ಚಿಕ್ಕಮಗಳೂರು

ನಕ್ಸಲ್ ಪ್ರದೇಶಾಭಿವೃದ್ಧಿಗೆ ವಿಶೇಷ ಸಭೆ

Published On :

ಚಿಕ್ಕಮಗಳೂರು: ಜಿಲ್ಲೆಯ ನಕ್ಸಲ್ ಪೀಡಿತ ಪ್ರದೇಶಗಳಲ್ಲಿ ನೆನಗುದಿಗೆ ಬಿದ್ದಿರುವ ಮೆಸ್ಕಾಂ ಕಾಮಗಾರಿಯನ್ನು ಚುರುಕುಗೊಳಿಸುವುದು ಸೇರಿದಂತೆ ಖರ್ಚಾಗದೆ ಉಳಿದಿರುವ ಅನುದಾನವನ್ನು ಮೂಲಭೂತ ಸೌಲಭ್ಯ ನೀಡಲು ಬಳಕೆ ಮಾಡುವ ಸಂಬಂಧ ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಿ ವಿಶೇಷ ಸಭೆಯನ್ನು ಕರೆಯಲು ಜಿಲ್ಲಾ ಪಂಚಾಯ್ತಿ ಸಾಮಾನ್ಯ ಸಭೆ ಗುರುವಾರ ನಿರ್ಣಯ ಕೈಗೊಂಡಿತು.
ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ಗುರುವಾರ ನಡೆದ ಜಿಪಂನ ಮುಂದುವರೆದ ಸಾಮಾನ್ಯಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಪಂ ಅಧ್ಯಕ್ಷೆ ರೇಖಾ ಹುಲಿಯಪ್ಪಗೌಡ, ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಿ, ಜಿಪಂ ಸದಸ್ಯರೊಂದಿಗೆ ವಿಶೇಷ ಸಭೆಯನ್ನು ನಡೆಸಲಾಗುವುದು ಎಂದು ಹೇಳಿದರು.
5 ಕೋಟಿ ಅನುದಾನ: ನಕ್ಸಲ್ ಪೀಡಿತ ಪ್ರದೇಶಗಳ ಅಭಿವೃದ್ಧಿಗೆ ರಾಜ್ಯ ಸರ್ಕಾರ ತಲಾ 5 ಕೋಟಿ ಬಿಡುಗಡೆ ಮಾಡಿದೆ. ಈ ಪ್ರದೇಶಗಳ ಅಭಿವೃದ್ಧಿಯ ಜತೆಗೆ ಈ ಭಾಗದಲ್ಲಿರುವ ನಕ್ಸಲ್ ನಿಗ್ರಹ ಪಡೆಯ ಕ್ಯಾಂಪ್ಗಳಿಗೆ ಮೂಲಭೂತ ಸೌಲಭ್ಯ ನೀಡಲು ಹಣವನ್ನು ಮೀಸಲಿಡಲಾಗಿತ್ತು. ಆದರೆ, ಈ ಹಣವನ್ನು ಜಿಲ್ಲಾಡಳಿತ ಹಿಂದಕ್ಕೆ ಪಡೆದುಕೊಂಡಿದೆ. ಅದುದರಿಂದ ಎಎನ್ಎಫ್ ಕ್ಯಾಂಪ್ಗಳಿಗೆ ಪೊಲೀಸ್ ಇಲಾಖೆಯಿಂದಲೇ ಮೂಲಭೂತ ಸೌಲಭ್ಯವನ್ನು ನೀಡಲಾಗುತ್ತಿದೆ ಎಂದು ಜಿಪಂ ಸದಸ್ಯ ರಂಗನಾಥ್ ಹೇಳಿದರು.
