ಜೆಡಿಎಸ್ ಅಪ್ಪ, ಮಕ್ಕಳ ಸೊಸೆಯರ ಪಕ್ಷ: ಗಂಡಸಿ ಶಿವರಾಂ ಆರೋಪ
ಕ.ಪ್ರ.ವಾರ್ತೆ, ಕಡೂರು, ಆ.13
ಬಿಜೆಪಿ, ಕೆಜೆಪಿ ಮತ್ತೆ ಒಂದಾಗುತ್ತಾ ಅವಕಾಶವಾದಿ ರಾಜಕಾರಣ ಮಾಡುತ್ತಿದ್ದರೆ ಜಾತ್ಯತೀತ ಎನ್ನುವ ಜೆಡಿಎಸ್ ಕೋಮುವಾದಿ ಪಕ್ಷದೊಂದಿಗೆ ಕೈ ಜೋಡಿಸಿ ಜಾತಿವಾದಿ ಪಕ್ಷವಾಗಿ ರೂಪುಗೊಂಡಿದೆ ಎಂದು ಮಾಜಿ ಸಚಿವ ಗಂಡಸಿ ಶಿವರಾಂ ಆರೋಪಿಸಿದರು.
ಪಟ್ಟಣದ ಬನಶಂಕರಿ ಕಲ್ಯಾಣ ಮಂದಿರದಲ್ಲಿ ಕಡೂರು ಹಾಗೂ ಬೀರೂರು ಬ್ಲಾಕ್ ಕಾಂಗ್ರೆಸ್ ಘಟಕಗಳಿದ ಆಯೋಜಿಸಿದ್ದ ಯುವ ಕಾಂಗ್ರೆಸ್ ಸದಸ್ಯತ್ವ ನೊಂದಣಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಮೂರು ತಿಂಗಳ ಹಿಂದೆ ಅಧಿಕಾರಕ್ಕೆ ಬಂದ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ರಾಜ್ಯದಲ್ಲಿ 4,400ಕೋಟಿ ರು. ವ್ಯಯಿಸಿ ಅನ್ನಭಾಗ್ಯ ಯೋಜನೆ, ಕ್ಷೀರ ಭಾಗ್ಯದಂತಹ ಜನಪರ ಕಾರ್ಯಕ್ರಮ ರೂಪಿಸಿದೆ. ಈಗ ನಡೆಯುತ್ತಿರುವ ಎರಡು ಲೋಕಸಭಾ ಉಪ ಚುನಾವಣೆ ಮೇಲೆ ಎಲ್ಲರ ದೃಷ್ಟಿಯಿದ್ದು ಇದು ಮುಂದಿನ ಸಾರ್ವತ್ರಿಕ ಲೋಕಸಭಾ ಚುನಾವಣೆಗೆ ದಿಕ್ಸೂಚಿಯಾಗಲಿದೆ ಎಂದರು.
ಮಕ್ಕಳ ಸೊಸೆಯಂದಿರ ಪಕ್ಷ: ಅಧಿಕಾರಕ್ಕಾಗಿ ಜೆಡಿಎಸ್ ಏನು ಬೇಕಾದರೂ ಮಾಡಲು ಸಿದ್ಧವಿದ್ದು, ಮಕ್ಕಳ ಸೊಸೆಯಂದಿರ ಪಕ್ಷವಾಗಿ ರೂಪುಗೊಂಡಿದೆ. ದೇವೇಗೌಡರು ಇದು ನನ್ನ ಕೊನೆ ಹೋರಾಟ ಎನ್ನುತ್ತಲೇ ರಾಜಕಾರಣ ಮಾಡುತ್ತಿದ್ದು ಇಂದಿನ ಕೆಟ್ಟ ರಾಜಕಾರಣದಲ್ಲಿ ಹಣದಿಂದ, ಸ್ವಾರ್ಥ ರಾಜಕಾರಣದಿಂದ ಕರ್ನಾಟಕದಲ್ಲಿ ಪ್ರಾಮಾಣಿಕರು ರಾಜಕಾರಣ ಮಾಡುವುದು ಕಷ್ಟಕರವಾದ ಸ್ಥಿತಿ ನಿರ್ಮಾಣವಾಗಿದೆ. ಹಾಸನ ಲೋಕಸಭಾ ಚುನಾವಣೆಯನ್ನು ಕಾಂಗ್ರೆಸ್ ಸಮರ್ಥವಾಗಿ ಎದುರಿಸಿ ಅಧಿಕಾರಕ್ಕೆ ಬರಲಿದೆ. ಅದಕ್ಕೆ ಎಲ್ಲ ಕಾರ್ಯಕರ್ತರು ಮುಖಂಡರು ಕೈ ಜೋಡಿಸಬೇಕು ಎಂದು ಕರೆ ನೀಡಿದರು.
