ಅತಿವೃಷ್ಟಿ ಪ್ರದೇಶಕ್ಕೆ ಶಾಸಕ ಜೀವರಾಜ್ ಭೇಟಿ
ಕ.ಪ್ರ.ವಾರ್ತೆ, ಕೊಪ್ಪ, ಆ.7
ತಾಲೂಕಿನಲ್ಲಿ ಅತಿವೃಷ್ಟಿಯಿಂದ ಹೆಚ್ಚು ಹಾನಿಗೊಳಗಿರುವ ಮೆಗುಂದಾ ಹೋಬಳಿಯ ವಿವಿಧ ಗ್ರಾಮಗಳಿಗೆ ಶಾಸಕ ಡಿ.ಎನ್. ಜೀವರಾಜ್ ಬುಧವಾರ ಭೇಟಿ ನೀಡಿ, ಭೂಕುಸಿತದಿಂದ ಮನೆ ಕಳೆದುಕೊಂಡ ನಿರಾಶ್ರಿತರಿಗೆ ಸಂತ್ವಾನ ಹೇಳಿ, ಸರ್ಕಾರದಿಂದ ಪರಿಹಾರ ಕೊಡಿಸುವ ಭರವಸೆ ನೀಡಿದರು.
ಗುಡ್ಡೇತೋಟದಿಂದ ಗ್ರಾಪಂ ಕಚೇರಿ ಹಿಂಭಾಗದ ಬೆತ್ತದಕೊಳಲು ರಸ್ತೆಯಲ್ಲಿ ಸಂಪೂರ್ಣ ಭೂ ಕುಸಿತವಾಗಿದ್ದು, ಈ ಭಾಗದಲ್ಲಿರುವ ಸುಮಾರು 17 ಮನೆಗಳಲ್ಲಿ ನಾಲ್ಕು ಮನೆ ಅಪಾಯದ ಅಂಚಿನಲ್ಲಿದೆ.
ಚೆಕ್ ವಿತರಣೆ: ಅಪಾಯದಂಚಿನಲ್ಲಿರುವ ಈ ನಾಲ್ಕು ಕುಟುಂಬಗಳನ್ನು ಗ್ರಾಪಂ ಕಚೇರಿ ಪಕ್ಕದಲ್ಲಿರುವ ಕಟ್ಟಡಕ್ಕೆ ಸ್ಥಳಾಂತರ ಮಾಡಲಾಗಿರುವ ಜಾಗಕ್ಕೆ ಶಾಸಕ ಡಿ.ಎನ್. ಜೀವರಾಜ್ ತೆರಳಿ ಪ್ರಕೃತಿ ವಿಕೋಪ ಪರಿಹಾರದ ಯೋಜನೆಯಡಿ 6 ಕಟುಂಬಗಳಿಗೆ ತಲಾ ರು. 6,300 ಚೆಕ್ ನೀಡಿ, ಸರ್ಕಾರದಿಂದ ಅತಿವೃಷ್ಟಿಯಿಂದ ಮನೆಕಳೆದುಕೊಂಡವರಿಗೆ ಶೀಘ್ರ ಮನೆ ನೀಡುವಂತೆ ಸರ್ಕಾರವನ್ನು ಒತ್ತಾಯಿಸಿಸುವುದಾಗಿ ಭರವಸೆ ನೀಡಿದರು.
ನಂತರ ನಕ್ಸಲ್ ಪೀಡಿತ ಪ್ರದೇಶವಾದ ಸಾತನಕುಡಿಗೆ ಮಾರ್ಗವಾಗಿ ಮೆಣಸಿನ ಹಾಡ್ಯ ಮತ್ತು ಕಲ್ಲುಗುಡ್ಡೆಗೆ ಸಂಪರ್ಕ ಕಲ್ಪಿಸುವ ರಸ್ತೆ, ಸಾತನಕುಡಿಗೆಯ ಬಳಿ ಸಂಪೂರ್ಣ ಕೊಚ್ಚಿಹೋಗಿ ದೊಡ್ಡ ಕಂದಕ ನಿರ್ಮಾಣವಾಗಿರುವ ಸ್ಥಳಕ್ಕೆ ಮತ್ತು ಬಸ್ರೀಕಟ್ಟೆ ಮತ್ತು ಜಯಪುರಕ್ಕೆ ಸಂಪರ್ಕ ಕಲ್ಪಿಸುವ ಮಾರ್ಗದ ಚೆನ್ನೇಕಲ್ಲು ಬಳಿ ರಸ್ತೆ ಕುಸಿದಿರುವ ಸ್ಥಳಕ್ಕೆ ಹಾಗೂ ಬಸ್ರೀಕಟ್ಟೆಯಿಂದ ತಾಲೂಕಿನ ದೊಡ್ಡ ಪರಿಶಿಷ್ಟ ಕಾಲೊನಿ ಎಂದು ಹೇಳಲಾಗುವ ಬರ್ಕನಘಟ್ಟ ಪರಿಶಿಷ್ಟ ಕಾಲೋನಿಗೆ ಸಂಪರ್ಕ ಕಲ್ಪಿಸುವ ಮಾರ್ಗ ಭೂಕುಸಿತಕ್ಕೆ ಒಳಗಾಗಿರುವ ಸ್ಥಳಗಳಿಗೆ ಭೇಟಿ ನೀಡಿದರು.
