ಪ್ರಚಾರ: ಮಹಿಳೆಯರಿಗೆ ಡಿಮ್ಯಾಂಡ್
ಕ.ಪ್ರ.ವಾರ್ತೆ, ಚಿಕ್ಕಮಗಳೂರು, ಏ.29
ಮೀಸೆ ಹೊತ್ತ ಗಂಡಸಿಗೆ ಡಿಮ್ಯಾಂಡಪೋ ಡಿಮ್ಯಾಂಡ್..,
- ಇದು, ಸಿನಿಮಾವೊಂದರ ಹಾಡಿನ ತುಣುಕು.
ಆದರೆ, ಚುನಾವಣೆಯ ಪ್ರಚಾರದಲ್ಲಿ ಮಾತ್ರ ಉಲ್ಟಾ ಪಲ್ಟಾ. ಇಲ್ಲಿ ಗಂಡಸರಿಗಿಂತ ಮಹಿಳೆಯರಿಗೆ ಡಿಮ್ಯಾಂಡಪೋ ಡಿಮ್ಯಾಂಡ್.
ರಾಜಕೀಯ ಪಕ್ಷಗಳ ಸ್ಥಳೀಯ ಮುಖಂಡರು ಕೊಳಚೆ ಪ್ರದೇಶ, ಕೂಲಿ ಕಾರ್ಮಿಕರು ವಾಸವಾಗಿರುವ ಸ್ಥಳಗಳಿಗೆ ಸಂಜೆ 7 ಗಂಟೆಯಾಗುತ್ತಿದ್ದಂತೆ ಹೋಗಿ, ಸ್ಥಳೀಯ ಮಹಿಳಾ ಮುಖಂಡರನ್ನು ಭೇಟಿ ಮಾಡಿ, ಬೆಳಿಗ್ಗೆ ಪ್ರಚಾರಕ್ಕಾಗಿ ಇಂತಿಷ್ಟು ಮಹಿಳೆಯರನ್ನು ಕರೆದುಕೊಂಡು ಬರುವಂತೆ ಹೇಳಿ ಕೈಯಲ್ಲಿ ಒಂದಿಷ್ಟು ಅಡ್ವನ್ಸ್ ಕೊಟ್ಟು ಬರುತ್ತಿದ್ದಾರೆ. ಅಡ್ವನ್ಸ್ ಕೊಡದೆ ಹೋದರೆ, ಬೆಳಿಗ್ಗೆ ಪ್ರಚಾರಕ್ಕೆ ಬರುವುದು ಗ್ಯಾರಂಟಿ ಇರುವುದಿಲ್ಲ. ಬೇರೆ ಪಕ್ಷದವರು ಬಂದು ಕರೆದುಕೊಂಡು ಹೋಗಬಹುದೆಂದು ಸ್ಥಳದಲ್ಲೇ ಅಡ್ವನ್ಸ್ ಕೊಟ್ಟು ಉಳಿದ ಪೇಮೆಂಟ್ ಪ್ರಚಾರಕ್ಕೆ ಬಂದು ಮನೆಗೆ ವಾಪಸ್ ಬರುವಾಗ ಕೊಡುವುದಾಗಿ ಹೇಳಿ ಬರುತ್ತಿದ್ದಾರೆ.
ಬೆಳಗಾಗುತ್ತಿದ್ದಂತೆ ಮಹಿಳೆಯರು ಒಟ್ಟಾಗಿ ನಿಗದಿತ ಸ್ಥಳಕ್ಕೆ ಹೋಗಿ ಅಲ್ಲಿಂದ ಮನೆ ಮನೆ ಪ್ರಚಾರಕ್ಕೆ ತೆರಳುತ್ತಿದ್ದಾರೆ. ಪ್ರತಿಯೊಂದು ಬಡಾವಣೆಗಳಲ್ಲಿ ತಂಡೋಪ ತಂಡದಲ್ಲಿ ಮಹಿಳೆಯರು ಕೈಯಲ್ಲಿ ಕರಪತ್ರ ಹಿಡಿದುಕೊಂಡು ಮನೆ ಮನೆಗಳಿಗೆ ಹೋಗುತ್ತಿದ್ದಾರೆ.
