ಭದ್ರಾ ಡ್ಯಾಂ ಬಳಿ ಸರ್ಎಂವಿ ಪುತ್ಥಳಿ
ಕ.ಪ್ರ.ವಾರ್ತೆ, ತರೀಕೆರೆ, ಆ.6
ಭದ್ರಾ ಜಲಾಶಯದ ಬಳಿ ಸರ್.ಎಂ. ವಿಶ್ವೇಶ್ವರಯ್ಯನವರ ಪುತ್ಥಳಿ ಸ್ಥಾಪನೆಗೆ ಪ್ರಯತ್ನಿಸಲಾಗುವುದು ಎಂದು ಚಿಕ್ಕಮಗಳೂರು ಜಿಲ್ಲಾ ಉಸ್ತುವಾರಿ ಸಚಿವ ಆಭಯಚಂದ್ರಜೈನ್ ತಿಳಿಸಿದ್ದಾರೆ.
ಸಮೀಪದ ಲಕ್ಕವಳ್ಳಿ ಬಳಿಯ ಭದ್ರಾ ಜಲಾಶಯ ತುಂಬಿದ ಹಿನ್ನೆಲೆಯಲ್ಲಿ ಬಾಗಿನ ಅರ್ಪಿಸಿ ಮಾತನಾಡಿ, ಸರ್.ಎಂ. ವಿಶ್ವೇಶ್ವರಯ್ಯನವರು ನಾಡಿಗೆ ನೀಡಿದ ಕೊಡುಗೆಯನ್ನು ಎಲ್ಲರೂ ಸ್ಮರಿಸಬೇಕು. ಅವರ ಕೆಲಸಗಳು ಮುಂದಿನ ಪೀಳಿಗೆಗೆ ಮಾರ್ಗದರ್ಶನವಾಗಬೇಕು. ಈ ಭಾಗದ ಜನರ ಆಶೋತ್ತರಗಳಿಗೆ ಅನುಗುಣವಾಗಿ ಅವರ ಪುತ್ಥಳಿಯನ್ನು ಭದ್ರಾ ಜಲಾಶಯದ ಬಳಿ ನಿರ್ಮಾಣ ಮಾಡಲು ಎಲ್ಲ ಪ್ರಯತ್ನ ಮಾಡಲಾಗುವುದು. ಎಲ್ಲ ಕಡೆ ಉತ್ತಮ ಮಳೆಯಾಗುತ್ತಿರುವುದು ಸಮೃದ್ಧಿಯ ಸಂಕೇತವಾಗಿದೆ. ಉತ್ತಮ ಬೆಳೆಯಾಗುವ ನೀರೀಕ್ಷೆ ಇದೆ ಎಂದರು.
ನೀರಾವರಿ ಸಚಿವರ ಗಮನಕ್ಕೆ: ತಾಲೂಕಿನಲ್ಲಿ ಭದ್ರಾ ನದಿ ಹರಿದರೂ ಅದರ ಉಪಯೋಗ ತಾಲೂಕಿಗೆ ಕಡಿಮೆ ಇದೆ. ಈ ಭಾಗದ ರೈತರಿಗೆ ಹೆಚ್ಚಿನ ಭಾಗ ಸಿಗಬೇಕು, ಇಲ್ಲಿರುವ ಎಲ್ಲ ಸಮಸ್ಯೆಗಳನ್ನು ಬಾರಿ ನೀರಾವರಿ ಸಚಿವರ ಗಮನಕ್ಕೆ ತಂದು ಸಮಸ್ಯೆಗಳನ್ನು ಪರಿಹರಿಸಲಾಗುವುದು, ತಾಲೂಕಿನ ರೈತರ ಹಿತ ಕಾಪಾಡಲಾಗುವುದು ಎಂದು ತಿಳಿಸಿದರು.
