ಚಿಕ್ಕಮಗಳೂರು

ಕುದುರೆಮುಖ ಅದಿರು ಯಂತ್ರಗಳ ಮಾರಾಟ

Published On :

ಕ.ಪ್ರ.ವಾರ್ತೆ, ಚಿಕ್ಕಮಗಳೂರು, ಡಿ.30
ದುಡಿಯುವ ಕೈಗಳಿಗೆ ಕೆಲಸ ಕೊಟ್ಟು ಸಾವಿರಾರು ಕುಟುಂಬಗಳಿಗೆ ಆಶ್ರಯವಾಗಿದ್ದ ಕುದುರೆಮುಖ ಸಂಸ್ಥೆಯ ಅದಿರು ಘಟಕದ ಯಂತ್ರಗಳು ಮೌನಕ್ಕೆ ಸರಿದು ಇಂದಿಗೆ (ಡಿಸೆಂಬರ್ 31) 8 ವರ್ಷ ಕಳೆದವು.
ಕೋಟ್ಯಂತರ ರುಪಾಯಿ ಮೌಲ್ಯದ ಯಂತ್ರಗಳನ್ನು ಬಳಸಿಕೊಳ್ಳಲು ಕಳೆದ 8 ವರ್ಷಗಳಲ್ಲಿ ಸಂಸ್ಥೆ ನಡೆಸಿದ ಪ್ರಯತ್ನಗಳೆಲ್ಲವೂ ವಿಫಲವಾದ ಪರಿಣಾಮ ಕುದುರೆಮುಖ ಅದಿರು ಸಂಸ್ಥೆ ಜಾಗತಿಕ ಟೆಂಡರ್ ಕರೆದು ಇಲ್ಲಿನ ಯಂತ್ರಗಳನ್ನು ಮಾರಾಟ ಮಾಡಿದೆ. ಈ ಯಂತ್ರಗಳನ್ನು ಚೆನ್ನೈನ ಅಣ್ಣಂ ಸ್ಟೀಲ್ ಸಂಸ್ಥೆ 228 ಕೋಟಿಗೆ ಖರೀದಿ ಮಾಡಿದೆ. ಈಗಾಗಲೇ ಸಂಸ್ಥೆಗೆ ಹಣವನ್ನು ಸಂದಾಯ ಮಾಡಲಾಗಿದ್ದು, ಇನ್ನುಳಿದಂತೆ 228 ಕೋಟಿಯ ಬಡ್ಡಿ ಮೊತ್ತ 30 ಕೋಟಿ ಪಾವತಿ ಮಾಡಿದ ನಂತರ ಯಂತ್ರಗಳನ್ನು ಸರಬರಾಜು ಮಾಡಲು ಅನುಮತಿ ನೀಡಲಾಗುವುದು. ಅಂದರೆ ಈ ವರ್ಷದಲ್ಲಿ ಇಲ್ಲಿನ ಯಂತ್ರಗಳನ್ನು ಅಣ್ಣಂ ಸ್ಟೀಲ್ ಸಂಸ್ಥೆ ಸರಬರಾಜು ಮಾಡಲಿದೆ. ಅಲ್ಲಿಗೆ ಕುದುರೆಮುಖ ಅದಿರು ಸಂಸ್ಥೆಯ ಅಧ್ಯಾಯ ಮುಕ್ತಾಯಗೊಳ್ಳಲಿದೆ.
2005 ಕೊನೆ: ಕುದುರೆಮುಖದಲ್ಲಿ 1976ರ ಏಪ್ರಿಲ್ 2ರಂದು ಅದಿರು ತೆಗೆಯುವ ಕೆಲಸ ಆರಂಭಗೊಂಡಿತ್ತು. ಇಲ್ಲಿ ಆರಂಭದಲ್ಲಿ ಸಂಸ್ಥೆಯ ಕಾಯಂ ನೌಕರರ ಸಂಖ್ಯೆ ಸುಮಾರು 2000 ಇತ್ತು. ಅದಿರು ತೆಗೆಯುವ ಕೆಲಸದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಕಾರ್ಮಿಕರು ದುಡಿಯುತ್ತಿದ್ದರು. ಇಲ್ಲಿ ಅದಿರು ತೆಗೆಯುತ್ತಿರುವುದರಿಂದ ಪರಿಸರದ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗುತ್ತಿದೆ ಎಂಬ ಕಾರಣಕ್ಕಾಗಿ ಸರ್ವೋಚ್ಛ ನ್ಯಾಯಾಲಯ 2005ರ ಡಿಸೆಂಬರ್ 31ಕ್ಕೆ ಅದಿರು ತೆಗೆಯುವುದನ್ನು ಕೈಬಿಡಬೇಕೆಂದು ಆದೇಶ ಹೊರಡಿಸಿತ್ತು.
