ಅತಿವೃಷ್ಟಿ; ಬೆಳೆ ಹಾನಿ ಪ್ರದೇಶಕ್ಕೆ ತಜ್ಞರ ತಂಡ ಭೇಟಿ
ಕ.ಪ್ರ.ವಾರ್ತೆ ಟಿ ಚಿಕ್ಕಮಗಳೂರು ಟಿ ಆ.18
ಜಿಲ್ಲೆಯಲ್ಲಿ ಸತತವಾಗಿ ಸುರಿದ ಭಾರೀ ಮಳೆಯಿಂದಾಗಿ ಕಾಫಿ, ಅಡಕೆ, ಆಲೂಗೆಡ್ಡೆ, ಈರುಳ್ಳಿ ಸೇರಿದಂತೆ ತೋಟಗಾರಿಕೆ ಬೆಳೆಗಳಿಗೆ ಅಪಾರ ನಷ್ಟ ಸಂಭವಿಸಿದೆ.
ಅತಿವೃಷ್ಟಿಯಿಂದಾಗಿ ಜಿಲ್ಲೆಯ 7 ತಾಲೂಕುಗಳಲ್ಲಿ ರೈತರಿಗೆ ಹಾಗೂ ಬೆಳೆಗಾರರಿಗೆ ಕೋಟ್ಯಂತರ ರುಪಾಯಿ ನಷ್ಟವಾಗಿದೆ. ರಾಜ್ಯ ಸರ್ಕಾರದ ಸೂಚನೆಯ ಮೇರೆಗೆ ಶನಿವಾರ ತೋಟಗಾರಿಕೆ ಇಲಾಖೆಯ ಜಂಟಿ ನಿರ್ದೇಶಕ ಪರಶಿವಮೂರ್ತಿ ತಮ್ಮ ಇಲಾಖೆಯ ಅಧಿಕಾರಿಗಳೊಂದಿಗೆ ತರೀಕೆರೆ, ಕರಕುಚ್ಚಿ, ಕುಂಟಿನಮಡು, ನೇರಲಕೆರೆ, ಅಜ್ಜಂಪುರ, ಗಿರಿಯಾಪುರ, ಸಖರಾಯಪಟ್ಟಣ, ಬೀಕನಹಳ್ಳಿ, ಹಂಪಾಪುರ, ಆಲ್ದೂರು ಪ್ರದೇಶಗಳಿಗೆ ಭೇಟಿ ನೀಡಿ ಮಳೆಯಿಂದ ಹಾನಿಗೊಳಗಾದ ವಿವಿಧ ಬೆಳೆಗಳನ್ನು ವೀಕ್ಷಣೆ ಮಾಡಿದರು.
ಅಂಗಮಾರಿ ರೋಗ: ಇದೇ ಸಂದರ್ಭದಲ್ಲಿ ರೈತರು ಸಮೀಕ್ಷೆ ತಂಡದ ಎದುರು ತಮ್ಮ ಅಳಲನ್ನು ತೋಡಿಕೊಂಡರು. ಆಲೂಗಡ್ಡೆ ಬೆಳೆಗೆ ಕಳೆದ ಐದು ವರ್ಷಗಳಿಂದ ಅಂಗಮಾರಿ ರೋಗ ಕಂಡು ಬರುತ್ತಿದ್ದು, ಸಾವಿರಾರು ರುಪಾಯಿ ಖರ್ಚು ಮಾಡಿ ಬೆಳೆದ ಆಲೂಗೆಡ್ಡೆ ಅಂಗಮಾರಿ ರೋಗದಿಂದಾಗಿ ಪೂರ್ಣ ಪ್ರಮಾಣದಲ್ಲಿ ನಾಶವಾಗಿದೆ. ಈ ರೋಗ ನಿವಾರಣೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕು ಎಂದು ಆಗ್ರಹಿಸಿದರು.
