ಚಿಕ್ಕಮಗಳೂರು

ಶಿಕ್ಷಣ ಅಭಿವೃದ್ಧಿಯ ಮೂಲ ಸಾಧನ

Published On :

ಕ.ಪ್ರ.ವಾರ್ತೆ, ಚಿಕ್ಕಮಗಳೂರು, ಏ.20
ರಾಷ್ಟ್ರಪ್ರೇಮ ಹಾಗೂ ಶಿಕ್ಷಣ ದೇಶದ ಸರ್ವತೋಮುಖ ಅಭಿವೃದ್ಧಿಯ ಮೂಲ ಸಾಧನಗಳು. ಅದಕ್ಕೆ ಹೆಚ್ಚಿನ ಮಹತ್ವ ಕೊಡುವ ಉದ್ದೇಶದಿಂದಲೇ ನಮ್ಮ ಕ್ಷೇತ್ರಕ್ಕೂ ಸರ್ಕಾರಿ ಇಂಜಿನಿಯರಿಂಗ್ ಕಾಲೇಜು ಮತ್ತು ಮೆಡಿಕಲ್ ಕಾಲೇಜುಗಳನ್ನು ಮಂಜೂರು ಮಾಡಿಸಿದ್ದೇನೆ ಎಂದು ಸಚಿವ ಸಿ.ಟಿ. ರವಿ ಹೇಳಿದ್ದಾರೆ.
  ನಗರದ ಯುರೇಕಾ ಅಕಾಡೆಮಿ ಸಭಾಂಗಣದಲ್ಲಿ ಶನಿವಾರ ಹಮ್ಮಿಕೊಳ್ಳಲಾಗಿದ್ದ ವಿದ್ಯಾರ್ಥಿಗಳೊಂದಿಗಿನ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
   ಕೌಶಲ್ಯಾಧಾರಿತ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡುವ ಅಗತ್ಯವಿದೆ. ಇದರಿಂದ ನಿರುದ್ಯೋಗ ಸಮಸ್ಯೆಯೂ ಪರಿಹಾರವಾಗುತ್ತದೆ ಎಂದು ನಮ್ಮಲ್ಲಿ ಸಾಕಷ್ಟು ಕೌಶಲ್ಯಾಧಾರಿತ  ವಿದ್ಯಾವಂತರಿದ್ದಾರೆ ಅವರಿಗೂ ಉದ್ಯೋಗ ಸಿಕ್ಕಂತಾಗುತ್ತದೆ  ಎಂದು ತಿಳಿಸಿದರು.
ಶಿಕ್ಷಣ, ಅಭಿವೃದ್ಧಿ ಜತೆಯಲ್ಲಿ ಸಾಗಲಿ: ಶಿಕ್ಷಣ ಮತ್ತು ಅಭಿವೃದ್ಧಿ ಜೊತೆಯಲ್ಲಿ ಸಾಗಿದಾಗ ಸಾಮಾನ್ಯ ಜನರೂ ಆರ್ಥಿಕ ಹಾಗೂ ಸಾಮಾಜಿಕವಾಗಿ ಮೇಲೆ ಬರಲು ಸಾಧ್ಯ. ಈ ಹಿನ್ನೆಲೆಯಲ್ಲಿ ಈ ಎರಡೂ ಕ್ಷೇತ್ರವನ್ನು ತಮ್ಮ ಆಧ್ಯತೆಯನ್ನಾಗಿಸಿಕೊಂಡಿದ್ದೇವೆ ಎಂದು ಹೇಳಿದರು.
ಸಂವಾದದಲ್ಲಿ ಭಾಗವಹಿಸಿದ ವಿದ್ಯಾರ್ಥಿನಿ ಶ್ರೇಯ ಮಾತನಾಡಿ, ಕ್ಷೇತ್ರಕ್ಕೆ ಮಂಜೂರಾಗಿರುವ ಎರಡೂ ಕಾಲೇಜುಗಳನ್ನು ಆದಷ್ಟು ಬೇಗನೆ ಆರಂಭಿಸುವ ಪ್ರಯತ್ನಗಳಾಗಬೇಕು ಎಂದರು. ಇದಕ್ಕುತ್ತರಿಸಿದ ಸಚಿವರು, ಈ ಬಾರಿಯೂ ತಾವೇ ಶಾಸಕರಾಗಿ ಎರಡೂ ಕಾಲೇಜುಗಳನ್ನು ಆರಂಭಿಸುತ್ತೇವೆ, ಅದರಲ್ಲಿ ಅನುಮಾನಬೇಡ. ಇದಕ್ಕಾಗಿ ನನ್ನನ್ನೇ ಗೆಲ್ಲಿಸುವಂತೆ ತಮ್ಮ ಪೋಷಕರಲ್ಲಿ ಮನವಿ ಮಾಡಿ ಮತ ಹಾಕಿಸಿ ಎಂದು ಮನವಿ ಮಾಡಿದರು.
