ ಮತ್ತು ಖಾಸಗಿ ಬಸ್ಗಳು ಹೊರಡಲಿವೆ. ತಮಿಳುನಾಡು ಕಡೆ ತೆರಳುವ ಎಲ್ಲ ಬಸ್ಗಳು ಪಾಲಾರ್ ಗೇಟ್ ಬಳಿ ನಿರ್ಮಾಣ ಮಾಡಲಾಗಿರುವ ವಿಶೇಷ ಬಸ್ ನಿಲ್ದಾಣದಿಂದ ಹೊರಡಲಿವೆ ಎಂದರು.
ನಿಯಂತ್ರಣಾ ಕೊಠಡಿ: ಮಹದೇಶ್ವರ ಬೆಟ್ಟದ ಎಸ್ಬಿಎಂ ವೃತ್ತದ ಬಳಿ ಜಾತ್ರೆ ಅಂಗವಾಗಿ ದೇವಸ್ಥಾನದ ನಿಯಂತ್ರಣ ಕೊಠಡಿ ಸ್ಥಾಪಿಸಲಾಗಿದ್ದು, ಈ ಸ್ಥಳದಿಂದ ಮುಂದೆ ದೇವಸ್ಥಾನದ ಕಡೆಗೆ ಯಾವುದೇ ವಾಹನಗಳ ಸಂಚಾರ ನಿರ್ಬಂಧಿಸಲಾಗಿದೆ. ಇಲ್ಲಿ ಭಕ್ತಾಧಿಗಳು ದೇವಸ್ಥಾನಕ್ಕೆ ನೀಡುವ ಎಲ್ಲ ಕಾಣಿಕೆ, ದವಸ ಧಾನ್ಯ ಸ್ವೀಕೃತಿಗೆ ವ್ಯವಸ್ಥೆ ಮಾಡಲಾಗಿದೆ. ಈ ಕೊಠಡಿಗೆ ಪೊಲೀಸ್ ಚೌಕಿ ಮತ್ತು ವಯರ್ಲೆಸ್ ವ್ಯವಸ್ಥೆ ಕಲ್ಪಿಸಲಾಗಿದೆ.
ಐದು ಕಡೆ ದಾಸೋಹ: ಹಾಲಿ ದಾಸೋಹ ಭವನದಲ್ಲಿ ದಾಸೋಹ ವ್ಯವಸ್ಥೆ ನಿಗದಿತ ವೇಳೆಯಲ್ಲಿ ಮುಂದುವರಿಯುತ್ತದೆ. ಹಿರಿಯ ಅಧಿಕಾರಿಗಳು ಮತ್ತು ಗಣ್ಯರಿಗೆ, ಕರ್ತವ್ಯನಿರತ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ, ದೇವಸ್ಥಾನದ ವತಿಯಿಂದ ಹಾಗೂ ಸಾಲೂರು ಶ್ರೀಗಳ ಸಹಕಾರದೊಂದಿಗೆ ಮಹದೇಶ್ವರ ಪ್ರೌಢಶಾಲೆ ಆಟದ ಮೈದಾನದಲ್ಲಿ ಹಾಗೂ ಹಳೆಯ ದಾಸೋಹ ಭವನದಲ್ಲಿ ಮಂಡ್ಯ ಹಾಗೂ ಕನಕಪುರ ದಾನಿಗಳಿಂದ ದಾಸೋಹಕ್ಕೆ ವಿಶೇಷ ವ್ಯವಸ್ಥೆ ಮಾಡಲಾಗಿದೆ. ಸಂಕಮ್ಮ ನಿಲಯದ ಬಳಿ ಬೆಂಗಳೂರಿನ ಭಕ್ತರೊಬ್ಬರು ಮಾ.11ರಂದು 1 ಲಕ್ಷ ಜನರಿಗೆ ದಾಸೋಹ ವ್ಯವಸ್ಥೆ ಕಲ್ಪಿಸಿದ್ದು, ಇದಲ್ಲದೇ ನೂರಾರು ಭಕ್ತಾಧಿಗಳು ಸಣ್ಣ ಪುಟ್ಟ ಪ್ರಮಾಣದಲ್ಲಿ ಸಾವಿರಾರು ಜನರಿಗೆ ದಾಸೋಹ ವ್ಯವಸ್ಥೆ ಮಾಡಲಿದ್ದಾರೆ ಎಂದು ತಿಳಿಸಿದರು.
