ಚಿಕ್ಕಮಗಳೂರು

ಖಾಸಗಿ ವಿವಿ ವಿರೋಧಿಸಿ ಪ್ರತಿಭಟನೆ

Published On :

ಚಿಕ್ಕಮಗಳೂರು: ರಾಜ್ಯದಲ್ಲಿ ಖಾಸಗಿ ವಿಶ್ವವಿದ್ಯಾನಿಲಯಗಳ ಸ್ಥಾಪನೆಗೆ ಅನುಮತಿ ನೀಡಿರುವುದನ್ನು ಖಂಡಿಸಿ ಎಬಿವಿಪಿ ನೇತೃತ್ವದಲ್ಲಿ ವಿದ್ಯಾರ್ಥಿಗಳು ಮಂಗಳವಾರ ನಗರದಲ್ಲಿ ಪ್ರತಿಭಟನೆ ನಡೆಸಿ ಉನ್ನತ ಶಿಕ್ಷಣ ಸಚಿವ ಸಿ.ಟಿ. ರವಿ ಅವರಿಗೆ ಘೇರಾವ್ ಹಾಕಿದರು.
ಇಲ್ಲಿನ ಎಸ್‌ಟಿಜೆ ಕಾಲೇಜಿನಿಂದ ಮೆರವಣಿಗೆಯಲ್ಲಿ ಹೊರಟ ವಿದ್ಯಾರ್ಥಿಗಳು ಆಜಾದ್ ಪಾರ್ಕ್ ವೃತ್ತದಲ್ಲಿ ಪ್ರತಿಭಟನೆ ನಡೆಸಿ ಬಳಿಕ ಬಿಜೆಪಿ ಕಚೇರಿಗೆ ತೆರಳಿ ಸಚಿವ ಸಿ.ಟಿ. ರವಿ ಅವರನ್ನು ಘೇರಾವ್ ಮಾಡಿದರು.
ರಾಜ್ಯ ಸರ್ಕಾರವು ಕರ್ನಾಟಕದಲ್ಲಿ ಸುಮಾರು 20 ಖಾಸಗಿ ವಿಶ್ವವಿದ್ಯಾನಿಲಯಗಳ ಸ್ಥಾಪನೆಗೆ ಹಸಿರು ನಿಶಾನೆ ತೋರಲು ಹೊರಟಿದೆ. ರಾಜ್ಯದಲ್ಲಿ ಖಾಸಗಿ ವಿವಿಗಳ ಪ್ರಾರಂಭಕ್ಕೆ ಮುಂದಾಗಿರುವ ಸರ್ಕಾರವು ಇವುಗಳಿಗೆ ಸಂಬಂಧಿಸಿದಂತೆ ಯಾವುದೇ ಸ್ಪಷ್ಟ ಮಾರ್ಗಸೂಚಿಗಳನ್ನು ಹೊಂದಿಲ್ಲದಿರುವುದನ್ನು ಎಬಿವಿಪಿ ತೀವ್ರವಾಗಿ ಖಂಡಿಸುತ್ತದೆ.
ಮಾರ್ಗಸೂಚಿ ರೂಪಿಸಿ: ಪ್ರಸ್ತುತ ಅಸ್ತಿತ್ವದಲ್ಲಿರುವ ಖಾಸಗಿ ವಿವಿಗಳಲ್ಲಿ ಮೊದಲಿಗೆ ಮಾರ್ಗಸೂಚಿಗಳನ್ನು ರೂಪಿಸಬೇಕು, ಈ ವಿವಿಗಳು ಸಾಮಾಜಿಕ ನ್ಯಾಯಕ್ಕೆ ಅನುಗುಣವಾಗಿ ಎಲ್ಲಾ ವಿದ್ಯಾರ್ಥಿಗಳು ಭರಿಸುವಂತಹ ಶುಲ್ಕ ನೀತಿಯನ್ನು ಹೊಂದಿರುವಂತೆ ಮೀಸಲಾತಿ, ರೋಸ್ಟರ್ ಪದ್ಧತಿಗಳನ್ನು ಅಳವಡಿಸುವಂತೆ ಹಾಗೂ ಸರ್ಕಾರದ ಮಾರ್ಗಸೂಚಿಗಳಿಗೆ ಅನುಗುಣವಾಗಿ ಕಾರ್ಯನಿರ್ವಹಣೆ ಮಾಡುವಂತೆ ವ್ಯವಸ್ಥೆ ರೂಪಿಸಬೇಕು ಎಂದು ಆಗ್ರಹಿಸಿದರು.
