'ಕೈ'ಯಿಂದ ಕಿತ್ತುಕೊಂಡಿದ್ದನ್ನು ಕಮಲ ಉಳಿಸಿಕೊಳ್ಳುವುದೇ?
ಕಪ್ರ ವಾರ್ತೆ, ಚಿಕ್ಕಮಗಳೂರು, ಏ. 1
ಶೃಂಗೇರಿ ವಿಧಾನಸಭಾ ಕ್ಷೇತ್ರ, ಅಪ್ಪಟ ಮಲೆನಾಡು. ಈ ಕ್ಷೇತ್ರ ರಾಜ್ಯಕ್ಕೆ ವಿಶೇಷವಾದ ಕೊಡುಗೆಯನ್ನು ನೀಡಿದೆ.
ಈ ರಾಜ್ಯಕ್ಕೆ ಮುಖ್ಯಮಂತ್ರಿಯನ್ನು ಕೊಟ್ಟ ಕ್ಷೇತ್ರ, ವಿಧಾನಸಭೆಗೆ ಅವಿರೋಧ ಆಯ್ಕೆ ಮಾಡಿರುವುದು ಈ ಕ್ಷೇತ್ರದ ಹೆಗ್ಗಳಿಕೆ.
1952ರಲ್ಲಿ ಪ್ರಥಮ ಬಾರಿಗೆ ವಿಧಾನಸಭಾ ಚುನಾವಣೆ ನಡೆದಾಗ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ಹಾಗೂ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪವನ್ನು ಒಳಗೊಂಡ ಕ್ಷೇತ್ರ ಅಸ್ತಿತ್ವದಲ್ಲಿತ್ತು. ಆಗ ಕಾಂಗ್ರೆಸ್ನಿಂದ ಸ್ಪರ್ಧೆ ಮಾಡಿದ್ದ ಕಡಿದಾಳ್ ಮಂಜಪ್ಪ ಅವರು ಜಯಗಳಿಸಿದರು. ಅವರು 1956ರ ಆಗಸ್ಟ್ನಿಂದ ಅಕ್ಟೋಬರ್ ತಿಂಗಳವರೆಗೆ ಅಂದರೆ 3 ತಿಂಗಳ ಅವಧಿಗೆ ಮುಖ್ಯಮಂತ್ರಿಯಾಗಿದ್ದರು.
ಪ್ರತ್ಯೇಕ ಕ್ಷೇತ್ರ: ಕ್ಷೇತ್ರಗಳ ಪುನರ್ ವಿಂಗಡಣೆಯಲ್ಲಿ ಶೃಂಗೇರಿ ಕ್ಷೇತ್ರ ಪ್ರತ್ಯೇಕವಾಯಿತು. 1957ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಕಡಿದಾಳ್ ಮಂಜಪ್ಪ ಅವರು ಮತ್ತೆ ಕಾಂಗ್ರೆಸ್ನಿಂದಲೇ ಸ್ಪರ್ಧೆ ಮಾಡಿದರು. ಅವರು ಮುಖ್ಯಮಂತ್ರಿ ಅಭ್ಯರ್ಥಿಯಾಗಿದ್ದರಿಂದ ಬೇರೆ ಪಕ್ಷದವರು ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಲಿಲ್ಲ. ಆದುದರಿಂದ ಅವರು ಅವಿರೋಧ ಆಯ್ಕೆಯಾದರು. ವಿಧಾನಸಭಾ ಚುನಾವಣೆಯಲ್ಲಿ ಅವಿರೋಧ ಆಯ್ಕೆ ಮಾಡಿ ರಾಜಕಾರಣದಲ್ಲಿ ದಾಖಲೆಯನ್ನು ನಿರ್ಮಿಸಿದ ಕ್ಷೇತ್ರ ಇದಾಗಿದೆ. ಆದರೆ, ಅವರು ಮುಖ್ಯಮಂತ್ರಿಯಾಗಲಿಲ್ಲ. 1962ರಲ್ಲಿ ನಡೆದ ಚುನಾವಣೆಯಲ್ಲಿ ಮತ್ತೆ ಕಡಿದಾಳ್ ಮಂಜಪ್ಪ ಕಾಂಗ್ರೆಸ್ನಿಂದ ಸ್ಪರ್ಧೆ ಮಾಡಿ ಜಯಗಳಿಸಿದರು. ಸತತವಾಗಿ ಮೂರು ಬಾರಿ ಗೆಲವು ಸಾಧಿಸುವುದರ ಮೂಲಕ ಹ್ಯಾಟ್ರಿಕ್ ಸಾಧಿಸಿದರು.