ಪ್ರಕೃತಿ ವಿಕೋಪ: ಆಲೂಗಡ್ಡೆ ಬೆಳೆಗೆ ವಿಮೆಯನ್ನು ಪಾವತಿ ಮಾಡಲು ಹೋದ ಸಂದರ್ಭದಲ್ಲಿ ಅಧಿಕಾರಿಗಳಿಂದ ಸರಿಯಾದ ಸ್ಪಂಧನೆ ಸಿಗದೆ, ಪಾವತಿಯು ನಿಖರವಾಗಿ ಆಗಿರುವುದಿಲ್ಲ. ಪ್ರಕೃತಿ ವಿಕೋಪದಿಂದ ಜಿಲ್ಲೆಯಲ್ಲಿ ಬೆಳೆ ಸಂಪೂರ್ಣ ನಾಶವಾಗಿದ್ದು, ರೈತನ ಬದುಕು ಅತಂತ್ರವಾಗಿದೆ, ರೈತರ ನೆರವಿಗೆ ಸರ್ಕಾರ ಸ್ಪಂಧಿಸಬೇಕೆಂದು ಒತ್ತಾಯಿಸಿದರು. ಮುಂಗಾರಿನಲ್ಲಿ ಆಲೂಗೆಡ್ಡೆ ಸೇರಿದಂತೆ ತರಕಾರಿ ಬೆಳೆಯನ್ನು ಬೆಳೆಯಲಾಗಿದ್ದು, ಮಳೆಯಿಂದಾಗಿ ಇಡೀ ತರಕಾರಿ ಬೆಳೆಯೂ ನಾಶವಾಗಿದೆ. ಮುಂದೆ ಜೀವನ ನಡೆಸಲು ಕಷ್ಟವಾಗಿದೆ ಎಂದು ರೈತರು ಹೇಳಿದರು.
ವೈಜ್ಞಾನಿಕ: ಮಳೆ ಹಾನಿ ಪ್ರದೇಶಕ್ಕೆ ಭೇಟಿ ನೀಡಿದ ನಂತರ ತೋಟಗಾರಿಕೆ ಇಲಾಖೆಯ ಜಂಟಿ ನಿರ್ದೇಶಕ ಪರಶಿವಮೂರ್ತಿ ಅವರು ಜಿಲ್ಲಾಧಿಕಾರಿ ಶೇಖರಪ್ಪ ಅವರನ್ನು ಭೇಟಿ ಮಾಡಿದರು. ಇದೇ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾಧಿಕಾರಿ, ಜಿಲ್ಲೆಯಲ್ಲಿ ವಾಡಿಕೆ ಮಳೆಗಿಂತ ಎರಡು ಪಟ್ಟು ಮಳೆಯಿಂದಾಗಿ ಬೆಳೆಹಾನಿ ಸಂಭವಿಸಿದ್ದು, ಹಾನಿ ಅಂದಾಜು ವೈಜ್ಞಾನಿಕವಾಗಿರಬೇಕೆಂದು ಸಮೀಕ್ಷಾ ತಂಡದ ಅಧಿಕಾರಿಗಳಿಗೆ ಸಲಹೆ ನೀಡಿದರು.
ತೀವ್ರ ಹಾನಿ: ಜಿಲ್ಲೆಯಲ್ಲಿ ಅತಿವೃಷ್ಟಿಯಿಂದಾಗಿ ತೋಟಗಾರಿಕೆ ಬೆಳೆಗಳಾದ ಅಡಕೆ, ಕಾಳು ಮೆಣಸಿಗೆ ಕೊಳೆ ರೋಗ, ಆಲೂಗಡ್ಡೆಗೆ ಅಂಗಮಾರಿ ರೋಗ ಹಾಗೂ ತರಕಾರಿ ಬೆಳೆಗಳಾದ, ಬೀನ್ಸ್, ಟೊಮೇಟೊ, ಬಟಾಣಿ, ಮೆಣಸಿನಕಾಯಿ ಮತ್ತಿತರ ಬೆಳೆಗಳು ತೀವ್ರ ಹಾನಿಯಾಗಿದ್ದು, ಇವುಗಳ ತೀವ್ರತೆಯನ್ನು ಆಧಾರಿಸಿ ವೈಜ್ಞಾನಿಕ ಬೆಳೆಹಾನಿಯನ್ನು ಅಂದಾಜಿಸಬೇಕೆಂದರು.
ತೋಟಗಾರಿಕಾ ಇಲಾಖೆಯವರು ಕಂದಾಯ ಇಲಾಖೆಯ ರೆವೆನ್ಯೂ ಇನ್ಸ್ಪೆಕ್ಟರ್, ಗ್ರಾಮ ಲೆಕ್ಕಿಗರು, ಸಮನ್ವಯದೊಂದಿಗೆ ಎಷ್ಟು ವಿಸ್ತೀರ್ಣದ ಬೆಳೆ ಹಾನಿಯಾಗಿದೆ ಎಂದು ನಿಖರವಾಗಿ ಮಾಹಿತಿ ಸಂಗ್ರಹಿಸಬೇಕು. ನೈಜ ಬೆಳೆ ಹಾನಿಯ ಬಗ್ಗೆ ಸರ್ಕಾರದ ಗಮನ ಸೆಳೆದು ರೈತರಿಗೆ ಗರಿಷ್ಠ ಪರಿಹಾರ ದೊರಕಿಸಿಕೊಡಬೇಕೆಂದು ತಿಳಿಸಿದರು.
