ಬರ ನಿರ್ವಹಣೆ: ಸಚಿವರ ನಿರ್ಲಕ್ಷ್ಯ
ಚಿಕ್ಕಮಗಳೂರು: ಬರ ನಿರ್ವಹಣೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ವಿಫಲರಾಗಿದ್ದಾರೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ.ಎಲ್. ಮೂರ್ತಿ ಆರೋಪಿಸಿದ್ದಾರೆ.
ಬರ ಹೋಗಲಾಡಿಸಲು ಅಗತ್ಯವಾದ ಕ್ರಮ ತೆಗೆದುಕೊಂಡಿಲ್ಲ. ಮದುವೆ ಸೇರಿದಂತೆ ಇತರೆ ಕಾರ್ಯಕ್ರಮಗಳಿಗೆ ಬಂದಾಗ ಅಧಿಕಾರಿಗಳ ಸಭೆಯನ್ನು ನಡೆಸುತ್ತಿದ್ದಾರೆಯೇ ಹೊರತು ಬರ ನಿರ್ವಹಣೆಗಾಗಿ ಅಧಿಕಾರಿಗಳ ಸಭೆಯನ್ನು ಈವರೆಗೂ ನಡೆಸಿಲ್ಲ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ನೀರಿನ ಸಮಸ್ಯೆ: ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ ಎಂದು ಸ್ವತಃ ಜಿಪಂ ಅಧ್ಯಕ್ಷರೇ ಹೇಳಿದ್ದಾರೆ. ಟಾಸ್ಕ್‌ಪೋರ್ಸ್‌ಗೆ ತಾಲೂಕು ಮಟ್ಟದಲ್ಲಿ ಶಾಸಕರು ಅಧ್ಯಕ್ಷರಾಗಿರುತ್ತಾರೆ. ಕುಡಿಯುವ ನೀರಿಗೆ ಬರ ಬಂದರೂ ಶಾಸಕರು ಒಂದೂ ಸಭೆ ಮಾಡಿಲ್ಲ. ತಮ್ಮ ಪಕ್ಷದ ಕಾರ್ಯಕರ್ತರಿಗೆ ಗುತ್ತಿಗೆ ಕೆಲಸ ನೀಡಲು ಕೆಲವು ಕಡೆಗಳಲ್ಲಿ ಕಾಮಗಾರಿ ಗುರುತಿಸಿ ಕಡತಗಳಿಗೆ ಸಹಿ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಬರ ನಿರ್ವಹಣೆಗೆ ಜಿಲ್ಲೆಗೆ ಬಿಡುಗಡೆಯಾದ ಅನುದಾನ ಎಷ್ಟು ಹಾಗೂ ತೆಗೆದುಕೊಂಡಿರುವ ಕಾಮಗಾರಿಗಳ ವಿವರವನ್ನು ಸಾರ್ವಜನಿಕರಿಗೆ ನೀಡಬೇಕು ಎಂದು ಆಗ್ರಹಿಸಿದರು.
ಸ್ವಚ್ಛತೆಗೆ ಆದ್ಯತೆ: ಪ್ರಗತಿಪರ, ಶೋಷಿತರ ಬಗ್ಗೆ ಕಾಳಜಿ ಇರುವ ಜಿಲ್ಲಾಧಿಕಾರಿಗಳು, ನಿವೇಶನ ಸಮಸ್ಯೆಗಳಿಗೆ ಸ್ಪಂದಿಸಿದ್ದರು. ಸ್ವಚ್ಛತೆಗೆ ಆದ್ಯತೆ ನೀಡಿದ್ದರು. ಬಯಲು ಸೀಮೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಿದ್ದು, ಅಲ್ಲಿನ ಸಮಸ್ಯೆಗೆ ತಕ್ಷಣಕ್ಕೆ ಸ್ಪಂದಿಸಿದ್ದರು. ಅಧಿಕಾರಿಗಳನ್ನು ವರ್ಗಾವಣೆ ಮಾಡಲು ಸರ್ಕಾರಕ್ಕೆ ಅಧಿಕಾರ ಇದೆ. ಆದರೆ, ಅದನ್ನು ಪ್ರಶ್ನೆ ಮಾಡುವ ಅಧಿಕಾರ ಸಾರ್ವಜನಿಕರಿಗೆ ಇದೆ. ಸಕಾರಣ ಇಲ್ಲದೆ ಶೋಷಿತ ವರ್ಗಕ್ಕೆ ಸೇರಿರುವ ಜಿಲ್ಲಾಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿದೆ ಎಂದರು.
