'ಸೋಲು ಗೆಲವಿನ ಮೆಟ್ಟಿಲೆಂದು ಅರಿತು ಸಂಘಟಿಸಿ'
ಕ.ಪ್ರ.ವಾರ್ತೆ ಚಾಮರಾಜನಗರ ಮಾ.19
ನಗರಸಭಾ ನೂತನ ಸದಸ್ಯರಾಗಿ ಕಾಂಗ್ರೆಸ್ ಪಕ್ಷದಿಂದ ಆಯ್ಕೆಯಾದ ಅಭ್ಯರ್ಥಿಗಳನ್ನು ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸಂಸದ ಆರ್.ಧ್ರುವನಾರಾಯಣ್, ಶಾಸಕ ಸಿ.ಪುಟ್ಟರಂಗಶೆಟ್ಟಿ ಅಭಿನಂದಿಸಿದರು.
ಸಂಸದ ಆರ್.ಧ್ರುವನಾರಾಯಣ ಮಾತನಾಡಿ, ಅನಿರೀಕ್ಷಿತ ಫಲಿತಾಂಶ ದೊರೆತಿದೆ. ಪಟ್ಟಣ ಪಂಚಾಯಿತಿ, ಪುರಸಭೆ ಹಾಗೂ ನಗರಸಭೆ ಚುನಾವಣೆಯಲ್ಲಿ ನಿರೀಕ್ಷಿತ ಫಲಿತಾಂಶ ಬಂದಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಹಲವಾರು ಕಾರಣಗಳಿಂದಾಗಿ ಸೋಲನ್ನು ಅನುಭವಿಸುವಂತಾಗಿದೆ. ಸೋಲೇ ಗೆಲುವಿನ ಮೆಟ್ಟಿಲು ಎನ್ನುವುದನ್ನು ಮನಗಂಡು ಮುಂದಿನ ದಿನಗಳಲ್ಲಿ ಪಕ್ಷಕ್ಕಾಗಿ ಶ್ರಮವಹಿಸಿ ದುಡಿಯಬೇಕು ಎಂದರು.
ನಮ್ಮಲ್ಲಿರುವ ಲೋಪಗಳನ್ನು ತಿದ್ದುಕೊಂಡು ಮುಂದಿನ ದಿನಗಳಲ್ಲಿ ಪಕ್ಷದ ಸಂಘಟನೆಯಲ್ಲಿ ತೊಡಗಿಸಿಕೊಳ್ಳಬೇಕು. ರಾಜ್ಯದಲ್ಲಿ ಕಾಂಗ್ರೆಸ್ ಪರ ಅಲೆ ಎದ್ದಿದ್ದು, ಪರಾಜಿತ ಅಭ್ಯರ್ಥಿಗಳು ಸೋತಿರುವುದನ್ನು ಮನಸ್ಸಿನಲ್ಲಿ ಇಟ್ಟುಕೊಳ್ಳದೇ, ಒಗ್ಗಟ್ಟಾಗಿ ಶ್ರಮಿಸಬೇಕು ಎಂದು ತಿಳಿಸಿದರು.
ಶಾಸಕ ಸಿ.ಪುಟ್ಟರಂಗಶೆಟ್ಟಿ ಮಾತನಾಡಿ, ಬೇರೆ ಪಕ್ಷಗಳಿಗಿಂತ ಹೆಚ್ಚು ಸ್ಥಾನ ಗಳಿಸಿರುವುದು ತೃಪ್ತಿಕರವಾಗಿದೆ. ಪರಾಜಿತ ಅಭ್ಯರ್ಥಿಗಳು ಪಕ್ಷದ ಚಟುವಟಿಕೆಗಳಲ್ಲಿ ಹೆಚ್ಚಾಗಿ ಸ್ಪಂದಿಸಬೇಕು. ಪಕ್ಷದಲ್ಲಿ ಅವರಿಗೆ ಉತ್ತಮ ಸ್ಥಾನ ನೀಡುವುದಾಗಿ ತಿಳಿಸಿದರು.
