ರಾಜ್ಯ ಮಹಾಸಮರಕ್ಕೆ ಜಿಲ್ಲೆ ಸಜ್ಜು
ಕ.ಪ್ರ. ವಾರ್ತೆ ್ಣ ಚಾ.ನಗರ ್ಣ ಮಾ.21
ಚಾಮರಾಜನಗರ: ಸ್ಥಳೀಯ ಸಂಸ್ಥೆ ಸಮರ ಮುಗಿಯುತ್ತಿದ್ದಂತೆ ರಾಜ್ಯದ ಮಹಾ ಸಮರ ವಿಧಾನಸಭಾ ಚುನಾವಣೆ ಮುಹೂರ್ತ ಫಿಕ್ಸ್ ಆಗಿದೆ. ಹೀಗಾಗಿ ಚುನಾವಣಾ ಕಣಕ್ಕಿಳಿಯಲು ಮುಂದಾಗಿರುವ ಅಭ್ಯರ್ಥಿಗಳು ಟಿಕೆಟ್ ಗಟ್ಟಿ ಮಾಡಿಕೊಳ್ಳುವ ಯತ್ನದಲ್ಲಿ ನಿರತರಾಗಿದ್ದಾರೆ.
2008ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ನ ಭದ್ರಕೋಟೆಯಾಗಿದ್ದ ಚಾಮರಾಜನಗರ ಜಿಲ್ಲೆಯಲ್ಲಿ ಪ್ರಬಲವಾಗಿ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಮತ್ತು ಬಿಎಸ್ಪಿಗಳ ನಡುವೆ ಸ್ಪರ್ಧೆ ಏರ್ಪಟ್ಟಿತ್ತು. ಈ ಬಾರಿ ಈ ನಾಲ್ಕು ಪಕ್ಷಗಳ ಜೊತೆಯಲ್ಲಿ ಇತ್ತೀಚೆಗೆ ಉದಯಿಸಿರುವ ಕೆಜೆಪಿ ಮತ್ತು ಬಿಎಸ್ಸಾರ್ ಕಾಂಗ್ರೆಸ್ ಕೂಡಾ ಸ್ಪರ್ಧಾ ಕಣದಲ್ಲಿವೆ. ಕೆಲವು ಕಡೆ ಎಸ್ಡಿಪಿಐ ಸಹ ಸದ್ದು ಮಾಡಲು ಸಜ್ಜಾಗಿದೆ.
2008ರಲ್ಲಿ ಜಿಲ್ಲೆಯ ಚಾಮರಾಜನಗರ, ಗುಂಡ್ಲುಪೇಟೆ, ಹನೂರು ಮತ್ತು ಕೊಳ್ಳೇಗಾಲ ಮೀಸಲು ಕ್ಷೇತ್ರಗಳಲ್ಲೂ ಕಾಂಗ್ರೆಸ್ ಅಭ್ಯರ್ಥಿಗಳೇ ಆಯ್ಕೆಯಾಗಿ ಜಿಲ್ಲೆ ಕಾಂಗ್ರೆಸ್ ಭದ್ರಕೋಟೆ ಎನಿಸಿತ್ತು. ಕೊಳ್ಳೇಗಾಲ ಮೀಸಲು ಕ್ಷೇತ್ರದಿಂದ ಆರ್.ಧ್ರುವನಾರಾಯಣ 2009ರ ಲೋಕಸಭಾ ಚುನಾವಣೆಯಲ್ಲಿ ಆಯ್ಕೆಯಾಗಿದ್ದರಿಂದ ಕಾಂಗ್ರೆಸ್ ಮತ್ತಷ್ಟು ಬಲಗೊಂಡಿತ್ತು. ಆದರೆ, 2009ರ ಕೊಳ್ಳೇಗಾಲ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲು ಅನುಭವಿಸಿತು. ಅಂದು ಜಿ.ಎನ್.ನಂಜುಂಡಸ್ವಾಮಿ ಆಯ್ಕೆಯಾಗುವ ಮೂಲಕ ಬಿಜೆಪಿ ಖಾತೆ ತೆರೆಯಿತು. ಇದೀಗ ನಾಲ್ವರು ಶಾಸಕರು ಆಯಾ ಕ್ಷೇತ್ರದಿಂದಲೇ ಸ್ಪರ್ಧಿಸಲು ಉತ್ಸುಕರಾಗಿದ್ದಾರೆ.
