ಕಡೂರು ಪಟ್ಟಣದ ಕಸ ವಿಲೇವಾರಿ ಮಾಡಿ
ಕಡೂರು: ಪಟ್ಟಣದಾದ್ಯಂತ ಕಸದ ರಾಶಿ ಸಂಗ್ರವಾಗುತ್ತಿರುವ ಬಗ್ಗೆ ಗಮನಹರಿಸಿ ವಿಲೇವಾರಿಗೆ ಪುರಸಭೆ ಕ್ರಮ ಕೈಗೊಳ್ಳಬೇಕು. ಆದರೆ, ಅಧಿಕಾರಿಗಳ ನಿರ್ಲಕ್ಷದಿಂದ ಪಟ್ಟಣದಲ್ಲಿ ದಿನದಿಂದ ದಿನಕ್ಕೆ ಗಲ್ಲಿಗಲ್ಲಿಗಳಲ್ಲಿ ಕಸದ ರಾಶಿ ಹೆಚ್ಚುತ್ತಲೇ ಇದೆ. ಈ ಬಗ್ಗೆ ಪುರಸಭೆಯರ ಗಮನಕ್ಕೆ ತಂದರೆ ಕಿವಿಗೆ ಹಾಕಿಕೊಳ್ಳದೆ ಕೇವಲ ತಮಗೆ ಅನುಕೂಲವಾಗುವ ಕಚೇರಿಯ ಕೆಲಸ ಕಾರ್ಯಗಳಲ್ಲಿ ಮಾತ್ರ ಮಗ್ನರಾಗುತ್ತಾರೆ.
ಜನರ ಸಮಸ್ಯೆ ಕೇಳುವವರಿಲ್ಲದೆ ರಸ್ತೆ ಬದಿಯಲೆಲ್ಲಾ ಎತ್ತ ನೋಡಿದೂರೂ ಕಸದರಾಶಿ ಕಾಣುತ್ತದೆ. ಚರಂಡಿಗಳು ಕಳಪೆಯಾಗಿ ಸರಿಯಾಗಿ ನಿರ್ಮಾಣ ಮಾಡದೇ ಇರುವುದರಿಂದ ಚರಂಡಿಗಳಲ್ಲಿ ಗಲೀಜು ನೀರು ನಿಂತು ಕೆಸರಿನ ವಾಸನೆಯಿಂದ ಜನರು ಮೂಗು ಮುಚ್ಚಿಕೊಂಡು ಓಡಾಡಬೇಕಾದ ಸ್ಥಿತಿ ಉಂಟಾಗಿದೆ. ಜೊತೆಯಲ್ಲಿ ಸೊಳ್ಳೆ ಕಾಟ ಕೂಡ ಅಧಿಕವಾಗಿದ್ದು ರಾತ್ರಿ ವೇಳೆ ಮಲಗಲು ಆಗುತ್ತಿಲ್ಲ.
ಈ ಬಗ್ಗೆ ಪುರಸಭೆಯ ಆರೋಗ್ಯ ನಿರೀಕ್ಷಕರು ಯಾವುದೇ ಕ್ರಮಕ್ಕೆ ಮುಂದಾಗುತ್ತಿಲ್ಲ. ಮಳೆಯೂ ಬಾರದೇ ಇರುವುದರಿಂದ ದಿನದಿಂದ ದಿನಕ್ಕೆ ಚರಂಡಿಗಳಲ್ಲಿ ಗಲೀಜು ನೀರು ಹಾಗು ಕಸ ತುಂಬುತ್ತಿದ್ದರೂ ಕ್ಲೀನ್ ಮಾಡುವವರಿಲ್ಲ. ಕಸ ವಿಲೇವಾರಿಗೆ ಯಾವ ಕ್ರಮ ಕೈಗೊಳ್ಳುತ್ತಿಲ್ಲ. ಈ ಬಗ್ಗೆ ಜಿಲ್ಲಾಧಿಕಾರಿ ಕೂಡಲೇ ಕಡೂರು ಪುರಸಭೆಯ ಅವ್ಯವಸ್ಥೆ ಬಗ್ಗೆ ಗಮನಹರಿಸಿ ಅಧಿಕಾರಿಗಳಿಗೆ ಸೂಚನೆ ನೀಡಿ ಜನರ ಆರೋಗ್ಯ ಕಾಪಾಡುವತ್ತ ಕ್ರಮ ಕೈಗೊಳ್ಳಬೇಕು.