190 ಸಿಬ್ಬಂದಿ: ಇದರಿಂದಾಗಿ ಅದಿರು ತೆಗೆಯುವ ಕೆಲಸ ನಿಂತಿತು. ಇಲ್ಲಿ ಕಾರ್ಮಿಕರಾಗಿ ದುಡಿಯುತ್ತಿದ್ದ ಜನರಲ್ಲಿ ಹಲವು ಮಂದಿ ವಲಸೆ ಹೋದರು, ಇನ್ನು ಕಾಯಂ ನೌಕರರು ಒಬ್ಬೊಬ್ಬರಾಗಿ ವಿಆರ್‌ಎಸ್ ತೆಗೆದುಕೊಂಡು ಹೋದರು. ಇದೀಗ ಕುದುರೆಮುಖದಲ್ಲಿ ಸಂಸ್ಥೆಯ ಕಾಯಂ ನೌಕರರ ಸಂಖ್ಯೆ 190ಕ್ಕೆ ಇಳಿದಿದೆ. ಅಣ್ಣಂ ಸ್ಟೀಲ್ ಸಂಸ್ಥೆ ಇಲ್ಲಿನ ಯಂತ್ರಗಳನ್ನು ಸಾಗಾಣಿಕೆ ಮಾಡಿದ ಮೇಲೆ ಇಲ್ಲಿನ 190 ಜನರಿಗೆ ಕೆಲಸ ಇರುವುದಿಲ್ಲ. ಅವರು ವಿಆರ್‌ಎಸ್ ತೆಗೆದುಕೊಂಡು ಹೋಗಬಹುದು.
ಕರ್ತವ್ಯದಲ್ಲಿ ಮುಂದುವರೆಯುವುದಾದರೆ ಅವರಿಗೆ ಬಳ್ಳಾರಿಯ ದೋಣಿಮಲೈನಲ್ಲಿರುವ ಎನ್‌ಎಂಡಿಸಿ ಅದಿರು ಸಂಸ್ಥೆಯನ್ನು ಗುತ್ತಿಗೆ ಆಧಾರದ ಮೇಲೆ ತೆಗೆದುಕೊಳ್ಳಲು ಕುದುರೆಮುಖ ಸಂಸ್ಥೆ ಮುಂದೆ ಬಂದಿದ್ದು, ಕುದುರೆಮುಖದಲ್ಲಿರುವ ಕಾಯಂ ಸಿಬ್ಬಂದಿಗಳಿಗೆ ಅಲ್ಲಿ ಕೆಲಸಕ್ಕೆ ನಿಯೋಜನೆ ಮಾಡಲಾಗುವುದು. ಈ ವಿಷಯವನ್ನು ಈಗಾಗಲೇ ನೌಕರರಿಗೆ ಮುಟ್ಟಿಸಲಾಗಿದೆ.
ಕೊನೆಯ ವರ್ಷ: ಕುದುರೆಮುಖದಲ್ಲಿರುವ ಅದಿರು ಉತ್ಪಾದನಾ ಘಟಕವನ್ನು ಮುಂದುವರೆಸಲು ಸಂಸ್ಥೆ ಹಲವು ರೀತಿಯಲ್ಲಿ ಪ್ರಯತ್ನ ನಡೆಸಿತ್ತು. ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿಯಲ್ಲಿ 110 ಎಕರೆ ಪ್ರದೇಶದಲ್ಲಿ ಅದಿರು ತೆಗೆಯಲು ಅನುಮತಿ ನೀಡುವಂತೆ ರಾಜ್ಯ ಸರ್ಕಾರವನ್ನು ಕೋರಿತ್ತು. ಅಲ್ಲಿನ ಭೂಮಿಯನ್ನು ಸರ್ವೆ ಮಾಡಬೇಕಾಗಿತ್ತು. ಅರಣ್ಯ ಇಲಾಖೆ ಅನುಮತಿ ನೀಡಬೇಕಾಗಿತ್ತು. ಆದರೆ, ಈ ಕೆಲಸಗಳಿಗೆ ಕಳೆದ 8 ವರ್ಷಗಳಲ್ಲಿ ರಾಜ್ಯ ಸರ್ಕಾರ ಸ್ಪಂದಿಸಲಿಲ್ಲ.