1967ರಲ್ಲಿ ನಡೆದ ಚುನಾವಣೆಯಲ್ಲಿ ಕಡಿದಾಳ್ ಮಂಜಪ್ಪ ಸ್ಪರ್ಧೆ ಮಾಡಲಿಲ್ಲ. ಆಗ ಕಾಂಗ್ರೆಸ್ನಿಂದ ಸ್ಪರ್ಧೆ ಮಾಡಿದ್ದ ಕೆ.ಎನ್. ವೀರಪ್ಪಗೌಡ ಜಯಗಳಿಸಿದರು. 1972ರಲ್ಲೂ ಅವರೇ ಜಯಗಳಿಸಿದರು. ದೇಶದಲ್ಲಿ ತುರ್ತು ಪರಿಸ್ಥಿತಿಯ ಕರಾಳ ದಿನಗಳು ದೂರವಾದ ನಂತರ ನಡೆದ ಅಂದರೆ 1978ರಲ್ಲಿ ನಡೆದ ಚುನಾವಣೆಯ ವೇಳೆಗೆ ಕಾಂಗ್ರೆಸ್ ಎರಡು ವಿಭಾಗಗಳಾದವು. ಕಾಂಗ್ರೆಸ್ (ಐ)ನಿಂದ ಸ್ಪರ್ಧೆ ಮಾಡಿದ್ದ ಬಿ. ರಾಮಯ್ಯ ಜಯಗಳಿಸಿದರು. ಕಾಂಗ್ರೆಸ್ನಿಂದ ಸ್ಪರ್ಧೆ ಮಾಡಿದ್ದ ಕೆ.ಎನ್. ವೀರಪ್ಪಗೌಡ ಮೂರನೇ ಸ್ಥಾನಕ್ಕೆ ತೃಪ್ತಿಪಡುವಂತಾಯಿತು. ಅಲ್ಲಿಗೆ ಕಾಂಗ್ರೆಸ್ನ ನಿರಂತರವಾದ ವಿಜಯಯಾತ್ರೆ ಅಂತಿಮಗೊಂಡಿತು.
ಬೇರೆಯವರಿಗೆ ಅವಕಾಶ: 1983ರಲ್ಲಿ ನಡೆದ ಚುನಾವಣೆಯಲ್ಲಿ ಜೆಎನ್ಪಿಯಿಂದ ಸ್ಪರ್ಧೆ ಮಾಡಿದ್ದ ಎಚ್.ಜಿ. ಗೋವಿಂದೇಗೌಡರು ಜಯಗಳಿಸಿದರು. 1985ರಲ್ಲೂ ಕೂಡ ಜಯ ಅವರ ಪಾಲಾಯಿತು. 1989ರ ಚುನಾವಣೆಯಲ್ಲಿ ಕಾಂಗ್ರೆಸ್ನಿಂದ ಸ್ಪರ್ಧೆ ಮಾಡಿದ್ದ ಯು.ಕೆ. ಶಾಮಣ್ಣ ಜಯಗಳಿಸಿದರು. 1994ರಲ್ಲಿ ಜನತಾದಳದಿಂದ ಸ್ಪರ್ಧೆ ಮಾಡಿದ್ದ ಎಚ್.ಜಿ. ಗೋವಿಂದೇಗೌಡ ಅವರು ಜಯಗಳಿಸಿದರು. ಅವರು ಪ್ರಾಥಮಿಕ ಮತ್ತು ಪ್ರೌಢಶಾಲಾ ಖಾತೆಯ ಸಚಿವರಾಗಿದ್ದಾಗ ಶಿಕ್ಷಕರ ನೇಮಕಾತಿಯಲ್ಲಿ ಪಾರದರ್ಶಕತೆ ಜಾರಿಗೆ ತಂದಿದ್ದರಿಂದ ಲಕ್ಷಾಂತರ ಮಂದಿ ನಿರುದ್ಯೋಗಿಗಳು ಶಿಕ್ಷಕರ ಹುದ್ದೆಯನ್ನು ಪಡೆದುಕೊಂಡರು. ಗೋವಿಂದೇಗೌಡರು ಮಲೆನಾಡಿನ ಗಾಂಧಿ ಎಂಬ ಹೆಸರಿಗೆ ಪಾತ್ರರಾದರು. ಆಗ, ಜನತಾದಳದಲ್ಲಿ ಉಂಟಾದ ಆಂತರಿಕ ಬಿಕ್ಕಟ್ಟಿನಿಂದ ಬೇಸತ್ತು ಅವರು ರಾಜಕೀಯಕ್ಕೆ ಗುಡ್ ಬೈ ಹೇಳಿದರು.
ಚಂದ್ರೇಗೌಡ ಆಯ್ಕೆ: 1999ರ ಚುನಾವಣೆಯಲ್ಲಿ ಡಿ.ಬಿ. ಚಂದ್ರೇಗೌಡ ಅವರು ಕಾಂಗ್ರೆಸ್ನಿಂದ ಸ್ಪರ್ಧೆ ಮಾಡಿ ಜಯಗಳಿಸಿತು. ಆಗ, ಅವರು ಸಚಿವರು ಸಹ ಆಗಿದ್ದರು. ನಂತರದಲ್ಲಿ ಅಂದರೆ 2004ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧೆ ಮಾಡಿದ್ದ ಡಿ.ಎನ್. ಜೀವರಾಜ್ ಅವರು ಜಯಗಳಿಸಿದರು. ಶೃಂಗೇರಿ ಕ್ಷೇತ್ರದಲ್ಲಿ ಬಿಜೆಪಿ ಮೊಟ್ಟ ಮೊದಲ ಬಾರಿಗೆ ಜಯಗಳಿಸಿತು. 2008ರ ಚುನಾವಣೆಯಲ್ಲಿ ಡಿ.ಎನ್. ಜೀವರಾಜ್ ಎರಡನೇ ಬಾರಿಗೆ ಜಯಗಳಿಸಿದರು. 2013 ರಂದು ನಡೆಯಲಿರುವ ಚುನಾವಣೆಯಲ್ಲಿ ಅದೃಷ್ಟ ಯಾವ ಪಕ್ಷಕ್ಕೆ ಒಲಿಯಲಿದೆ ಕಾದು ನೋಡಬೇಕಾಗಿದೆ.
-ಆರ್. ತಾರಾನಾಥ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

