ಕಾಂಗ್ರೆಸ್ನಿಂದ ಅಭಿವೃದ್ಧಿಗೆ ಅಡ್ಡಿ ಇಲ್ಲ
ಕ.ಪ್ರ.ವಾರ್ತೆ, ಚಿಕ್ಕಮಗಳೂರು, ಜು.10
ಕಾಂಗ್ರೆಸ್ನಿಂದ ಅಭಿವೃದ್ಧಿ ಕಾಮಗಾರಿಗೆ ಅಡ್ಡಿ ಎಂಬ ವಿಪಕ್ಷ ಶಾಸಕರ ಹೇಳಿಕೆ ಅರ್ಥಹೀನ ಎಂದು ವಿಧಾನಪರಿಷತ್ ಸದಸ್ಯೆ ಗಾಯಿತ್ರಿ ಶಾಂತೇಗೌಡ ಹೇಳಿದ್ದಾರೆ.
ಜನರ ತೆರಿಗೆ ಹಣ ದುರುಪಯೋಗವಾಗುವುದನ್ನು ತಡೆಯುವ ಉದ್ದೇಶದಿಂದ ಕೆಲವು ಕಾಮಗಾರಿಗಳಿಗೆ ನೀಡಿದ ಆದೇಶದ ಬಗ್ಗೆ ಮರು ಪರಿಶೀಲನೆ ಮಾಡುವಂತೆ ರಾಜ್ಯದ ಲೋಕೋಪಯೋಗಿ ಸಚಿವರಿಗೆ ಪತ್ರ ಬರೆಯಲಾಗಿದೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ತಪ್ಪು ಮಾಹಿತಿ: ಸಚಿವರಿಗೆ ಪತ್ರ ಬರೆದಿರುವುದಕ್ಕೂ, ನಗರದಲ್ಲಿ ರಸ್ತೆ ಕಾಮಗಾರಿ ನಿಲ್ಲಿಸಿರುವುದಕ್ಕೂ ಯಾವುದೇ ಸಂಬಂಧ ಇಲ್ಲ. ಶಾಸಕರು ಜನರಿಗೆ ತಪ್ಪು ಮಾಹಿತಿ ನೀಡುತ್ತಿದ್ದಾರೆ. ತಮ್ಮ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಹೇಳಿದರು.
ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದಲ್ಲಿ ವಿವಿಧ ಕಾಮಗಾರಿಗಳಿಗೆ 20 ಕೋಟಿ ಹಾಗೂ ಶೃಂಗೇರಿ ವಿಧಾನಸಭಾ ಕ್ಷೇತ್ರಕ್ಕೆ 16 ಕೋಟಿ ರುಪಾಯಿ ಹಿಂದಿನ ಸರ್ಕಾರ ಬಿಡುಗಡೆ ಮಾಡಿದೆ.
ಆದರೆ, ಈ ಕಾಮಗಾರಿಗಳನ್ನು ಲೋಕೋಪಯೋಗಿ ಇಲಾಖೆಗಳಿಂದ ತೆಗೆದುಕೊಳ್ಳಲಾಗಿದ್ದು, ಈ ಕಾಮಗಾರಿಗಳಿಗೆ ಸಿಂಗಲ್ ಟೆಂಡರ್ ಬಂದಿರುವುದರಿಂದ ಅದನ್ನು ಮರು ಪರಿಶೀಲನೆ ಮಾಡುವಂತೆ ಲೋಕೋಪಯೋಗಿ ಸಚಿವರಿಗೆ ಪತ್ರ ಬರೆದು ಮನವಿ ಮಾಡಲಾಗಿದೆ. ಆದರೆ, ಚಿಕ್ಕಮಗಳೂರು ಮತ್ತು ಶೃಂಗೇರಿ ಕ್ಷೇತ್ರದ ಶಾಸಕರು ವಾಸ್ತವ ಸಂಗತಿಯನ್ನು ಮುಚ್ಚಿಟ್ಟು ತಮ್ಮ ವಿರುದ್ಧ ತಪ್ಪು ಹೇಳಿಕೆ ನೀಡುತ್ತಿದ್ದಾರೆ ಎಂದರು.
