ಚಿಕ್ಕಮಗಳೂರು ನಗರದ ವಿವಿಧೆಡೆ ಸ್ವಾತಂತ್ರ್ಯ ದಿನಾಚರಣೆ
ಕ.ಪ್ರ.ವಾರ್ತೆ, ಚಿಕ್ಕಮಗಳೂರು, ಆ.15
ನಗರದ ವಿವಿಧೆಡೆ ಗುರುವಾರ 67ನೇ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮ ನಡೆಯಿತು.
ಜಿಪಂನಲ್ಲಿ ನಡೆದ ಕಾರ್ಯಕ್ರಮವನ್ನು ಜಿಪಂ ಅಧ್ಯಕ್ಷೆ ರೇಖಾ ಹುಲಿಯಪ್ಪಗೌಡ ಅವರು ಮಹಾತ್ಮಗಾಂಧಿಯವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು. ಈ ಸಂದರ್ಭದಲ್ಲಿ ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶಿವಶಂಕರ್ ಉಪಸ್ಥಿತರಿದ್ದರು.
ರೋಟರಿ ಕಾಫಿ ಲ್ಯಾಂಡ್: ಹಲವು ಹಿರಿಯರ ತ್ಯಾಗ ಬಲಿದಾನದಿಂದ ಲಭ್ಯವಾದ ಸ್ವಾತಂತ್ರ್ಯ ದೇಶದ ಪ್ರಗತಿಗೆ ಪೂರಕವಾಗಬೇಕೆಂದು ರೋಟರಿ ಕಾಫಿ ಲ್ಯಾಂಡ್ ಅಧ್ಯಕ್ಷ ನಾಸಿರ್ ಹುಸೇನ್ ಹೇಳಿದ್ದಾರೆ.
ರೋಟರಿ ಕಾಫಿ ಲ್ಯಾಂಡ್ ನೇತೃತ್ವದಲ್ಲಿ ಶಾಂತಿನಗರ (ಕಲ್ಲುದೊಡ್ಡಿ) ಕನ್ನಡ ಮತ್ತು ಉರ್ದು ಸರ್ಕಾರಿ ಪ್ರಾಥಮಿಕ ಶಾಲಾವರಣದಲ್ಲಿ ನಡೆದ ಸ್ವಾತಂತ್ರ್ಯೋತ್ಸವದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದ ಅವರು, ಇದು ದೇಶದ ಅತಿದೊಡ್ಡ ಹಬ್ಬ. ಮಹಾತ್ಮಗಾಂಧೀಜಿ ಅವರ ನೇತೃತ್ವದಲ್ಲಿ ಗಳಿಸಿದ ಸ್ವಾತಂತ್ರ್ಯ ದೇಶದ ಜನ ಸಮುದಾಯದ ಅಭಿವೃದ್ಧಿ, ಭಾವೈಕ್ಯತೆ ಮತ್ತು ನೆಮ್ಮದಿಯ ಬದುಕಿಗೆ ಸಹಕಾರಿ. ಬಡತನ, ಅನಕ್ಷರತೆ ಮತ್ತು ಅಸಮಾನತೆಯಿಂದ ಮುಕ್ತಿಯೇ ನಿಜವಾದ ಸ್ವಾತಂತ್ರ್ಯ ಎಂದ ಗಾಂಧೀಜಿ ಅವರ ಆಶಯದ ಬೆಳಕಿನಲ್ಲಿ ಮುನ್ನಡೆಯಬೇಕಾಗಿದೆ ಎಂದರು.
ಎಸ್.ಡಿ.ಎಂ.ಸಿ. ಅಧ್ಯಕ್ಷ ಗಣೇಶ್ ಧ್ವಜಾರೋಹಣ ನೆರವೇರಿಸಿದರು. ನಗರಸಭಾ ಸದಸ್ಯೆ ಸುರೇಖಾ ಸಂಪತ್ರಾಜ್, ಜಿಲ್ಲಾ ಪ್ರಾಥಮಿ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ದೇವರಾಜಪ್ಪ, ರೋಟರಿ ಕಾರ್ಯದರ್ಶಿ ನಾಗೇಂದ್ರ ಮುಖ್ಯ ಅತಿಥಿಗಳಾಗಿದ್ದರು. ಶಿಕ್ಷಕ ಪರಮೇಶ್ ಕಾರ್ಯಕ್ರಮ ನಿರೂಪಿಸಿದರು. ಇದೇ ಸಂದರ್ಭದಲ್ಲಿ ರೋಟರಿ ಕಾಫಿ ಲ್ಯಾಂಡ್ ವತಿಯಿಂದ ಎಲ್ಲ ಮಕ್ಕಳಿಗೆ ತಲಾ ಎರಡು ನೋಟ್ ಪುಸ್ತಕ ಹಾಗೂ ಸಿಹಿಯನ್ನು ವಿತರಿಸಲಾಯಿತು.
