ಅಂತರ್ಜಲ ವೃದ್ಧಿಸಿ
ಚಿಕ್ಕಮಗಳೂರು: ಮಳೆಯ ನೀರು ಒಳಗೊಂಡಂತೆ ದಿನನಿತ್ಯದ ಗೃಹಬಳಕೆ ನೀರನ್ನು ಇಂಗಿಸುವುದರೊಂದಿಗೆ ಅಂತರ್ಜಲವನ್ನು ಹೆಚ್ಚಿಸಿ ಶುದ್ಧ ನೀರು ಪಡೆಯಲು ಸಾಧ್ಯ ಎಂದು ಜಿಪಂ ಅಧ್ಯಕ್ಷೆ ರೇಖಾ ಹುಲಿಯಪ್ಪಗೌಡ ಹೇಳಿದರು.
ತಾಲೂಕಿನ ಸಿಂದಿಗೆರೆ ಗ್ರಾಮದ ಸರ್ಕಾರಿ ಪ್ರಾಥಮಿಕ ಪಾಠ ಶಾಲೆ ಆವರಣದಲ್ಲಿ ಜಿಲ್ಲಾ ಪಂಚಾಯಿತಿ ಹಾಗೂ ಆರ್ಟ್ಸ್ ಆಫ್ ಲಿವಿಂಗ್, ವ್ಯಕ್ತಿ ವಿಕಸನ ಕೇಂದ್ರದ ಸಹಯೋಗದೊಂದಿಗೆ ವೇದಾವತಿ ನದಿ ಪುನರ್ಶ್ಚೇತನಕ್ಕೆ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ಅಂತರ್ಜಲ ಅಭಿವೃದ್ಧಿ ಮತ್ತು ದ್ರವ್ಯ ತ್ಯಾಜ್ಯ ವಿಲೇವಾರಿ ಪ್ರಾಯೋಜಿತ ಕಾರ್ಯಕ್ರಮವನ್ನು ಬುಧವಾರ ಉದ್ಘಾಟಿಸಿ ಅವರು ಮಾತನಾಡಿದರು.
ಕಡಿಮೆಗೊಳಿಸಿ: ಲಕ್ಯಾ ಹೋಬಳಿಯಲ್ಲಿ ಕಳೆದ ಮೂರು ವರ್ಷದಿಂದ ಬರದ ಪರಿಸ್ಥಿತಿ ಉಂಟಾಗಿ ಶುದ್ಧ ಕುಡಿಯುವ ನೀರಿನ ತೊಂದರೆ ಇದ್ದು, ಕೊಳವೆ ಬಾವಿಗಳನ್ನು 600 ಅಡಿಗಳ ಆಳಕ್ಕೆ ಕೊರೆಯಬೇಕಾಗಿದ್ದು, ಅವುಗಳಲ್ಲಿ ದೊರಕುವ ನೀರು ಫ್ಲೋರೈಡ್ ಅಂಶ ಇರುವುದು ನಾವು ಕಾಣುತ್ತಿದ್ದೇವೆ. ಚರಂಡಿ ನೀರನ್ನು ಇಂಗುಬಾವಿ, ಕಲ್ಲುಗುಂಡುಗಳ ತಡೆ, ನೀರಿನ ಹೊಂಡಗಳ ನಿರ್ಮಾಣದೊಂದಿಗೆ ಅಂತರ್ಜಲವನ್ನು ಹೆಚ್ಚಿಸುವುದರೊಂದಿಗೆ ಶುದ್ಧ ನೀರು ಪಡೆಯಲು ಸಾಧ್ಯವಾಗುತ್ತದೆ ಎಂದರು.
ಗೃಹ ಬಳಕೆ ನೀರನ್ನು ಇಂಗುಬಾವಿಗಳ ಮೂಲಕ ಇಂಗಿಸುವುದರಿಂದ ಅಂತರ್ಜಲಮಟ್ಟ ಹೆಚ್ಚುವುದರ ಜೊತೆಗೆ ಸೊಳ್ಳೆ, ಹಂದಿ ಕಾಟಗಳಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದ ಅವರು, ಸಿಂದಿಗೆರೆ ಗ್ರಾಮದಲ್ಲಿ 7 ಕ್ಕೂ ಹೆಚ್ಚು ಇಂಗು ಗುಂಡಿಗಳ ನಿರ್ಮಾಣ ಮಾಡಲಾಗುವುದು ಎಂದು ಹೇಳಿದರು.
