ಟಿಕೆಟ್ ಹಂಚಿಕೆ: ಕಾಂಗ್ರೆಸ್, ಜೆಡಿಎಸ್ನಲ್ಲಿ ಅತೃಪ್ತಿ
ಕಪ್ರವಾರ್ತೆ,ಚಿಕ್ಕಮಗಳೂರು, ಏ.16
ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳಲ್ಲಿ ಟಿಕೆಟ್ ಹಂಚಿಕೆಯ ಅಸಮಾಧಾನದ ಹೊಗೆ ದಟ್ಟವಾಗಿ ಕವಿದಿದೆ.
ಕೆಲವರು ಪಕ್ಷಕ್ಕೆ ಗುಡ್ ಬೈ ಹೇಳಿದರೆ, ಮತ್ತೆ ಕೆಲವರು ಬೇರೆ ಪಕ್ಷದವರ ಬಾಗಿಲು ತಟ್ಟಿ ಬರೀಗೈಯಲ್ಲಿ ವಾಪಸ್ ಆಗಿದ್ದಾರೆ. ನಾಮಪತ್ರ ಸಲ್ಲಿಕೆಗೆ ಒಂದೇ ದಿನ ಬಾಕಿ ಇರುವುದರಿಂದ ಈ ಎರಡು ಪಕ್ಷಗಳ ಟಿಕೆಟ್ ಆಕಾಂಕ್ಷಿಗಳು ಅತಂತ್ರ ಸ್ಥಿತಿಯಲ್ಲಿದ್ದಾರೆ.
ರಾಜಿನಾಮೆ: ಮೂಡಿಗೆರೆ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧೆ ಮಾಡಲು ಮಾಜಿ ಸಚಿವ ಬಿ.ಬಿ. ನಿಂಗಯ್ಯ ಅರ್ಜಿ ಸಲ್ಲಿಸಿದ್ದರು. ಈ ಕ್ಷೇತ್ರದ ಟಿಕೆಟ್ ಬಿ.ಎನ್. ಚಂದ್ರಪ್ಪ ಪಾಲಾಗಿದ್ದರಿಂದ ನಿಂಗಯ್ಯ ಮರಳಿ ಜೆಡಿಎಸ್ಗೆ ಹೋಗಿದ್ದು, ಅವರು ಮೂಡಿಗೆರೆ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುತ್ತಿದ್ದಾರೆ. ಇದರಿಂದಾಗಿ ಬೇಸತ್ತಿರುವ ಜೆಡಿಎಸ್ ಎಸ್ಸಿ, ಎಸ್ಟಿ ಘಟಕದ ಮುಖಂಡರು ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜಿನಾಮೆ ಸಲ್ಲಿಸಿದ್ದಾರೆ.
ಜೆಡಿಎಸ್ ಎಸ್ಸಿ,ಎಸ್ಟಿ ಘಟಕದ ಜಿಲ್ಲಾಧ್ಯಕ್ಷ ಹಂಪಯ್ಯ, ಜಿಪಂ ಮಾಜಿ ಸದಸ್ಯ ಹೂವಪ್ಪ, ನರಗನಹಳ್ಳಿ ರಮೇಶ್, ಕೇಶವಮೂರ್ತಿ, ಅಂಬಳೆ ಹೋಬಳಿ ಅಧ್ಯಕ್ಷ ಬಿ.ಆರ್. ಭಾಸ್ಕರ್, ಜಿಲ್ಲಾ ಕಾರ್ಯದರ್ಶಿ ಬಿ. ಚಂದ್ರು, ತಾಲೂಕು ಸಂಘಟನಾ ಕಾರ್ಯದರ್ಶಿ ಎಸ್. ರವಿ ರಾಜಿನಾಮೆ ನೀಡಿದ್ದಾರೆ.
ಪಕ್ಷ ಸಂಘಟನೆ: ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಈ ಮುಖಂಡರು ನೀಡಿರುವ ಕಾರಣ, ಕಳೆದ 30 ವರ್ಷಗಳಿಂದ ಜನತಾ ಪಕ್ಷದ ಸದಸ್ಯರಾಗಿ ಗುರುತಿಸಿಕೊಂಡು ಪಕ್ಷ ಸಂಘಟನೆಯಲ್ಲಿ ನಮ್ಮನ್ನು ತೊಡಗಿಸಿಕೊಂಡು ಶ್ರಮಿಸಿದ್ದೇವೆ. ಪಕ್ಷ ವಿಭಜನೆಯ ನಂತರದಲ್ಲೂ ಜಾತ್ಯತೀತ ಜನತಾದಳದಲ್ಲೇ ಉಳಿದುಕೊಂಡು ಕಷ್ಟಕಾಲದಲ್ಲಿ ಪಕ್ಷದ ಸಂಘಟನೆಗೆ ಶ್ರಮಿಸಿದ್ದೇವೆ. ಬೇರೆ ಪಕ್ಷಗಳಿಂದ ಆಹ್ವಾನ ಬಂದರೂ ತಿರಸ್ಕರಿಸಿ ಪಕ್ಷಕ್ಕೆ ಹಾನಿಯಾಗದಂತೆ ದುಡಿದಿದ್ದೇವೆ ಎಂದು ಹೇಳಿದ್ದಾರೆ.
