ಚಿಕ್ಕಮಗಳೂರಿನಲ್ಲಿ ಬದಲಾವಣೆ ಗಾಳಿ ಬೀಸಲಿದೆ: ಶಾಂತೇಗೌಡ
ಕ.ಪ್ರ.ವಾರ್ತೆ ಟಿ ಚಿಕ್ಕಮಗಳೂರು ಟಿ ಏ.20
ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದಲ್ಲಿ ಅಭಿವೃದ್ಧಿ ಹೆಸರಿನಲ್ಲಿ ನಡೆದಿರುವ ಕಳಪೆ ಕಾಮಗಾರಿ, ಲೂಟಿ, ಭ್ರಷ್ಟಾಚಾರದಿಂದ ಬೇಸತ್ತು ಹೋಗಿರುವ ಮತದಾರರಲ್ಲಿ ಬದಲಾವಣೆಯ ಬಿರುಗಾಳಿ ಬೀಸಿದೆ ಎಂದು ಕಾಂಗ್ರೆಸ್ ಅಭ್ಯರ್ಥಿ ಕೆ.ಎಸ್. ಶಾಂತೇಗೌಡ ಹೇಳಿದ್ದಾರೆ.
ಹಿರೇಮಗಳೂರಿನಲ್ಲಿ ಶನಿವಾರ ಮನೆ ಮನೆಗೆ ತೆರಳಿ ಮತಯಾಚಿಸಿದ ನಂತರ ನಡೆದ ಸಭೆಯಲ್ಲಿ ಅವರು ಮಾತನಾಡಿ, ಸಚಿವರು ಅಭಿವೃದ್ಧಿ ಹೆಸರಿನಲ್ಲಿ ವೋಟು ಕೇಳುತ್ತಿದ್ದಾರೆ. ಆದರೆ, ಹೇಳಿಕೊಳ್ಳುವ ರೀತಿಯಲ್ಲಿ ಯಾವುದೇ ಅಭಿವೃದ್ಧಿ ನಡೆದಿಲ್ಲ.
ಅಭಿವೃದ್ಧಿ ಹೆಸರಿನಲ್ಲಿ ಭ್ರಷ್ಟಾಚಾರ ವ್ಯಾಪಕವಾಗಿ ನಡೆದಿದೆ. ಕಾಮಗಾರಿಯು ಕಳಪೆಯಿಂದಲೇ ಕೂಡಿದೆ. ಅಭಿವೃದ್ಧಿ ಎಂದು ಹೇಳಿಕೊಳ್ಳುತ್ತಿರುವ ಸಚಿವರು ನಗರದ ಕೋಟೆ ಕೆರೆ, ಬಸವನಹಳ್ಳಿ ಕೆರೆ ಅಭಿವೃದ್ಧಿ ಕಾಮಗಾರಿಯನ್ನು ಪೂರ್ಣಗೊಳಿಸಿಲ್ಲ ಏಕೆ ಎಂದು ಅವರು ಪ್ರಶ್ನಿಸಿದರು.
ಅಭಿವೃದ್ಧಿ ಕಾರ್ಯಗಳಿಗೆ ಆದ್ಯತೆ: ನನಗೆ ಬಣ್ಣದ, ಮೋಸದ, ನಾಟಕೀಯ ಮಾತುಗಳನ್ನಾಡುವುದು ಗೊತ್ತಿಲ್ಲ. ನನಗೆ ತಿಳಿದಿರುವುದು ಜನರೊಂದಿಗೆ ಇದ್ದು ಅವರ ಸಮಸ್ಯೆಗಳಿಗೆ ಸ್ಪಂದಿಸುವುದು ಮಾತ್ರ ಎಂದ ಅವರು, ಅಭಿವೃದ್ಧಿ ತಮ್ಮ ಮೂಲ ಮಂತ್ರ. ಜನರಿಗೆ ಕುಡಿಯಲು ಶುದ್ಧ ನೀರು, ಬಯಲು ಸೀಮೆಯ ಜನರಿಗೆ ಕರಗಡ ದೇವಿಕೆರೆ ನೀರು ಹರಿಸುವುದು, ಜಿಲ್ಲಾ ಸಾರ್ವಜನಿಕ ಆಸ್ಪತ್ರೆಯಲ್ಲಿ ಖಾಲಿ ಇರುವ ವೈದ್ಯರು ಮತ್ತು ಸಿಬ್ಬಂದಿ ಹುದ್ದೆಗಳನ್ನು ಭರ್ತಿ ಮಾಡುವುದು ಸೇರಿದಂತೆ ಜನಪರ, ಸಮಾಜಮುಖಿ ಕಾರ್ಯಗಳಿಗೆ ಆದ್ಯತೆ ನೀಡುವುದಾಗಿ ಹೇಳಿದರು.