ವಿದ್ಯುತ್ ಸಂಪರ್ಕ ನೀಡಿ: ಹಿಂದಕ್ಕೆ ಪಡೆದಿರುವ ಹಣವನ್ನು ಇದೇ ಪ್ರದೇಶಗಳ ಅಭಿವೃದ್ಧಿಗೆ ಹಾಗೂ ಮೂಲಭೂತ ಸೌಲಭ್ಯ ಕಲ್ಪಿಸಲು ಬಳಕೆ ಮಾಡಬೇಕು. ಹಣದ ಕೊರತೆಯಿಂದ ನೆನಗುದಿಗೆ ಬಿದ್ದಿರುವ ವಿದ್ಯುತ್ ಸಂಪರ್ಕದ ಕಾಮಗಾರಿಯನ್ನು ತ್ವರಿತಗತಿಯಲ್ಲಿ ಕೈಗೆತ್ತಿಕೊಳ್ಳಬೇಕು ಎಂದು ರಂಗನಾಥ್ ಸಲಹೆ ನೀಡಿದರು. ಇದಕ್ಕೆ ಧ್ವನಿಗೂಡಿಸಿದ ಜಿಪಂ ಸದಸ್ಯ ಶಿವಶಂಕರ್, ಭೂ ಸೇನಾ ನಿಗಮ ಹಾಗೂ ಮೆಸ್ಕಾಂ ನಡುವಿನ ಜಟಾಪಟಿಯಿಂದ ನಕ್ಸಲ್ ಪೀಡಿತ ಪ್ರದೇಶದಲ್ಲಿ ನಿರೀಕ್ಷಿತ ಮಟ್ಟದಲ್ಲಿ ಕಾಮಗಾರಿಗಳು ಆಗುತ್ತಿಲ್ಲ ಎಂದು ಹೇಳಿದಾಗ ವಿದ್ಯುತ್ ಸಂಪರ್ಕ ಹಾಗೂ ಇತರೆ ಕಾಮಗಾರಿಗಳಿಗೆ ಖರ್ಚಾಗದೆ ಉಳಿದಿರುವ ಹಣವನ್ನು ಬಳಕೆ ಮಾಡುವ ಸಂಬಂಧ ಸಭೆಯನ್ನು ಕರೆಯುವಂತೆ ಜಿಲ್ಲಾದಿಕಾರಿಗಳಿಗೆ ಮನವಿ ಮಾಡಲಾಗುವುದು ಎಂದು ತಿಳಿಸಿದರು.
ವಾಡಿಕೆಗೂ ಅಧಿಕ ಮಳೆ: ಈ ಬಾರಿ ವಾಡಿಕೆಗೂ ಮೀರಿ ಮಳೆ ಬಂದಿದೆ. ಯಾವ ಪ್ರದೇಶದಲ್ಲೂ ವಿದ್ಯುತ್ ಅಭಾವ ಇಲ್ಲ. ಆದರೆ, ಚಿಕ್ಕಮಗಳೂರಿನಲ್ಲಿ ಮಾತ್ರ ಪವರ್ ಕಟ್ ನಿರಂತರವಾಗಿ ನಡೆಯುತ್ತದೆ, ಇದಕ್ಕೆ ಕಾರಣ ಏನು ಎಂದು ಸವಿತಾ ರಮೇಶ್ ಪ್ರಶ್ನಿಸಿದರು. ಓವರ್ ಲೋಡ್ನಿಂದ ಸಂಪರ್ಕ ಕಡಿದು ಹೋಗುತ್ತಿದೆ ಎಂದು ಮೆಸ್ಕಾಂನ ಕಾರ್ಯಪಾಲಕ ಅಭಿಯಂತರರು ಉತ್ತರ ನೀಡಿದರು. ಚಿಕ್ಕಮಗಳೂರು ತಾಲೂಕಿನ ಕುಂಬಾರಹಳ್ಳಿಯಲ್ಲಿ ವಿದ್ಯುತ್ ಸಂಪರ್ಕ ಇಲ್ಲ, ಅದೇ ರೀತಿ ಬಸ್ಗಲ್ ಹಾಗೂ ಸತ್ತಿಹಳ್ಳಿ ಗ್ರಾಮ ಪಂಚಾಯ್ತಿಗಳ ವ್ಯಾಪ್ತಿಯಲ್ಲೂ ವಿದ್ಯುತ್ ಅಭಾವ ತಲೆದೋರಿದೆ ಎಂದು ಸವಿತಾ ರಮೇಶ್ ಹೇಳಿದರು.