ಜಯಗಳಿಸಿರುವ ಅಭ್ಯರ್ಥಿಗಳು ಮೂಲ ಸೌಕರ್ಯಗಳ ಬಗ್ಗೆ ಗಮನ ಹರಿಸಬೇಕು. ಸಾರ್ವಜನಿಕರ ಸೇವೆಗೆ ಸದಾ ಸಿದ್ಧರಿದ್ದು, ಅವರ ಸಮಸ್ಯೆಗಳಿಗೆ ಸ್ಪಂದಿಸುವಂತಾಗಬೇಕು ಎಂದು ಕಿವಿ ಮಾತು ಹೇಳಿದರು.
ನಗರದಲ್ಲಿ ನೀರಿನ ಸಮಸ್ಯೆ ಹೆಚ್ಚಾಗಿದ್ದು, ಈ ಹಿಂದೆ ಅಳವಡಿಸಲಾಗಿರುವ ಕುಡಿವ ನೀರಿನ ಪೈಪ್ಲೈನ್ ಅವೈಜ್ಞಾನಿಕವಾಗಿದೆ. ಹೊಸದಾಗಿ ಪೈಪ್ಲೈನ್ ಅಳವಡಿಕೆಗೆ 45 ಕೋಟಿ ವೆಚ್ಚದ ನೂತನ ಯೋಜನೆತಯಾರಿಸಿದ್ದು, ಶೀಘ್ರದಲ್ಲೇ ಕಾಮಗಾರಿ ಪ್ರಾರಂಭಿಸಲಾಗುವುದು, ನಂತರ ನೀರಿನ ಬವಣೆ ಕಡಿಮೆಯಾಗುವುದು, ಸದ್ಯದ ಪರಿಸ್ಥಿತಿಯಲ್ಲಿ ನೀರಿಗೆ ಹಾಹಾಕಾರ ಇರುವ ಕಡೆಗಳಲ್ಲಿ ಬೋರ್ವೆಲ್ ಕೊರೆಸಲಾಗುವುದು ಎಂದರು.
ಕಾಂಗ್ರೆಸ್ನಿಂದ ಆಯ್ಕೆಯಾದ ಭಾಗ್ಯಮ್ಮ, ನಂಜುಂಡಸ್ವಾಮಿ, ಮಹೇಶ್, ಕಲಾವತಿ, ಕೇಶವಮೂರ್ತಿ, ಶಬೀನಾಬೇಗಂ, ಚಿನ್ನಸ್ವಾಮಿ ಅವರನ್ನು ಅಭಿನಂದಿಸಲಾಯಿತು.
ಕಾರ್ಯಕ್ರಮದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಕೆ.ರವಿಕುಮಾರ್, ಜಿ.ಪಂ. ಸದಸ್ಯ ಕೊಪ್ಪಾಳ್ಳಿ ಮಹದೇವನಾಯಕ, ತಾ.ಪಂ. ಅಧ್ಯಕ್ಷ ಬಸವಣ್ಣ, ಜಿಲ್ಲಾ ಮಹಿಳಾ ಅಧ್ಯಕ್ಷೆ ರತ್ನಮ್ಮ, ನಗರಸಭಾ ಮಾಜಿ ಸದಸ್ಯರಾದ ಸುದರ್ಶ್ನ್ ಗೌಡ, ಸುರೇಶ್ ನಾಯಕ, ಅಹಮ್ಮದ್ ಹತೀಕ್, ಪದ್ಮಾ ಪುರುಷೋತ್ತಮ್, ಸದಾಶಿವಮೂರ್ತಿ, ಜಿ.ಪಂ. ಸದಸ್ಯ ಪುಟ್ಟಬುದ್ಧಿ, ಕೋಡಿಮೋಳೆ ರಾಜಶೇಖರ್, ಪುಟ್ಟಸ್ವಾಮಿ, ರಾಜಗೋಪಾಲ್ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

