ಚಿಕ್ಕಮಗಳೂರು

ಎಲ್ಲಿಂದಲೋ ಬಂದು ಗೆದ್ದು ಹೋದರು

Published On :

ಕ.ಪ್ರ.ವಾರ್ತ್ಣೆ ಚಿಕ್ಕಮಗಳೂರ್ಣು ಏ. 2
ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳ ಪೈಕಿ ಮೂಡಿಗೆರೆ ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರ.
   ಅಪ್ಪಟ ಮಲೆನಾಡು ಪ್ರದೇಶವಾಗಿರುವ ಈ ಕ್ಷೇತ್ರದಲ್ಲಿ ಕೂಲಿ ಕಾರ್ಮಿಕರೇ ಹೆಚ್ಚು. ಬೇರೆ ಜಿಲ್ಲೆ ಹಾಗೂ ರಾಜ್ಯಗಳಿಂದ ಕೂಲಿ ಅರಸಿ ಬಂದವರ ಪೈಕಿ ಹೆಚ್ಚು ಜನರು ಇಲ್ಲಿನ ಕಾಫಿ ತೋಟಗಳಲ್ಲಿ ಇದ್ದು, ಇಲ್ಲೇ ಜೀವನ ನಡೆಸುತ್ತಿದ್ದಾರೆ.
   ಹಲವು ವರ್ಷಗಳಿಂದ ಇಲ್ಲಿರುವವರಿಗೆ ತಮ್ಮ ಹುಟ್ಟೂರು ಮರೆತು ಹೋಗಿದೆ. ಇಲ್ಲಿನ ಪರಿಸರಕ್ಕೆ ಹೊಂದಿಕೊಂಡು ಜೀವನ ನಡೆಸುತ್ತಿದ್ದಾರೆ. ಇವರಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರೆ ಹೆಚ್ಚು. ಈ ಕಾರಣಕ್ಕಾಗಿಯೇ ಕೇಂದ್ರ ಚುನಾವಣಾ ಆಯೋಗ ಈ ಕ್ಷೇತ್ರವನ್ನು ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರವನ್ನಾಗಿ ಘೋಷಣೆ ಮಾಡಿದೆ.
  ಜಿಲ್ಲೆಯ ಇತರೆ ನಾಲ್ಕು ಕ್ಷೇತ್ರಗಳಿಗೆ ಹೋಲಿಕೆ ಮಾಡಿದೆ. ಇದರ ವ್ಯಾಪ್ತಿ ವಿಶಾಲವಾದದು. ಮೂಡಿಗೆರೆ ತಾಲೂಕು ಕೇಂದ್ರದಿಂದ ಸುಮಾರು 96 ಕಿ.ಮೀ. ದೂರದವರೆಗೆ ವಿಸ್ತಾರವಾಗಿದೆ.
  ಈ ಕ್ಷೇತ್ರದ ರಾಜಕಾರಣದ ಇತಿಹಾಸ ಪುಟಗಳನ್ನು ತಿರುವು ಹಾಕಿದರೆ, ಈವರೆಗೆ ಮೂಡಿಗೆರೆ ವಿಧಾನಸಭಾ ಕ್ಷೇತ್ರದಲ್ಲಿ ನಡೆದ 13 ವಿಧಾನಸಭಾ ಚುನಾವಣೆಗಳು ನಡೆದಿವೆ. ಇವುಗಳಲ್ಲಿ ಅತಿ ಹೆಚ್ಚು ಗೆಲುವು ಸಾಧಿಸಿದ್ದು ಕಾಂಗ್ರೆಸ್, ಇನ್ನುಳಿದಂತೆ ಇತರೆ ಪಕ್ಷದವರಿಗೂ ಅವಕಾಶ ಸಿಕ್ಕಿದೆ. ಮತದಾರರು, ಸ್ಥಳೀಯರು, ಹೊರಗಿನವರು ಎಂಬ ಬೇಧಬಾವನ್ನು ತೋರದೆ ಎಲ್ಲರಿಗೂ ಆಶೀರ್ವಾದ ಮಾಡಿದ್ದಾರೆ. ಪಕ್ಷವಾರು ಫಲಿತಾಂಶದ ವಿವರ ನೋಡಿದರೆ 6 ಬಾರಿ ಕಾಂಗ್ರೆಸ್‌ನ ಕೈ ಹಿಡಿದಿದ್ದಾರೆ.