ಕೆಲವು ಶಾಲಾ ಕಟ್ಟಡ ಹಾಗೂ ಶಾಲಾ ಆಟದ ಮೈದಾನದ ಮೇಲೆ ವಿದ್ಯುತ್ ತಂತಿಗಳು ಹಾದು ಹೋಗಿವೆ. ಅವುಗಳ ಮಾರ್ಗವನ್ನು ಬದಲಾವಣೆ ಮಾಡಬೇಕು ಎಂದು ಜಿಪಂ ಸದಸ್ಯ ಕೆ.ಆರ್. ಆನಂದ್ ಸಲಹೆ ನೀಡಿದರು.
ಕರಡಿ  ಹಾವಳಿ: ಕಡೂರು ತಾಲೂಕಿನ ಕಲ್ಕೆರೆ ಗ್ರಾಮದಲ್ಲಿ ಈವರೆಗೆ ಸುಮಾರು 17 ಜನರ ಮೇಲೆ ಕರಡಿ ದಾಳಿ ಮಾಡಿದೆ. ಓರ್ವ ಮಹಿಳೆಯನ್ನು ಕೊಂದು ಹಾಕಿದೆ. ಕೂಡಲೇ ಕರಡಿ ಸೆರೆಹಿಡಿಯಬೇಕು ಎಂದು ಎಸ್.ಬಿ. ಆನಂದಪ್ಪ ಸಭೆಯಲ್ಲಿ ಆಗ್ರಹಿಸಿದರು. ಕರಡಿ ದಾಳಿಯಿಂದ ಗಾಯಗೊಂಡಿರುವವರಿಗೆ ಪರಿಹಾರ ನೀಡಬೇಕು. ಇದಕ್ಕೆ ಸಂಬಂಧಿಸಿದಂತೆ ಅರಣ್ಯ ಇಲಾಖೆ ಈವರೆಗೆ ತೆಗೆದುಕೊಂಡ ಕ್ರಮದ ಬಗ್ಗೆ ಉತ್ತರ ನೀಡಬೇಕು ಎಂದು ಎಸ್.ಬಿ. ಆನಂದಪ್ಪ ಹೇಳಿದಾಗ, ಇದಕ್ಕೆ ಪದ್ಮ ಚಂದ್ರಪ್ಪ ಅವರು ಧ್ವನಿಗೂಡಿಸಿದರು.
ಈ ಪ್ರದೇಶ ಭದ್ರಾವತಿಯ ಅರಣ್ಯ ವಿಭಾಗಕ್ಕೆ ಒಳಪಡಲಿದ್ದು, ಕರಡಿ ಹಿಡಿಯಲು ಯಾರ ಅನುಮತಿಯೂ  ಬೇಡ, ಈ ಸಂಬಂಧ ಭದ್ರಾವತಿಯ ಡಿಎಫ್ಓನೊಂದಿಗೆ ಮಾತನಾಡುತ್ತೇನೆ ಎಂದು  ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕರುಣಕರನ್ ಹೇಳಿದರು. ಇನ್ನು ಗಾಯಾಳುಗಳಿಗೆ ಚಿಕಿತ್ಸೆ ಪಡೆದುಕೊಂಡಿದ್ದರೆ, ಅದಕ್ಕೆ ಸಂಬಂಧಿಸಿದ ಮಾಹಿತಿಯನ್ನು ನೀಡಿದರೆ ಚಿಕಿತ್ಸಾ ವೆಚ್ಚವನ್ನು ಭರಿಸಲು ಅವಕಾಶ ಇದೆ ಎಂದರು.
