ಕಾಯಕ ಜೀವಿಗಳಿಗೆ ಮನ್ನಣೆ 'ಖಾತ್ರಿ'
ಕ.ಪ್ರ.ವಾರ್ತೆ, ಚಿಕ್ಕಮಗಳೂರು, ಡಿ.17
ಗ್ರಾಮೀಣ ಪ್ರದೇಶಗಳ ಅಭಿವೃದ್ಧಿ ಜೊತೆ ಕಾಯಕ ಜೀವಿಗಳಿಗೆ ಮನ್ನಣೆ ನೀಡಬೇಕೆಂಬ ದೃಷ್ಟಿ ಹೊಂದಿ ಮಹಾತ್ಮಗಾಂಧಿ ನರೇಗಾ ಯೋಜನೆ ಅನುಷ್ಠಾನಗೊಳಿಸಿದ್ದು, ಈ ಪ್ರಕ್ರಿಯೆಗೆ ಒತ್ತು ಕೊಡುವ ಉದ್ದೇಶ ಹೊಂದಿ ಇಂದಿನಿಂದ ಪ್ರಚಾರಾಂದೋಲನಕ್ಕೆ ಬಿರುಸಿನ ಚಾಲನೆ ನೀಡಲಾಗಿದೆ ಎಂದು ತಾಪಂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಪಿ. ಧನರಾಜ್ ಹೇಳಿದ್ದಾರೆ.
ತಾಲೂಕಿನ ಇಂದಾವರ ಗ್ರಾಪಂ ಕಚೇರಿ ಮುಂಭಾಗ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ಪ್ರಚಾರಾಂದೋಲನಕ್ಕೆ ಮಂಗಳವಾರ ಚಾಲನೆ ನೀಡಿ ಮಾತನಾಡಿದರು.
ಈ ಯೋಜನೆಯಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡ, ಇಂದಿರಾ ಆವಾಸ್ ಯೋಜನೆಯ ಫಲಾನುಭವಿಗಳು ಮತ್ತು ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳು ವೈಯಕ್ತಿಕವಾಗಿ ತಮ್ಮ ಜಮೀನಿನಲ್ಲಿ ತೋಟಗಾರಿಕೆ ಬೆಳೆ ಬೆಳೆಸುವುದು, ಕೃಷಿಗೆ ಸಂಬಂಧಪಟ್ಟ ಎರೆಹುಳು ಮತ್ತು ಗೊಬ್ಬರ ತಯಾರಿಕೆ ಹಾಗೂ ಫಸಲನ್ನು ಬೇರ್ಪಡಿಸುವ ಸಲುವಾಗಿ ಒಕ್ಕಣೆ ಕಣ ನಿರ್ಮಾಣ ಮಾಡುವುದು, ಜಾನುವಾರುಗಳ ಮೇವು ತೊಟ್ಟಿ ನಿರ್ಮಿಸುವುದು, ಮೀನುಕೊಳ ಮತ್ತು ಮೀನು ಒಣಗಿಸುವ ತೊಟ್ಟಿಗಳ ನಿರ್ಮಾಣ, ಗ್ರಾಮೀಣ ಪ್ರದೇಶದಲ್ಲಿ ವೈಯಕ್ತಿಕ ಫಲಾನುಭವಿಗಳ ಶೌಚಾಲಯ ನಿರ್ಮಾಣ ಸೇರಿದಂತೆ ಹಲವು ಕಾಮಗಾರಿಗಳಿಗೆ ಕೂಲಿ ಮತ್ತು ಸಾಮಗ್ರಿ ವೆಚ್ಚ ನೀಡಲಾಗುತ್ತದೆ ಎಂದು ಮಾಹಿತಿ ನೀಡಿದರು.
ಕಾಯಕ ಸಂಘ ರಚನೆ: ಪ್ರಸ್ತುತ ಸಾಲಿನಲ್ಲಿ ಒಂದು ದಿನಕ್ಕೆ 174 ಕೂಲಿ ದರ ನಿಗದಿ ಮಾಡಲಾಗಿದ್ದು, ಉದ್ಯೋಗ ಚೀಟಿ ಹೊಂದಿದ 20- 25 ಜನರನ್ನು ಸಂಘಟಿಸಿ ಕಾಯಕ ಸಂಘಗಳ ರಚನೆ ಮಾಡಲಾಗುತ್ತದೆ. ಕೆಲಸ ಅರಸಿಕೊಂಡು ವಲಸೆ ಹೋಗುವುದನ್ನು ತಡೆಗಟ್ಟಿ ಅಂಥವರಿಗೆ ಉದ್ಯೋಗ ನೀಡುವ ಮೂಲಕ ಗ್ರಾಮಾಭಿವೃದ್ಧಿ ಜೊತೆ ಕಾಯಕ ಜೀವಿಗಳಿಗೆ ಸ್ಪಂದಿಸುವ ಉದ್ದೇಶ ಈ ಯೋಜನೆಯದ್ದಾಗಿದೆ ಎಂದರು.