ವಿಧೇಯಕ ಮಂಡನೆ ವಿರೋಧ: ಪ್ರಸ್ತುತ ರಾಜ್ಯ ಸರ್ಕಾರವು ವಿಧಾನ ಮಂಡಲದ ಅಧಿವೇಶನದಲ್ಲಿ ಖಾಸಗಿ ವಿವಿಗಳ ಸ್ಥಾಪನೆಯ ವಿಧೇಯಕ ಮಂಡನೆಯಾಗಿದೆ ಇದನ್ನು ಎಬಿವಿಪಿ  ತೀವ್ರವಾಗಿ ವಿರೋಧಿಸುತ್ತದೆ. ಯಾವುದೇ ಪೂರ್ವ ತಯಾರಿ, ಸ್ಪಷ್ಟ ಮಾರ್ಗಸೂಚಿಗಳಿಲ್ಲದೇ ಖಾಸಗಿ ವಿವಿ ಪ್ರಾರಂಭಕ್ಕೆ ಅನುಮತಿ ನೀಡಲು ಹೊರಟಿರುವ ಸರ್ಕಾರದ ಕ್ರಮವು ಹಲವು ಅನುಮಾನಗಳಿಗೆ ಕಾರಣವಾಗಿದೆ. ಈಗಾಗಲೇ ಯು.ಜಿ.ಸಿ.ಯ ಕಪ್ಪು ಪಟ್ಟಿಯಲ್ಲಿ ಸೇರಿರುವ ಹಲವು ಡೀಮ್ಡ್ ವಿವಿಗಳು ಬೇರೆ ಬೇರೆ ಹೆಸರಿನಲ್ಲಿ ಖಾಸಗಿ ವಿವಿಗಳ ಸ್ಥಾಪನೆಗೆ ಮುಂದಾಗಿರುವ ಮಾಹಿತಿಗಳಿದ್ದು, ಸರ್ಕಾರ ಈ ವಿಚಾರವನ್ನು ಲಘುವಾಗಿ ಪರಿಗಣಿಸಬಾರದೆಂದು ಆಗ್ರಹಿಸಿದ್ದಾರೆ.
 ಮಾನ್ಯತೆಯಿಲ್ಲದೇ ಅಸ್ತಿತ್ವಕ್ಕೆ: ಖಾಸಗಿ ವಿಶ್ವವಿದ್ಯಾಲಯಗಳು ರಾಜ್ಯದಲ್ಲಿ ತಮ್ಮ ವ್ಯಾಪಾರ ಕೇಂದ್ರಗಳನ್ನು ತೆರೆಯಲು ರಾಜ್ಯ ಅಥವಾ ಕೇಂದ್ರ ಸರ್ಕಾರದ ಪೂರ್ವಾನುಮತಿಯಿಲ್ಲದೇ, ಯು.ಜಿ.ಸಿ.ಯ ಮಾನ್ಯತೆಯಿಲ್ಲದೇ ಅಸ್ತಿತ್ವಕ್ಕೆ ಬರಲು ಪ್ರಯತ್ನಿಸುತ್ತಿವೆ. ಸಾಮಾಜಿಕ ನ್ಯಾಯದ ದೃಷ್ಟಿಯಿಂದ ಬಡ- ಪ್ರತಿಭಾವಂತ ವಿದ್ಯಾರ್ಥಿಗಳ ಹಿತ ಕಾಪಾಡಲು ಖಾಸಗಿ ವಿ.ವಿ.ಗಳನ್ನು ನಿಯಂತ್ರಿಸಲು ಕೆಲವು ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು  ಒತ್ತಾಯಿಸಿದ್ದಾರೆ.
ಸೀಟು ಹಂಚಿಕೆ, ಶುಲ್ಕ ನಿಗದಿ, ಸಿಬ್ಬಂದಿ ನೇಮಕ, ರೋಸ್ಟರ್ ನಿಯಮಾವಳಿಗಳು, ಮೆರಿಟ್ ಇವುಗಳ ನಿಯಂತ್ರಣ ಸಂಪೂರ್ಣವಾಗಿ ಸರ್ಕಾರವೇ ವಹಿಸಿಕೊಳ್ಳಬೇಕು. ಶೇ.50 ರಷ್ಟು ವಿದ್ಯಾರ್ಥಿಗಳ ಶುಲ್ಕವನ್ನು ಸರ್ಕಾರವೇ ನಿಗದಿಪಡಿಸಬೇಕು. ಖಾಸಗಿ ವಿ.ವಿ.ಗಳಲ್ಲಿನ ಶುಲ್ಕ ನೀತಿಯೂ ಸಮಾಜದ ಎಲ್ಲ ಸ್ತರದ ವಿದ್ಯಾರ್ಥಿಗಳು ಭರಿಸುವಂತಿರಬೇಕು.
ವಿಶ್ವವಿದ್ಯಾನಿಲಯಗಳ ಶುಲ್ಕ ನೀತಿ ಸಂರಚನಾ ಸಮಿತಿಯಲ್ಲಿ ವಿಧಾನಸಭೆ ಮತ್ತು ವಿಧಾನಪರಿಷತ್ತಿನಿಂದ ಕನಿಷ್ಟ ಇಬ್ಬರು ಜನಪ್ರತಿನಿಧಿಗಳನ್ನು ನಾಮನಿರ್ದೇಶನ ಮಾಡಬೇಕು. ಈ ಸಮಿತಿಯನ್ನು ವಿಶ್ರಾಂತ ಕುಲಪತಿಗಳೊಬ್ಬರ ನೇತೃತ್ವದಲ್ಲಿ ರಚಿಸಬೇಕು.
