ಕಾವೇರಿ ಗ್ರಾಮೀಣ ಬ್ಯಾಂಕ್ನಲ್ಲಿ 716 ಹುದ್ದೆಗಳು
ಚಿಕ್ಕಮಗಳೂರು: ಕರ್ನಾಟಕ ದಕ್ಷಿಣ ಭಾಗದ ಹತ್ತು ಜಿಲ್ಲೆಗಳಲ್ಲಿ ಬ್ಯಾಂಕಿಂಗ್ ಸೇವೆ ಸಲ್ಲಿಸುತ್ತಿರುವ ಕಾವೇರಿ ಗ್ರಾಮೀಣ ಬ್ಯಾಂಕ್ ಪ್ರಸಕ್ತ ಸಾಲಿನಲ್ಲಿ 716 ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲಿದೆ ಎಂದು ಬ್ಯಾಂಕಿನ ಅಧ್ಯಕ್ಷ ಸೋಮಶೇಖರಶಾಸ್ತ್ರಿ ಹೇಳಿದ್ದಾರೆ.
ಆಲ್ದೂರಿನಲ್ಲಿ ಕಾವೇರಿ ಗ್ರಾಮೀಣ ಬ್ಯಾಂಕಿನ 346ನೇ ಶಾಖೆ ಉದ್ಘಾಟನೆಗಾಗಿ ಆಗಮಿಸಿದ್ದ ಅವರು, ಬ್ಯಾಂಕ್ ಅಧಿಕಾರಿಗಳೊಂದಿಗೆ ಮಾತನಾಡಿ, ಚಿಕ್ಕಮಗಳೂರು ಕೊಡಗು ಗ್ರಾಮೀಣ ಬ್ಯಾಂಕ್, ಕಾವೇರಿ ಕಲ್ಪತರು ಹಾಗೂ ವಿಶ್ವೇಶ್ವರಯ್ಯ ಗ್ರಾಮೀಣ ಬ್ಯಾಂಕ್ಗಳ ವಿಲೀನದೊಂದಿಗೆ 2012 ರ ನವೆಂಬರ್ 1 ರಂದು ಕಾವೇರಿ ಗ್ರಾಮೀಣ ಬ್ಯಾಂಕ್ ಕಾರ್ಯನಿರ್ವಹಿಸುತ್ತಿದೆ. ಚಿಕ್ಕಮಗಳೂರು ಜಿಲ್ಲೆ ಸೇರಿದಂತೆ 350 ಶಾಖೆಗಳನ್ನು ಹೊಂದುತ್ತಿದೆ ಎಂದರು.
ಬ್ಯಾಂಕ್ ಸಿಬ್ಬಂದಿ ಆಯ್ಕೆ: 265 ಅಧಿಕಾರಿಗಳು ಮತ್ತು 451 ಗುಮಾಸ್ತ ಹುದ್ದೆಗಳನ್ನು ಕಾವೇರಿ ಗ್ರಾಮೀಣ ಬ್ಯಾಂಕ್ ಭರ್ತಿ ಮಾಡಿಕೊಳ್ಳಲು ಉದ್ದೇಶಿಸಿದ್ದು, ಮುಂಬೈನ ಬ್ಯಾಂಕ್ ಸಿಬ್ಬಂದಿ ಆಯ್ಕೆ ಸಂಸ್ಥೆ ಮೂಲಕ ಈಗಾಗಲೇ ಅರ್ಜಿ ಆಹ್ವಾನಿಸಲಾಗಿದೆ. ಸೆಪ್ಟಂಬರ್ನಲ್ಲಿ ಇದಕ್ಕಾಗಿ ಪರೀಕ್ಷೆ ನಡೆಸುತ್ತಿದ್ದು, ಹೆಚ್ಚು ಸ್ಥಳೀಯ ಅಭ್ಯರ್ಥಿಗಳು ಅರ್ಹತೆಗೆ ಅನುಗುಣವಾಗಿ ಬ್ಯಾಂಕಿನಲ್ಲಿ ಸೇರ್ಪಡೆಯಾಗಬೇಕೆಂಬುದು ಆಶಯ ಎಂದ ಅಧ್ಯಕ್ಷರು, ವಾಣಿಜ್ಯ ಬ್ಯಾಂಕಿನ ಸಿಬ್ಬಂದಿಗೆ ಸಮನಾಗಿ ಇಲ್ಲೂ ವೇತನ ನೀಡಲಾಗುತ್ತಿದೆ ಎಂದು ಹೇಳಿದರು.