ಶ್ರಮಜೀವಿಗಳಿಗೆ ಕೆಲಸ: ಗ್ರಾಪಂ ಅಧ್ಯಕ್ಷೆ ಇಂದ್ರಮ್ಮ ದೇವೇಗೌಡ ಮಾತನಾಡಿ, ಕೇಂದ್ರ ಸರ್ಕಾರದ ಈ ಯೋಜನೆಯಿಂದ ಗ್ರಾಮಗಳು ಅಭಿವೃದ್ಧಿ ಹೊಂದುವುದರೊಂದಿಗೆ ಶ್ರಮಜೀವಿಗಳಿಗೆ ಕೆಲಸ ಸಿಕ್ಕಂತಾಗುತ್ತದೆ. ಇಂತಹ ಅವಕಾಶ ಬಳಸಿಕೊಂಡರೆ ದೇಶದ ಏಳಿಗೆ ಜೊತೆ ದುಡಿಯುವ ಕೈಗಳು ಬಡತನದಿಂದ ಹೊರಬರಲು ಸಹಕಾರಿಯಾಗುತ್ತದೆ ಎಂದು ಹೇಳಿದರು.
ಉಪಾಧ್ಯಕ್ಷೆ ಕಾಳಮ್ಮ, ಸದಸ್ಯರಾದ ಶಂಕರ್, ಜಯಮ್ಮ, ಕೆಂಚಯ್ಯ, ಅಭಿವೃದ್ಧಿ ಅಧಿಕಾರಿ ಫರಿದಾಭಾನು, ಗಂಗಾಧರಪ್ಪ, ಐ.ಡಿ. ಚಂದ್ರಶೇಖರ್ ಹಾಜರಿದ್ದರು.
ವಲಸೆ ತಡೆಗಟ್ಟುವುದೇ ಖಾತ್ರಿ ಯೋಜನೆ ಉದ್ದೇಶ: ಭರತ್
ಮೂಡಿಗೆರೆ: ಹಕ್ಕು ಆಧಾರಿತ, ಕಾಯ್ದೆಬದ್ಧ, ಉದ್ಯೋಗ ಬಯಸುವ ಗ್ರಾಮಸ್ಥರಿಗೆ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ ವರದಾನವಾಗಿದೆ ಎಂದು ತರುವೆ ಗ್ರಾಪಂ ಅಧ್ಯಕ್ಷ ಭರತ್ ತಿಳಿಸಿದರು.
ತಾಪಂ ಆವರಣದಲ್ಲಿ ಜಿಪಂ, ತಾಪಂ ಆಶ್ರಯದಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿ, ಒಂದು ಕುಟುಂಬಕ್ಕೆ 100 ದಿನಗಳ ಉದ್ಯೋಗ ಖಾತರಿಪಡಿಸುವುದರೊಂದಿಗೆ, ಕಾಮಗಾರಿಯೊಂದಿಗೆ ಗ್ರಾಮೀಣ ಪ್ರದೇಶದ ಬಡವರಿಗೆ ಆಧಾರವಾಗಿ ನೈಸರ್ಗಿಕ ಸಂಪನ್ಮೂಲ ಬಲಪಡಿಸುವುದರೊಂದಿಗೆ ವಲಸೆ ಹೋಗುವುದನ್ನು ತಡೆಗಟ್ಟುವುದೇ ಈ ಕಾರ್ಯಾಗಾರದ ಮೂಲ ಉದ್ದೇಶವಾಗಿದೆ ಎಂದರು.
ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಚಂದ್ರಮೌಳಿ ಮತ್ತು ಸಹಾಯಕ ನಿರ್ದೇಶಕ ರಾಮಚಂದ್ರ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಗಳ ಬಗ್ಗೆ ಮಾತನಾಡಿದರು.
ಫಲ್ಗುಣಿ ಗ್ರಾಪಂ ಅಧ್ಯಕ್ಷೆ ಮೀನಾಕ್ಷಮ್ಮ, ಕಾಯಕ ಬಂಧುಗಳು ಇದ್ದರು.
ಕಾರ್ಯಾಗಾರದಲ್ಲಿ 29 ಗ್ರಾಪಂ ಅಧ್ಯಕ್ಷರು, ಪಿಡಿಒಗಳು, ಕಾಯಕ ಬಂಧುಗಳು ಇದ್ದರು. ಇದೇ ಸಂದರ್ಭದಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಗಳ ಕೈಪಿಡಿ ಬಿಡುಗಡೆ ಮಾಡಲಾಯಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