ಜಾತ್ರೆಗೆ ಪೊಲೀಸ್ ವರಿಷ್ಠಾಧಿಕಾರಿ, 3 ಮಂದಿ ಡಿವೈಎಸ್ಪಿ, 7 ಮಂದಿ ಸಿಪಿಐ, 14 ಮಂದಿ ಪಿಎಸ್ಐ, 39 ಮಂದಿ ಎಎಸ್ಪಿ ಒಳಗೊಂಡಂತೆ 488 ಪೊಲೀಸ್ ಅಧಿಕಾರಿಗಳು ಮತ್ತು 37 ಮಹಿಳಾ ಪೇದೆಗಳನ್ನು ನಿಯೋಜಿಸಲಾಗಿದ್ದು, 450ರಿಂದ 500 ಮಂದಿ ಹೋಮ್ಗಾರ್ಡ್, ಟ್ರಾಫಿಕ್ ವಾರ್ಡ್ನ್ಗಳು ಹಾಗೂ ಎನ್ಸಿಸಿ ಕೆಡೆಟ್ಗಳು ಸಹ ನೆರವಾಗಲಿದ್ದಾರೆ. 3 ಡಿಎಆರ್ ವಾಹನಗಳನ್ನು ಅವಶ್ಯ ಸ್ಥಳಗಳಲ್ಲಿ ನಿಯೋಜಿಸಲಾಗಿದೆ. ಅಂತರಗಂಗೆ ಮತ್ತು ರಂಗಮಂದಿರದ ಬಳಿ ವಾಚರ್ ಟವರ್ಗಳನ್ನು ನಿರ್ಮಿಸಲಾಗಿದ್ದು, ವಿಶೇಷ ಪೊಲೀಸ್ ಕಣ್ಗಾವಲು ವ್ಯವಸ್ಥೆ ಮಾಡಲಾಗುವುದು. ಸುಗಮ ಸಂಚಾರ ಮತ್ತು ವ್ಯವಸ್ಥಿತ ಪಾರ್ಕಿಂಗ್ಗಾಗಿ ಬ್ಯಾರಿಕೇಡ್, ದೇವಸ್ಥಾನದ ಒಳ ಭಾಗ, ರಂಗಮಂದಿರ, ಅಂತರಗಂಗೆ ಬಳಿ ಅವಕಾಶ ಕಲ್ಪಿಸಲಾಗಿದೆ. ಹಾಗೂ ಬಸ್ ನಿಲ್ದಾಣದಲ್ಲಿ ಸಿಸಿ ಕ್ಯಾಮರ ಅಳವಡಿಸಲಾಗುವುದು ಎಂದರು.
90 ಕಡೆ ತಾತ್ಕಾಲಿಕ ಶೌಚಾಲಯ: ಮಹದೇಶ್ವರ ಬೆಟ್ಟ ಬಸ್ ನಿಲ್ದಾಣ, ಪಾಲಾರ್ ಗೇಟ್, ಕಲ್ಯಾಣ ಮಂಟಪದ ಎದುರು ಸೇರಿದಂತೆ ಒಟ್ಟು 8 ಕಡೆ ಕಾಯಂ ಶೌಚಾಲಯ ವ್ಯವಸ್ಥೆ ಮಾಡಲಾಗಿದ್ದು, 90 ತಾತ್ಕಾಲಿಕ ಶೌಚಾಲಯಗಳನ್ನು ನಿರ್ಮಿಸಲಾಗುವುದು ಎಂದರು.
