ಡಿಸಿ ವರ್ಗಾವಣೆಗೆ ವ್ಯಾಪಕ ವಿರೋಧ
ಚಿಕ್ಕಮಗಳೂರು: ಜಿಲ್ಲಾಧಿಕಾರಿ ಎಸ್.ಟಿ. ಅಂಜನ್ಕುಮಾರ್ ವರ್ಗಾವಣೆ ಬಗ್ಗೆ ಪ್ರತಿಪಕ್ಷಗಳಿಂದ ವ್ಯಾಪಕವಾಗಿ ವಿರೋಧ ವ್ಯಕ್ತವಾಗಿದೆ. ಜಿಲ್ಲಾಧಿಕಾರಿಗಳನ್ನು ವರ್ಗಾವಣೆ ಮಾಡಿರುವ ಸರ್ಕಾರದ ಕ್ರಮ ವಿರೋಧಿಸಿ ಬುಧವಾರ ನಗರದಲ್ಲಿ ವಿವಿಧ ರಾಜಕೀಯ ಪಕ್ಷ ಹಾಗೂ ಸಂಘಟನೆಗಳು ಪ್ರತಿಭಟನೆ ನಡೆಸಿದವು.
ಇಲ್ಲಿನ ಹಳೇ ತಾಲೂಕು ಕಚೇರಿಯಿಂದ ಮೆರವಣಿಗೆಯಲ್ಲಿ ಹೊರಟು ಹನುಮಂತಪ್ಪ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಬಳಿಕ ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ನಡೆಸಲಾಯಿತು.
ವಿನಾಕಾರಣ ವರ್ಗಾವಣೆ: ಕಳೆದ ಮೂರು ತಿಂಗಳ ಹಿಂದೆ ಜಿಲ್ಲೆಗೆ ಆಗಮಿಸಿದ್ದ ಜಿಲ್ಲಾಧಿಕಾರಿ ಅಂಜನ್ಕುಮಾರ್ ಅವರನ್ನು ವಿನಾಕಾರಣ ವರ್ಗಾವಣೆ ಮಾಡುವ ಮೂಲಕ ಆಡಳಿತ ಪಕ್ಷ ತಮಗೆ ಬೇಕಾದ ಅಧಿಕಾರಿಗಳನ್ನು ಜಿಲ್ಲೆಗೆ ಹಾಕಿಸಿಕೊಳ್ಳುವ ಪ್ರಯತ್ನ ಮಾಡುತ್ತಿದೆ ಎಂದು ದೂರಿದರು.
ಜಿಲ್ಲಾಧಿಕಾರಿ ವಿರುದ್ಧ ಯಾವುದೇ ದೂರು, ಆರೋಪ, ಟೀಕೆ, ಆಪಾದನೆ ಇಲ್ಲದೆ ಇದ್ದರೂ, ರಾಜಕೀಯದ ಸ್ವಾರ್ಥ ಸಾಧನೆಯ ಉದ್ದೇಶದಿಂದ ವರ್ಗಾವಣೆ ಮಾಡಿರುವ ಕ್ರಮ ಖಂಡಿಸಿ ಇಂದು ಬಿಜೆಪಿ ಹೊರತುಪಡಿಸಿ ಎಲ್ಲಾ ರಾಜಕೀಯ ಪಕ್ಷಗಳೂ ಪ್ರತಿಭಟನೆಯಲ್ಲಿ ಪಾಲ್ಗೊಂಡಿವೆ ಎಂದು ಧರಣಿಯಲ್ಲಿ ಪಾಲ್ಗೊಂಡಿದ್ದ ಮುಖಂಡರು ಹೇಳಿದರು.
ಜಿಲ್ಲೆಯ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಜನಪರ ಕಾರ್ಯಕ್ರಮ ರೂಪಿಸಿದ್ದ ಜಿಲ್ಲಾಧಿಕಾರಿಗಳು ಜನ ಸಾಮಾನ್ಯರಿಗೆ ಸುಲಭವಾಗಿ ಸಿಗುತ್ತಿದ್ದು, ಅವರನ್ನು ವರ್ಗಾವಣೆ ಮಾಡಿರುವುದು ನೈತಿಕತೆಯ ಕುಸಿತಕ್ಕೆ ನಿದರ್ಶನವೆಂದು ಹೇಳಿ, ಕೂಡಲೇ ವರ್ಗಾವಣೆ ರದ್ದುಗೊಳಿಸಬೇಕು ಎಂದು ಆಗ್ರಹಿಸಿದರು.