ರೋಸ್ಟರ್ ಪದ್ಧತಿ ಅನುಸರಿಸಿ: ಈ ವಿಶ್ವವಿದ್ಯಾನಿಲಯಗಳು ಸಾಮಾಜಿಕ ನ್ಯಾಯಕ್ಕೆ ಅನುಗುಣವಾಗಿ ವಿದ್ಯಾರ್ಥಿಗಳ ದಾಖಲಾತಿ ಮತ್ತು ಸಿಬ್ಬಂದಿಗಳ ನೇಮಕಾತಿಯಲ್ಲಿ ಮೀಸಲಾತಿ ಮತ್ತು ರೋಸ್ಟರ್ ಪದ್ಧತಿಯನ್ನು ಅನುಸರಿಸಬೇಕು. ಯು.ಜಿ.ಸಿ. ಯ ಕಪ್ಪುಪಟ್ಟಿಯಲ್ಲಿರುವ ರಾಜ್ಯದ ಕೆಲವು ಡೀಮ್ಡ್ ವಿಶ್ವವಿದ್ಯಾನಿಲಯಗಳು ಬೇರೆ ಬೇರೆ ಹೆಸರುಗಳಲ್ಲಿ ಖಾಸಗಿ ವಿಶ್ವವಿದ್ಯಾನಿಲಯ ತೆರೆಯುವ ಹುನ್ನಾರ ನಡೆಸುತ್ತಿದ್ದು ಇದನ್ನು ತಡೆಗಟ್ಟಬೇಕು ಎಂದು ಆಗ್ರಹಿಸಿದರು.
ಖಾಸಗಿ ವಿ.ವಿ.ಗಳು ಶುಲ್ಕ ನಿಯಂತ್ರಣ ಹಾಗೂ ಶಿಕ್ಷಣ ಗುಣಮಟ್ಟದ ಬಗ್ಗೆ ರಾಜ್ಯ ಸರ್ಕಾರದ ನಿಯಂತ್ರಣವಿರಬೇಕು. ಖಾಸಗಿ ವಿ.ವಿ.ಗಳಲ್ಲಿ ಬಡ-ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಕಡಿಮೆ ಶುಲ್ಕ ಹಾಗೂ ಎಸ್ಸಿ, ಎಸ್ಟಿ ವಿದ್ಯಾರ್ಥಿಗಳಿಗೆ ರಿಯಾಯಿತಿ ಶುಲ್ಕ ಇರಬೇಕು. ಇದನ್ನು ಸರ್ಕಾರವೇ ನಿರ್ಧರಿಸಬೇಕು. ಯಾವುದೇ ಕಾರಣಕ್ಕೂ ಈಗ ಬಿಸಿನೆಸ್ ಅಲೈಯನ್ಸ್ ವಿ.ವಿ.ಯಲ್ಲಿರುವಂತೆ ಎಲ್ಲರಿಗೂ ಒಂದೇ ಶುಲ್ಕ ಇರಬಾರದು ಎಂದು ಆಗ್ರಹಿಸಿದ್ದಾರೆ.
ಪ್ರತಿಭಟನಾ ಸ್ಥಳಕ್ಕೆ ಸಚಿವ ಸಿ.ಟಿ. ರವಿ ಅವರು ಬರುವುದಾಗಿ ತಿಳಿಸಿದ್ದರು. ಆದರೆ, ಕೊನೆ ಕ್ಷಣದಲ್ಲಿ ಅವರು ಸ್ಥಳಕ್ಕೆ ಆಗಮಿಸದೆ ಇದ್ದರಿಂದ ಪ್ರತಿಭಟನಾಕಾರರು ಬಿಜೆಪಿ ಕಚೇರಿಗೆ ತೆರಳಿ, ಸಚಿವರಿಗೆ ಘೇರಾವ್ ಹಾಕಿದರು.
ಪ್ರತಿಭಟನೆಯಲ್ಲಿ ಎಬಿವಿಪಿ ಮುಖಂಡರಾದ ದಯಾನಂದ್ ತಿರುಗಣ, ಜಿಲ್ಲಾ ಸಂಚಾಲಕ್ ಧನಿಕ್ ಮೂಡಿಗೆರೆ, ಜಿಲ್ಲಾ ಪ್ರಮುಖ್ ಬಾಳಪ್ಪ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಸಂತೋಷ್ ಕೋಟ್ಯಾನ್, ನಗರ ಸಹ ಕಾರ್ಯದರ್ಶಿ ಶರತ್, ನವೀನ್ ಪೂಜಾರಿ ಮತ್ತು ಸ್ವರೂಪ್, ಸುಪ್ರಿತ, ಶ್ರೀಕಾಂತ್, ಮೋಹನ, ಸುನೀಲ್, ಅಶೀತ್, ಧನಂಜಯ್ ಗೌಡ, ಭರತ್, ಪುನೀತ್ ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.