ಸದನ ಕಲಾಪವಿತ್ತು: ನಂತರ ಅತಿಯಾದ ಮಳೆಯಿಂದ ಕೊಳೆರೋಗ ತಗಲಿರುವ ಅಡಕೆ ಮತ್ತು ಕಾಫಿ, ಕಾಳು ಮೆಣಸು ತೋಟಗಳಿಗೆ ಭೇಟಿ ನೀಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಭಾಗದಲ್ಲಿ ಅತಿವೃಷ್ಟಿ ಸಂಭವಿಸಿದ ಸಮಯದಲ್ಲಿ ಸದನ ಕಲಾಪದಲ್ಲಿ ಪಾಲುಗೊಂಡಿದ್ದರಿಂದ ಹಾನಿಯಾದ ಪ್ರದೇಶಗಳಿಗೆ ಭೇಟಿ ನೀಡಿರಲಿಲ್ಲ ಎಂದರು.
ಆದರೆ, ಇಲ್ಲಿನ ವಿದ್ಯಮಾನಗಳನ್ನು ತಿಳಿದುಕೊಂಡು ಅಡಕೆ ಬೆಳೆಗಾರರಿಗೆ ಮೈಲುತುತ್ತವನ್ನು ಉಚಿತವಾಗಿ ನೀಡ ಬೇಕು ಹಾಗೂ ಕೊಳೆರೋಗಕ್ಕೆ ತುತ್ತಾದ ರೈತರಿಗೆ ಪರಿಹಾರ ನೀಡುವಂತೆ ಸದನದಲ್ಲಿ ಸರ್ಕಾರವನ್ನು ಒತ್ತಾಯಿಸಿರುವುದಾಗಿ ತಿಳಿಸಿದರು.
ಪರಿಹಾರ ಕೊಡಿಸುವ ಭರವಸೆ: ಅತಿ ಹೆಚ್ಚು ಪ್ರದೇಶಗಳಲ್ಲಿ ಭೂಕುಸಿತವಾಗಿ ರಸ್ತೆ ಮತ್ತು ಮನೆಗೆ ಹಾನಿ ಸಂಭವಿಸಿರುವುದರಿಂದ ಸುಮಾರು ರು. 50 ಕೋಟಿ ಹಾನಿ ಸಂಭವಿಸಿದೆ ಎಂದು ಅಧಿಕಾರಿಗಳು ಸರ್ಕಾರಕ್ಕೆ ಸಲ್ಲಿಸಿರುವ ಅಧಿಕೃತ ವರದಿ ಆಧಾರದ ಮೇಲೆ ಕೂಡಲೇ ಈ ಭಾಗಕ್ಕೆ ಅನುದಾನ ಬಿಡುಗಡೆ ಮಾಡುವಂತೆ ಈ ಭಾಗದಿಂದ ಗುರುವಾರ ಮುಖ್ಯಮಂತ್ರಿಗಳ ಬಳಿ ನಿಯೋಗ ತೆರಳಿ ಒತ್ತಾಯಿಸಿ ಪರಿಹಾರ ಕೊಡಿಸುವ ಪ್ರಯತ್ನ ಮಾಡುತ್ತೇನೆ ಎಂದು ತಿಳಿಸಿದರು.
ಈ ಸಮಯದಲ್ಲಿ ತಾಪಂ ಅಧ್ಯಕ್ಷರಾದ ಪದ್ಮಾವತೀ ರಮೇಶ್, ಸದಸ್ಯ ಬೆಂಡೇಹಕ್ಲು ನಾರಯಣ್, ಜಿಪಂ ಎ.ಇ.ಇ ರಾಜೇಶ್, ಪಿಡಬ್ಲೂಡಿಯ ಎ.ಇ.ಇ. ಶಿವಣ್ಣ, ತೋಟಗಾರಿಕೆ ಇಲಾಖೆ ಹಿರಿಯ ಸಹಾಕ ನಿರ್ದೇಶಕಿ ರೇಖಾ ಮೊದಲಾದವರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