ತೇರಾಪಂಥ ಭವನ: ಭಾರತೀಯರ ಅಹಿಂಸೆ ಮತ್ತು ಸ್ವಾಭಿಮಾನದ ಪ್ರತೀಕ ಸ್ವಾತಂತ್ರ್ಯೋತ್ಸವ ಎಂದು ತೇರಾಪಂಥ್ ಸಭಾ ಅಧ್ಯಕ್ಷ ತಾರಾಚಂದ್ ಜೈನ್ ಹೇಳಿದ್ದಾರೆ.
ನಗರದ ಗುರುನಾಥ ವೃತ್ತದ ತೇರಾಪಂಥ ಭವನದ ಆವರಣದಲ್ಲಿ ನಡೆದ ಸ್ವಾತಂತ್ರ್ಯೋತ್ಸವದ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ಅಹಿಂಸಾ ಮಾರ್ಗವೇ ಭಾವೈಕ್ಯತೆ ಮತ್ತು ಭ್ರಾತೃತ್ವಕ್ಕೆ ಪ್ರೇರಣೆ. ಶತಮಾನಗಳ ದಾಸ್ಯದಿಂದ ಬಳಲಿದ ಭಾರತಕ್ಕೆ ಮಹಾತ್ಮಗಾಂಧೀಜಿ ಅವರ ನೇತೃತ್ವದಲ್ಲಿ ಅಹಿಂಸಾ ಮಾರ್ಗದಲ್ಲಿ ಹೋರಾಡಿ ಸ್ವಾತಂತ್ರ್ಯಗಳಿಸಿದ ಪ್ರಪಂಚದ ಏಕೈಕ ರಾಷ್ಟ್ರ ಭಾರತ. ವಿಶ್ವಕ್ಕೆ ಭಾರತ ಮಾರ್ಗದರ್ಶಿಯಾಗಿ ರೂಪುಗೊಳ್ಳಲು ನಾವೆಲ್ಲರೂ ಸಂಕಲ್ಪಿಸಬೇಕೆಂದರು.
ಜೈನ ಸಂಘದ ಅಧ್ಯಕ್ಷ ಗೌತಮಚಂದ ಸಿಯಾಲ್ ಮಾತನಾಡಿದರು. ತೇರಾಪಂಥ್ ಟ್ರಸ್ಟ್ ಅಧ್ಯಕ್ಷ ಅಶೋಕಕುಮಾರ್ ಡೋಸಿ, ಯುವ ಪರಿಷತ್ ಅಧ್ಯಕ್ಷ ಅನಿಲ್ ಸಕ್ಲೇಚಾ, ಮಹಿಳಾಮಂಡಳಿ ಅಧ್ಯಕ್ಷೆ ಮಂಜುಳಾ ಬನ್ಸಾಲ್, ನಗರಸಭಾ ಮಾಜಿ ಉಪಾಧ್ಯಕ್ಷ ಗೌತಮಚಂದ ಗಾದಿಯಾ ಉಪಸ್ಥಿತರಿದ್ದರು. ತೇರಾಪಂಥ್ ಸಭಾ ಉಪಾಧ್ಯಕ್ಷ ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ಮಹಾವೀರನಾಹರ್ ಸ್ವಾಗತಿಸಿ, ಸುರೇಂದ್ರಗೋಕರು ವಂದಿಸಿದರು.
ಟಿಂಬರ್ ವರ್ಕರ್ಸ್ ಅಸೋಸಿಯೇಷನ್: ನಗರದ ಎನ್ಎಂಸಿ ವೃತ್ತದಲ್ಲಿ ಮಲೆನಾಡು ಟಿಂಬರ್ ವರ್ಕರ್ಸ್ ಅಸೋಸಿಯೇಷನ್ ಆಶ್ರಯದಲ್ಲಿ ಸ್ವಾತಂತ್ರ್ಯದಿನಾಚರಣೆ ನಡೆಯಿತು.
ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಸಂಘದ ಅಧ್ಯಕ್ಷ ಕೆ.ಎಂ. ಅಬ್ದುಲ್ ಜಬ್ಬಾರ್, ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಕಾರ್ಮಿಕರ ಪಾತ್ರ ಪ್ರಧಾನವಾಗಿತ್ತು. ಬ್ರಿಟಿಷರ ವಿರುದ್ಧದ ಹೋರಾಟ ಬಲಗೊಳ್ಳಲು ಅಂದು ಪ್ರಬಲವಾಗಿದ್ದ ಕಾರ್ಮಿಕರ ಚಳುವಳಿಯೇ ಮುಖ್ಯ ಕಾರಣವಾಗಿತ್ತು. ಆದರೆ, ಸ್ವಾತಂತ್ರ ಭಾರತದಲ್ಲಿ ಕಾರ್ಮಿಕರ ಪರಿಸ್ಥಿತಿ ಶೋಚನೀಯವಾಗಿದೆ. ಕಾರ್ಮಿಕರ ಪರವಾದ ನೀತಿಗಳನ್ನು ಸಮರ್ಪಕವಾಗಿ ಜಾರಿಗೊಳಿಸಲು ಸರ್ಕಾರಗಳು ಆಸಕ್ತಿ ವಹಿಸುತ್ತಿಲ್ಲ ಎಂದರು.