ನೋವುಂಟು ಮಾಡಿದೆ: ಮೂಡಿಗೆರೆ ವಿಧಾನಸಭಾ ಕ್ಷೇತ್ರದಿಂದ ಅಭ್ಯರ್ಥಿಯಾಗಿ ಸ್ಪರ್ಧಿಸಲು ಪಕ್ಷಕ್ಕೆ ಅರ್ಜಿ ಸಲ್ಲಿಸಿದ್ದರೂ ನಮ್ಮ ನಿಸ್ವಾರ್ಥ ಸೇವೆ ಪರಿಗಣಿಸದೆ, ನಮ್ಮ ಅರ್ಜಿಗಳನ್ನು ಕಾರಣವಿಲ್ಲದೆ ತಿರಸ್ಕರಿಸುವುದು ನೋವುಂಟು ಮಾಡಿದೆ. ಪಕ್ಷದ ಮುಖಂಡರ ಇತ್ತೀಚಿನ ನಡವಳಿಕೆ ಹಾಗೂ ಯಜಮಾನಿಕೆ ಪ್ರವೃತ್ತಿ ಬೇಸರ ತಂದಿದೆ. ಪಕ್ಷದವರ ಕಾಲೆಳೆಯುವ ಪ್ರವೃತ್ತಿಗೆ ಬೇಸತ್ತು ರಾಜಿನಾಮೆ ನೀಡಿದ್ದೇವೆ ಎಂದು ತಿಳಿಸಿದ್ದಾರೆ.
ಮರುಕಳಿಸಿದ ಭಿನ್ನಾಭಿಪ್ರಾಯ: 2008ರ ಚುನಾವಣೆಯಲ್ಲಿ ಮೂಡಿಗೆರೆ ಕ್ಷೇತ್ರದಲ್ಲಿ ಜೆಡಿಎಸ್ನಿಂದ ಸ್ಪರ್ಧೆ ಮಾಡಲು ಬಿ.ಬಿ. ನಿಂಗಯ್ಯ ಅವರು ಪಕ್ಷಕ್ಕೆ ಅರ್ಜಿ ಸಲ್ಲಿಸಿದ್ದರು. ಆದರೆ, ಅವರಿಗೆ ಟಿಕೆಟ್ ನೀಡದೆ ಎಚ್.ಕೆ. ಕಾಳಯ್ಯ ಅವರಿಗೆ ಟಿಕೆಟ್ ನೀಡಲಾಗಿತ್ತು. ಬಿ.ಬಿ. ನಿಂಗಯ್ಯ ಪರವಾಗಿ ಟಿಕೆಟ್ ಕೇಳಲು ಹೋಗಿದ್ದ ಜೆಡಿಎಸ್ ಮುಖಂಡರು ಅಂದು ಬೆಂಗಳೂರಿನಲ್ಲಿ ಜೆಡಿಎಸ್ ಕಚೇರಿಯ ಮೇಲೆ ಕಲ್ಲು ತೂರಾಟ ನಡೆಸಿದ್ದರು. ಆಗ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರ ಕೆಂಗಣ್ಣಿಗೆ ಮುಖಂಡರು ಗುರಿಯಾಗಿದ್ದರು.
ಮರಳಿ ಜೆಡಿಎಸ್ಗೆ: ಆಗ ವಿಧಿ ಇಲ್ಲದೆ ಬಿ.ಬಿ. ನಿಂಗಯ್ಯ ಅವರು ಬಿಎಸ್ಪಿ ಪಕ್ಷದಿಂದ ಸ್ಪರ್ಧೆ ಮಾಡಿದ್ದರು. ಆದರೆ, ಗೆಲ್ಲಲು ಸಾಧ್ಯವಾಗಲಿಲ್ಲ. ಆಗ ಅವರು ಕಾಂಗ್ರೆಸ್ ಪಕ್ಷಕ್ಕೆ ಬಂದರು. ಈ ಬಾರಿ ಟಿಕೆಟ್ ಸಿಗುವ ನಿರೀಕ್ಷೆಯಲ್ಲಿದ್ದರು. ಬಿ.ಎನ್. ಚಂದ್ರಪ್ಪ ಅವರಿಗೆ ಟಿಕೆಟ್ ಸಿಗುವುದು ಖಾತ್ರಿಯಾಗುತ್ತಿದ್ದಂತೆ ಸ್ಥಳೀಯರಿಗೆ ಟಿಕೆಟ್ ನೀಡಬೇಕೆಂಬ ಬೇಡಿಕೆಯನ್ನು ಪಕ್ಷದ ಮುಂದಿಟ್ಟರು. ಆದರೆ, ಆ ಪ್ರಯತ್ನವೂ ವಿಫಲವಾಗಿದ್ದರಿಂದ ಮರಳಿ ಜೆಡಿಎಸ್ಗೆ ತೆರಳಿರುವ ಬಿ.ಬಿ. ನಿಂಗಯ್ಯ ಅವರು ಈ ಬಾರಿ ಮೂಡಿಗೆರೆ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುತ್ತಿದ್ದಾರೆ. ಇದು, ಪಕ್ಷದ ಮೂಲ ಕಾರ್ಯಕರ್ತರಿಗೆ ಅಸಮಾಧಾನಕ್ಕೆ ಕಾರಣವಾಗಿದೆ.