ಬದಲಾವಣೆಯ ಅಲೆ: ರಾಷ್ಟ್ರ ಮತ್ತು ರಾಜ್ಯ ರಾಜಕಾರಣದಲ್ಲಿ ಆಯಾ ಸಂದರ್ಭದಲ್ಲಿ ಆದ ಬದಲಾವಣೆಯ ಅಲೆ ಇಲ್ಲೂ ಬೀಸಿದೆ. ಚಿತ್ರದುರ್ಗ ಜಿಲ್ಲೆಯಿಂದ ಮೂಡಿಗೆರೆಗೆ ಬಂದು ಇಲ್ಲಿ ಪಿಎಸ್‌ಪಿ ಪಕ್ಷದಿಂದ ಸ್ಪರ್ಧೆ ಮಾಡಿದ್ದ ಕೆ.ಎಚ್. ರಂಗನಾಥ್ ಒಂದಲ್ಲಾ ಎರಡು ಬಾರಿ ಕಾಂಗ್ರೆಸ್ ಅಭ್ಯರ್ಥಿಯನ್ನು ಸೋಲಿಸಿದ್ದರು. ತರೀಕೆರೆ ತಾಲೂಕಿನ ಪಿ. ತಿಪ್ಪಯ್ಯ ಅವರನ್ನು ಕೂಡ ಮತದಾರರು ಗೆಲ್ಲಿಸಿ ವಿಧಾನಸಭೆಗೆ ಕಳುಹಿಸಿಕೊಟ್ಟರು.
ಮೋಟಮ್ಮ: ಸ್ವಾತಂತ್ರ್ಯದ ನಂತರದಲ್ಲಿ ಅಂದರೆ 1952ರಲ್ಲಿ ಪ್ರಪ್ರಥಮ ಬಾರಿಗೆ ನಡೆದ ವಿಧಾನಸಭಾ ಚುನಾವಣೆ ನಡೆದ ವರ್ಷದಲ್ಲಿ ಮೂಡಿಗೆರೆ ಪ್ರತ್ಯೇಕ ವಿಧಾನಸಭಾ ಕ್ಷೇತ್ರವಾಗಿರಲಿಲ್ಲ. ಆ ಚುನಾವಣೆಯಲ್ಲಿ ಮೂಡಿಗೆರೆ- ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರ ಇತ್ತು. ಈ ಕ್ಷೇತ್ರದಲ್ಲಿ ಇಬ್ಬರನ್ನು ಆಯ್ಕೆ ಮಾಡಬೇಕಾಯಿತು. ಅದರಂತೆ ಇವರೆಡು ಕ್ಷೇತ್ರಗಳಿಂದ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧೆ ಮಾಡಿದ್ದ ಬಿ.ಎಲ್. ಸುಬ್ಬಮ್ಮ, ಜಿ. ಪುಟ್ಟಸ್ವಾಮಿ ಜಯಗಳಿಸಿದರು.
  1957 ರಲ್ಲಿ ಎಲ್.ಎಚ್. ತಿಮ್ಮಬೋವಿ ಕಾಂಗ್ರೆಸ್‌ನಿಂದ ಸ್ಪರ್ಧೆ ಮಾಡಿದ್ದರು. ಆ ವರ್ಷದಲ್ಲೂ ಕೂಡ ಕಾಂಗ್ರೆಸ್ ಪಕ್ಷದ್ದಾಯಿತು. 1962 ರಲ್ಲಿ ಚಿಕ್ಕಮಗಳೂರಿನಿಂದ ಮೂಡಿಗೆರೆ ಪ್ರತ್ಯೇಕ ಕ್ಷೇತ್ರವನ್ನಾಗಿಸಲಾಯಿತು. ಅದೇ ವರ್ಷದಲ್ಲಿ ನಡೆದ ಚುನಾವಣೆಯಲ್ಲಿ ಪಿಎಸ್‌ಪಿಯಿಂದ ಸ್ಪರ್ಧೆ ಮಾಡಿದ್ದ ಕೆ.ಎಚ್. ರಂಗನಾಥ್ ಜಯಗಳಿಸಿದರು. 1967ರಲ್ಲಿ ನಡೆದ ಚುನಾವಣೆಯಲ್ಲೂ ಕೂಡ ಗೆಲವು ಅವರದ್ದೇಯಾಗಿತ್ತು. 1972ರಲ್ಲಿ ಜಿ. ಪುಟ್ಟಸ್ವಾಮಿ ಕಾಂಗ್ರೆಸ್‌ನಿಂದ ಸ್ಪರ್ಧೆ ಮಾಡಿ ಜಯಗಳಿಸಿದರು.
