ಚಿಕ್ಕಮಗಳೂರು

25 ಕುಗ್ರಾಮಗಳಿಗೆ ಸೌರ ವಿದ್ಯುತ್

Published On :

ಕ.ಪ್ರ.ವಾರ್ತೆ, ಚಿಕ್ಕಮಗಳೂರು,  ಡಿ.9
ಜಿಲ್ಲೆಯ ಪಶ್ಚಿಮಘಟ್ಟ ಹಾಗೂ ನಕ್ಸಲ್ ಪೀಡಿತ ಪ್ರದೇಶಗಳಲ್ಲಿರುವ 25 ಕುಗ್ರಾಮಗಳಿಗೆ ಸೌರ ವಿದ್ಯುತ್ ಕಲ್ಪಿಸಲು ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ ಎಂದು ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಎ.ಎನ್. ಮಹೇಶ್ ಹೇಳಿದ್ದಾರೆ.
ರಾಜೀವ್ ಗಾಂಧಿ ಗ್ರಾಮೀಣ ವಿದ್ಯುದೀಕರಣ ಯೋಜನೆಯಡಿ ಸೌರ ವಿದ್ಯುತ್ ಕಲ್ಪಿಸಲು ಅನುಮೋದನೆ ಸಿಕ್ಕಿದೆ ಎಂದು ಸುದ್ದಿಗೋಷ್ಠಿಯಲ್ಲಿ ಸೋಮವಾರ ತಿಳಿಸಿದರು.
25 ಗ್ರಾಮಗಳಿಗೆ ವಿದ್ಯುತ್ ಸೌಲಭ್ಯ ಕಲ್ಪಿಸಲು 10 ಕೋಟಿ ರುಪಾಯಿ ವೆಚ್ಚವಾಗಲಿದೆ. ಈ ಹಣವನ್ನು ಕೇಂದ್ರ ಸರ್ಕಾರ ಶೇ. 90 ರಷ್ಟು ಹಾಗೂ ಇನ್ನುಳಿದ ಶೇ. 10 ರಷ್ಟು ಹಣವನ್ನು ಗಿರಿಜನ ಅಭಿವೃದ್ಧಿ ಇಲಾಖೆಯಿಂದ ಭರಿಸಲಾಗುವುದು ಎಂದ ಅವರು, ಜಿಲ್ಲೆ ಮುಂಡಗಾರು, ತಳವಂತಿ ಕೂಡಿಗೆ, ತರೋಳಿ ಕೂಡಿಗೆ, ಮೆಣಸಿನ ಹಾಡ್ಯ, ಕೊಳೊಡಿ ಗಿರಿಜನ ಕಾಲೋನಿ, ಕಾರ್ಲೆ, ಚರಸಲು, ಹೊರಾಣೆ ಯಾದಗಾರು, ಹುಲತಾಳು, ಹರಲಾನೆ, ಇಡುಗುಂಡ, ಗರ್ಗೆ, ಮಣಮಣಾಹಾರ, ಪರ್ಪಲೆ, ತರಿಕೊಡ್ಲು, ಬಂದೆಹಕ್ಲು, ಎಲೆನೀರ್, ಗೋಳಿಗುಂಡಿ, ಕಚಿಗೆ, ಅಮ್ಮಡ್ಲು, ಗಂಧರ್ವಗಿರಿ, ಗುಂಡ್ಯಾಹುಮ್ಲ, ಹಗಲಕಂಚಿ, ಕೊರೆಕೊಳಲು, ಯಲಸಾರು ಗ್ರಾಮಗಳಿಗೆ ವಿದ್ಯುತ್ ಸಂಪರ್ಕದ ಸೌಲಭ್ಯ ಸಿಗಲಿದೆ ಎಂದು ಹೇಳಿದರು.
ಇತರೆ ಜಿಲ್ಲೆಗಳಿಗೂ ಮಂಜೂರಾತಿ: ಉಡುಪಿ- ಚಿಕ್ಕಮಗಳೂರು ಸಂಸದ ಕೆ. ಜಯಪ್ರಕಾಶ್ ಹೆಗಡೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದರ ಮೇರೆಗೆ ಈ ಯೋಜನೆಗೆ ಅನುಮತಿ ದೊರೆತಿದ್ದು, ಚಿಕ್ಕಮಗಳೂರು ಜಿಲ್ಲೆಯ ಜತೆಗೆ ರಾಜ್ಯದ ಇತರೆ ಜಿಲ್ಲೆಗಳಿಗೂ ಮಂಜೂರಾತಿ ದೊರೆತಿದ್ದು, ಈ ಯೋಜನೆಗೆ 78 ಕೋಟಿ ರುಪಾಯಿ ವೆಚ್ಚವಾಗಲಿದೆ ಎಂದು ತಿಳಿಸಿದರು.
