ಜೆಡಿಎಸ್ ಅಭ್ಯರ್ಥಿ ದತ್ತ ನಾಮಪತ್ರ
ಕ.ಪ್ರ. ವಾರ್ತೆ, ಕಡೂರು, ಏ.17
ನಾಮಪತ್ರ ಸಲ್ಲಿಕೆಯ ಕೊನೆ ದಿನವಾದ ಬುಧವಾರ ಕಡೂರು ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ವೈ. ಎಸ್.ವಿ. ದತ್ತ ಅವರು ಕ್ಷೇತ್ರದ ಸಾವಿರಾರು ಬೆಂಬಲಿಗರೊಂದಿಗೆ ತಮ್ಮ ನಾಮಪತ್ರ ಸಲ್ಲಿಸಿದರು.
ಬುಧವಾರ ಬೆಳಗ್ಗೆ ಸ್ವಗ್ರಾಮ ಯಗಟಿಯಲ್ಲಿ ತಮ್ಮ ಮನೆ ದೇವರಾದ ವೀರನಾರಾಯಣ ದೇವಾಲಯ, ಗ್ರಾಮದೇವತೆ ಅರಕಲ್ಲಮ್ಮ ಮತ್ತು ಯಗಟೀಪುರದ ಮಲ್ಲಿಕಾರ್ಜುನಸ್ವಾಮಿ ದೇವಾಲಯಗಳಿಗೆ ಭೇಟಿ ನೀಡಿ ಪೂಜೆ ಸಲ್ಲಿಸಿ ಕಡೂರು ಪಟ್ಟಣದ ವೆಂಕಟೇಶ್ವರ ದೇವಾಲಯದಲ್ಲಿ ತಮ್ಮ ಪತ್ನಿ ನಿರ್ಮಲ ಮತ್ತು ಬೆಂಬಲಿಗರೊಂದಿಗೆ ಪೂಜೆ ಸಲ್ಲಿಸಿದರು.
ಮೆರವಣಿಗೆ: 12.30ಕ್ಕೆ ವೆಂಕಟೇಶ್ವರ ದೇವಾಲಯದ ಸಮೀಪ ಜಮಾಯಿಸಿದ್ದ ಸಾವಿರಾರು ಕಾರ್ಯಕರ್ತರು ಮತ್ತು ಮುಖಂಡರಾದ ಬಂಡಾರಿ ಶ್ರೀನಿವಾಸ್, ಕೆ.ಎಂ. ಮಹೇಶ್ವರಪ್ಪ, ಬಸಣ್ಣ, ಹರೀಶ್ ಮೊದಲಾದವರೊಂದಿಗೆ ಎತ್ತಿನಗಾಡಿ ಹತ್ತಿ ನೂರಾರು ಎತ್ತಿನ ಗಾಡಿಗಳೊಂದಿಗೆ ಹೊರಟ ಮೆರವಣಿಗೆ ಬಸವೇಶ್ವರ ವೃತ್ತದತ್ತ ಸಾಗಿತು.
ತಮ್ಮ ನಾಯಕನ ಪರವಾಗಿ ಕಾರ್ಯಕರ್ತರು ಮತು ಅಭಿಮಾನಿಗಳು ಘೋಷಣೆ ಕೂಗುತ್ತಾ ಸಾಗಿದರು. ಮರವಂಜಿ ವೃತ್ತದಿಂದ ಕೆ.ಎಲ್.ವಿ. ವೃತ್ತದವರೆಗೆ ಸಾಗಿದ ಮೆರವಣಿಗೆಯಿಂದ ನೂಕು ನುಗ್ಗಲು ಆರಂಭವಾಗಿ ಕೆಲಕಾಲ ವಾಹನಗಳ ಸಂಚಾರಕ್ಕೆ ತೊಡಕಾಯಿತು.
ಚುನಾವಣಾ ಕಚೇರಿಗೆ: ಮುಂದೆ ಸಾಗಿದ ಮೆರವಣಿಗೆ ಕೆ.ಎಂ. ರಸ್ತೆ ಹಾದು ಜೈನ್ ಟೆಂಪಲ್ ರಸ್ತೆ ಮೂಲಕ ತಾಲೂಕು ಕಚೇರಿವರೆಗೆ ಸಾಗಿತು. ಈ ಸಂದರ್ಭದಲ್ಲಿ ದತ್ತ ಬೆಂಬಲಿಗರೊಂದಿಗೆ ಚುನಾವಣಾ ಕಚೇರಿ ಪ್ರವೇಶಿಸಿದರು.
ಆನಂತರ ತಮ್ಮ ಬೆಂಬಲಿಗ ಸೂಚಕರಾದ ಬಂಡಾರಿ ಸೋಮಶೇಖರ್, ಮರವಂಜಿ ವೆಂಕಟೇಶ್, ಪಾತೇನಹಳ್ಳಿ ಚೌಡಪ್ಪ ಮತ್ತು ಪತ್ನಿ ನಿರ್ಮಲಾ ಅವರೊಂದಿಗೆ ಚುನಾವಣಾಧಿಕಾರಿ ಲಕ್ಷ್ಮೀನರಸಯ್ಯನವರಿಗೆ ತಮ್ಮ ನಾಮಪತ್ರ ಸಲ್ಲಿಸಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ದತ್ತ, ಪ್ರಜಾತಂತ್ರ ವ್ಯವಸ್ಥೆಯಲ್ಲಿ ಚುನಾವಣೆ ಅನಿವಾರ್ಯ. ಕಡೂರು ವಿಧಾನಸಭಾ ಕ್ಷೇತ್ರದಲ್ಲಿ ತಮ್ಮ ಜಾತಿ ರಾಜಕಾರಣ ಅಳಿಸಿ ಪ್ರೀತಿ ರಾಜಕಾರಣ ಬೆಳೆಸಿ ಎನ್ನುವ ತಮ್ಮ ನಿಲುವಿಗೆ ಜನರು ತೋರಿಸಿರುವ ಅಭಿಮಾನ ಪ್ರೀತಿಯನ್ನು ಇಂದು ಕಣ್ಣಾರೆ ಕಾಣುತ್ತಿದ್ದೇನೆ. ಜನರು ಹಣ ಆಮಿಷಕ್ಕೆ ಬಲಿಯಾಗದೆ ಜನಪರ ನಿಲುವಿಗೆ ಬದ್ದರಾಗಿ ಚುನಾವಣೆಯಲ್ಲಿ ನನ್ನ ಪರವಾಗಿ ಮತ ನೀಡಲು ಸಿದ್ದರಾಗಿದ್ದಾರೆ ಎಂದರು.
ಜೆಡಿಎಸ್ ಮುಖಂಡ ಭಡಾರಿ ಶ್ರೀನಿವಾಸ್, ಮಂಜುನಾಥ ಪ್ರಸನ್ನ, ಬಿ.ಟಿ. ಗಂಗಾಧರನಾಯ್ಕ, ಕೆ.ಎಚ್. ಲಕ್ಕಣ್ಣ್ಣ, ಡಿ. ಪ್ರಶಾಂತ್, ತಿಪ್ಪೇಶ್, ಬಿ.ಪಿ. ನಾಗರಾಜು ಸೇರಿದಂತೆ ಹಲವರು ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