ಹಾವು ಏಣಿಯಾಟ: ದೇಶದಲ್ಲಿ ತುರ್ತು ಪರಿಸ್ಥಿತಿ ದಿನಗಳು ಕಳೆದ ಮೇಲೆ 1978ರಲ್ಲಿ ನಡೆದ ವಿಧಾನಸಭಾ ಚುನಾವಣೆಯ ನಂತರದಲ್ಲಿ ಕಾಂಗ್ರೆಸ್ ಮೂಡಿಗೆರೆಯಲ್ಲಿ ಸೋಲು ಮತ್ತು ಗೆಲುವಿನ ಕಹಿ ಮತ್ತು ಸಿಹಿ ಎರಡನ್ನು ಅನುಭವಿಸಿತು.
1978ರಲ್ಲಿ ಮೋಟಮ್ಮ ಅವರು ಕಾಂಗ್ರೆಸ್ (ಐ)ನಿಂದ ಸ್ಪರ್ಧೆ ಮಾಡಿದ್ದರು. ಆಗ ಕಾಂಗ್ರೆಸ್‌ನಿಂದ ಸ್ಪರ್ಧೆ ಮಾಡಿ 34,449 ಮತಗಳನ್ನು ಪಡೆದು ಜಯಗಳಿಸಿದರು. ಆದರೆ, ಈ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧೆ ಮಾಡಿದ್ದ ಜಿ. ಪುಟ್ಟಸ್ವಾಮಿ ಪಡೆದ ಮತಗಳ ಸಂಖ್ಯೆ ಕೇವಲ 1080. ಅಂದರೆ, ಆಗ ಜಿಲ್ಲೆಯಲ್ಲಿ ಇಂದಿರಾಗಾಂಧಿಯ ಅಲೆ ಇದ್ದರಿಂದ ಮೋಟಮ್ಮ ಗೆಲವು  ಸುಲುಭವಾಯಿತು.
ಆ ಅಭಿಮಾನ ಬಹಳ ವರ್ಷಗಳ ಕಾಲ ಗಟ್ಟಿಯಾಗಿ ನಿಲ್ಲಲಿಲ್ಲ. ಕಾಲ ಬದಲಾದಂತೆ ಜನರು ಕಾಂಗ್ರೆಸ್ ಪಕ್ಷವನ್ನು ಮರೆಯುತ್ತಾ ಬಂದರು ಎಂಬುದನ್ನು 1983 ಹಾಗೂ 1985 ರಲ್ಲಿ ನಡೆದ ವಿಧಾನಸಭಾ ಚುನಾವಣಾ ಫಲಿತಾಂಶ ಹೇಳುತ್ತದೆ. 1983ರಲ್ಲಿ ತಿಪ್ಪಯ್ಯ ಅವರು ತರೀಕೆರೆಯಿಂದ ಬಂದು ಜೆಎನ್‌ಪಿ ಪಕ್ಷದಿಂದ ಸ್ಪರ್ಧಿಸಿ ಜಯಗಳಿಸಿದರು. 1985ರಲ್ಲಿ ಜೆಎನ್‌ಪಿ ಪಕ್ಷದಿಂದ ಸ್ಪರ್ಧೆ ಮಾಡಿದ್ದ ಬಿ.ಬಿ. ನಿಂಗಯ್ಯ ಜಯಗಳಿಸಿದರು.  