ದಿನಗೂಲಿ ಫಿಕ್ಸ್: ಹಳ್ಳಿಗಳಲ್ಲಿ ಪ್ರಚಾರ ಮಾಡಲು ಬರುವ ಮಹಿಳೆಯರಿಗೆ 100, ಹಳ್ಳಿಯ ಮಹಿಳೆಯರು ನಗರಕ್ಕೆ ಪ್ರಚಾರಕ್ಕೆ ಬಂದರೆ 200 ರಿಂದ 250, ಬೆಳಿಗ್ಗೆಯಿಂದ ಸಂಜೆಯವರೆಗೆ ಇದ್ದರೆ 300 ಕೂಡಲಾಗುತ್ತಿದೆ. ಮಹಿಳೆಯರನ್ನು ಪ್ರಚಾರಕ್ಕೆ ಕರೆದುಕೊಂಡು ಬರುವುದರಲ್ಲಿ ಯಾವುದೇ ಪಕ್ಷ ಹಿಂದೆ ಬಿದ್ದಿಲ್ಲ. ಪ್ರಮುಖವಾಗಿ ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ನವರು ಪ್ರಚಾರಕ್ಕೆ ಮಹಿಳೆಯರನ್ನು ಕರೆದುಕೊಂಡು ಬರುತ್ತಿದ್ದಾರೆ. ಪಕ್ಷೇತರರು ಮಾತ್ರ ತಮ್ಮ ಸಂಬಂಧಿಕರೊಡನೆ, ಸ್ನೇಹಿತರೊಂದಿಗೆ ಮನೆ ಮನೆಗಳಿಗೆ ತೆರಳಿ ಮತಯಾಚನೆ ಮಾಡುತ್ತಿದ್ದಾರೆ.
ಆದರೆ, ಗಂಡಸರಿಗೆ ಪ್ರಚಾರಕ್ಕಾಗಿ ಹೆಚ್ಚಿನ ಸಂಖ್ಯೆಯಲ್ಲಿ ರಾಜಕೀಯ ಪಕ್ಷದವರು ಕರೆದುಕೊಂಡು ಬರುತ್ತಿಲ್ಲ. ಅವರ ಬದಲಿಗೆ ಪಕ್ಷದ ಕಾರ್ಯಕರ್ತರೆ ಪ್ರಚಾರದಲ್ಲಿ ತೊಡಗಿದ್ದಾರೆ. ಅದುದರಿಂದ ಪುರುಷರಿಗೆ ಡಿಮ್ಯಾಂಡ್ ಇಲ್ಲದಂತಾಗಿದೆ.
ಕಾರ್ಮಿಕರ ಕೊರತೆ: ಜಿಲ್ಲೆಯ ಕಾಫಿ ತೋಟಗಳು ಕಾರ್ಮಿಕರ ಕೊರತೆ ಎದುರಿಸುತ್ತಿವೆ. ಕಾಲ ಕಾಲಕ್ಕೆ ಕಾಫಿ ತೋಟಗಳಲ್ಲಿ ಕೆಲಸ ಮಾಡದೆ ಹೋದರೆ, ಇಳುವರಿಯ ಮೇಲೆ ದುಷ್ಪರಿಣಾಮ ಬೀರಲಿದೆ.
ಸದ್ಯ ಕಾಫಿ ತೋಟಗಳ ಪ್ರದೇಶದಲ್ಲಿ ಆಗಾಗ ಮಳೆಯಾಗುತ್ತಿದ್ದು, ಕಾಫಿ ಗಿಡಗಳ ಕಸಿ ಮತ್ತು ಮರಗಳ ಕಸಿ ಕೆಲಸ ನಡೆಯುತ್ತಿದೆ. ಈ ಕೆಲಸಕ್ಕಾಗಿ ನಗರ ಪ್ರದೇಶದಿಂದ ಮಹಿಳೆಯರನ್ನು ಕರೆದುಕೊಂಡ ಬರಲಾಗುತ್ತಿದೆ. ಆದರೆ, ಕಾಫಿ ತೋಟಕ್ಕೆ ಬರುತ್ತಿದ್ದ ಮಹಿಳೆಯರು ಚುನಾವಣಾ ಪ್ರಚಾರಕ್ಕೆ ಹೋಗುತ್ತಿರುವುದರಿಂದ ಕಾರ್ಮಿಕರ ಕೊರತೆಯ ಸಮಸ್ಯೆ ತೀವ್ರವಾಗಿದೆ.
ಕಾಫಿ ಗಿಡಗಳ ಕಸಿಗೆ ಮಹಿಳೆಯರಿಗೆ 200 ರಿಂದ 250 ದಿನಗೂಲಿ ಕೊಡಲಾಗುವುದು. ಆದರೆ, ಪ್ರಚಾರಕ್ಕೆ ಹೋದರೆ ಅಷ್ಟೇ ಕೂಲಿ ಕೊಡುವುದರಿಂದ ಮಹಿಳೆಯರು ತೋಟಗಳಿಗೆ ಕೆಲಸಕ್ಕೆ ಹೋಗುತ್ತಿಲ್ಲ. ಸದ್ಯ ಕಾಫಿ ಗಿಡಗಳ ಕಸಿ ಮತ್ತು ಮರಗಳ ಕಸಿ ಮಾಡದೆ ಹೋದರೆ ಮುಂದಿನ ಕಾಫಿ ಇಳುವರಿ ನಿರೀಕ್ಷಿತ ಮಟ್ಟದಲ್ಲಿ ಬರುವುದಿಲ್ಲ. ಕಾರ್ಮಿಕರ ಕೊರತೆ ಕಾಫಿ ಬೆಳೆಯ ಮೇಲೆ ದುಷ್ಪರಿಣಾಮ ಬೀರಲಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

