ಚಿಕ್ಕಮಗಳೂರು

ಮಠಕ್ಕೆ ನೀಡಿದ ಹಣ ರೈತರಿಗೆ ನೀಡಿದ್ದರೆ ಸಮಸ್ಯೆ ಪರಿಹಾರವಾಗುತ್ತಿತ್ತು

Published On :

ಕಪ್ರ ವಾರ್ತೆ,ಎನ್‌ಆರ್ ಪುರ, ಏ.18
ಬಿಜೆಪಿ ಸರ್ಕಾರ ಮಠಗಳಿಗೆ ನೀಡಿದ ಹಣದ ಅರ್ಧ ಭಾಗವನ್ನು ಅಡಿಕೆ ಹಳದಿ ಎಲೆ ರೋಗಪೀಡಿತ ರೈತರಿಗೆ  ನೀಡಿದ್ದರೂ ಸಮಸ್ಯೆಗೆ ಪರಿಹಾರ ಸಿಗುತ್ತಿತ್ತು ಎಂದು ಬಾಳೆಹೊನ್ನೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಾ.ಕೆ.ಪಿ.ಅಂಶುಮಂತ್ ಬಿಜೆಪಿ ಸರ್ಕಾರವನ್ನು ಟೀಕಿಸಿದರು.
 ಬಾಳೆಹೊನ್ನೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಶೃಂಗೇರಿ ಕ್ಷೇತ್ರದ ಶಾಸಕರೇ ಜಿಲ್ಲಾ  ಉಸ್ತುವಾರಿ ಸಚಿವರಾಗಿದ್ದಾರೆ. ಆದರೂ ಚಿಕ್ಕಮಗಳೂರು ಜಿಲ್ಲೆಯ ಜ್ವಲಂತ ಸಮಸ್ಯೆಯಾದ ಅಡಿಕೆ ಹಳದಿ ಎಲೆ ರೋಗ ಪೀಡಿತರಿಗೆ ಪರಿಹಾರ ಕೊಡಿಸಲು ಸಾಧ್ಯವಾಗಿಲ್ಲ. ಅಡಿಕೆ ಹಳದಿ ಎಲೆ ರೋಗಪೀಡಿತ ತೋಟಗಳ ರೈತರ ಪಟ್ಟಿ ಸಿದ್ಧಪಡಿಸಲು ಪ್ರತಿ ಅರ್ಜಿಗೂ ರು. 180 ಸರ್ಕಾರಿ ಹಣ ಖರ್ಚು ಮಾಡಲಾಗಿದೆ. ಈ ಬಾರಿ ಚುನಾವಣೆಯಲ್ಲಿ ಬಿಜೆಪಿಗೆ ಮತದಾರರು ತಕ್ಕ ಪಾಠ ಕಲಿಸಲಿದ್ದಾರೆ ಎಂದರು.
ಅಭೂತಪೂರ್ವ ಜನಸ್ಪಂದನ: ಶೃಂಗೇರಿ ಕ್ಷೇತ್ರ ಪ್ರಚಾರ ಸಮಿತಿ ಅಧ್ಯಕ್ಷ ಎಚ್. ಸತೀಶ್ ಮಾತನಾಡಿ, ಟಿ.ಡಿ. ರಾಜೇಗೌಡ ನಾಮಪತ್ರ  ಸಲ್ಲಿಸುವ ಸಂದರ್ಭ ಕೊಪ್ಪದಲ್ಲಿ ಅಭೂತಪೂರ್ವ ಜನಸ್ಪಂದನ ಸಿಕ್ಕಿದೆ. ಇದರಿಂದ ಕಾಂಗ್ರೆಸ್‌ಗೆ ಆನೆಬಲ ಬಂದಂತಾಗಿದೆ. ಹಳ್ಳಿ, ಹಳ್ಳಿಗಳಲ್ಲೂ ಜನರು ಕಾಂಗ್ರೆಸ್ ಕಡೆ ಒಲವು ತೋರಿದ್ದಾರೆ. ಬದಲಾವಣೆ ಬೇಕು ಎಂದು ಜನ ಬಯಸಿದ್ದಾರೆ. ಬಿಜೆಪಿ ಆಡಳಿತದಲ್ಲಿ ಭ್ರಷ್ಚಾಚಾರ ಮಿತಿ ಮೀರಿತ್ತು ಎಂದು ಆರೋಪಿಸಿದರು. ಈ ಬಾರಿ  ಕಾಂಗ್ರೆಸ್ ಬಿಜೆಪಿ ವಿರುದ್ಧ 20ರಿಂದ 25 ಸಾವಿರ ಮತಗಳ ಅಂತರದಿಂದ ಗೆಲವು ಸಾಧಿಸಲಿದೆ ಎಂದರು.
ಕಾಂಗ್ರೆಸ್ ಅಭ್ಯರ್ಥಿ ಟಿ.ಡಿ. ರಾಜೇಗೌಡರ ಕ್ಷೇತ್ರದ ಪ್ರವಾಸದ ಪಟ್ಟಿಯನ್ನು ಸಿದ್ಧಪಡಿಸಲಾಗಿದೆ. ಕೊಪ್ಪ ತಾಲೂಕಿನಲ್ಲಿ ಏ.23, 27, 30, ಮೇ 1 ಹಾಗೂ ಮೇ 2ರಂದು ಪ್ರವಾಸ ಮಾಡಲಿದ್ದಾರೆ. ಶೃಂಗೇರಿ ತಾಲೂಕಿನಲ್ಲಿ ಏ.22 ಹಾಗೂ 25ರಂದು ಪ್ರವಾಸ ಮಾಡಿ ಮತ ಯಾಚನೆ ಮಾಡಲಿದ್ದಾರೆ. ನರಸಿಂಹರಾಜಪುರ ತಾಲೂಕಿನಲ್ಲಿ ಏ.21,24,27 ಹಾಗೂ ಮೇ 2ರಂದು ಪ್ರವಾಸ ಮಾಡಲಿದ್ದಾರೆ. ಏ.29ರಂದು ಖಾಂಡ್ಯ ಹೋಬಳಿಯಲ್ಲಿ   ಪ್ರವಾಸ ಮಾಡಲಿದ್ದಾರೆ.
ಅಭ್ಯರ್ಥಿ ಪರ ಪ್ರಚಾರ: ಅಲ್ಲದೆ ಬೇರೆ ರಾಜ್ಯದ ಮತ್ತು ಕೇಂದ್ರ ಸಚಿವರು ಶೃಂಗೇರಿ ಕ್ಷೇತ್ರದಲ್ಲಿ ಪ್ರವಾಸ ಮಾಡಿ ಅಭ್ಯರ್ಥಿ ಪರ ಪ್ರಚಾರ ಮಾಡಲಿದ್ದಾರೆ ಎಂದು ಕ್ಷೇತ್ರ ಪ್ರಚಾರ ಸಮಿತಿ ಅಧ್ಯಕ್ಷ ಸತೀಶ್ ವಿವರಿಸಿದರು.  ಗೋಷ್ಠಿಯಲ್ಲಿ ಬಿ.ಸಿ. ಗೀತಾ, ಮಹಮ್ಮದ್  ಇಪ್ತೀಕರ್ ಆದಿಲ್, ಬಿ.ಎಸ್. ಸುಬ್ರಹ್ಮಣ್ಯ, ಮಧುಸೂದನ್, ಎ.ಸಿ. ವಜ್ರಪ್ಪಗೌಡ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.