ಕಾಮಗಾರಿ: ಪುನರ್ ಪರಿಶೀಲನೆಗೆ ಬಿಜೆಪಿ ಮನವಿ
ಕ.ಪ್ರ.ವಾರ್ತೆ, ಚಿಕ್ಕಮಗಳೂರು, ಏ.23
ಚುನಾವಣೆಯ ಸಂದರ್ಭದಲ್ಲಿ ನಗರದಲ್ಲಿ ಡಾಂಬರೀಕರಣ ಸೇರಿದಂತೆ ಇತರೇ ಯಾವುದೇ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಬಾರದು ಎಂದು ಸೂಚಿಸಿರುವುದನ್ನು ಪುನರ್ ಪರಿಶೀಲನೆ ನಡೆಸುವಂತೆ ಬಿಜೆಪಿಯ ನಗರಸಭಾ ಸದಸ್ಯರು ಚುನಾವಣಾ ವೀಕ್ಷಕರನ್ನು ಒತ್ತಾಯಿಸಿದ್ದಾರೆ.
ನಗರಸಭೆಯ ಸದಸ್ಯರಾದ ಎಚ್.ಡಿ. ತಮ್ಮಯ್ಯ ಅವರ ನೇತೃತ್ವದಲ್ಲಿ ಬಿಜೆಪಿಯ 12 ಮಂದಿ ನಗರಸಭಾ ಸದಸ್ಯರು ಕೇಂದ್ರ ಚುನಾವಣಾ ವೀಕ್ಷಕರಿಗೆ ಮಂಗಳವಾರ ಭೇಟಿ ಮಾಡಿ ಮನವಿ ಸಲ್ಲಿಸಿದರು.
ಚುನಾವಣೆ ಘೋಷಣೆಯಾಗುವ ಮೊದಲೇ ನಗರದಲ್ಲಿ ಅಭಿವೃದ್ಧಿ ಕೆಲಸಗಳನ್ನು ಕೈಗೆತ್ತಿಕೊಳ್ಳಲಾಗಿದ್ದು, ಚುನಾವಣೆ ನೆಪದಲ್ಲಿ ಈ ಕೆಲಸಗಳನ್ನು ನಿಲ್ಲಿಸುವುದು ಸರಿಯೇ ಎಂದು ಪ್ರಶ್ನಿಸಿದರು.
ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳ ದೂರಿನ ಹಿನ್ನೆಲೆಯಲ್ಲಿ ಈ ರೀತಿಯ ತೀರ್ಮಾನ ಕೈಗೊಳ್ಳಬಾರದು ಎಂದು ಮನವಿ ಮಾಡಿದ ನಗರಸಭೆ ಸದಸ್ಯರು, ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ಅಭಿವೃದ್ಧಿ ಕೆಲಸವನ್ನು ತಡೆಯಲು ಮುಂದಾಗಿರುವುದು ದುರದೃಷ್ಟಕರವೆಂದು ಹೇಳಿದರು.
ಯಾವುದೇ ರಾಜಕೀಯವಿಲ್ಲ: ಕೆಲವೇ ದಿನಗಳಲ್ಲಿ ಮುಂಗಾರು ಮಳೆ ಆರಂಭಗೊಳ್ಳುವ ಸಾಧ್ಯತೆಗಳಿವೆ. ಕೂಡಲೇ ಕಾಮಗಾರಿಗಳು ಪೂರ್ಣಗೊಳ್ಳದೆ ಇದ್ದರೆ ಸಾರ್ವಜನಿಕರಿಗೆ ನಾನಾ ರೀತಿಯ ತೊಂದರೆಗಳಾಗುವ ಉದ್ದೇಶದಿಂದ ನಡೆಯುತ್ತಿರುವ ಕಾಮಗಾರಿಗಳನ್ನು ನಡೆಸಲು ಅವಕಾಶ ಮಾಡಿಕೊಡಬೇಕು. ಈ ವಿಚಾರದಲ್ಲಿ ತಮ್ಮದು ಯಾವುದೇ ರೀತಿಯ ರಾಜಕೀಯವಿಲ್ಲವೆಂದು ಸ್ಪಷ್ಟಪಡಿಸಿದರು.
ಕೆಸರುಗುಂಡಿಗಳಾದ ರಸ್ತೆ: ಒಳಚರಂಡಿ ಕಾಮಗಾರಿಯ ನಂತರ ಗುಂಡಿಬಿದ್ದ ರಸ್ತೆಗಳನ್ನು ಮೆಟ್ಲಿಂಗ್ ಮಾಡಿ ಡಾಂಬರು ಹಾಕಲು ಸಿದ್ದಪಡಿಸುತ್ತಿದ್ದು, ಈ ಸಂದರ್ಭದಲ್ಲಿ ಮಳೆ ಆರಂಭವಾದರೆ ರಸ್ತೆಗಳು ಕೆಸರುಗುಂಡಿಗಳಾಗಿ, ಸಾರ್ವಜನಿಕರ ಓಡಾಟಕ್ಕೆ ತೊಂದರೆಯಾಗಲಿದೆ ಎಂದರು.
ನಗರದ ಸಾರ್ವಜನಿಕರಿಗೆ ಉಪಯೋಗವಾಗುವಂತ ರಸ್ತೆ ಅಭಿವೃದ್ಧಿ ಕೆಲಸಗಳನ್ನು ಕೇವಲ ರಾಜಕೀಯ ದುರುದ್ದೇಶದಿಂದ ತಡೆಹಿಡಿದಿರುವ ಕ್ರಮವನ್ನು ಖಂಡಿಸುತ್ತೇವೆ ಎಂದು ಹೇಳಿದ ಅವರು, ಬಾಕಿ ಉಳಿದಿರುವ ಕಾಮಗಾರಿಗಳನ್ನು ನಡೆಸಲು ಜಿಲ್ಲಾಡಳಿತ ಅಧಿಕಾರಿಗಳಿಗೆ ಸೂಚಿಸಬೇಕು ಎಂದು ಆಗ್ರಹಿಸಿದರು. ನಗರಸಭೆ ಸದಸ್ಯರಾದ ಶಿಲ್ಪಾ, ಕೋಟೆ ಕೃಷ್ಣ, ದೇವರಾಜ್ ಶೆಟ್ಟಿ, ಬಿಜೆಪಿ ಪ್ರೇಮ್ ಕುಮಾರ್, ರಂಗನಾಥ್ ಹಾಜರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