ಕಾಂಗ್ರೆಸ್, ಜೆಡಿಎಸ್ ಮತ್ತು ಕೆಜೆಪಿಯಲ್ಲಿ ಆಕಾಂಕ್ಷಿಗಳು ಕಾಣಿಸಿಕೊಂಡಿದ್ದಾರೆ. ಆದರೆ, ಆಡಳಿತ ಪಕ್ಷ ಬಿಜೆಪಿಯಲ್ಲಿ ಕೊಳ್ಳೇಗಾಲ ಹೊರತುಪಡಿಸಿ ಇತರೆ ಕ್ಷೇತ್ರಗಳಲ್ಲಿ ಯಾರು ಅಭ್ಯರ್ಥಿಯಾಗುತ್ತಾರೆ ಎಂಬುದು ಇನ್ನೂ ನಿರ್ಧಾರವಾಗಿಲ್ಲ.
ಚಾಮರಾಜನಗರ ಕ್ಷೇತ್ರ: ಚಾಮರಾಜನಗರ ವಿಧಾನಸಭಾ ಕ್ಷೇತ್ರದಿಂದ ಹಾಲಿ ಶಾಸಕ ಸಿ.ಪುಟ್ಟರಂಗಶೆಟ್ಟಿ ಅವರಲ್ಲದೆ ಜಿಪಂ ಅಧ್ಯಕ್ಷೆ ಹಾಗೂ ಲೋಕಸಭಾ ಕ್ಷೇತ್ರದ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜಿ.ನಾಗಶ್ರೀ ಪ್ರತಾಪ್, ದೇವರಾಜ ಅರಸು ಅಭಿವೃದ್ಧಿ ನಿಗಮದ ಅಧ್ಯಕ್ಷ ಹನುಮಂತಶೆಟ್ಟಿ ಪೈಪೋಟಿ ನಡೆಸುತ್ತಿದ್ದಾರೆ. ಕೆಜೆಪಿಯಿಂದ ವಿಧಾನಪರಿಷತ್ ಮಾಜಿ ಸದಸ್ಯ ಪ್ರೊ. ಕೆ.ಆರ್.ಮಲ್ಲಿಕಾರ್ಜುನಪ್ಪ, ಜೆಡಿಎಸ್ನಿಂದ ಮಾಜಿ ಸಚಿವ ಹಾಗೂ ರಾಷ್ಟ್ರೀಯ ಕಾರ್ಯಕಾರಿಣಿ ಸಮಿತಿ ಸದಸ್ಯ ಎಂ.ಮಹದೇವ್ ಅವರ ಹೇಳಿ ಹೆಸರು ಕೇಳಿ ಬಂದಿತ್ತು. ಇದೀಗ ಡಾ. ಬಾಬು ಮತ್ತು ತಾಲೂಕು ಜೆಡಿಎಸ್ನ ಮಂಗಳ ಶಿವಕುಮಾರ್ ನಡುವೆ ಪೈಪೋಟಿ ಏರ್ಪಟ್ಟಿದೆ. ಕನ್ನಡ ಚಳವಳಿ ವಾಟಾಳ್ ಪಕ್ಷದಿಂದ ವಾಟಾಳ್ ನಾಗರಾಜ್ ಸ್ಫರ್ಧಿಸಲಿದ್ದು, ಬಿಜೆಪಿ ಸೂಕ್ತ ಅಭ್ಯರ್ಥಿಗಾಗಿ ಹುಡುಕಾಟ ನಡೆಸುತ್ತಿದೆ. ಬಿಎಸ್ಸಾರ್, ಎಸ್ಡಿಪಿಐ ಅಭ್ಯರ್ಥಿಗಳು ಇನ್ನೂ ಅಂತಿಮವಾಗಿಲ್ಲ.
ಗುಂಡ್ಲುಪೇಟೆ ಕ್ಷೇತ್ರ: ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರದಿಂದ ಸತತ ನಾಲ್ಕು ಬಾರಿ ಆಯ್ಕೆಯಾಗಿರುವ ಎಚ್.ಎಸ್. ಮಹದೇವಪ್ರಸಾದ್ ಅವರನ್ನು ಹೊರತುಪಡಿಸಿ ಬೇರ್ಯಾರೂ ಟಿಕೆಟ್ ಬಯಸಿಲ್ಲ. ಹೀಗಾಗಿ ಮಹದೇವ್ ಪ್ರಸಾದ್ ಕಾಂಗ್ರೆಸ್ನಿಂದ ಸ್ಪರ್ಧಿಸಲಿದ್ದು, ಕೆಜೆಪಿ ಅಭ್ಯರ್ಥಿ ಆಯ್ಕೆ ತೀವ್ರ ಕುತೂಹಲ ಕೆರಳಿಸಿದ್ದು, ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ, ವಸತಿ ಸಚಿವ ವಿ. ಸೋಮಣ್ಣ ಅವರನ್ನು ಕರೆತರುವ ಪ್ರಯತ್ನ ನಡೆಯುತ್ತಿದೆ. ಅವರು ಬಾರದಿದ್ದರೆ ಕಳೆದ ಬಾರಿ ಬಿಜೆಪಿಯಿಂದ ಸ್ಪರ್ಧಿಸಿ ಕಡಿಮೆ ಮತಗಳಿಂದ ಸೋತಿದ್ದ ಸಿ.ಎಸ್. ನಿರಂಜನ್ಕುಮಾರ್ ಅಭ್ಯರ್ಥಿಯಾಗಲಿದ್ದಾರೆ. ಬಿಜೆಪಿಯಿಂದ ನೂತನ ಜಿಲ್ಲಾಧ್ಯಕ್ಷ ಎಚ್.ಜಿ.ಮಲ್ಲಿಕಾರ್ಜುನಸ್ವಾಮಿ ಸ್ಪರ್ಧಿಸುವ ಸಾಧ್ಯತೆಯಿದ್ದು, ಜೆಡಿಎಸ್ ಮತ್ತು ಬಿಎಸ್ಆರ್ ಅಭ್ಯರ್ಥಿಗಾಗಿ ಹುಡುಕಾಟ ನಡೆಯುತ್ತಿದೆ.