ತೋಟಗಾರಿಕಾ ಇಲಾಖೆ ಜಂಟಿ ನಿರ್ದೇಶಕ ಪರಶಿವಮೂರ್ತಿ ಮಾತನಾಡಿ, ತರೀಕೆರೆ, ಕರಕುಚ್ಚಿ, ಕುಂಟಿನಮಡು, ನೇರಲಕೆರೆ, ಅಜ್ಜಂಪುರ, ಗಿರಿಯಾಪುರ, ಸಖರಾಯಪಟ್ಟಣ, ಬೀಕನಹಳ್ಳಿ, ಹಂಪಪುರ, ಆಲ್ದೂರು ಭಾಗದಲ್ಲಿ ತೋಟಗಾರಿಕೆ ಬೆಳೆಗಳ ಸಮೀಕ್ಷೆ ನಡೆಸಿದ್ದೇವೆ. ಹೆಚ್ಚಿನ ಮಳೆಯಿಂದಾಗಿ ಕೊಳೆ ರೋಗದಿಂದಾಗಿ ಅಡಕೆ ಬೆಳೆ ಭಾಗಶಃ ಸಂಪೂರ್ಣ ನಾಶವಾಗಿದೆ, ಆಲೂಗಡ್ಡೆ ಬೆಳೆಗೆ ಅಂಗಮಾರಿ ರೋಗದಿಂದ ತೀವ್ರ ಬೆಳೆ ಹಾನಿಯಾಗಿದೆ ಎಂದರು.
ಸತತ ಮಳೆಯಿಂದಾಗಿ ತರಕಾರಿ ಬೆಳೆಗೆ ಹೆಚ್ಚಿನ ಪ್ರಮಾಣದ ಹಾನಿಯಾಗಿದೆ ಎಂದ ಅವರು, ಕಾಳು ಮೆಣಸು ಬಳ್ಳಿಗಳಲ್ಲಿ ಅತಿವೃಷ್ಟಿಯಿಂದಾಗಿ ಕೊಳೆ ರೋಗ ಹೆಚ್ಚಾಗಿದ್ದು, ಕಾಯಿ ಗೊಂಚಲು ಕೊಳೆಯುವಿಕೆಯಾಗಿದೆ ಎಂದರು. ಬೆಳೆ ಬೆಳೆಯುವ ರೈತರು ಹಾನಿಯಿಂದಾಗಿ ಆರ್ಥಿಕ ಸಂಕಷ್ಟದಲ್ಲಿದ್ದಾರೆ. ಬೆಳೆನಷ್ಟದ ಬಗ್ಗೆ ನಿಖರವಾದ ಮಾಹಿತಿಯನ್ನು ತಯಾರಿಸಿ ಸರ್ಕಾರಕ್ಕೆ ಸಲ್ಲಿಸಿ ನ್ಯಾಯಯುತವಾದ ಪರಿಹಾರ ನೀಡಲು ಶಿಫಾರಸ್ಸು ಮಾಡಲಾಗುವುದು ಎಂದು ಹೇಳಿದರು.
ಮಾಜಿ ಸಿಎಂ ಭೇಟಿ: ಮಳೆಯಿಂದಾಗಿ ಬೆಳೆ ಹಾನಿಯಾಗಿರುವ ಚಿಕ್ಕಮಗಳೂರು ತಾಲೂಕಿನ ಹಂಪಾಪುರ ಗ್ರಾಮಕ್ಕೆ ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡ ಅವರು ಶನಿವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಅತಿಯಾದ ಮಳೆಯಿಂದಾಗಿ ಆಲೂಗೆಡ್ಡೆಗೆ ಬಂದಿರುವ ಅಂಗಮಾರಿ ರೋಗವನ್ನು ವೀಕ್ಷಿಸಿದರು. ಇದೇ ಸಂದರ್ಭದಲ್ಲಿ ಆಲೂಗೆಡ್ಡೆ ಬೆಳೆಗಾರರು ತಮ್ಮ ಅಳಲನ್ನು ತೋಡಿಕೊಂಡರು. ಶೃಂಗೇರಿ ಕ್ಷೇತ್ರದ ಶಾಸಕ ಡಿ.ಎನ್. ಜೀವರಾಜ್, ಜಿಪಂ ಅಧ್ಯಕ್ಷ ರೇಖಾ ಹುಲಿಯಪ್ಪಗೌಡ, ಬಿಜೆಪಿ ಮುಖಂಡರಾದ ಎಂ.ಕೆ. ಪ್ರಾಣೇಶ್, ವರಸಿದ್ಧಿ ವೇಣುಗೋಪಾಲ್, ದೇವರಾಜ್ ಶೆಟ್ಟಿ ಹಾಜರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

