ಚಿಕ್ಕಮಗಳೂರು

ಭಗೀರಥನ ನಿರೀಕ್ಷೆಯಲ್ಲಿ ಬರದ ನಾಡು

Published On :

ಕ.ಪ್ರ.ವಾರ್ತೆ, ಕಡೂರು,ಏ. 18
ಬರಗಾಲದ ನಡುವೆಯೇ ರಾಜ್ಯ ವಿಧಾನಸಭಾ ಚುನಾವಣೆ ಬಂದಿದೆ.  ಕಡೂರು ತಾಲೂಕಿನಲ್ಲಿ ಇರುವ ಜ್ವಲಂತ ಸಮಸ್ಯೆಗಳ ಬಗ್ಗೆ ಈ ಹಿಂದೆ ಚುನಾವಣಾ ಸಮಯದಲ್ಲಿ ಜನರಿಗೆ ರಾಜಕೀಯ ನಾಯಕರು ನೀಡಿದ ಆಶ್ವಾಸನೆಗಳು ಇಂದಿಗೂ ಭರವಸೆಯಾಗಿಯೇ ಉಳಿದಿವೆ.
ಕಡೂರು ತಾಲೂಕು ಪ್ರತೀ ಬಾರಿ ಬರಗಾಲದ ದವಡೆಗೆ ಸಿಲುಕುತ್ತಲೇ ಇದೆ. ತಾಲೂಕಿನ ಎಲ್ಲೆಡೆ ಕುಡಿಯುವ ನೀರಿನ ಸಮಸ್ಯೆ ಅಗಾಧವಾಗಿ ಹನಿಹನಿ ನೀರಿಗೆ ಪರಿತಪಿಸುವಂತಾಗಿದೆ. ಅಂತರ್ಜಲ ಕುಸಿತದಿಂದ ಕೊಳವೆಬಾವಿಗಳು ಬತ್ತಿವೆ. ಕಡೂರು, ಬೀರೂರು ಪಟ್ಟಣಗಳ ನಲ್ಲಿಗಳಲ್ಲಿ ನೀರು ಕಾಣುವುದೇ ಅಪರೂಪ ಎಂಬ ಸ್ಥಿತಿ ಇದ್ದು ಗ್ರಾಮಾಂತರ ಪ್ರದೇಶದಲ್ಲಿಯೂ ಅಂತರ್ಜಲ ಕುಸಿತದಿಂದ ಕೊಳವೆಬಾವಿಗಳು ವಿಫಲವಾಗುತ್ತಿವೆ.
ಈಡೇರದ ಭರವಸೆ: ಕಡೂರು ತಾಲೂಕಿಗೆ ಯಾವುದೇ ನದಿಮೂಲ ಇಲ್ಲ. ಮಳೆ ಬಂದರೆ ಮಾತ್ರ ಕೆರೆಕಟ್ಟೆಗಳು ತುಂಬುತ್ತವೆ. ಚುನಾವಣೆ ಬಂದ ಕೂಡಲೇ ವಿವಿಧ ಪಕ್ಷಗಳ ಅಭ್ಯರ್ಥಿಗಳು ಪ್ರಣಾಳಿಕೆಯಲ್ಲಿ ಕಡೂರು ತಾಲೂಕಿಗೆ ಶಾಶ್ವತ ನೀರಾವರಿ ತರುತ್ತೇವೆಂಬ ಭರವಸೆಗಳನ್ನು ನೀಡುತ್ತಾರೆ. ಜನರೂ ಅದನ್ನು ನಂಬುತ್ತಾರೆ. ಆದರೆ ಇಂತಹ ಭರವಸೆಗಳು ಮಾತ್ರ ಈಡೇರುವುದೇ ಇಲ್ಲ.  