ಸಚಿವರ ಮೌನ: ಉಸ್ತುವಾರಿ ಸಚಿವ ಜೀವರಾಜ್ ಜಿಲ್ಲಾಧಿಕಾರಿ ವರ್ಗಾವಣೆ ಬಗ್ಗೆ ಮೌನವಾಗಿದ್ದು, ಜಿಲ್ಲೆಯ ಬಿಜೆಪಿ ಶಾಸಕರಲ್ಲಿ ಸಮನ್ವಯದ ಕೊರತೆಯಿಂದ ನಿಷ್ಟಾವಂತ ಅಧಿಕಾರಿಗಳು ವರ್ಗಾವಣೆಯಾಗುತ್ತಿದ್ದಾರೆ ಎಂದು ಆರೋಪಿಸಿದ ಪ್ರತಿಭಟನಕಾರರು ಕೂಡಲೇ ಅಂಜನ್ಕುಮಾರ್ ಅವರನ್ನು ಚಿಕ್ಕಮಗಳೂರು ಜಿಲ್ಲಾಧಿಕಾರಿಯಾಗಿ ಮುಂದುವರಿಸಬೇಕು ಎಂದರು.
ವಿವಿಧ ಸಂಘಟನೆ ಹಾಗೂ ರಾಜಕೀಯ ಪಕ್ಷದ ಮುಖಂಡರಾದ ಎಚ್.ಎಚ್. ದೇವರಾಜ್, ಸಿ.ಎಚ್. ಲೋಕೇಶ್, ಈಶ್ವರ್, ರಾಧಾಕೃಷ್ಣ, ಪವನ್, ಮಹಮ್ಮದ್, ಅಣ್ಣವೇಲು, ಅನಿಲ್, ಅಮ್ಜದ್, ರವೀಶ್ ಬಸಪ್ಪ, ಬಸವರಾಜ್ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.
ಬಿಎಸ್ಆರ್ ಖಂಡನೆ: ಯಾವುದೇ ಕಾರಣ ಇಲ್ಲದೆ ಏಕಾಏಕಿ ಜಿಲ್ಲಾಧಿಕಾರಿಗಳನ್ನು ವರ್ಗಾವಣೆ ಮಾಡಿರುವ ಸರ್ಕಾರದ ಕ್ರಮ ಖಂಡನೀಯವಾಗಿದ್ದು, ಇದು ದಲಿತ ಸಮುದಾಯದ ಮೇಲೆ ಮಾಡಿರುವ ದೌರ್ಜನ್ಯವಾಗಿದೆ ಎಂದು ಬಿಎಸ್ಆರ್ ಕಾಂಗ್ರೆಸ್ ಪರಿಶಿಷ್ಟ ಜಾತಿ ಮತ್ತು ಪಂಗಡದ ಜಿಲ್ಲಾಧ್ಯಕ್ಷ ಬಿ. ಪ್ರದೀಪ್ ಆರೋಪಿಸಿದ್ದಾರೆ.
ಉನ್ನತ ಶಿಕ್ಷಣ ಸಚಿವರು ತಮ್ಮ ಹೇಳಿಕೆಯಲ್ಲಿ ಜಿಲ್ಲಾಧಿಕಾರಿಗಳು ಸರಿಯಾಗಿ ಕರ್ತವ್ಯ ಮಾಡದ ಕಾರಣ ವರ್ಗಾವಣೆ ಮಾಡುತ್ತಿದ್ದು, ಇದು ಆಡಳಿತಾತ್ಮಕ ವಿಷಯ ಎಂದು ತಿಳಿಸಿದರೆ, ಜಿಲ್ಲಾ ಉಸ್ತವಾರಿ ಸಚಿವರು ಜಿಲ್ಲಾಧಿಕಾರಿಗಳನ್ನು ಬಡ್ತಿ ನೀಡಿ ಬೆಂಗಳೂರಿಗೆ ವರ್ಗಾವಣೆ ಮಾಡಲಾಗಿದೆ ಎಂದು ಹೇಳುವ ಮೂಲಕ ಸಮಾಧಾನ ಮಾಡುತ್ತಿದ್ದಾರೆ.
