ಚಿಕ್ಕಮಗಳೂರು

ಸರ್ಕಾರದ ಅಭಿವೃದ್ಧಿ ಕೆಲಸಗಳೇ ಗೆಲವಿನ ಸೋಪಾನ: ಜೀವರಾಜ್

Published On :

ನರಸಿಂಹರಾಜಪುರ: ಈ ಬಾರಿ ಶೃಂಗೇರಿ ಕ್ಷೇತ್ರದಲ್ಲಿ ಬಿಜೆಪಿ 15 ರಿಂದ 20 ಸಾವಿರ ಅಂತರದಿಂದ ಗೆಲುವು ಸಾಧಿಸಲಿದೆ ಎಂದು ಶೃಂಗೇರಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಹಾಗೂ ರಾಜ್ಯ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಡಿ.ಎನ್. ಜೀವರಾಜ್ ತಿಳಿಸಿದರು.
 ಅವರು ಮಂಗಳವಾರ ಕನ್ನಿಕಾ ಪರಮೇಶ್ವರಿ ಸಮುದಾಯ ಭವನದಲ್ಲಿ ನಡೆದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿ, ನಾನು 5 ನೇ ಬಾರಿಗೆ ವಿಧಾನಸಭೆ ಚುನಾವಣೆಗೆ ನಾಮಪತ್ರ ಸಲ್ಲಿಸಿದ್ದೇನೆ. ಈ ಹಿಂದೆ 2 ಬಾರಿ ಸೋತು 2 ಬಾರಿ ಗೆದ್ದಿದ್ದೇನೆ. 5 ಬಾರಿಯೂ ನಾನು ಬಿಜೆಪಿ ಪಕ್ಷದಿಂದಲೇ ಸ್ಪರ್ಧಿಸಿದ್ದು ಬಿಜೆಪಿಯ ನಿಷ್ಠಾವಂತ ಕಾರ್ಯಕರ್ತರಾಗಿದ್ದೇನೆ.
ಅಭಿವೃದ್ಧಿಯೇ ಶ್ರೀ ರಕ್ಷೆ: ಬಿಜೆಪಿ ಸರ್ಕಾರದ ಅಭಿವೃದ್ಧಿಯೇ ನನಗೆ ಮತ ತಂದುಕೊಡಲಿದೆ. ಶೃಂಗೇರಿ ಕ್ಷೇತ್ರದ 3 ಪಪಂಗಳಲ್ಲೂ ಅಭಿವೃದ್ಧಿ ಆಗಿದೆ.ನರಸಿಂಹರಾಜಪುರ ಪಟ್ಟಣವನ್ನು ಮಾದರಿ ಪಟ್ಟಣವನ್ನಾಗಿ ಮಾಡಿದ್ದೇನೆ. ಮತ್ತೆ 5 ಕೋಟಿ ರುಪಾಯಿ ಮಂಜೂರಾಗಿದ್ದು ಚುನಾವಣೆಯ ನಂತರ ಮತ್ತಷ್ಟು ಅಭಿವೃದ್ಧಿ ಕೆಲಸಗಳು ನಡೆಯಲಿದೆ. ಪಪಂಗೆ ಈ ಹಿಂದೆ ವರ್ಷಕ್ಕೆ 4 ಲಕ್ಷ ಆದಾಯ ಮಾತ್ರ ಇತ್ತು. ಈಗ 40 ಲಕ್ಷ ರುಪಾಯಿ ಆದಾಯ ಬರುತ್ತಿದೆ. ಬರೀ ರಸ್ತೆಗಳನ್ನೇ ಅಭಿವೃದ್ಧಿ ಮಾಡಿಲ್ಲ. ಶಿಕ್ಷಣ ಕ್ಷೇತ್ರದಲ್ಲೂ ಕ್ರಾಂತಿ ಉಂಟು ಮಾಡಿದ್ದೇವೆ. ಕೊಪ್ಪ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಎಂಎಸ್‌ಸಿ ಪ್ರಾರಂಭಿಸಿದ್ದೇವೆ. 25 ವಷಗಳ ಹಿಂದೆ ಎಂಎಸ್‌ಸಿ ಪ್ರಾರಂಭಿಸಿದ್ದರೆ ಮದ್ಯಮ ವರ್ಗದವರಿಗೆ ಅನುಕೂಲವಾಗುತ್ತಿರಲಿಲ್ಲವೆ ಎಂದು ಅವರು ಕಾಂಗ್ರೆಸ್ ಪಕ್ಷದವರನ್ನು ಪ್ರಶ್ನಿಸಿದರು.