ಲೋಪಗಳು ನಡೆದಿವೆ: ಟೆಂಡರ್ ಪಾರದರ್ಶಕವಾಗಿ ನಡೆಯಬೇಕು. ಯಾವುದೇ ಅನುಮಾನಗಳಿಗೆ, ಭ್ರಷ್ಟಾಚಾರಕ್ಕೆ ಅವಕಾಶವಾಗಬಾರದು ಎಂಬ ಉದ್ದೇಶದಿಂದ ಸಚಿವರಿಗೆ ಪತ್ರ ಬರೆಯಲಾಗಿದೆ. ಈ ಹಿಂದೆ ಇಂತಹ ಹಲವು ಲೋಪಗಳು ನಡೆದಿವೆ. ಅವುಗಳನ್ನು ಬಯಲಿಗೆಳೆಯುವ ಕೆಲಸವನ್ನು ಪಕ್ಷ ಮಾಡಲಿದೆ ಎಂದರು.
ಅಪಪ್ರಚಾರ: ನಗರದ ರಸ್ತೆಗಳು ಕೆಸರುಮಯವಾಗಿರಲು ಕಾರಣ ತಾವೆಂದು ಶಾಸಕರು ಅಪಪ್ರಚಾರ ಮಾಡುತ್ತಿದ್ದಾರೆ. ಆದರೆ, ಇದು, ಅಪ್ಪಟ ಸುಳ್ಳು. ಒಳ ಚರಂಡಿಗಾಗಿ ಮ್ಯಾನ್ಹೋಲ್ ಹಾಗೂ ಚೇಂಬರ್ ನಿರ್ಮಾಣ, ಪೈಪ್ಗಳ ಜೊಡಣೆಗೆ ಚರಂಡಿ ತೋಡಿರುವ ಭಾಗಗಳಲ್ಲಿ ರಸ್ತೆಗಳು ತುಂಬಾ ಹಾಳಾಗಿವೆ. ಮಳೆಯಿಂದಾಗಿ ಕೆಸರಾಗಿವೆ ಎಂದರು.
ಯುಜಿಡಿ ಕಾಮಗಾರಿ ನಡೆದಿರುವ ಸ್ಥಳದಲ್ಲಿ ಒಂದು ಮಳೆಗಾಲ ಕಳೆಯುವುದರೊಳಗೆ ಯಾವುದೇ ಕಾಮಗಾರಿಯನ್ನು ತೆಗೆದುಕೊಳ್ಳಬಾರದು. ಹಾಗೇನಾದರೂ ಡಾಂಬರ್ ರಸ್ತೆ ನಿರ್ಮಾಣ ಮಾಡಿದರೆ, ರಸ್ತೆ ಬೇಗ ಹಾಳಾಗುತ್ತದೆ ಎಂದು ಒಳಚರಂಡಿ ಮತ್ತು ನೀರು ಸರಬರಾಜು ಮಂಡಳಿ ನಗರಸಭೆಗೆ ಹಾಗೂ ಪೌರಾಡಳಿತ ನಿರ್ದೇಶನಾಲಯಕ್ಕೆ ಪತ್ರ ಬರೆದಿದೆ. ಅದುದರಿಂದ ಮಳೆಗಾಲ ಮುಗಿದ ಬಳಿಕವೇ ಕಾಮಗಾರಿಯನ್ನು ಮುಂದುವರೆಸಲು ಸಾಧ್ಯ. ಈ ತಾಂತ್ರಿಕ ಕಾರಣ ಗೊತ್ತಿದ್ದರೂ ಶಾಸಕರು ಜನರಿಗೆ ತಮ್ಮ ವಿರುದ್ಧ ತಪ್ಪು ಮಾಹಿತಿ ನೀಡುತ್ತಿದ್ದಾರೆ ಎಂದು ಆರೋಪಿಸಿದರು.
ನಗರದ ಕೆಂಪನಹಳ್ಳಿಯ ಮುಖ್ಯ ರಸ್ತೆಯಲ್ಲಿ ತಿಂಗಳ ಹಿಂದಷ್ಟೆ ಚರಂಡಿ ನಿರ್ಮಿಸಲಾಗಿದೆ. ಅದು ಕುಸಿದು ಬಿದ್ದಿದೆ. ಕಬ್ಬಿಣದ ರಾಡ್ಗಳನ್ನು ಕೇವಲ ಸೀಮೆಂಟ್, ಮರಳು, ಜೆಲ್ಲಿ ಬಳಸಲಾಗಿದೆ. ಇದಕ್ಕೆ ಹೊಂದಿಕೊಂಡಂತೆ ಇರುವ ರತ್ನಗಿರಿ ಬೋರೆ ಬಡಾವಣೆಯಲ್ಲಿ ತಿಂಗಳು ತುಂಬುವ ಮೊದಲೇ ಅಭಿವೃದ್ಧಿಗೊಂಡಿದ್ದ ಡಾಂಬರೀಕರಣ ಸಂಪೂರ್ಣ ಹಾನಿಗೊಂಡಿದೆ.
