ಚಿಕ್ಕಮಗಳೂರು

ಪ್ರಜಾಪ್ರಭುತ್ವ ಹೆಸರಲ್ಲಿ ಸರ್ವಾಧಿಕಾರ: ಕುಂದೂರು ಅಶೋಕ್

Published On :

ಕ.ಪ್ರ ವಾರ್ತೆ, ಆಲ್ದೂರು, ಏ.14
ಸಾಮಾಜಿಕ, ಆರ್ಥಿಕ ನ್ಯಾಯ ದೊರೆಯದ ರಾಜಕೀಯ ಸ್ವಾತಂತ್ಯದಿಂದ ಪ್ರಜಾಪ್ರಭುತ್ವದ ಹೆಸರಿನಲ್ಲಿ ಸರ್ವಾಧಿಕಾರತ್ವ ಮೆರೆಯುತ್ತದೆ ಎಂದು ಸಾಹಿತಿ ಕುಂದೂರು ಅಶೋಕ್ ಹೇಳಿದ್ದಾರೆ.
ಇಲ್ಲಿನ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲೆಯಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಡಾ. ಬಿ.ಆರ್. ಅಂಬೇಡ್ಕರ್ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಆರ್ಥಿಕ ಹಾಗೂ ಸಾಮಾಜಿಕ ನ್ಯಾಯಗಳು ನಮ್ಮ ಸಂವಿಧಾನದಲ್ಲಿ ಹಲ್ಲು ಕಿತ್ತ ಹಾವಿನಂತೆ ಬುಸುಗುಡುತ್ತಲೇ ಇವೆ. ಅವುಗಳಿಗೆ ಅರ್ಥ ಬರಬೇಕೆಂದರೆ, ಸಂವಿಧಾನಾತ್ಮಕ ಭದ್ರತೆಯೊಂದಿಗೆ ಮೂಲಭೂತ ಹಕ್ಕುಗಳಾಗಬೇಕೆಂದು ಪ್ರತಿಪಾದಿಸಿದರು.
ಈಗಿರುವ ಸಂವಿಧಾನದ ಲೋಪದೋಷಗಳನ್ನು ಸರಿಪಡಿಸಿ ಅಂಬೇಡ್ಕರ್‌ರವರ ಕನಸಿನ ಸಂವಿಧಾನದಲ್ಲಿ ಎಲ್ಲರಿಗೂ ಉದ್ಯೋಗ, ಅನ್ನ, ಶಿಕ್ಷಣ ಸಿಗುವಂತಹ ಮಾದರಿ ಸಂವಿಧಾನಕ್ಕಾಗಿ ಜನ ಪರವಾದ ಹೋರಾಟದ ಅಗತ್ಯವಿದೆಯೆಂದು ತಿಳಿಸಿದರು.
ಸಾಮಾಜಿಕ ನ್ಯಾಯ ಈಡೇರಿಲ್ಲ: ಈಗಿರುವ ಸಂವಿಧಾನದಿಂದ ಒಬ್ಬ ಮನುಷ್ಯನಿಗೆ ಒಂದು ಓಟು ಎಂಬ ರಾಜಕೀಯ ಸ್ವಾತಂತ್ರ್ಯದಿಂದ ಸಾಮಾಜಿಕ ಹಾಗೂ ಆರ್ಥಿಕ ನ್ಯಾಯ ಈಡೇರದೆ, ಶಾಸನಸಭೆಗಳು ಇವುಗಳ ಹೆಸರಿನಲ್ಲಿ ನಾಮಕಾವಾಸ್ತಗೆ ಜನಪ್ರಿಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದರಲ್ಲಿ ಸಫಲವಾಗಿವೆಂದು ಹೇಳಿದರು.
ಮತ ಬ್ಯಾಂಕು ರಾಜಕಾರಣಕ್ಕೆ ಮತ, ಧರ್ಮ, ಜಾತಿ, ಜನಾಂಗ, ಹಣ ಮತ್ತು ತೋಳುಬಲಗಳು ಭಾರತದ ರಾಜಕಾರಣದಲ್ಲಿ ಪ್ರಭಾವ ಬೀರುತ್ತಿರುವುದರಿಂದ ಅಂಬೇಡ್ಕರ್‌ರವರ ಪ್ರಜಾ ರಾಜ್ಯದ ಆಶಯಗಳು ಪ್ರಸ್ತುತ ಸಂವಿಧಾನದಲ್ಲಿ ಈಡೇರಲು ಸಾಧ್ಯವಾಗುತ್ತಿಲ್ಲವೆಂದು ಅವರೇ ಒಂದು ಸಂದರ್ಭದಲ್ಲಿ ಅಲವತ್ತು ಕೊಂಡಿರುವುದು ಚಾರಿತ್ರಿಕ ಸತ್ಯವೆಂದು ಕುಂದೂರು ಆಶೋಕ ವಿಷಾದಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಎಸ್.ಡಿ.ಎಂ.ಸಿ. ಸದ್ಯಸರಾದ ಮೊಹಿಯುದ್ದೀನ್ ಕುಟ್ಟಿ ಅವರು ಅಂಬೇಡ್ಕರ್‌ರವರ ಆಶಯ ಈಡೇರುವಂತೆ ನಾವೆಲ್ಲರೂ ಶ್ರಮಿಸಬೇಕೆಂದರು.
ಕಾರ್ಯಕ್ರಮದಲ್ಲಿ ಹೆಚ್.ಕೆ. ಕವಿತಾ, ಪ್ರಭಾರ ಉಪ ಪ್ರಾಂಶುಪಾಲರಾದ ಸುಮಂಗಲ, ತಾಲೂಕು ಪದೋನ್ನತ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷರಾದ ಸಿ.ಎಸ್. ಸುರೇಶ್ ಮತ್ತು ಶಿಕ್ಷಕರಾದ ರಾಜ್ ಕುಮಾರ್, ಹನುಮಂತಪ್ಪ ಬಾರ್ಕರ್, ಶ್ಯಾಮಲ, ಎವೆಲಿನ್ ಜ್ಯೋತಿ ಉಪಸ್ಥಿತರಿದ್ದರು. ಶಿಕ್ಷಕರಾದ ರಮೇಶ್ ಸ್ವಾಗತಿಸಿದರು, ಬಿ.ವಿ. ಶೀಲಾ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.