ಕುದುರೆಮುಖ ಅದಿರು ಸಂಸ್ಥೆ, ಖಾಸಗಿ ಸಂಸ್ಥೆಯಲ್ಲ. ಇದೊಂದು ಕೇಂದ್ರ ಸರ್ಕಾರಿ ಸ್ವಾಮ್ಯದ ಸಂಸ್ಥೆ. ರಾಜ್ಯ ಸರ್ಕಾರ ಸ್ಪಂದಿಸಿದ್ದರೆ ಕುದುರೆಮುಖದಲ್ಲಿ ಅದಿರು ಉತ್ಪಾದನಾ ಘಟಕವನ್ನು ಉಳಿಸಿಕೊಳ್ಳಬಹುದಾಗಿತ್ತು. ಆದರೆ, ಜನಪ್ರತಿನಿಧಿಗಳು ಈ ವಿಷಯದ ಬಗ್ಗೆ ತಲೆ ಕೆಡಿಸಿಕೊಳ್ಳಲಿಲ್ಲ. ಇದರಿಂದಾಗಿ ಅನಿವಾರ್ಯವಾಗಿ ಸಂಸ್ಥೆ ಯಂತ್ರೋಪಕರಣಗಳ ಮಾರಾಟಕ್ಕೆ ಮುಂದಾಗಬೇಕಾಯಿತು.
ಯಂತ್ರೋಪಕರಣಗಳ ಮಾರಾಟಕ್ಕೆ ಜಾಗತಿಕ ಮಟ್ಟದಲ್ಲಿ ಮೂರು ಬಾರಿ ಟೆಂಡರ್ ಕರೆಯಲಾಗಿತ್ತು. ಆದರೆ, ನಿಗದಿತ ದರಕ್ಕಿಂತ ಕಡಿಮೆ ಮೊತ್ತದಲ್ಲಿ ಟೆಂಡರ್‌ದಾರರು ಮುಂದೆ ಬಂದಿದ್ದರಿಂದ ಮರು ಟೆಂಡರ್ ಕರೆಯಬೇಕಾದ ಪರಿಸ್ಥಿತಿ ಎದುರಾಯಿತು. ಇದೀಗ ಚೆನ್ನೈನ ಅಣ್ಣಂ ಸ್ಟೀಲ್ ಸಂಸ್ಥೆ 228 ಕೋಟಿಗೆ ಯಂತ್ರಗಳನ್ನು ಖರೀದಿ ಮಾಡಿದೆ. ಇಲ್ಲಿನ ಯಂತ್ರಗಳು ಸ್ಥಳಾಂತರ ಮಾಡಿದ ಮೇಲೆ ಕುದುರೆಮುಖ ಅದಿರು ಸಂಸ್ಥೆಗಳ ಕಟ್ಟಡಗಳು ಮಾತ್ರ ಉಳಿದುಕೊಳ್ಳಲಿವೆ.
ಹಸ್ತಾಂತರ: ಕುದುರೆಮುಖ ಅದಿರು ಸಂಸ್ಥೆಗೆ ಮೂಡಿಗೆರೆಯ ಸಂಸೆ ಗ್ರಾಮದಲ್ಲಿನ ಕಂದಾಯ ಭೂಮಿಯನ್ನು ಅದಿರು ಸಂಸ್ಥೆಗೆ ಗುತ್ತಿಗೆ ಆಧಾರದ ಮೇಲೆ ನೀಡಲಾಗಿತ್ತು. ಸಂಸ್ಥೆ ಅದಿರು ಉತ್ಪಾದನೆ ಕೆಲಸ ಕೈಬಿಟ್ಟಿದ್ದರಿಂದ ಇಲ್ಲಿನ ಭೂಮಿಯನ್ನು ಕಂದಾಯ ಇಲಾಖೆಗೆ ಹಸ್ತಾಂತರ ಮಾಡಲಾಗಿದೆ.
ಕುದುರೆಮುಖ ಸಂಸ್ಥೆಗೆ ಸೇರಿರುವ ಕಟ್ಟಡ ಹಾಗೂ ಇತರೆ ಪ್ರದೇಶವನ್ನು ಇಕೋ ಟೂರಿಜಂಗೆ ಬಳಸಿಕೊಳ್ಳಲು ಸಂಸ್ಥೆ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದೆ. ಆದರೆ, ಈ ವರೆಗೆ ಈ ವಿಚಾರದಲ್ಲಿ ಸರ್ಕಾರ ಯಾವುದೇ ಅಂತಿಮ ತೀರ್ಮಾನವನ್ನು ತೆಗೆದುಕೊಂಡಿಲ್ಲ.
8 ವರ್ಷಗಳಿಂದ ಮೌನಕ್ಕೆ ಸರಿದ ಯಂತ್ರಗಳು ಸಾಗಾಣಿಕೆ ಮಾಡಿದ ಬಳಿಕ ಕುದುರೆಮುಖ ಪಟ್ಟಣದೊಂದಿಗೆ ಸಂಸ್ಥೆ ಹೊಂದಿದ್ದ ಸಂಪರ್ಕದ ಕೊಂಡಿ ಕಳಚಿ ಕೊಳ್ಳಲಿದೆ.
- ಆರ್. ತಾರಾನಾಥ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.