ಸ್ವಜನ ಪಕ್ಷಪಾತ, ಭ್ರಷ್ಟಾಚಾರ, ಹಗರಣ, ಕಚ್ಚಾಟ, ಗುಂಪುಗಾರಿಕೆಯಿಂದ ಈಗಾಗಲೇ ಮೂರು ಹೋಳಾಗಿ ಹೋಗಿರುವ ಬಿಜೆಪಿಗೆ ಈ ಬಾರಿ ಚುನಾವಣೆಯಲ್ಲಿ ಜನರು ತಕ್ಕ ಪಾಠ ಕಲಿಸಲಿದ್ದಾರೆ. ವಿಶೇಷವಾಗಿ ಈ ಕ್ಷೇತ್ರದಲ್ಲಿ ಬದಲಾವಣೆ ತರಲು ಜನರು ಬಯಸಿದ್ದಾರೆ ಎಂದರು.
ನಗರಸಭೆ ಸದಸ್ಯ ಹಿರೇಮಗಳೂರು ಪುಟ್ಟಸ್ವಾಮಿ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಘಟಕ ಜಿಲ್ಲಾ ಅಧ್ಯಕ್ಷ ಮಲ್ಲೇಶ್, ಮಾಜಿ ಅಧ್ಯಕ್ಷ ಚಿಕ್ಕಯ್ಯ, ಕಾಂಗ್ರೆಸ್ ವಾರ್ಡ್ ಸಮಿತಿಯ ಎಚ್.ಆರ್. ಚಂದ್ರಪ್ಪ, ಮುಖಂಡರಾದ ರಾಮಚಂದ್ರ, ಶಿವಕುಮಾರ್, ಗಂಗಾಧರ್, ಕಾಡಪ್ಪ, ಮುತ್ತಣ್ಣ, ದಂಟರಮಕ್ಕಿ ಚಂದ್ರೇಗೌಡ, ಎನ್.ಎಂ. ಅಣ್ಣೇಗೌಡ, ಸೇರಿದಂತೆ ಅನೇಕ ಮುಖಂಡರು ಪಾಲ್ಗೊಂಡಿದ್ದರು.
ಕಾಂಗ್ರೆಸ್ ಸೇರ್ಪಡೆ: ತಮ್ಮ ನಿವಾಸದಲ್ಲಿ ಬಿಜೆಪಿ ಕಾರ್ಯಕರ್ತರಾದ ಟಿ.ಬಿ. ಕಾವಲ್ನ ಮಂಜು, ಮೋಹನ್ ನಾಯ್ಕ, ಲೋಕೇಶ್ ನಾಯ್ಕ ಅವರನ್ನು ಪಕ್ಷಕ್ಕೆ ಬರಮಾಡಿಕೊಂಡು ಮಾತನಾಡಿದ ಶಾಂತೇಗೌಡ, ಜನ ಬಿಜೆಪಿಯ ಭ್ರಷ್ಟಾಚಾರದಿಂದ ಬೇಸತ್ತು ಕಾಂಗ್ರೆಸ್ ಬೆಂಬಲಿಸಲಿದ್ದಾರೆ ಎಂದರು.
ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯರಾದ ಭಗವಾನ್, ಕೆ.ಟಿ. ಮಂಜುನಾಥ್, ಮರಿಗೌಡ ಹಾಗೂ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

