ಚಿಕ್ಕಮಗಳೂರು

ಪಕ್ಷದ ಉನ್ನತಿಗೆ ಶ್ರಮ ವಹಿಸಿ

Published On :

ಕ.ಪ್ರ.ವಾರ್ತೆ, ಕಡೂರು,  ಆ.13
ಬಿಜೆಪಿಗೆ ಮಾತ್ರ ಬೇರು ಮಟ್ಟದ ಸಂಘಟನೆಯಿದ್ದು, ನೂತನ ಮುಖಂಡರು ಹಾಗೂ  ಕಾರ್ಯಕರ್ತರು ಜನಪರ ಹೋರಾಟ ಮಾಡಿದಲ್ಲಿ ಬಿಜೆಪಿ ಉನ್ನತ ಮಟ್ಟಕ್ಕೆ ಬೆಳೆಯಲು ಸಾಧ್ಯ ಎಂದು ಮಾಜಿ ಶಾಸಕ ಡಾ ವೈ.ಸಿ. ವಿಶ್ವನಾಥ್ ಹೇಳಿದರು.
ಅವರು ಕಡೂರು ಪಟ್ಟಣದ ಪಾಂಡುಂಗ ಕಲ್ಯಾಣ ಮಂಟಪದಲ್ಲಿ ನಡೆದ ಬಿಜೆಪಿ ನೂತನ ಘಟಕಗಳ ಪದಾಧಿಕಾರಿ ಸಭೆಯಲ್ಲಿ ನಗರ ಘಟಕದ ಅಧ್ಯಕ್ಷ ಎ. ಮಣಿಯರಿಗೆ ಅಧಿಕಾರ ಹಸ್ತಾಂತರಿಸಿ ಮಾತನಾಡಿದರು. ಈ ದೇಶದಲ್ಲಿ ಬಿಜೆಪಿಗೆ ಇರುವ ತಳಹದಿ ಸಿದ್ಧಾಂತ ಮತ್ತು ಸಂಘಟನೆ ಯಾವ ಪಕ್ಷಕ್ಕೂ ಇಲ್ಲದಿರುವುದರಿಂದ ಬಿಜೆಪಿ ಆಲದ ಮರವಾಗಿ ಬೆಳೆದಿದೆ ಎಂದರು.
ಸಮರ್ಥ ನಾಯಕ: ಕಡೂರು ಬಿಜೆಪಿಗೆ ಸರಿಯಾದ ನಾಯಕರಿಲ್ಲ. ಸಮರ್ಥ ನಾಯಕರು ಸಿಕ್ಕಿದಲ್ಲಿ ಈ ಕೊರತೆ  ನೀಗಿಸುವ ಅವಶ್ಯಕತೆ ಇರುವುದರಿಂದ ಮುಂದಿನ ದಿನಗಳಲ್ಲಿ ಬಿಜೆಪಿ ಕಡೂರು ತಾಲೂಕಿನಲ್ಲಿ ಸಮರ್ಥವಾಗಿ ಎಲ್ಲಾ ಚುನಾವಣೆ ಎದುರಿಸಬೇಕು ಎಂದು ಪದಾಧಿಕಾರಿಗಳನ್ನು ನೀಡಿದ್ದೇವೆ ಎಂದರು.
ಅಧಿಕಾರ ವಹಿಸಿಕೊಂಡಿರುವ ಪದಾಧಿಕಾರಿಗಳು ಕೇವಲ ಪದವಿ ಇಟ್ಟುಕೊಳ್ಳದೇ ಜನರ ಪರವಾಗಿ ಬೀದಿಗಿಳಿದು ಹೋರಾಡಬೇಕು. ಜನರ ಮಧ್ಯೆ ಇದ್ದು, ಸಮಸ್ಯೆ ಬಗೆಹರಿಸಿದಲ್ಲಿ ಬಿಜೆಪಿ ಜನರ ಪ್ರೀತಿ ಗಳಿಸಲು ಸಾಧ್ಯ. ಇದನ್ನು ಮನವರಿಕೆ ಮಾಡಿಕೊಂಡು ಮುಖಂಡರು ಪಕ್ಷ ಸಂಘಟಿಸಿ ಬಿಜೆಪಿ ಮರಳಿ ಎಲ್ಲೆಡೆ ಅಧಿಕಾರಕ್ಕೆ ಬರಲು ಎಲ್ಲರೂ ಶ್ರಮಿಸಬೇಕು ಎಂದರು.