ಒಕ್ಕಲಿಗ ಸಮುದಾಯದ ಜಿಲ್ಲಾಧಿಕಾರಿಗಳನ್ನು ಚಿಕ್ಕಮಗಳೂರು ಜಿಲ್ಲೆಗೆ ಕರೆ ತರುವ ಕೆಲಸ ನಡೆದಿದೆ. ಇದು, ಜಾತಿ ಜಾತಿಗಳ ನಡುವಿನ ಸಾಮರಸ್ಯ ಕದಡುವ ಪ್ರಯತ್ನವಾಗಿದೆ. ಶೋಷಿತ ವರ್ಗದವರ ಬಗ್ಗೆ ಗೌರವ ಇದ್ದರೆ, ಜಿಲ್ಲಾಧಿಕಾರಿಗಳ ವರ್ಗಾವಣೆಯನ್ನು ಕೂಡಲೇ ರದ್ದುಪಡಿಸಬೇಕು. ಹಾಲಿ ಇರುವ ಜಿಲ್ಲಾಧಿಕಾರಿಗಳಿಂದ ತಪ್ಪಾಗಿದ್ದರೆ ತನಿಖೆ ನಡೆಸಲಿ ಎಂದರು.
ಬಾರದ ಸಚಿವರು: ರಾಮೇಶ್ವರ ಕೆರೆಗೆ ಸಂಬಂಧಿಸಿದಂತೆ ತಾವು ಮಾಡಿದ ಆರೋಪಕ್ಕೆ ಸಚಿವ ಸಿ.ಟಿ. ರವಿ ಅವರು ಸ್ಥಳದಲ್ಲೇ ಬಹಿರಂಗ ಚರ್ಚೆಗೆ ಆಹ್ವಾನ ನೀಡಿದ್ದರು. ಅಂದು ಬೆಳಗ್ಗೆ 10 ರಿಂದ 12 ಗಂಟೆಯವರೆಗೆ ರಾಮೇಶ್ವರ ಕೆರೆಯ ಬಳಿ ಇದ್ದೆ. ಆದರೆ, ಸಚಿವರು ಸ್ಥಳಕ್ಕೆ ಆಗಮಿಸಲಿಲ್ಲ. ಕೆರೆ ಅಭಿವೃದ್ಧಿಗೆ ಬಂದಿರುವ ಹಣದಲ್ಲಿ ಕಾಲುವೆ ದುರಸ್ತಿಗೊಳಿಸಲಾಗಿದೆ ಎಂದು ಸಚಿವರು ಮಾಧ್ಯಮದ ಮೂಲಕ ಹೇಳಿದ್ದಾರೆ. ಆದರೆ, ಅವರೇ ಕೊಟ್ಟ ಮಾಹಿತಿ ಆಧಾರದ ಮೇಲೆ ಚರ್ಚೆಗೆ ಆಹ್ವಾನ ನೀಡಿದ್ದೆ ಎಂದು ಹೇಳಿದರು.
ಬಿಜೆಪಿಯ ಕಾರ್ಯಕರ್ತರಾದ ಅನ್ವರ್ ಎಂಬುವವರು ಉಪ್ಪಳ್ಳಿಯಲ್ಲಿ ರಸ್ತೆ ಜಾಗದಲ್ಲಿ ಮನೆ ನಿರ್ಮಾಣ ಮಾಡುತ್ತಿದ್ದಾರೆ. ಈ ಸಂಬಂಧ ಅಧಿಕಾರಿಗಳು ಸ್ಪಷ್ಟವಾದ ಉತ್ತರ ನೀಡುತ್ತಿಲ್ಲ. ಕೆಲವು ಅಧಿಕಾರಿಗಳು ಬಿಜೆಪಿಯ ಕಾರ್ಯಕರ್ತರಂತೆ ವರ್ತಿಸುತ್ತಿದ್ದಾರೆ ಎಂದು ಆರೋಪಿಸಿದರು.
ಮಹೇಶ್, ಶ್ರೀಧರ್ ಉರಾಳ್, ಮಲ್ಲಿಕಾರ್ಜುನ್ ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