ನೀರಾವರಿಗೆ ಆದ್ಯತೆ: ಶಾಸಕ ಜಿ.ಎಚ್.ಶ್ರೀನಿವಾಸ್ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ಭದ್ರಾ ಮೇಲ್ದಂಡೆ ಯೋಜನೆ ಪ್ರಾರಂಭದಲ್ಲಿ ತಾಲೂಕಿನ ಒಂದು ಕೆರೆಗೆ ಮಾತ್ರ ನೀರು ನೀಡುವ ಪ್ರಸ್ತಾಪ ಯೋಜನೆಯಲ್ಲಿತ್ತು ಆದರೆ ಹೋರಾಟದ ಪರಿಣಾಮ ಇಂದು 70 ಕೆರೆಗಳಿಗೆ ಭದ್ರಾ ನೀರು ಹರಿಸಲಾಗುವುದು, ಉಬ್ರಾಣಿ ಅಮೃತಾಪುರ ಏತ ನೀರಾವರಿ ಯೋಜನೆಯಿಂದ 16 ಕೆರೆಗಳಿಗೆ, ಗಾಣಿಗಿತ್ತಿಹಳ್ಳದಿಂದ ಬುಕ್ಕಾಂಬುದಿ ಕೆರೆಗೆ ಹರಿಸುವುದರಿಂದ ತಾಲೂಕಿನಲ್ಲಿ ನೀರಾವರಿಗೆ ಹೆಚ್ಚಿನ ಆದ್ಯತೆ ಸಿಗಲಿದೆ, ನೀರಾವರಿಗೆ ಮೊದಲ ಅದ್ಯತೆ ನೀಡಲಾಗುವುದು ಎಂದರು.
ಭದ್ರಾ ನದಿ ತುಂಬಿ ಹರಿದಾಗ, ಸಮೀಪದ ಸೋಂಪುರ ಗ್ರಾಮ ಮುಳುಗಡೆ ಭೀತಿ ಎದುರಿಸಬೇಕಾಗುತ್ತದೆ. ಇಲ್ಲಿನ ಗ್ರಾಮದ ಜನರಿಗೆ ಶಾಶ್ವತ ಪರಿಹಾರ ಕಲ್ಪಿಸಬೇಕಾಗಿದೆ ಹಾಗೂ ಬೆಳೆ ನಾಶವಾಗದಂತೆ ವಿಶೇಷ ಪ್ಯಾಕೇಜ್ ನೀಡುವಂತೆ ಸರ್ಕಾರವನ್ನು ಒತ್ತಾಯಪಡಿಸಲಾಗುವುದು. ಮಳೆಯಿಂದ ರಸ್ತೆಗಳೆಲ್ಲಾ ಹಾಳಾಗಿದ್ದು, ಅವುಗಳನ್ನು ಕೂಡಲೇ ದುರಸ್ತಿಗೊಳಿಸಲು ಮುಖ್ಯಮಂತ್ರಿಗಳ ಗಮನಕ್ಕೆ ತರಲಾಗುವುದು ಎಂದರು.
ಭದ್ರಗಿರಿ ಶಿವಸುಬ್ರಹ್ಮಣ್ಯಸ್ವಾಮಿ ಅವರು ಸಮಾರಂಭದ ಸಾನ್ನಿಧ್ಯ ವಹಿಸಿದ್ದರು. ವಿಧಾನ ಪರಿಷತ್ ಸದಸ್ಯೆ ಗಾಯಿತ್ರಿ ಶಾಂತೇಗೌಡ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ.ಎಲ್. ಮೂರ್ತಿ ಮಾತನಾಡಿದರು.
ಮಾಜಿ ಶಾಸಕ ಎಸ್.ಎಂ. ನಾಗರಾಜ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಬ್ದುಲ್ ಘನಿ ಅನ್ವರ್, ಕೆ.ಆರ್. ದೃವಕುಮಾರ್, ಬಿ.ಎಸ್.ಆರ್. ಮಂಜುನಾಥ್, ರಾಜೇಶ್ವರಿ ನಂದಕುಮಾರ್, ಗೀತಾ, ಎಚ್.ಎನ್. ಮಂಜುನಾಥ್ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

