ಹಣ್ಣು ಮಾಗಿಸಲು ರಾಸಾಯನಿಕ ನಿಷೇಧ
ಚಿಕ್ಕಮಗಳೂರು: ಹಣ್ಣು ಮಾಗಿಸಲು ರಾಸಾಯನಿಕ ಬಳಕೆ ಮಾಡುವುದನ್ನು ನಿಷೇಧಿಸಲಾಗಿದೆ ಎಂದು ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಬಿ.ಜಿ. ಸಂಪತ್ ತಿಳಿಸಿದ್ದಾರೆ.
ರಾಜ್ಯದಲ್ಲಿ ಮಾವು, ಬಾಳೆ, ಪಪ್ಪಾಯ, ಸಪೋಟ, ಮೂಸಂಬಿ ಇತ್ಯಾದಿ ಹಣ್ಣುಗಳನ್ನು ಮಾಗಿಸಲು ರಾಸಾಯನಿಕಗಳನ್ನು ಉಪಯೋಗಿಸಲಾಗುತ್ತಿದೆ. ಇವುಗಳು ಆರೋಗ್ಯಕ್ಕೆ ಅತ್ಯಂತ ಹಾನಿಕಾರವಾಗಿದೆ. ಅವುಗಳಲ್ಲಿ ಕ್ಯಾಲ್ಸಿಯಂ ಕಾರ್ಬೈಡ್‌ಗಳನ್ನು ಹೆಚ್ಚು ಹೆಚ್ಚಾಗಿ ಹಣ್ಣುಗಳ ಮಾಗಿಸುವಿಕೆಯಲ್ಲಿ ಬಳಸಲಾಗುತ್ತಿದೆ. ಕಾನೂನು ಪ್ರಕಾರ ವಿಷಯುಕ್ತ ಕ್ಯಾಲ್ಸಿಯಮ್ ಕಾರ್ಬೈಡ್ ಮಾರಾಟ ಮತ್ತು ಬಳಕೆಯನ್ನು ನಿಷೇಧಿಸಿದ್ದರೂ ಸಹ ವರ್ತಕರು ಇದನ್ನು ವಿವೇಚನಾರಹಿತವಾಗಿ ಬಳಸುತ್ತಿರುವುದು ಇತ್ತೀಚಿಗೆ ಹೆಚ್ಚಾಗಿದೆ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಬೆಲೆ ಕುಸಿತದಿಂದ ಹಾನಿ: ಅತಿ ಕಡಿಮೆ ಬೆಲೆಗೆ ಸಿಗುವ ಹಾಗೂ ಶೀಘ್ರ ಹಣ್ಣು ಮಾಗಿಸುವ ಕಾರಣ ಕ್ಯಾಲ್ಸಿಯಂ ಕಾರ್ಬೈಡನ್ನು ಮಾವಿನ ಹಣ್ಣುಗಳನ್ನು ಮಾಗಿಸಲು ಬಳಸುತ್ತಿರುವುದು ವರದಿಯಾಗಿರುತ್ತದೆ. ಈ ಬಗ್ಗೆ ಕಳೆದ ವರ್ಷ ಮಾಧ್ಯಮಗಳಲ್ಲಿ ವರದಿಯಾದ ಹಿನ್ನೆಲೆಯಲ್ಲಿ ಶಿಕ್ಷಿತ ವರ್ಗದ ಗ್ರಾಹಕರಿಂದ ಮಾವು ಕೊಳ್ಳುವ ಪ್ರಮಾಣ ಕಡಿಮೆಯಾಗಿರುತ್ತದೆ. ಇದರಿಂದ ಮಾವಿನ ಬೇಡಿಕೆ ಕಡಿಮೆಯಾಗುವ ಸಾಧ್ಯತೆ ಇದೆ. ಬೆಲೆ ಕುಸಿತದಿಂದ ರೈತರಿಗೆ ಅಪಾರ ಹಾನಿಯಾಗುವ ಸಾಧ್ಯತೆ ಇರುತ್ತದೆ ಎಂದಿದ್ದಾರೆ.