ವ್ಯಕ್ತಿ ವಿಕಸನ ಕೇಂದ್ರ: ಸಿಂದಿಗೆರೆ ಗ್ರಾಮದಲ್ಲಿ ಶುದ್ಧಗಂಗಾ ಜಲ ಶುದ್ಧೀಕರಣ ಘಟಕವನ್ನು ಗ್ರಾಮ ಪಂಚಾಯಿತಿ ಹಾಗೂ ಆರ್ಟ್ಸ್ ಆಫ್ ಲಿವಿಂಗ್ ವ್ಯಕ್ತಿ ವಿಕಸನ ಕೇಂದ್ರ ಸಹಯೋಗದೊಂದಿಗೆ ಶೀಘ್ರವಾಗಿ ಪ್ರಾರಂಭಿಸಲಾಗುವುದು ಎಂದು ತಿಳಿಸಿದರು.
ಈ ಭಾಗದ ಜನರ ಆರ್ಥಿಕ ಮಟ್ಟವನ್ನು ಹೆಚ್ಚಿಸಲು ಸ್ಥಳೀಯವಾಗಿ ದೊರಕುವ ಕಚ್ಚಾವಸ್ತುಗಳ ಬಳಕೆಯೊಂದಿಗೆ ಸಿದ್ಧ ವಸ್ತುಗಳನ್ನು ಮಾರ್ಪಾಡು ಮಾಡುವುದು ಹಾಗೂ ತರಕಾರಿ ಬೆಳೆ ಬೆಳೆಯಲು ಪ್ರೋತ್ಸಾಹಿಸಿ ಅವುಗಳಿಗೆ ಸೂಕ್ತ ಮಾರುಕಟ್ಟೆ ವ್ಯವಸ್ಥೆಯನ್ನು ಕಲ್ಪಿಸಲಾಗುವುದು ಎಂದರು.
ಮಳೆನೀರಿನ ಸಂಗ್ರಹ, ಇಂಗುಗುಂಡಿಗಳ ಮಹತ್ವ ಹಾಗೂ ಅಂತರ್ಜಲ ಹೆಚ್ಚಿಸುವ ಬಗ್ಗೆ ಜನರಲ್ಲಿ ಜಲಸಾಕ್ಷರತೆಯನ್ನು ಮೂಡಿಸುವ ಅವಶ್ಯಕತೆ ಇದೆ ಎಂದು ಹೇಳಿದರು.
ಆರ್ಟ್ಸ್ ಆಫ್ ಲಿವಿಂಗ್ ವ್ಯಕ್ತಿ ವಿಕಸನದ ಜಿಲ್ಲಾ ಘಟಕದ ಅಧ್ಯಕ್ಷ ಶಂಕರ್ ಮಾತನಾಡಿ, ವೇದಾವತಿ ನದಿಯ ಮೂಲವಾದ ಲಕ್ಯಾ ಹೋಬಳಿಯಲ್ಲಿ ಜಲದ ಸಮಸ್ಯೆ ಕಂಡುಬರುತ್ತಿದ್ದು, ಕೊಳವೆ ಬಾವಿಗಳನ್ನು 600 ಅಡಿಗಿಂತಲೂ ಹೆಚ್ಚು ಆಳದಲ್ಲಿ ಕೊರೆದರೂ ಅದರಲ್ಲಿ ದೊರೆಯುವ ನೀರು ಹೆಚ್ಚು ಲವಣಾಂಶಗಳಿಂದ ಕೂಡಿದ್ದು, ಫ್ಲೋರೈಡ್ಯುಕ್ತವಾಗಿ ಶುದ್ಧವಾಗಿಲ್ಲ. ಆದರೆ 150 ಅಡಿ ಆಳದಲ್ಲಿ ಕೊರೆದರೂ ಅದರಲ್ಲಿ ದೊರಕುವ ನೀರು ಹೆಚ್ಚಿನ ಲವಣಾಂಶ ಹೊಂದದೆ ಕುಡಿಯಲು ಶುದ್ಧವಾಗಿರುತ್ತದೆ. ಈ ನಿಟ್ಟಿನಲ್ಲಿ ಅಂತರ್ಜಲ ಮಟ್ಟವನ್ನು ಹೆಚ್ಚಿಸುವುದು ಸೂಕ್ತ ಎಂದರು.
ಜಿಪಂ ಸದಸ್ಯ ಕಲ್ಮುರಡಪ್ಪ, ಆರ್ಟ್ಸ್ ಆಫ್ ಲಿವಿಂಗ್ ವ್ಯಕ್ತಿ ವಿಕಸನ ಸಂಸ್ಥೆಯ ನಾಗರಾಜ್ ಮಾತನಾಡಿದರು. ಗ್ರಾಮ ಪಂಚಾಯಿತಿ ಅಧ್ಯಕ್ಷ ಶಿವಣ್ಣ, ಉಪಾಧ್ಯಕ್ಷೆ ಪುಷ್ಪಲತಾ, ಗ್ರಾಮ ಪಂಚಾಯಿತಿ ಸದಸ್ಯರುಗಳು, ಅಧಿಕಾರಿಗಳು ಹಾಗೂ ಮತ್ತಿತರ ಜನಪ್ರತಿನಿಧಿಗಳು ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