ಬಡ ವಿದ್ಯಾರ್ಥಿಗಳಿಗೆ ಅನುಕೂಲ: ವಿದ್ಯಾರ್ಥಿನಿ ಸುಷ್ಮಾ ಮಾತನಾಡಿ, ನಮ್ಮಲ್ಲಿ ಸಾಕಷ್ಟು ಮಂದಿ ಪ್ರತಿಭಾವಂತರಿದ್ದರೂ ಡೊನೇಶನ್ ನೀಡಿ ಓದುವ ಸ್ಥಿತಿಯಲ್ಲಿಲ್ಲದ ಕಾರಣ ಬೆಳಕಿಗೆ ಬಾರದಂತಾಗಿದ್ದಾರೆ. ಸರ್ಕಾರಿ ಇಂಜಿನಿಯರಿಂಗ್ ಕಾಲೇಜು ಮತ್ತು ಸರ್ಕಾರಿ ಮೆಡಿಕಲ್ ಕಾಲೇಜು ಆರಂಭಿಸುವುದರಿಂದ ಇಂತಹ ಬಹಳಷ್ಟು ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ ಎಂದು ಹೇಳಿದರು.
ಈಗಾಗಲೇ ಇಂಜಿನಿಯರಿಂಗ್ ಕಾಲೇಜಿಗೆ ಹಣ ಮಂಜೂರಾಗಿ, ಕಾಲೇಜು ಆರಂಭಿಸಲು ಪ್ರಕ್ರಿಯೆಗಳೂ ಆರಂಭವಾಗಿವೆ. ಈ ವಿಚಾರವನ್ನು ಮನೆ ಮನೆಗೆ ತಿಳಿಸುವ ಕೆಲಸ ನಿಮ್ಮಿಂದಾಗಬೇಕು ಎಂದು ಸಚಿವರು ತಿಳಿಸಿದರು.
ಬೇಗನೆ ಅನುಷ್ಠಾನಕ್ಕೆ ತನ್ನಿ: ವಿದ್ಯಾರ್ಥಿನಿ ಐತಿಹ್ಯ ಮಾತನಾಡಿ, ಗೌರಿಕಾಲುವೆಯಂತಹ ತೀರಾ ಹಿಂದುಳಿದ ಬಡಾವಣೆಯನ್ನೂ ಸಾಕಷ್ಟು ಅಭಿವೃದ್ಧಿ ಪಡಿಸಿದ್ದೀರಿ. ರಸ್ತೆ ಸರಿಯಾಗಿಲ್ಲದಿರುವುದು ಇಲ್ಲಿನ ಪ್ರಮುಖ ಸಮಸ್ಯೆಯಾಗಿತ್ತು, ತಡವಾಗಿಯಾದರೂ ಅಭಿವೃದ್ಧಿ ಕಂಡಿದೆ. ಅದರಂತೆಯೇ ತಮ್ಮ ಶೈಕ್ಷಣಿಕ ಯೋಜನೆಗಳನ್ನೂ ಆದಷ್ಟು ಬೇಗನೆ ಅನುಷ್ಠಾನಕ್ಕೆ ತರಬೇಕೆಂದು ಒತ್ತಾಯಿಸಿದರು.
ಯುರೇಕಾ ಅಕಾಡೆಮಿ ಪ್ರಾಂಶುಪಾಲ ದೀಪಕ್ ದೊಡ್ಡಯ್ಯ ಮಾತನಾಡಿ, ವಿಧಾನಸಭೆಯಲ್ಲಿ ನಮ್ಮನ್ನು ಪ್ರತಿನಿಧಿಸುವವರು ಕ್ಷೇತ್ರದ ಜನರ ಧ್ವನಿಯಾಗಿ ಕೆಲಸ ಮಾಡಬೇಕು. ಪ್ರಶ್ನೆ ಮಾಡುವ ಮನೋಭಾವ ಇದ್ದಾಗ ಮಾತ್ರ ಸಮಸ್ಯೆಗಳಿಗೆ ಪರಿಹಾರ ಸಿಗಲು ಸಾಧ್ಯ. ಅದರೊಂದಿಗೆ ಸಚ್ಚಾರಿತ್ರ್ಯವೂ ಹೊಂದಿರಬೇಕಾಗುತ್ತದೆ ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.