ಕುಡಿಯುವ ನೀರಿಗಾಗಿ ಸಂಕಮ್ಮ ನಿಲಯದ ಹತ್ತಿರ ಸಂಖ್ಯೆ 50ರ ಕುಠೀರ ವಿಭಾಗದಲ್ಲಿ 4 ತೊಂಬೆ, ಬಸ್ ನಿಲ್ದಾಣದ ಪಕ್ಕದಲ್ಲಿ 50 ನಲ್ಲಿ, ದೇವಸ್ಥಾನದ ಹತ್ತಿರ ಅರಳಿ ಮರದ ಮುಂಭಾಗದ ರಸ್ತೆಯಲ್ಲಿ ಹಾಗೂ 6 ಟ್ಯಾಂಕರ್ ಮೂಲಕ ನೀರು ಸರಬರಾಜು, ತಾಳ ಬೆಟ್ಟದಲ್ಲಿ 2 ತೊಂಬೆಗಳು, ರಂಗಸ್ವಾಮಿ ಒಡ್ಡು, ಶನೇಶ್ವರ ದೇವಸ್ಥಾನದ ಹತ್ತಿರ ಮತ್ತು ಆನೆ ತಲೆದಿಂಬದ ಹತ್ತಿರ ಒಂದೊಂದು ಟ್ಯಾಂಕರ್ ವ್ಯವಸ್ಥೆ ಮಾಡಲಾಗಿದೆ. ಕೆಎಂಎಫ್ ಟ್ಯಾಂಕರ್ಗಳ ಮೂಲಕ ಶುದ್ಧ ನೀರು ಸರಬರಾಜು ಮಾಡಲು ಮುಂದಾಗಿದೆ. ಸ್ನಾನದ ವ್ಯವಸ್ಥೆಗಾಗಿ ಅಂತರಗಂಗೆಯಲ್ಲಿ 50 ಷವರ್ಬಾತ್ ವ್ಯವಸ್ಥೆ ಮಾಡಲಾಗಿದೆ.
ದೇವಸ್ಥಾನ ಸೇರಿದಂತೆ ನಗರದ ವಿವಿಧೆಡೆ ಪ್ರದೇಶದಲ್ಲಿ ದೀಪಾಲಂಕಾರ ಮಾಡಲಾಗುವುದು. ಮಾ.9ರಿಂದ 11ರವರಗೆ ದೇವಸ್ಥಾನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ರಂಗಮಂದಿರದಲ್ಲಿ ರಾಜ್ಯ ಮಟ್ಟದ ಕಲಾವಿದರಿಂದ ಪ್ರತಿ ದಿನ ಬೆಳಗ್ಗೆ 11ರಿಂದ ರಾತ್ರಿ 10.30ರವರೆಗೆ ವಿಶೇಷ ಕಾರ್ಯಕ್ರಮಗಳು ನಡೆಯಲಿವೆ ಎಂದರು.
ದೇವಸ್ಥಾನದ ವತಿಯಿಂದ 1 ಲಕ್ಷ ಹಾಗೂ ಬೆಂಗಳೂರಿನ ಭಕ್ತರೊಬ್ಬರಿಂದ 1 ಲಕ್ಷ ಲಾಡುಗಳನ್ನು ಉಚಿತವಾಗಿ ವಿತರಣೆ ಮಾಡಲಾಗವುದು. ಈ ಬಾರಿ 5 ಲಕ್ಷ ಭಕ್ತರು ಸೇರುವ ನಿರೀಕ್ಷೆಯಿದ್ದು, ಅದಕ್ಕಾಗಿ ಮಹದೇಶ್ವರ ಬೆಟ್ಟದಲ್ಲಿ ಸಕಲ ವ್ಯವಸ್ಥೆ ಕಲ್ಪಿಸಲಾಗುತ್ತಿದೆ ಎಂದರು.
ಎಸ್ಪಿ ಪಿ. ರಾಜೇಂದ್ರ ಪ್ರಸಾದ್, ಜಿಪಂ ಸಿಇಒ ಎಂ.ಆರ್. ಸೋಮಶೇಖರಪ್ಪ, ಎಸಿ ಸತೀಶ್ಬಾಬು, ಮಹದೇಶ್ವರ ಬೆಟ್ಟದ ಆಡಳಿತಾಧಿಕಾರಿ ಜಯವಿಭವಸ್ವಾಮಿ, ಇಒ ಶಿವಲಿಂಗೇಗೌಡ, ಮಲ್ಲೇಶ್ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