ಟಿ ಜಿ.ಸತೀಶ್, ಕಡೂರು.
ವ್ಯರ್ಥವಾಗಿರುವ ಹೈಮಾಸ್ಟ್ ಕಂಬ
ತರೀಕೆರೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಸದಾ ಜನರು ಮತ್ತು ವಾಹನ ಸಂಚಾರದಿಂದ ಕೂಡಿದ ನಾಲ್ಕು ಪ್ರಮುಖ ರಸ್ತೆ ಸೇರುವ ದೊಡ್ಡ ವೃತ್ತದ ಬಳಿ ಸಂಜೆ ಹೊತ್ತು ವಿದ್ಯುತ್ ಬೆಳಕಿನ ಸಲುವಾಗಿ ಎಲ್ಲರಿಗೂ ಉಪಯೋಗವಾಗಲಿ ಎಂದು ನಿಲ್ಲಿಸಿದ ಹೈಮಾಸ್ಟ್ ದೊಡ್ಡ ದೀಪದ ಕಂಬ ಕಳೆದೆರಡು ವರ್ಷಗಳಿಂದ ಕೆಟ್ಟು ಹೋಗಿ ವ್ಯರ್ಥವಾಗಿ ನಿಂತಿದೆ.
ಇತ್ತ ಬೆಳಕೂ ಇಲ್ಲ ಅತ್ತ ಕಂಬ ದುರಸ್ತಿಯನ್ನೂ ಕಂಡಿಲ್ಲ. ವಿದ್ಯುತ್ ಹೈಮಾಸ್ಟ್ ಕಂಬಕ್ಕಾಗಿ ಮಾಡಿದ ಖರ್ಚು ಮಾತ್ರ ನೀರಿನಲ್ಲಿ ಹುಣಸೇ ಹಣ್ಣು ತೊಳೆದಮತಾಗಿದೆ. ರಾ.ಹೆ. ಮೇಲಾಗಿ ಪ್ರಮುಖವಾದ ನಾಲ್ಕು ರಸ್ತೆ ಕೂಡುವ ದೊಡ್ಡ ವೃತ್ತವಾದುದರಿಂದ ದಿನದ 24 ಗಂಟೆಗಳ ಕಾಲ ದಟ್ಟ ವಾಹನ ಮತ್ತು ಜನ ಸಂಚಾರದಿಂದ ಕೂಡಿರುತ್ತದೆ.
ರಾತ್ರಿ ಹೊತ್ತು ಎಷ್ಟು ಬೆಳಕಿದ್ದರೂ ಸಾಲದು. ಆದರೆ ಈ ಹೈಮಾಸ್ಟ್ ದೀಪದ ಕಂಬ ಬೆಳಕು ಬೀರದೆ ಎರಡು ವರ್ಷಗಳಾಯಿತು. ಸಂಬಂದಿಸಿದವರು ಕೂಡಲೇ ಈ ವಿದ್ಯುತ್ ಕಂಬದ ಕಡೆ ಬೆಳಕು ಚೆಲ್ಲಬೇಕು, ದೀಪಗಳು ಬೆಳಗುವಂತೆ ಕ್ರಮ ಕೈಗೊಳ್ಳಲಿ.