ಕೇಂದ್ರ ಪ್ರವಾಸೋದ್ಯಮ ಇಲಾಖೆ ವಿವಿಧ ಚಟುವಟಿಕೆಯ ಅಡಿಯಲ್ಲಿ ಜಿಲ್ಲೆಯ ಪ್ರವಾಸೋದ್ಯಮ ಅಭಿವೃದ್ಧಿಗಾಗಿ 2011-12ನೇ ಸಾಲಿನಲ್ಲಿ 52.41 ಕೋಟಿ ರುಪಾಯಿಗಳನ್ನು ಅಂದಾಜಿಸಿದ್ದು, ಸರ್ಕಾರ 33.05 ಕೋಟಿ ರು.ಗಳನ್ನು ಬಿಡುಗಡೆ ಮಾಡಿದೆ ಎಂದು ಹೇಳಿದರು.
ರಾಜ್ಯ ಸರ್ಕಾರದ ವಿವಿಧ ನಗರ ಸ್ಥಳೀಯ ಸಂಸ್ಥೆಗಳಿಗೆ 2013-14ನೇ ಸಾಲಿನಲ್ಲಿ ಎಸ್.ಎಫ್.ಸಿ. ವಿಶೇಷ ಅನುದಾನವನ್ನು ಸಂಸದ ಹೆಗಡೆ ಮತ್ತು ವಿಧಾನಪರಿಷತ್ ಸದಸ್ಯೆ ಗಾಯತ್ರಿ ಶಾಂತೇಗೌಡರ ಒತ್ತಾಯದ ಮೇರೆಗೆ ಚಿಕ್ಕಮಗಳೂರಿನ ರತ್ನಗಿರಿ ಬೋರೆಯಲ್ಲಿರುವ ಮಹಾತ್ಮಗಾಂಧಿ ಮಕ್ಕಳ ಉದ್ಯಾನವನದ ಅಭಿವೃದ್ಧಿಗಾಗಿ 1.6 ಕೋಟಿ ರೂ.ಗಳನ್ನು ನೀಡಲು ತಾತ್ವಿಕ ಅನುಮೋದನೆ ನೀಡಿದೆ ಎಂದರು.
ತರೀಕೆರೆ ಕುಡಿವ ನೀರಿಗೆ 3 ಕೋಟಿ ಅನುದಾನ:  ಸಂಸದ ಕೆ. ಜಯಪ್ರಕಾಶ್ ಹೆಗ್ಡೆ ಹಾಗೂ ತರೀಕೆರೆ ಶಾಸಕ ಶ್ರೀನಿವಾಸ್ ಮನವಿಯ ಮೇರೆಗೆ ಸರ್ಕಾರ 2013-14 ನೇ ಸಾಲಿನ ಎಸ್.ಎಫ್.ಸಿ. ಯೋಜನೆಯಲ್ಲಿ ತರೀಕೆರೆ ಪಟ್ಟಣಕ್ಕೆ 4 ನೇ ಹಂತದ ಕುಡಿಯುವ ನೀರಿನ ಅನುಷ್ಟಾನಕ್ಕಾಗಿ 3 ಕೋಟಿ ರು. ವಿಶೇಷ ಅನುದಾನವನ್ನು ಒದಗಿಸಲು ತಾತ್ವಿಕ ಅನುಮೋದನೆ ನೀಡಿದೆ ಎಂದು ಹೇಳಿದರು.
ಬೆಂಬಲ ಬೆಲೆಯಲ್ಲಿ ಮೆಕ್ಕೆಜೋಳ ಖರೀದಿ ಮಾಡಲು ಕಡೂರಿನಲ್ಲಿ ಖರೀದಿ ಕೇಂದ್ರವನ್ನು ಜಿಲ್ಲಾಡಳಿತ ತೆರೆದಿದೆ. ಇದೇ ಕೇಂದ್ರದಲ್ಲಿ ತರೀಕೆರೆ ಮತ್ತು ಚಿಕ್ಕಮಗಳೂರು ತಾಲೂಕುಗಳ ಮೆಕ್ಕೆಜೋಳ ಖರೀದಿ ಮಾಡಲು ಜಿಲ್ಲಾಧಿಕಾರಿ ಸಮ್ಮತಿಸಿದ್ದಾರೆ ಎಂದರು. ಸುದ್ದಿಗೋಷ್ಠಿಯಲ್ಲಿ ತಾಪಂ ಮಾಜಿ ಅಧ್ಯಕ್ಷ ಉದ್ದಯ್ಯ, ಮುಖಂಡ ಜಾನ್ ಕಣ್ಣನ್ ಹಾಗೂ ಜೀತೇಂದ್ರ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.