ನಂದಿಭಟ್ಟಲು ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ಆಗಾಗ ಚಿರತೆ ಬಂದು ಹೋಗುತ್ತಿದೆ. ಶಾಲೆಯ ವಿದ್ಯಾರ್ಥಿಗಳು ಭಯದಲ್ಲಿ ಕಾಲ ಕಳೆಯುತ್ತಿದ್ದಾರೆ. ಅದುದರಿಂದ ಆ ಶಾಲೆಗೆ ಕಾಂಪೌಂಡ್ ನಿರ್ಮಾಣ ಮಾಡಬೇಕೆಂದು ಶಿವಶಂಕರ್ ಹೇಳಿದಾಗ ಶಿಕ್ಷಣ ಸ್ಥಾಯಿ ಸಮಿತಿ ಸಭೆಯಲ್ಲಿ ತೀರ್ಮಾನ ಕೈಗೊಳ್ಳಿ ಎಂದು ರೇಖಾ ಹುಲಿಯಪ್ಪಗೌಡ ಹೇಳಿದರು.
ನಾಯಿಗಳ ಕಡಿತಕ್ಕೆ ಸರ್ಕಾರಿ ಆಸ್ಪತ್ರೆಯಲ್ಲಿ ಚುಚ್ಚುಮದ್ದು ನೀಡುತ್ತಿಲ್ಲ. ಆಲ್ದೂರಿನಲ್ಲಿ ಇಬ್ಬರು ಮಕ್ಕಳಿಗೆ ನಾಯಿ ಕಚ್ಚಿದ್ದು, ಅವರು ಚಿಕ್ಕಮಗಳೂರಿನ ಸಾರ್ವಜನಿಕ ಆಸ್ರತ್ರೆಗೆ ಬಂದಿದ್ದಾಗ ಚುಚ್ಚುಮದ್ದು ಇಲ್ಲ ಎಂದು ಹೇಳಿ ಹಾಸನಕ್ಕೆ ಕಳುಹಿಸಿದ್ದಾರೆ, ಹಾಸನದಲ್ಲೂ ಚುಚ್ಚುಮದ್ದು ನೀಡಿಲ್ಲ, ಅವರಿಗೆ ಖಾಸಗಿ ಆಸ್ಪತ್ರೆಯಲ್ಲಿ ಚುಚ್ಚುಮದ್ದು ನೀಡುವಂತೆ ವೈದ್ಯರು ಹೇಳಿ ಕಳುಹಿಸಿದ್ದರಿಂದ ಸುಮಾರು 18 ಸಾವಿರ ಖರ್ಚು ಮಾಡಿ ಮಕ್ಕಳ ಪೋಷಕರು ಚುಚ್ಚು ಮದ್ದು ಕೊಡಿಸಿದ್ದಾರೆ, ಸರ್ಕಾರಿ ಆಸ್ಪತ್ರೆಯಲ್ಲಿ ನಾಯಿ ಕಡಿತಕ್ಕೆ ಚುಚ್ಚು ಮದ್ದು ಇಲ್ಲವೇ ಎಂದು ಸವಿತಾ ರಮೇಶ್ ಪ್ರಶ್ನಿಸಿದರು.
ನಾಯಿ ಕಡಿತಕ್ಕೆ ಸರ್ಕಾರಿ ಆಸ್ಪತ್ರೆಯಲ್ಲಿ ಚುಚ್ಚು ಮದ್ದುಗಳ ಕೊರತೆ ಇಲ್ಲ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿಗಳು ಹೇಳಿದರು.
ಸಭೆಗೆ ಆಗಮಿಸಿ ಜಿಲ್ಲಾ ಸರ್ಜನ್ ಡಾ. ಆರ್. ದೊಡ್ಡಮಲ್ಲಪ್ಪ ಅವರು ಇದೇ ಉತ್ತರ ನೀಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.