ಟಿ ವಿನಾಯಕ ತರೀಕೆರೆ, ನಿವಾಸಿ
ಸುದ್ದಿ ಸಂಕ್ಷೇಪ
ನಾಳೆ ಪಾದಯಾತ್ರೆ
ಕಡೂರು: ಭದ್ರಾ ಕುಡಿಯುವ ನೀರಿನ ಯೋಜನೆ ಕಾಮಗಾರಿ ಚುರುಕು, ಸಾರ್ವಜನಿಕ ಆಸ್ಪತ್ರೆಗಳಿಗೆ ಅಗತ್ಯ ವೈದ್ಯರ ನೇಮಕ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಸರ್ಕಾರವನ್ನು ಒತ್ತಾಯಿಸಲು ಡಿ.31 ರಂದು ಕಡೂರು ತಾಲೂಕು ಕನ್ನಡ ಸೇನೆಯಿಂದ ಬೀರೂರಿನಿಂದ ಕಡೂರಿನವರಿಗೆ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ಸೇನೆಯ ತಾಲೂಕು ಘಟಕದ ಅಧ್ಯಕ್ಷ ಮೋಹನ್ ಕುಮಾರ್ ತಿಳಿಸಿದ್ದಾರೆ. ಕಡೂರು ಹಾಗು ಬೀರೂರು ಪಟ್ಟಣದಲ್ಲಿ ವಾಸಿಸುವ ಜನರಿಗೆ ಸಿಗಬೇಕಾಗಿರುವ ಮೂಲಭೂತ ಸವಲತ್ತುಗಳು ಸರ್ಕಾರದಿಂದ ಜನರಿಗೆ ಸರಿಯಾಗಿ ದೊರಕುವಂತೆ ಹಾಗು ಕಡೂರು ಸಾರ್ವಜನಿಕ ಆಸ್ಪತ್ರೆಯಲ್ಲಿ ಕೊರತೆಯಿರುವ ಅಗತ್ಯ ವೈದ್ಯರ ನೇಮಕ, ಬೀರೂರಿನ ಪತ್ರೆ ಕೆ. ಚನ್ನವೀರಪ್ಪಯ್ಯ ಸಾರ್ವಜನಿಕ ಆಸ್ಪತ್ರೆಗೆ ಅಗತ್ಯ ವೈದ್ಯರ ನೇಮಕ ಮತ್ತು ಭದ್ರಾ ಕುಡಿಯವ ನೀರಿನ ಯೋಜನೆ ಕಾಮಗಾರಿ ಚುರುಕುಗೊಳಿಸಿ ಜನರಿಗೆ ನೀರು ದೊರಕಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
ಆಸಂದಿ ಗ್ರಾಪಂ ಅಧ್ಯಕ್ಷೆ ರಂಗಮ್ಮ
ಕಡೂರು: ಅಜ್ಜಂಪುರ ಸಮೀಪದ ಆಸಂದಿ ಗ್ರಾಮದ ಪಂಚಾಯ್ತಿ ಅಧ್ಯಕ್ಷರಾಗಿ ರಂಗಮ್ಮ ಮತ್ತು ಉಪಾಧ್ಯಕ್ಷರಾಗಿ ಕೆ. ರುದ್ರಾಚಾರ್ ಅವಿರೋಧವಾಗಿ ಇತ್ತೀಚೆಗೆ ಆಯ್ಕೆಯಾಗಿದ್ದಾರೆ. ಚುನಾವಣಾ ಅಧಿಕಾರಿಗಳಾಗಿದ್ದ ಕಡೂರು ತಾಲೂಕು ಸಮಾಜ ಕಲ್ಯಾಣಾಧಿಕಾರಿ ಮಲ್ಲಿಕಾರ್ಜುನ್ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಇತರೆ ಸದಸ್ಯರು ಯಾರೂ ಕೂಡ ನಾಮಪತ್ರ ಸಲ್ಲಿಸದೇ ಇದ್ದುದರಿಂದ ರಂಗಮ್ಮ ಮತ್ತು ರುದ್ರಾಚಾರ್ ಅವರು ಅಧ್ಯಕ್ಷ ಉಪಾಧ್ಯಕ್ಷರಾಗಿ ಅಯ್ಕೆಯಾಗಿದ್ದಾರೆ ಎಂದು ಘೋಷಿಸಿದರು. ನಂತರ ನಡೆದ ಅಭಿನಂದನಾ ಸಮಾರಂಭದಲ್ಲಿ ಗ್ರಾಮ ಪಂಚಾಯ್ತಿ ಸದಸ್ಯರು, ಗ್ರಾಮಸ್ಥರು ಉಪಸ್ಥಿತರಿದ್ದು ನೂತನ ಅಧ್ಯಕ್ಷರು ಮತ್ತು ಉಪಾಧ್ಯಕ್ಷರನ್ನು ಅಭಿನಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