ಒಟ್ಟಾಗಿ ದುಡಿಯಬೇಕು: ಮಾಜಿ ಶಾಸಕ ಪುಟ್ಟೇಗೌಡ ಮಾತನಾಡಿ, ಕಾಂಗ್ರೆಸ್ ಸರ್ಕಾರ ಉತ್ತಮ ಆಡಳಿತ ನಡೆಸುತ್ತಿರುವುದರಿಂದ ಬರುವ ಲೋಕಸಭಾ ಚುನಾವಣೆಯಲ್ಲಿ ಹಾಸನ ಲೋಕಸಭೆ ಕಾಂಗ್ರೆಸ್ ಅಭ್ಯರ್ಥಿ ಗೆಲುವಿಗೆ ಎಂಟು ವಿಧಾನಸಭಾ ಕ್ಷೇತ್ರಗಳಲ್ಲೂ ಒಟ್ಟಾಗಿ ದುಡಿಯಬೇಕು.
ಕುಮಾರಸ್ವಾಮಿ ಮತ್ತು ಯಡಿಯೂರಪ್ಪ ಇದೀಗ ಕೈ ಜೋಡಿಸಿದ್ದು ಹಾಸನ ಜಿಲ್ಲೆಯಲ್ಲಿ ಜೆಡಿಎಸ್ ಎಲ್ಲ ರಾಜಕೀಯ ದರ್ಭಾರು ನೋಡಿದ್ದು ಕಡೂರು ಕ್ಷೇತ್ರದಲ್ಲೂ ಶುರು ಮಾಡಿದ್ದಾರೆ ಎಂದು ಟೀಕಿಸಿದರು. ಪ್ರಾಸ್ತಾವಿಕವಾಗಿ ಮಾಜಿ ಶಾಸಕ ಮಲ್ಲಿಕಾರ್ಜುನ್ ಮಾತನಾಡಿ, ಸರ್ಕಾರ ಅಧಿಕಾರಕ್ಕೆ ಬಂದು 3 ತಿಂಗಳಾಗಿದೆ. ಇದು ಸಮಾಲೋಚನಾ ಮತ್ತು ಮಾರ್ಗದರ್ಶನದ ಸಭೆಯಾಗಿದೆ. ಲೋಕಸಭಾ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಪ್ರತಿ ಭೂತ್ ಮಟ್ಟದಿಂದ ಸಂಘಟಿಸಿ ಸದಸ್ಯತ್ವ ಮಾಡಿ ಗೆಲುವಿಗೆ ಶ್ರಮಿಸಬೇಕು ಎಂದರು.
ಮೂರ್ತಿ, ಮಂಜುನಾಥ್, ಎ.ಎನ್. ಮಹೇಶ್, ಕಡೂರು ಬೀರೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಕೆ.ಎಂ. ವಿನಾಯಕ, ಎಂ.ಎಚ್. ಚಂದ್ರಪ್ಪ, ಕೆ.ಎಸ್. ಆನಂದ್, ಸಾವಿತ್ರಿ ಗಂಗಪ್ಪ, ಕೆ.ಜಿ.ಶ್ರೀನಿವಾಸಮೂರ್ತಿ, ತೋಟದ ಮನೆ ಮೋಹನ್, ಚಂದ್ರಮೌಳಿ, ಪುರಸಭಾ ಸದಸ್ಯರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