ತರೀಕೆರೆ ಕ್ಷೇತ್ರ: ತರೀಕೆರೆ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡಲು ಕಾಂಗ್ರೆಸ್ನ ಮಾಜಿ ಶಾಸಕರು ಪಕ್ಷಕ್ಕೆ ಅರ್ಜಿ ಸಲ್ಲಿಸಿದ್ದರು. ಕೊನೆ ಕ್ಷಣದಲ್ಲಿ ಕಾಂಗ್ರೆಸ್ ಟಿಕೆಟ್ ಶ್ರೀನಿವಾಸ್ ಎಂಬವರ ಪಾಲಾಗಿದೆ. ಇದರಿಂದ ಬೇಸತ್ತಿರುವ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳಾದ ಮಾಜಿ ಶಾಸಕರು ಒಟ್ಟಾಗಿ ಜೆಡಿಎಸ್ ವರಿಷ್ಟರಾದ ಎಚ್.ಡಿ. ದೇವೇಗೌಡರನ್ನು ಅವರ ನಿವಾಸದಲ್ಲಿ ಭೇಟಿಯಾಗಿದ್ದರು.
ಬಂದ ದಾರಿಗೆ ಸುಂಕವಿಲ್ಲ: ಆದರೆ, ತರೀಕೆರೆ ಕ್ಷೇತ್ರದ ಜೆಡಿಎಸ್ ಟಿಕೆಟ್ ಟಿ.ಆರ್. ನಾಗರಾಜ್ (ಹಾಜಿ ಮಸ್ತಾನಾ) ಅವರಿಗೆ ನೀಡಿರುವ ವಿಷಯವನ್ನು ದೇವೇಗೌಡರು, ಕಾಂಗ್ರೆಸ್ ಮುಖಂಡರ ಗಮನಕ್ಕೆ ತಂದಿದ್ದು, ನಾಗರಾಜ್ ಅವರ ಮನವೊಲಿಸಿ, ಅವರು ಒಪ್ಪಿಗೆ ಸೂಚಿಸಿದರೆ ಆ ಟಿಕೆಟ್ ಬೇರೆಯವರಿಗೆ ನೀಡಲಾಗುವುದು ಎಂದು ಹೇಳಿ ಕಳುಹಿಸಿದ್ದಾರೆ. ಈಗಾಗಲೇ ತರೀಕೆರೆಯಲ್ಲಿ ಜೆಡಿಎಸ್ ಸಂಘಟನೆಯಲ್ಲಿ ತೊಡಗಿರುವ ನಾಗರಾಜ್ ತಾವು ಸ್ಪರ್ಧೆ ಮಾಡುವುದಾಗಿ ಹೇಳಿದ್ದರಿಂದ ಕಾಂಗ್ರೆಸ್ನ ಮಾಜಿ ಶಾಸಕರು ಬಂದ ದಾರಿಗೆ ಸುಂಕವಿಲ್ಲ ಎನ್ನುವಂತೆ ವಾಪಸ್ ಬಂದಿದ್ದಾರೆ. ನಾಗರಾಜ್ ಅವರು ಬುಧವಾರ ಜೆಡಿಎಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಲಿದ್ದಾರೆ.
ಪಕ್ಷದ ಟಿಕೆಟ್ ಸಿಗದೆ ಹೋಗಿದ್ದರಿಂದ ಜೆಡಿಎಸ್ ಬಾಗಿಲು ತಟ್ಟಿರುವ ಕಾಂಗ್ರೆಸ್ನ ಮಾಜಿ ಶಾಸಕರು, ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಪಕ್ಷದ ಪರವಾಗಿ ಪ್ರಾಮಾಣಿಕವಾಗಿ ಮತಯಾಚನೆ ಮಾಡುವುದು ಅನುಮಾನ.
ಒಟ್ಟಾರೆ ತರೀಕೆರೆ ಮತ್ತು ಮೂಡಿಗೆರೆ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳ ನಡುವೆ ಆಂತರಿಕ ಬಿಕ್ಕಟ್ಟು ಕಾಣಿಸಿಕೊಂಡಿದ್ದು, ಸದ್ಯದ ಪರಿಸ್ಥಿತಿ ನೋಡಿದರೆ, ಅದು ಶಮನಗೊಳ್ಳುವ ಲಕ್ಷಣ ಕಾಣುತ್ತಿಲ್ಲ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