ಹನೂರು ಕ್ಷೇತ್ರ: ಹನೂರು ವಿಧಾನಸಭಾ ಕ್ಷೇತ್ರದಿಂದ ಹಾಲಿ ಶಾಸಕ ಆರ್.ನರೇಂದ್ರ ಅವರೊಂದಿಗೆ ಕಾಂಗ್ರೆಸ್ ಟಿಕೆಟ್ಗಾಗಿ ಕೊಳ್ಳೇಗಾಲದ ಮಾನಸ ಶಿಕ್ಷಣ ಸಂಸ್ಥೆಯ ಗೌರವ ಕಾರ್ಯದರ್ಶಿ ಡಾ. ಎಸ್.ದತ್ತೇಶ್ಕುಮಾರ್ ಅವರು ಟಿಕೆಟ್ಗಾಗಿ ಪೈಪೋಟಿ ನಡೆಸುತ್ತಿದ್ದು, ಹಾಲಿ ಶಾಸಕ ನರೇಂದ್ರ ಅವರೇ ಅಭ್ಯರ್ಥಿಯಾಗಲಿದ್ದಾರೆ.
ಕೆಜೆಪಿಯಿಂದ ಆರಂಭದಿಂದಲೂ ಕಳೆದ ಬಾರಿ ಬಿಎಸ್ಪಿ ಅಭ್ಯರ್ಥಿಯಾಗಿದ್ದ ಪರಿಮಳಾ ನಾಗಪ್ಪ ಅವರ ಹೆಸರು ಮುಂಚೂಣಿಯಲ್ಲಿತ್ತು. ಇದೀಗ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ, ವಸತಿ ಸಚಿವ ವಿ. ಸೋಮಣ್ಣ ಅವರ ಹೆಸರು ಕ್ಷೇತ್ರದಲ್ಲಿ ಕೇಳಿ ಬರುತ್ತಿರುವುದರಿಂದ ಟಿಕೆಟ್ಗಾಗಿ ಇಬ್ಬರ ನಡುವೆ ಪೈಪೋಟಿ ಆರಂಭವಾಗಿದೆ.
ಜೆಡಿಎಸ್ನಿಂದ ಮಾಜಿ ಸಚಿವ ಹಾಗೂ ರಾಷ್ಟ್ರೀಯ ಕಾರ್ಯಕಾರಿಣಿ ಸಮಿತಿ ಸದಸ್ಯ ಎಂ. ಮಹದೇವ್ ಹೆಸರು ಪ್ರಬಲವಾಗಿ ಕೇಳಿ ಬರುತ್ತಿದ್ದು, ಕೊನೆ ಕ್ಷಣದಲ್ಲಿ ಅವರು ಸ್ಪರ್ಧೆಯಿಂದ ದೂರ ಉಳಿದರೂ ಅಶ್ಚರ್ಯ ಪಡಬೇಕಾಗಿಲ್ಲ. ಉಳಿದಂತೆ ರಾಜ್ಯ ಪ್ರಧಾನ ಕಾರ್ಯದರ್ಶಿ ಪೊನ್ನಾಚಿ ಮಹದೇವಸ್ವಾಮಿ, ಕಳೆದ ಬಾರಿ ಜೆಡಿಎಸ್ ಅಭ್ಯರ್ಥಿಯಾಗಿದ್ದ ಕುಮಾರಸ್ವಾಮಿ ಅಭಿಮಾನಿ ಬಳಗದ ರಾಜ್ಯ ಗೌರವಾಧ್ಯಕ್ಷ ಆರ್.ಪಿ.ವಿಷ್ಣುಕುಮಾರ್, ಜಿಪಂ ಮಾಜಿ ಉಪಾಧ್ಯಕ್ಷ ಜೆ.ಶಿವಮೂರ್ತಿ ಹೆಸರು ಕೇಳಿ ಬರುತ್ತಿದೆ. ಇವರ ಪೈಕಿ ಮಹದೇವ್ ಹೊರತು ಯಾರಿಗೆ ಟಿಕೆಟ್ ತಪ್ಪಿದರೂ ಪಕ್ಷದಲ್ಲಿ ಬಂಡಾಯ ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಬಿಜೆಪಿಯಿಂದ ನೂತನ ತಾಲೂಕು ಅಧ್ಯಕ್ಷ ಬಿ.ಕೆ.ಶಿವಕುಮಾರ್ ಅಭ್ಯರ್ಥಿಯಾಗಲಿದ್ದಾರೆ.