ಜಟಾಪಟಿಯೇ ಸಾಕ್ಷಿ: ದಲಿತರ ಮೇಲಿನ ಇವರ ದೌರ್ಜನ್ಯಕ್ಕೆ ಶಾಸಕ ಎಂ.ಪಿ. ಕುಮಾರಸ್ವಾಮಿ ಮತ್ತು ಸಿ.ಟಿ ರವಿಯವರ ನಡುವೆ ನಡೆದ ಜಟಾಪಟಿಯೇ ಸಾಕ್ಷಿಯಾಗಿದೆ. ರಾಜಕೀಯದಲ್ಲಿ ಜಾತಿ ರಾಜಕಾಣ ಮಾಡುತ್ತಿದ್ದ ಇವರು ಆಧಿಕಾರಿಗಳ ವರ್ಗಾವಣೆ ವಿಚಾರದಲ್ಲೂ ಸ್ವಜಾತಿ ಪಕ್ಷಪಾತ ಮಾಡುವ ಮೂಲಕ ಕೆಟ್ಟ ಸಂಸ್ಕೃತಿಯನ್ನು ಜಿಲ್ಲೆಯಲ್ಲಿ ಹರಡುತ್ತಿದ್ದಾರೆ ಎಂದರು.
ಪಕ್ಷದ ಜಿಲ್ಲಾ ಮಹಾಪ್ರಧಾನ ಕಾರ್ಯದರ್ಶಿ ಅನಿಲ್ ಆನಂದ್, ತಾಲೂಕು ಅಧ್ಯಕ್ಷ ಅಣ್ಣಾವೇಲು, ಅಲ್ಪಸಂಖ್ಯಾತರ ಘಟಕದ ಜಿಲ್ಲಾಧ್ಯಕ್ಷ ಮಹಮದ್, ತಾಲೂಕು ಸಹ ಸಂಚಾಲಕ ವಿಶ್ವನಾಥ, ಗಿರೀಶ್ ಇದ್ದರು.
ತರೀಕೆರೆಯಲ್ಲೂ ಖಂಡನೆ
ತರೀಕೆರೆ: ಚಿಕ್ಕಮಗಳೂರು ಜಿಲ್ಲಾಧಿಕಾರಿಯನ್ನು ವರ್ಗಾವಣೆ ಮಾಡಿರುವುದು ಸರಿಯಲ್ಲ ಎಂದು ಕೆಪಿಸಿಸಿ ಸದಸ್ಯ ಟಿ.ವಿ. ಶಿವಶಂಕರಪ್ಪ
ತಿಳಿಸಿದ್ದಾರೆ.
ಪತ್ರಿಕೆಯೊಡನೆ ಮಾತನಾಡಿ, ಜಿಲ್ಲೆಯಲ್ಲಿ ತೀವ್ರ ಬರಗಾಲ ಇದೆ, ಕುಡಿಯುವ ನೀರಿಗಾಗಿ ತೊಂದೆರೆ ಎದುರಿಸುತ್ತಿದೆ. ಇಂತಹ ಸಮಯದಲ್ಲಿ ವರ್ಗಾವಣೆ ಜಿಲ್ಲಾಡಳಿತವನ್ನು ನಿಷ್ಕ್ರಿಯಗೊಳಿಸುವ ಕಾರ್ಯವಾಗಿದೆ. ಆದ್ದರಿಂದ ಡಿಸಿ ವರ್ಗಾವಣೆಯನ್ನು ಕೂಡಲೇ ರದ್ದು ಪಡಿಸಬೇಕು, ಬರಗಾಲ ಸಮಸ್ಯೆಯ ನಿವಾರಣೆಗೆ ಗಮನ ಕೊಡಬೇಕು ಎಂದು ಮುಖ್ಯಮಂತ್ರಿಗಳನ್ನು ಒತ್ತಾಯಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

