ವಿಶೇಷ ಅಧಿವೇಶನ ಕರೆಯಲು ಆಗ್ರಹ
ನರಸಿಂಹರಾಜಪುರ: ಮಲೆನಾಡಿನ ಜನರ ಬದುಕಿಗೆ ಮರಣ ಶಾಸನ ವಾಗಿರುವ ಕಸ್ತೂರಿ ರಂಗನ್ ವರದಿಯನ್ನು ವಿರೋಧಿಸಲು ಸರ್ಕಾರವು ತುರ್ತಾಗಿ ವಿಶೇಷ ಅಧಿವೇಶನ ಕರೆಯಬೇಕು ಎಂದು ಶಾಸಕ ಹಾಗೂ ಜಿಲ್ಲಾ ಬಿಜೆಪಿ ಅಧ್ಯಕ್ಷ ಡಿ.ಎನ್.ಜೀವರಾಜ್ ಆಗ್ರಹಪಡಿಸಿದರು.
ಪಟ್ಟಣದ ಟಿಎಪಿಸಿಎಂಎಸ್ ಸಭಾಂಗಣದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕೇಂದ್ರ ಅರಣ್ಯ ಮತ್ತು ಪರಿಸರ ಮಂತ್ರಾಲಯವು ಪಶ್ಚಿಮ ಘಟ್ಟದ ಜೀವ ವೈವಿದ್ಯತೆ ಇರುವ ಸೂಕ್ಷ್ಮ ಪ್ರದೇಶವನ್ನು ಗುರುತಿಸಲು ಗಾಡ್ಗೀಳ್ ಸಮಿತಿ ರಚನೆ ಮಾಡಿತ್ತು.
ಆ ಸಮಿತಿಯು ದೇಶದ ಪಶ್ಚಿಮ ಘಟ್ಟ ಹೊಂದಿರುವ ರಾಜ್ಯಗಳಾದ ಗುಜರಾತ್, ಕೇರಳ, ಗೋವಾ, ಕರ್ನಾಟಕ, ತಮಿಳುನಾಡು ರಾಜ್ಯಗಳ 188 ತಾಲೂಕು ಗಳ 1.62 ಲಕ್ಷ ಚದರ ಕಿ.ಮೀ.ವ್ಯಾಪ್ತಿಯನ್ನು ಸೂಕ್ಷ್ಮ ಪ್ರದೇಶ ಎಂದು ಗುರುತಿಸಿತ್ತು ಎಂದರು.
ಆದರೆ 2012 ರಲ್ಲಿ ಕೇಂದ್ರ ಸರ್ಕಾರವು ರಚಿಸಿದ ಕಸ್ತೂರಿ ರಂಗನ್ ನೇತೃತ್ವದ ಸಮಿತಿ 6 ರಾಜ್ಯಗಳ 60 ಸಾವಿರ ಕಿ.ಮೀ.ವ್ಯಾಪ್ತಿಯನ್ನು ಸೂಕ್ಷ್ಮ ಪ್ರದೇಶ ಎಂದು ಗುರುತಿಸಿ ವರದಿ ನೀಡಿದೆ ಎಂದರು.
ಮಲೆನಾಡಲ್ಲಿ ದುಷ್ಪಪರಿಣಾಮ: ಕಸ್ತೂರಿ ರಂಗನ್ ವರದಿಯ ಪ್ರಕಾರ ಮಲೆನಾಡಿನ ಭಾಗವು ವಿಶ್ವ ಪಾರಂಪರಿಕ ಪಟ್ಟಿಯಲ್ಲಿ ಸೇರ್ಪಡೆಗೊಳ್ಳಲಿದೆ. ನರಸಿಂಹರಾಜಪುರ ತಾಲೂಕಿನ 31 ಹಳ್ಳಿ, ಕೊಪ್ಪ ತಾಲೂಕಿನ 31 ಹಳ್ಳಿ ಹಾಗೂ ಶೃಂಗೇರಿ ತಾಲೂಕು ಪೂರ್ತಿ ಸೂಕ್ಷ್ಮ ವಲಯಕ್ಕೆ ಸೇರ್ಪಡೆಗೊಳ್ಳಲಿದೆ.ನರಸಿಂಹರಾಜಪುರ ಪಟ್ಟಣವೂ ಸಹ ಸೂಕ್ಷ್ಮ ವಲಯಕ್ಕೆ ಸೇರಿದೆ. ವಿಶ್ವ ಪಾರಂಪಾರಿಕ ತಾಣದ ಪಟ್ಟಿಗೆ ಸೇರಿದರೆ ಕಾಡಿನಿಂದ ಸೌದೆ, ಸೊಪ್ಪು ಕಡಿಯುವ ಹಾಗಿಲ್ಲ. ಮರಳು ಕಡಿಯುವಂತಿಲ್ಲ. ಭೂಮಿಗೆ ರಾಸಾಯನಿಕ ಗೊಬ್ಬರ ಹಾಕಬಾರದು. ಕೈಗಾರಿಕೆ ಮಾಡುವ ಹಾಗಿಲ್ಲ. ಒಟ್ಟಾರೆ ಇದ್ದರೂ ಸತ್ತಂತೆ ಬದುಕಬೇಕಾಗುತ್ತದೆ ಎಂದರು.
ಒಗ್ಗಟ್ಟಾಗಿ ವಿರೋಧಿಸೋಣ: ಮಲೆನಾಡಿನ ಭಾಗದ ಜನರಿಗೆ ಶಾಪವಾಗುತ್ತಿರುವ ಕಸ್ತೂರಿ ರಂಗನ್ ವರದಿ, ಅರಣ್ಯ ಒತ್ತುವರಿ, ಅಡಿಕೆ ನಿಷೇಧ ಪ್ರಸ್ತಾಪ ಮುಂತಾದ ಸೂಕ್ಷ್ಮ ವಿಚಾರಗಳು ಬಂದಾಗ ಯಾರೂ ರಾಜಕಾರಣ ಮಾಡಬಾರದು.ಎಲ್ಲಾ ಪಕ್ಷಗಳು ಒಗ್ಗಟ್ಟಾಗಿ ವಿರೋಧಿಸೋಣ ಎಂದು ವಿರೋದ ಪಕ್ಷಗಳಿಗೆ ಜೀವರಾಜ್ ಮನವಿ ಮಾಡಿದರು.
ಪಶ್ಚಿಮ ಘಟ್ಟವನ್ನು ವಿಶ್ವ ಪಾರಂಪಾರಿಕ ಪಟ್ಟಿಗೆ ಸೇರಿಸಿದರೆ ಮುಂದಿನ ದಿನಗಳಲ್ಲಿ ಶಾಶ್ವತವಾಗಿ ಮಲೆನಾಡಿನ ಜನರ ಬದುಕು ತೊಂದರೆಗೆ ಸಿಕ್ಕಿಹಾಕಿಕೊಳ್ಳುತ್ತದೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.
ಪತ್ರಿಕಾ ಗೋಷ್ಠಿಯಲ್ಲಿ ಬಿಜೆಪಿ ಮುಖಂಡರಾದ ಕೆ.ಪಿ.ಸಂಪತ್ ಕುಮಾರ್, ಕೆ.ಟಿ.ವೆಂಕಟೇಶ್, ವೈ.ಎಸ್.ಗಣೇಶ್, ವೈ.ಎಸ್.ಸುಬ್ರಮಣ್ಯ, ಎಸ್.ಗೋಪಾಲ್ ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