ರಾಜೇಗೌಡರ ಸಾಧನೆಗಳೇನು: ನಾನು 9 ವರ್ಷಗಳ ಕಾಲ ಶಾಸಕನಾಗಿ, ಮಂತ್ರಿಯಾಗಿ, ಸಚೇತಕನಾಗಿ ಕೆಲಸ ಮಾಡಿದ್ದೇನೆ. ಕಾಂಗ್ರೆಸ್ ಅಭ್ಯರ್ಥಿ ಟಿ.ಡಿ. ರಾಜೇಗೌಡರು ಜಿಪಂ ಸದಸ್ಯರಾಗಿ,ಅಧ್ಯಕ್ಷರಾಗಿ 10 ವರ್ಷಗಳ ಕಾಲ ಸೇವೆ ಮಾಡಿದ್ದಾರೆ. ನಿಮ್ಮ ಅವದಿಯಲ್ಲಿ ಏನೇನು ಸೇವೆ ಮಾಡಿದ್ದೀರಿ ಎಂದು ಜನರಿಗೆ ತಿಳಿಸಿ ಮತ ಕೇಳಿ ಎಂದು ಅವರು ಟಿ.ಡಿ. ರಾಜೇಗೌಡರಿಗೆ ಸವಾಲು ಹಾಕಿದರು.
 ಸಭೆಯಲ್ಲಿ ಬಿಜೆಪಿ ಶೃಂಗೇರಿ ಕ್ಷೇತ್ರದ ಅಧ್ಯಕ್ಷ ನೀಲೇಶ್, ಪಿ.ಜೆ. ಆಂಟೋನಿ, ತಾಲೂಕು ಅಧ್ಯಕ್ಷ ಕೆ.ಪಿ. ಸಂಪತ್ ಕುಮಾರ್, ಕಸಬಾ ಹೋಬಳಿ ಅಧ್ಯಕ್ಷ ಎಚ್.ಎಂ. ಮನು, ತಾಲೂಕು ಬಿಜೆಪಿ ಯುವ ಮೋರ್ಚ ಅಧ್ಯಕ್ಷ ಆಶೀಶ್ ಕುಮಾರ್, ಬಿಜೆಪಿ ಮುಖಂಡರಾದ ವೈ.ಎಸ್. ಗಣೇಶ್, ಕೆ.ಎಸ್. ಸುರೇಶ್, ಜೆ.ಜಿ. ನಾಗರಾಜ್, ರಾಜಶೇಖರ್, ಶಬೀರ್, ಎಚ್.ಎಸ್. ಕೃಷ್ಣಮೂರ್ತಿ, ಸುಜಾತ, ಗೋಪಾಲ್, ಸನ್ನಿ, ಗೀತ, ಆಶಾ, ಲಿಲ್ಲಿ, ನಾಗರತ್ನ ಇದ್ದರು.
 ಇದೇ ಸಂದರ್ಭದಲ್ಲಿ ಪಪಂ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಎಲ್ಲಾ ಅಭ್ಯರ್ಥಿಗಳನ್ನು ಅಭಿನಂದಿಸಲಾಯಿತು. ಜೆಡಿಎಸ್ ಪಕ್ಷದಿಂದ ಬಿಜೆಪಿ ಸೇರಿದ ಸಹನಾ ಪ್ರಿಂಟಿಗ್ ಪ್ರಸ್‌ನ ಎಸ್.ಎಸ್.  ಜಗದೀಶ್ ಹಾಗೂ ಇತರೆ ಮೂವರು ಮುಖಂಡರನ್ನು ಸಚಿವ ಡಿ.ಎನ್. ಜೀವರಾಜ್ ಬಿಜೆಪಿ ಪಕ್ಷಕ್ಕೆ ಬರಮಾಡಿಕೊಂಡರು. ಕೆ.ವಿ. ಸತ್ಯನಾರಾಯಣಸ್ವಾಮಿ ನಿರೂಪಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.