1989ರಲ್ಲಿ ಮೋಟಮ್ಮ ಅವರು ಕಾಂಗ್ರೆಸ್‌ನಿಂದ ಸ್ಪರ್ಧೆ ಮಾಡಿ ಮತ್ತೆ ವಿಧಾನಸಭೆಯನ್ನು ಪ್ರವೇಶ ಮಾಡಿದರು. 1994ರಲ್ಲಿ ಜನತಾದಳದಿಂದ ಸ್ಪರ್ಧೆ ಮಾಡಿದ್ದ ಬಿ.ಬಿ. ನಿಂಗಯ್ಯ ಅವರಿಗೆ ಅದೃಷ್ಟದ ಬಾಗಿಲು ತೆರೆಯಿತು. 1999ರಲ್ಲಿ ಮೋಟಮ್ಮ ಗೆಲವು ಸಾಧಿಸಿದರು. ಹೀಗೆ 15 ವರ್ಷಗಳಲ್ಲಿ ನಡೆದ ನಾಲ್ಕು ವಿಧಾನಸಭಾ ಚುನಾವಣೆಗಳಲ್ಲಿ ಮೋಟಮ್ಮ ಮತ್ತು ಬಿ.ಬಿ. ನಿಂಗಯ್ಯ ಅವರ ನಡುವೆ ನೇರ ಸ್ಪರ್ಧೆ ನಡೆದಿದೆ. ಸೋಲು- ಗೆಲವು ಇವರಿಬ್ಬರಲ್ಲಿ ಮಾತ್ರ ನಿರ್ಧಾರವಾಗುತ್ತಿತ್ತು.
ಬಿಜೆಪಿ ಖಾತೆ ತೆರೆದ ಎಂಪಿಕೆ: ಆದರೆ, 2004ರ ಚುನಾವಣೆಯಲ್ಲಿ ಪರಿಸ್ಥಿತಿ ತದ್ವಿರುದ್ಧವಾಗಿತ್ತು. ಬಿಜೆಪಿಯಿಂದ ಸ್ಪರ್ಧೆ ಮಾಡಿದ್ದ ಎಂ.ಪಿ. ಕುಮಾರಸ್ವಾಮಿ ಗೆಲವು ಸಾಧಿಸಿದರು. ಇದೇ ಮೊದಲ  ಬಾರಿಗೆ ಬಿಜೆಪಿಯ ಕಮಲ ಮೂಡಿಗೆರೆ ಕ್ಷೇತ್ರದಲ್ಲಿ ಅರಳಿತು. ನಂತರ 2008ರಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ತರೀಕೆರೆಯ ಚಂದ್ರಪ್ಪ ಅವರಿಗೆ ಟಿಕೆಟ್ ನೀಡಿತ್ತು. ಅವರ ಚುನಾವಣಾ ಪ್ರಚಾರಕ್ಕಾಗಿ ರಾಹುಲ್‌ಗಾಂಧಿ ಆಗಮಿಸಿದ್ದರು. ಕಾಂಗ್ರೆಸ್‌ನ ಈ ಪ್ರಯತ್ನ ಫಲಪ್ರದವಾಗಲಿಲ್ಲ. ಆ ಚುನಾವಣೆಯಲ್ಲಿ ಎಂ.ಪಿ. ಕುಮಾರಸ್ವಾಮಿ ಗೆಲವು ಸಾಧಿಸಿದರು.
  ಎಂ.ಪಿ. ಕುಮಾರಸ್ವಾಮಿ ಅವರು ಮತ್ತೆ ಬಿಜೆಪಿಯಿಂದಲೇ ಸ್ಪರ್ಧೆ ಮಾಡಲಿದ್ದಾರೆ. ಇನ್ನುಳಿದಂತೆ ಕಾಂಗ್ರೆಸ್, ಜೆಡಿಎಸ್ ಹಾಗೂ ಕೆಜೆಪಿ ಪಕ್ಷಗಳು ತಮ್ಮ ಅಭ್ಯರ್ಥಿಗಳ ಹೆಸರು ಈವರೆಗೆ ಅಂತಿಮಗೊಳಿಸಿಲ್ಲ. 2013ರ ಚುನಾವಣೆ ಎಂ.ಪಿ. ಕುಮಾರಸ್ವಾಮಿ ಹ್ಯಾಟ್ರಿಕ್ ಗೆಲವು ತಂದುಕೊಡುತ್ತದೆಯೋ ಅಥವಾ ಇಲ್ಲಿನ ಮತದಾರರು ಬದಲಾವಣೆ ಬಯಸಿದ್ದಾರೋ ಎಂಬುದು ಮೇ 7 ರಂದು ತಿಳಿಯಲಿದೆ.
-ಆರ್. ತಾರಾನಾಥ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.