ಭದ್ರಾನದಿಯಿಂದ ಶಾಶ್ವತ ಕುಡಿಯುವ ನೀರಿನ ಯೋಜನೆಯ ಕಾಮಗಾರಿ ಅಂದುಕೊಂಡಂತೆ ಆಗಿದ್ದರೆ ಕಳೆದ ಜೂನ್‌ನಲ್ಲಿಯೇ ಕಾಮಗಾರಿ ಮುಗಿದು ಕಡೂರು ಹಾಗು ಬೀರೂರು ಪಟ್ಟಣಕ್ಕೆ ನೀರು ಪೂರೈಕೆಯಾಗಬೇಕಿತ್ತು. ಶೇ 90 ರಷ್ಟು ಕಾಮಗಾರಿ ಮುಗಿದಿದ್ದರೂ ಕೂಡ ಉಳಿದ ಕಾಮಗಾರಿ ಆಮೆಗತಿಯಲ್ಲಿ ಸಾಗಿದ್ದರಿಂದ ಅವಳಿ ಪಟ್ಟಣಗಳ ಜನತೆ ಭದ್ರಾನದಿ ನೀರಿಗೆ ಮತ್ತಷ್ಟು ದಿನ ಕಾಯಬೇಕಿದೆ.
ಮದಗದಕೆರೆಗೆ ನೀರು: ಇನ್ನು ಹೆಬ್ಬೆ ಯೋಜನೆಯಿಂದ ಮದಗದಕೆರೆಗೆ ನೀರು ಹರಿಸುವ ಯೋಜನೆಗೆ ಅಂದು 36 ಕೋಟಿ ರು. ಅಂದಾಜು ಇದ್ದು ಇಂದು ಸುಮಾರು 100 ಕೋಟಿ ರು. ತಲುಪಿದ್ದರೂ ಯೋಜನೆ ಜಾರಿ ಕೂಡ ವಿಳಂಭವಾಗಿದೆ. ಇತ್ತ ಕಡೂರು ಕಸಬಾ ಹೋಬಳಿಯ ಹೇಮಗಿರಿಯ ವಿಷ್ಣುಸಮುದ್ರ ಕೆರೆ ಸೇರಿದಂತೆ ಅನೇಕ ಕೆರೆಗಳಿಗೆ ಕರಗಡ ಯೋಜನೆಯಿಂದ ನೀರು ಹರಿಸುವ ಯೋಜನೆ ಕೂಡ ಹಾಗೆಯೇ ಇದೆ.
ಭದ್ರಾ ಮೇಲ್ದಂಡೆ ಯೋಜನೆಯನ್ನು ಪರಿಷ್ಕರಿಸಿ ತಾಲೂಕಿನ ಹಿರೇನಲ್ಲೂರು ಹಾಗು ಚೌಳಹಿರಿಯೂರು ಹೋಬಳಿಗಳಿಗೆ ನೀರು ಹರಿಸಬೇಕು ಎಂಬ ಯೋಜನೆ ಕುರಿತ ಹೋರಾಟ ಆರಂಭವಾಗಿ ವಿವಿಧ ಮುಖಂಡರ ಹೋರಾಟದಿಂದ ಯೋಜನೆ ಸರ್ವೆ ಮಾಡಿಸಲು ಅಂದಿನ ಮುಖ್ಯಮಂತ್ರಿ ಸದಾನಂದಗೌಡರಿಂದ ಆದೇಶ ಕೊಡಿಸಿದ್ದು ಈ ಯೋಜನೆ ಕೂಡ ಸದ್ಯಕ್ಕೆ ಹಾಗೆಯೇ ಇದೆ. ಯಗಚಿ ಡ್ಯಾಂನಿಂದ ದೇವನೂರು ಕರೆಗೆ ನೀರು ಹರಿಸುವ ಯೋಜನೆ ಕಾಮಗಾರಿ ಪ್ರಗತಿಯಲ್ಲಿದೆ.
ಕಡೂರು ತಾಲೂಕಿನ ಜನತೆ ಹಲವು ದಶಕದಿಂದ ನೀರಿನ ಯೋಜನೆಗಳ ಜಾರಿಗೆ ರಾಜಕೀಯ ಮುಖಂಡರ ಭರವಸೆಗಳನ್ನು ನೆಚ್ಚಿಕೊಂಡು ಮತ ನೀಡುತ್ತಲೇ ಬರುತ್ತಿದ್ದಾರೆಯೇ ಹೊರತು ಯೋಜನೆಗಳು ಜಾರಿ ಆಗದಿರುವುದು ಮಾತ್ರ ದುರಾದೃಷ್ಟಕರ.