ಮಾವಿನ ಹಣ್ಣನ್ನು ಮಾಗಿಸಲು ಬಳಸುತ್ತಿರುವ ಕ್ಯಾಲ್ಸಿಯಂ ಕಾರ್ಬೈಡ್ ಒಂದು ಇಂಡಸ್ಟ್ರಿಯಲ್ ಗ್ರೇಡ್ ರಾಸಾಯನಿಕವಾಗಿದೆ. ಇದು ಆರ್ಸೆನಿಕ್ ಹಾಗೂ ಫಾಸ್ಫರಸ್ ಒಳಗೊಂಡಂತ ಒಂದು ಸಂಯುಕ್ತ ಪದಾರ್ಥ. ಹಲವಾರು ರಾಷ್ಟ್ರಗಳಲ್ಲಿ ಇದನ್ನು ಈಗಾಗಲೇ ನಿಷೇಧಿಸಲಾಗಿದೆ. ಭಾರತದಲ್ಲಿಯೂ ಈ ರಾಸಾಯನಿಕದ ಬಳಕೆಯನ್ನು ನಿಷೇಧಿಸಿದ್ದರೂ ಇದರ ಬಳಕೆ ಅವ್ಯಾಹತವಾಗಿ ನಡೆಯುತ್ತಿದೆ. ಈ ರಾಸಾಯನಿಕವನ್ನು ಮಾವಿನ ಹಣ್ಣು ಮಾಗಿಸಲು ನೀರಿನಲ್ಲಿ ಕರಗಿಸಿದಾಗ ಅದರಿಂದ ಅಸಿಟಲೀನ್ ಎಂಬ ವಸ್ತು ಉತ್ಪಾದನೆಯಾಗುತ್ತದೆ. ಇದು ಹಣ್ಣನ್ನು ಮಾಗಿಸುತ್ತದೆ. ಆದರೆ, ಇದು ವಿಷಯುಕ್ತವಾಗಿದ್ದು ಮನುಷ್ಯನ ನರ ವ್ಯವಸ್ಥೆಯನ್ನೇ ನಿಶ್ಯಕ್ತಿಗೊಳಿಸುತ್ತದೆ ಮತ್ತು ಮೆದುಳಿಗೆ ಆಮ್ಲಜನಕದ ಸರಬರಾಜನ್ನು ಕಡಿಮೆಗೊಳಿಸುತ್ತದೆ. ಫಾಸ್ಫರಸ್ ಹಾಗೂ ಆರ್ಸೆನಿಕ್ ಅಂತೂ ಮನುಷ್ಯರಲ್ಲಿ ತೀವ್ರತರದ ಆರೋಗ್ಯ ಸಮಸ್ಯೆಗಳನ್ನು ತಂದೊಡ್ಡುತ್ತದೆ ಎಂದು ಹೇಳಿದ್ದಾರೆ.
ಕಾನೂನು ಕ್ರಮಕ್ಕೆ ಕೋರಿಕೆ: ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ಈಗಾಗಲೇ ಆಹಾರ ಸುರಕ್ಷತೆ ಆಯುಕ್ತರು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳು ಇವರಿಗೆ ಪತ್ರ ಬರೆದು ನಿಷೇಧಿತ ಕ್ಯಾಲ್ಸಿಯಂ ಕಾರ್ಬೈಡ್ ಬಳಸುತ್ತಿರುವ ವರ್ತಕರ ಮೇಲೆ ಕಾನೂನು ಕ್ರಮ ಕೈಗೊಳ್ಳಲು ಕೋರಿದ್ದಾರೆ. ಇಂತಹ ಪ್ರಕರಣಗಳು ಗಮನಕ್ಕೆ ಬಂದರೆ ಫುಡ್ ಸೇಫ್ಟಿ ಆಫೀಸರ್ಸ್‌ಗೆ ಸಾರ್ವಜನಿಕರು ಮಾಹಿತಿ ನೀಡಬೇಕು ಎಂದು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