ಪಕ್ಷ ಅಧಿಕಾರಕ್ಕೆ: ಮುಖಂಡ ಬೀರೂರು ದೇವರಾಜ್ ಮಾತನಾಡಿ, ಬಿಜೆಪಿಯಲ್ಲಿ ಸಂಘಟನೆ ಕಾಣಲು ಸಾಧ್ಯ  ಎಂಬುದನ್ನು ತಾವು ಅರಿತಿದ್ದು, ನೂತನ ಘಟಕವು ಗ್ರಾಮೀಣ ಮತ್ತು ಪಟ್ಟಣಗಳ ಜನರ ಪರವಾಗಿ ಹಮ್ಮಿಕೊಳ್ಳುವ ಎಲ್ಲಾ ಕಾರ್ಯಗಳಲ್ಲಿ ನಾನು ಹಾಗೂ ಮಾಜಿ ಶಾಸಕ ಡಾ ವೈ.ಸಿ. ವಿಶ್ವನಾಥ್ ಅವರು ಸದಾ ನಿಮ್ಮ ಜೊತೆ ಇದ್ದು, ಪಕ್ಷದ ಸಂಘಟನೆಗೆ ದುಡಿದು ಪಕ್ಷ ಅಧಿಕಾರಕ್ಕೆ ಬರುವಂತೆ ಶ್ರಮಿಸುತ್ತೇವೆ ಎಂದರು.
ಜಿಪಂ ಸದಸ್ಯ ಕಲ್ಮರುಡಪ್ಪ ಮಾತನಾಡಿ, ಈ ದೇಶದ ದುರ್ಬಲ ಪ್ರಧಾನಿ ಮನಮೋಹನ್ ಸಿಂಗ್ ಅವರನ್ನು ಕೆಳಗಿಳಿಸಿ ಬಿಜೆಪಿ ಅಧಿಕಾರಕ್ಕೆ ತಂದು ನರೇಂದ್ರ ಮೋದಿಯವರನ್ನು ಪ್ರಧಾನಿ ಮಾಡುವಲ್ಲಿ ಪ್ರತಿಯೊಬ್ಬ  ಕಾರ್ಯಕರ್ತರ ಶ್ರಮ ಮುಖ್ಯವಾಗಿದೆ. ಈ ನಿಟ್ಟಿನಲ್ಲಿ ನೂತನ ಪದಾಧಿಕಾರಿಗಳು ಸಂಘಟಿತರಾಗಿ ಕೆಲಸ ಮಾಡಬೇಕು ಎಂದರು.
ಸಂಘಟನೆ ಅನಿವಾರ್ಯ: ಜಿಪಂ ಅಧ್ಯಕ್ಷೆ ರೇಖಾ ಹುಲಿಯಪ್ಪಗೌಡ ಮಾತನಾಡಿ, ಮುಂದಿನ ದಿನಗಳನ್ನು ಬಿಜೆಪಿ ಸವಾಲಾಗಿ ಸ್ವೀಕರಿಸಿ ಎದುರಿಸುವ ಹಿನ್ನೆಲೆಯಲ್ಲಿ ಸಂಘಟಿರಾಗಬೇಕಾದ ಅನಿವಾರ್ಯತೆ ಇದೆ ಎಂದರು. ನೂತನ ನಗರ ಘಟಕದ ಅಧ್ಯಕ್ಷ ಎ.ಮಣಿ ಮಾತನಾಡಿದರು.
ತಾಲೂಕು ಬಿಜೆಪಿ ಅಧ್ಯಕ್ಷ ಕೆ.ಎಚ್. ಶಂಕರ್ ಪದಾಧಿಕಾರಿಗಳ ಘೋಷಣೆ ಮಾಡಿದರು. ಸಮಾರಂಭದಲ್ಲಿ ಬಿಜೆಪಿ ಮುಖಂಡರು ಮತ್ತು ಪದಾಧಿಕಾರಿಗಳಾದ ಅರೇಕಲ್ ಪ್ರಕಾಶ್, ಬಸವರಾಜ್, ಕಾಮನಕೆರೆ ಶಶಿಧರ್, ಎಚ್. ವಿ. ಗಿರೀಶ್, ಆರ್. ಶಿವಕುಮಾರ್, ರಾಜೇಶ್, ಪೆಟ್ರೋಲ್ ಬಂಕ್ ಮಂಜು, ಜಿಗಣೇಹಳ್ಳಿ ಮಂಜು, ರಾಘವೇಂದ್ರ ಪ್ರಸಾದ್, ಸಿ. ಜೆ. ಮಂಜುನಾಥ್, ಗೋಪಿಕುಮಾರ್ ಮೊದಲಾದವರು ಉಪಸ್ಥಿತರಿದ್ದರು.  

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.