ತೆಂಗಿಗೆ ನುಸಿಪೀಡೆ: ಇನ್ನು ಬಯಲು ಪ್ರದೇಶಗಳ ಜನರಿಗೆ ಕಲ್ಪವೃಕ್ಷವಾದ ತೆಂಗಿಗೆ ನುಸಿಪೀಡೆ, ಕಪ್ಪುತಲೆಹುಳು ಕಾಟ ಮತ್ತು ಗರಿರೋಗ ಹೆಚ್ಚಾಗಿದ್ದು ಮಳೆಯಿಲ್ಲದೆ ಅಡಿಕೆ ತೆಂಗಿನ ತೋಟಗಳು ಮಣ್ಣು ಪಾಲಾಗುತ್ತಿರುವುದು ವಿಷಾದದ ಸಂಗತಿ. ಕೊಬ್ಬರಿ ಖರೀದಿ ಕೇಂದ್ರ ಮುಚ್ಚಲಾಗಿದ್ದು ರೈತರು ಮಳೆಯಿಲ್ಲದೆ ಬೆಳೆಮಾಡದ ಸ್ಥಿತಿ ತಲುಪಿದ್ದಾರೆ.
ತಾಲೂಕು ಕೇಂದ್ರವಾದ ಕಡೂರು ಸೇರಿದಂತೆ ತಾಲೂಕಿನ ಎಲ್ಲಿಯೂ ಯಾವುದೇ ಕೈಗಾರಿಕೆಗಳು ಇಲ್ಲದಿರುವುದರಿಂದ ದುಡಿಯವ ಕೈಗಳಿಗೆ ಕೆಲಸ ಇಲ್ಲದಂತಾಗಿದೆ. ಉದ್ಯೋಗ ಸೃಷ್ಟಿಯ ಸರ್ಕಾರದ ಯೋಜನೆಗಳು ಜನರನ್ನು ತಲುಪದೇ ಜನರು ಉದ್ಯೋಗ ಅರಸಿ ಬೇರೆಬೇರೆ ಕಡೆ ವಲಸೆ ಹೋಗುತ್ತಿದ್ದಾರೆ. ವಿದ್ಯಾವಂತರಿಗೆ ಉದ್ಯೋಗ ಸಿಗದೆ ಅಥವಾ ಸ್ವಾವಲಂಬಿ ಉದ್ಯೋಗ ಮಾಡಲು ಸರಿಯಾದ ಪ್ರೋತ್ಸಾಹ ಇಲ್ಲ.
ಜನರ ನಿರೀಕ್ಷೆ: ಒಟ್ಟಿನಲ್ಲಿ ಕಡೂರು ತಾಲೂಕಿಗೆ ಶಾಶ್ವತ ನೀರಾವರಿ ಯೋಜನೆಗಳ ಜಾರಿ,ಅಗತ್ಯ ಕೈಗಾರಿಕೆಗಳು, ಉದ್ಯೋಗ ಸೃಷ್ಟಿ, ರೈತರ ಸಮಸ್ಯೆಗಳನ್ನು ನೀಗುವಂತಹ ಕಾರ್ಯಗಳು ಆಗಬೇಕಾಗಿದ್ದು, ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದವರು ಇವು ನಮ್ಮ ಜವಬ್ದಾರಿ ಎಂಬುದನ್ನು ಅರಿತು ಪ್ರಾಮಾಣಿಕವಾಗಿ ಹೋರಾಟ ಮಾಡಿ ಸಮಸ್ಯೆ ನೀಗಲು ಪ್ರಯತ್ನಿಸಿದರೆ ಆಯ್ಕೆ ಸಾರ್ಥಕತೆ ಪಡೆಯುತ್ತದೆ ಎಂಬುದು ತಾಲೂಕಿನ ಜನರ ಅಭಿಪ್ರಾಯವಾಗಿದೆ.
-ಕಡೂರು ಕೃಷ್ಣಮೂರ್ತಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.