ಬಿ. ಅಮ್ಜದ್ ಮಾತನಾಡಿ, ಆಡಳಿತದ ಎಲ್ಲಾ ಹಂತಗಳಲ್ಲೂ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಸಮಾಜದಲ್ಲಿ ಅಪರಾಧ ಹೆಚ್ಚುತ್ತಲೇ ಇದ್ದು, ಸಾಮಾಜಿಕ ವ್ಯವಸ್ಥೆ ರೋಗ ಪೀಡಿತವಾಗಿದೆ. ಸಮಾಜದಲ್ಲಿ ಬೇರು ಬಿಟ್ಟಿರುವ ಭ್ರಷ್ಟಾಚಾರ, ಜಾತೀಯತೆಯಿಂದ ಪ್ರಜಾತಂತ್ರ ವ್ಯವಸ್ಥೆ ದುರ್ಬಲಗೊಳ್ಳುತ್ತಿದೆ ಎಂದು ವಿಷಾಧ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಸಂಘದ ಪ್ರಧಾನ ಕಾರ್ಯದರ್ಶಿ ಎಂ. ಧರ್ಮೇಶ್, ಉಪಾಧ್ಯಕ್ಷ ದೇವರಾಜ್, ಖಜಾಂಚಿ ಎನ್.ಎ. ಸುಲೇಮಾನ್, ನಾಗರಾಜ್ ಉಪಸ್ಥಿತರಿದ್ದರು.
ಎಂಇಎಸ್: ಚಿಕ್ಕಮಗಳೂರಿನ ಎಂಇಎಸ್ ಕಾಲೇಜಿನಲ್ಲಿ ನಡೆದ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಹಿರಿಯ ಸ್ವಾತಂತ್ರ್ಯ ಹೋರಾಟಗಾರರಾದ ಎಸ್.ವಿ.ಟಿ. ಗುಪ್ತಾ ಅವರು ಧ್ವಜಾರೋಹಣ ನೆರವೇರಿಸಿದರು.
ಬಳಿಕ ಮಾತನಾಡಿದ ಅವರು, ಮನುಷ್ಯ ಕಲಾವಿದ ಮತ್ತು ಏನೂ ಬೇಕಾದರೂ ಆಗಬಹುದು. ಆದರೆ, ಸ್ವಾತಂತ್ರ್ಯ ಹೋರಾಟಗಾರನಾಗಲು ಸಾಧ್ಯವಿಲ್ಲ. ಅಮೆರಿಕಾದ ಅಧ್ಯಕ್ಷ ಓಬಾಮಾ ಅವರು ತಮಗೆ ಮಹಾತ್ಮಗಾಂಧಿ ಹಾಗೂ ನೆಲ್ಸನ್ ಮಂಡೇಲಾ ಸ್ಪೂರ್ತಿ ಎಂದು ಹೇಳಿದ್ದಾರೆ. ಅಂತಹ ಮಹಾತ್ಮರನ್ನು ಪಡೆದ ಈ ಭೂಮಿ ಧನ್ಯ. ಅವರ ಕನಸಿನಂತೆ ಭವ್ಯ ಭಾರತವನ್ನು ರಾಮರಾಜ್ಯವನ್ನಾಗಿ ಮಾಡುವುದು ನಮ್ಮೆಲ್ಲರ ಆಧ್ಯ ಕರ್ತವ್ಯವಾಗಿದೆ ಎಂದರು.
ಸಂಸ್ಥೆಯ ಗೌರವ ಕಾರ್ಯದರ್ಶಿ ಡಾ. ಡಿ.ಎಲ್. ವಿಜಯಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಸಂಸ್ಥೆಯ ನಿರ್ದೇಶಕ ಜಯಶ್ರೀ ಜೋಷಿ, ಡಾ.ಜೆ.ಪಿ. ಕೃಷ್ಣೇಗೌಡ ಮಾತನಾಡಿದರು. ಕಾಲೇಜಿನ ಪ್ರಾಚಾರ್ಯ ಜಿ.ಪಿ. ಪುಷ್ಪಲತಾ ಉಪಸ್ಥಿತರಿದ್ದರು. ಚಿಕ್ಕಮಗಳೂರಿನ ಜಿಲ್ಲಾ ಆಟದ ಮೈದಾನದಲ್ಲಿ ಗುರುವಾರ ನಡೆದ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಶಾಲಾ ಮಕ್ಕಳಿಂದ ನೃತ್ಯ ಪ್ರದರ್ಶನ ನಡೆಯಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