ಠೇವಣಿಗಳ ಅನುಪಾತ: ಜೂ.30ರ ಅಂತ್ಯಕ್ಕೆ 19.11 ಕೋಟಿ ರು. ನಿವ್ವಳ ಲಾಭ ಸಂಪಾದಿಸಿದ್ದು, 3830.47 ಕೋಟಿ ರು. ಠೇವಣಿ ಹೊಂದಿದೆ. 3,119 ಕೋಟಿ ರು. ಮುಂಗಡ ನೀಡಿದ್ದು, 6,950 ಕೋಟಿ ರು. ಒಟ್ಟು ವ್ಯವಹಾರ ನಡೆಸಲಾಗುತ್ತಿದೆ. ಸಾಲ ಮತ್ತು ಠೇವಣಿಗಳ ಅನುಪಾತ 81.44 ಹೊಂದಿದೆ. 1613.55 ಕೋಟಿ ರು. ಕೃಷಿಸಾಲ ನೀಡಲಾಗಿದೆ. ಕೃಷಿಸಾಲ ಮತ್ತು ಮುಂಗಡಗಳ ಅನುಪಾತ 51.72 ಇದೆ. ಕಳೆದ ವರ್ಷದ ವ್ಯವಹಾರ ಬೆಳವಣಿಗೆ ಶೇ. 17.73 ರಷ್ಟಿದ್ದು, ಈ ವರ್ಷ ಶೇ. 25 ರಷ್ಟು ಬೆಳವಣಿಗೆಯ ಗುರಿಯನ್ನು ಬ್ಯಾಂಕ್ ಹೊಂದಿದೆ ಎಂದು ತಿಳಿಸಿದರು.
ಆರ್ಥಿಕ ಸೇರ್ಪಡೆ: ಪ್ರಸ್ತುತ ಹಣಕಾಸು ವರ್ಷದ ಕೊನೆಯಲ್ಲಿ 400 ಶಾಖೆಗಳ ಗುರಿ ಹೊಂದಿದ್ದು, ಇದೇ ವರ್ಷದಲ್ಲಿ 40 ಶಾಖೆಗಳನ್ನು ಆರಂಭಿಸುವುದರ ಮೂಲಕ ಆರ್ಥಿಕ ಸೇರ್ಪಡೆ ಯೋಜನೆಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲಾಗುವುದು. 2015 ರ ಮಾರ್ಚ್ ವೇಳೆಗೆ 500 ಶಾಖೆಗಳನ್ನು ಹೊಂದಲು ಯೋಜಿಸಲಾಗಿದೆ. ಇತರೆ ಬ್ಯಾಂಕ್ಗಳಂತೆಯೇ ಎಲ್ಲ ರೀತಿಯ ಗ್ರಾಹಕ ಸೇವೆಯನ್ನು ಕಾವೇರಿ ಗ್ರಾಮೀಣ ಬ್ಯಾಂಕ್ ನೀಡುತ್ತಿದ್ದು, ಶೀಘ್ರವೇ ಎ.ಟಿ.ಎಂ. ಕಾರ್ಡ್ ನೀಡಲು ಉದ್ದೇಶಿಸಿದೆ.
ಸರ್ಕಾರದ ಕಾರ್ಯಕ್ರಮಗಳಲ್ಲಿ ಕ್ರೀಯಾಶೀಲವಾಗಿ ಕಾರ್ಯನಿರ್ವಹಿಸುತ್ತಿದ್ದು, ಬ್ಯಾಂಕ್ ಖಾತೆಗೆ ಆಧಾರ್ ಸಂಖ್ಯೆ ಜೋಡಣೆಯ ಕಾರ್ಯದಲ್ಲಿ ಮುಂಚೂಣಿಯಲ್ಲಿದೆ ಎಂದರು.
ಬ್ಯಾಂಕಿನ ಪ್ರಧಾನ ವ್ಯವಸ್ಥಾಪಕ ಜನಾರ್ಧನಯ್ಯ ಮತ್ತು ಪ್ರಸನ್ನ ನರಸಿಂಹರಾವ್, ಚಿಕ್ಕಮಗಳೂರು ಪ್ರಾದೇಶಿಕ ಕಚೇರಿ ವ್ಯವಸ್ಥಾಪಕ ಎಚ್.ಎಸ್. ಗುರುನಾಥ್ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