ಅದಕ್ಕೆ ತೇಪೆ ಹಾಕುವ ಕೆಲಸ ನಡೆದಿದೆ. ಬಸವನಹಳ್ಳಿ ಮುಖ್ಯ ರಸ್ತೆಯಲ್ಲಿ ಗುಂಡಿಗಳು ನಿರ್ಮಾಣಗೊಳ್ಳುತ್ತಿವೆ. ಕಳಪೆ ಕಾಮಗಾರಿಗೆ ಇವೆಲ್ಲಾ ನಿದರ್ಶನವಾಗಿದೆ ಎಂದರು.
ನಗರದ ಮಾರ್ಕೇಟ್ ರಸ್ತೆ ಮತ್ತು ಎಂ.ಜಿ. ರಸ್ತೆಯ ಕಾಂಕ್ರೀಟಿಕರಣ ಹಾಗೂ ಪುಟ್ಪಾತ್ ಸೇರಿದಂತೆ ಇತರೆ ಕಾಮಗಾರಿಗಳನ್ನು 20 ಕೋಟಿ ರುಪಾಯಿ ವೆಚ್ಚದಲ್ಲಿ ನಿರ್ಮಾಣ ಮಾಡಲು ಟೆಂಡರ್ ಕರೆಯಲಾಗಿದೆ.
ಆದರೆ, ಇದರಲ್ಲಿ ಹಲವು ಲೋಪದೋಷಗಳಿವೆ. ಜತೆಗೆ ಒಬ್ಬರೆ ಗುತ್ತಿಗೆದಾರರು ಟೆಂಡರ್ ಹಾಕಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಇಲ್ಲಿನ 20 ಕೋಟಿ ರುಪಾಯಿಗಳ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಗುತ್ತಿಗೆದಾರರು ನಮೂದಿಸಿರುವ ದರ ತುಂಬಾ ಹೆಚ್ಚುವರಿಯಾಗಿರುವುದರಿಂದ ಈ ಬಗ್ಗೆ ಸರ್ಕಾರದ ಮಟ್ಟದಲ್ಲಿ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳು ಸರ್ಕಾರಕ್ಕೆ ಪತ್ರ ಬರೆದಿದ್ದಾರೆ ಎಂದು ಹೇಳಿದರು.
ಕೆಲವು ಕಾಮಗಾರಿಗಳಿಗೆ ಕಾರ್ಯಾದೇಶ ನೀಡದೆ ಕಾಮಗಾರಿಗಳನ್ನು ಮಾಡಿಸಲಾಗಿದೆ ಎಂದ ಗಾಯಿತ್ರಿ ಶಾಂತೇಗೌಡ, ಜಿಲ್ಲೆಯ ಅಭಿವೃದ್ಧಿಯ ಬಗ್ಗೆ ನಮಗೂ ಕಾಳಿಜಿ ಇದೆ. ಜಿಲ್ಲೆಗೆ ಬಂದ ಹಣ ತಡೆ ಹಿಡಿಯುವಂತೆ ಯಾರಿಗೂ ಪತ್ರ ಬರೆದಿಲ್ಲ ಎಂದು ಸ್ಪಷ್ಟಪಡಿಸಿದರು.
ಕಳೆದ ಐದು ದಶಕಗಳ ಹಿಂದೆ ನಿರ್ಮಾಣಗೊಂಡಿದ್ದ ಕೆ.ಎಂ. ರಸ್ತೆಗೆ ಕಳೆದ ವರ್ಷ ಡಾಂಬರ್ ಹಾಕಲಾಗಿದ್ದು, ಈ ಸಂದರ್ಭದಲ್ಲಿ ಫಿಲ್ಟರ್ ಮರಳು ಬಳಸಿದ್ದರಿಂದ ರಸ್ತೆ ಹಲವೆಡೆ ಹಾಳಾಗಿವೆ.
ಇನ್ನು ಚಿಕ್ಕಮಗಳೂರು ಕ್ಷೇತ್ರದಲ್ಲಿ ಚುನಾವಣಾ ಹಿಂದಿನ ದಿನ ಕಾಂಕ್ರಿಟ್ ರಸ್ತೆ ನಿರ್ಮಾಣಕ್ಕೆ ಶಾಸಕರು ಚಾಲನೆ ನೀಡಿದ್ದು, ಇದೀಗ ಈ ಕಾಮಗಾರಿ ಸ್ಥಗಿತಗೊಂಡಿದ್ದರಿಂದ ಆ ತಪ್ಪನ್ನು ತಮ್ಮ ಮೇಲೆ ಹೊರೆಸಿದ್ದಾರೆ ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