ಕೊಳ್ಳೇಗಾಲ: ಕೊಳ್ಳೇಗಾಲ ಮೀಸಲು ಕ್ಷೇತ್ರದಲ್ಲಿ ಕಾಂಗ್ರೆಸ್ನಲ್ಲಿ 16 ಮಂದಿ ಟಿಕೆಟ್ ಬಯಸಿದ್ದು, ಅವರ ಪೈಕಿ ಮಾಜಿ ಶಾಸಕ ಎಸ್. ಜಯಣ್ಣ, ಜಿಪಂ ಸದಸ್ಯ ಬಿ.ಪಿ.ಪುಟ್ಟಬುದ್ದಿ ಹಾಗೂ ಮಾಂಬಳ್ಳಿ ನಂಜುಂಡಸ್ವಾಮಿ ನಡುವೆ ಪ್ರಬಲ ಪೈಪೋಟಿ ಇದೆ. ಕೆಜೆಪಿಯಿಂದ ಆರಂಭದಲ್ಲಿ ಜಿಪಂ ಸದಸ್ಯ ಚಂದ್ರಕಲಾ ಬಾಯಿ ಹೆಸರು ಕೇಳಿ ಬಂದಿತ್ತು. ಇದೀಗ ಮಾಜಿ ಶಾಸಕ ಎಸ್.ಬಾಲರಾಜು ಸೇರ್ಪಡೆಯಿಂದಾಗಿ ಅವರಿಗೆ ಟಿಕೆಟ್ ಅಂತಿಮವಾಗುವ ಸಾಧ್ಯತೆ ಇದ್ದು, ಚಂದ್ರಕಲಾ ಬಾಯಿ ಅವರನ್ನು ಪಕ್ಷ ಎಷ್ಟರ ಮಟ್ಟಿಗೆ ಮನವೊಲಿಸುತ್ತದೆ ಕಾದು ನೋಡಬೇಕಾಗಿದೆ. ಇಲ್ಲವಾದರೆ ಕೆಜೆಪಿಗೆ ಬಂಡಾಯ ಎದುರಾಗಬಹುದು.
ಬಿಜೆಪಿಯಿಂದ ಹಾಲಿ ಶಾಸಕ ಜಿ.ಎನ್.ನಂಜುಂಡಸ್ವಾಮಿ ಅವರೇ ಸ್ಪರ್ಧಿಸಲಿದ್ದು, ಜೆಡಿಎಸ್ನಿಂದ ಜಿಲ್ಲಾಧ್ಯಕ್ಷ ಎಂ.ಪಂಚಾಕ್ಷರಿ ಹೆಸರು ಪ್ರಬಲವಾಗಿ ಕೇಳಿಬರುತ್ತಿದ್ದು, ತೀರ್ಥಕುಮಾರ್ ಸಹ ಟಿಕೆಟ್ ಪಡೆಯುವ ಯತ್ನದಲ್ಲಿದ್ದಾರೆ. ಇಡಿ ಜಿಲ್ಲೆಯಲ್ಲಿ ಬಿಎಸ್ಪಿ ಪ್ರಮುಖವಾಗಿ ಗಮನ ಸೆಳೆಯುತ್ತಾ ಬಂದಿರುವ ಕೊಳ್ಳೇಗಾಲ ಕ್ಷೇತ್ರದಲ್ಲಿ ರಾಜ್ಯ ಉಪಾಧ್ಯಕ್ಷ ಎನ್.ಮಹೇಶ್ ಸ್ಪರ್ಧಿಸಲಿದ್ದಾರೆ. ಜಿಲ್ಲಾ ಸಂಯೋಜಕ ಮುಳ್ಳೂರು ಶಿವಮಲ್ಲು ಸ್ಪರ್ಧಿಸುವ ಸಾಧ್ಯತೆ ಇದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

