ಶಿಕ್ಷಣ ಮಾತೃಭಾಷೆಯಲ್ಲಿದ್ದರೆ ಜ್ಞಾನ ವೃದ್ಧಿಗೆ ಸಹಕಾರಿ
ಚಿಕ್ಕಮಗಳೂರು: ಪ್ರಾಥಮಿಕ ಹಂತದ ಶಿಕ್ಷಣ ಮಾತೃಭಾಷೆಯಲ್ಲಿದ್ದಾಗ ಮಕ್ಕಳ ಜ್ಞಾನ ವೃದ್ಧಿಗೆ ಸಹಕಾರಿಯಾಗುತ್ತದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ರಾಜೇಗೌಡ ಹೇಳಿದ್ದಾರೆ.
ನಗರದ ಐ.ಜಿ. ರಸ್ತೆಯ ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶನಿವಾರ ಬೈತುಲ್ಮಾಲ್ ಸಂಸ್ಥೆ ಹಮ್ಮಿಕೊಂಡಿದ್ದ ಉಚಿತ ಸಮವಸ್ತ್ರ ಮತ್ತು ನೊಟ್ ಪುಸ್ತಕ ವಿತರಣೆ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಭವಿಷ್ಯ ರೂಪಿಸಿ: ಜ್ಞಾನಕ್ಕೂ ಭಾಷೆಗೂ ಸಂಬಂಧವಿಲ್ಲ. ಮುಸ್ಲಿಂ ಸಮುದಾಯದವರು ಉರ್ದು ಅಳವಡಿಸಿಕೊಂಡಿರುವುದರಿಂದ ಪ್ರಾಥಮಿಕ ಹಂತದ ಶಿಕ್ಷಣ ಮಾತೃ ಭಾಷೆಯಲ್ಲಿದ್ದರೆ ಸುಲಭವಾಗುತ್ತದೆ. ಮಕ್ಕಳ ಕಲಿಕೆ ಶಾಲೆಯಿಂದ ಮಾತ್ರ ಸಾಧ್ಯವಿಲ್ಲ, ಪೋಷಕರಿಗೂ ಶಿಕ್ಷಕರಷ್ಟೇ ಜವಾಬ್ದಾರಿ ಇರುತ್ತದೆ. ಮಕ್ಕಳಿಗಿಂತ ದೊಡ್ಡ ಆಸ್ತಿ ಬೇರೊಂದಿಲ್ಲ, ಮಕ್ಕಳಿಗೆ ವಿದ್ಯೆಯೇ ಸಿರಿವಂತಿಕೆ ತಂದು ಕೊಟ್ಟು ಬದುಕಿಗೆ ಆಧಾರವಾಗಿ ಭವಿಷ್ಯ ರೂಪಿಸಿಕೊಳ್ಳಲು ಸಹಕಾರಿಯಾಗುತ್ತದೆ ಎಂದರು.
ನೂತನ ಕಟ್ಟಡ: ಕ್ಷೇತ್ರದಲ್ಲಿ 250 ಮಕ್ಕಳನ್ನು ಹೊಂದಿರುವ ಕೆಲವೇ ಸರ್ಕಾರಿ ಶಾಲೆಗಳಲ್ಲಿ ಇದು ಒಂದು ಎಂಬುದು ಹೆಮ್ಮೆಯ ವಿಷಯ. ಈ ಶಾಲೆಯಲ್ಲಿನ ಕೊಠಡಿ ದುರಸ್ತಿಗೆ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸುತ್ತೇನೆ ಅಥವಾ ನೂತನ ಕಟ್ಟಡ ನಿರ್ಮಿಸಲು ಅವಕಾಶವಿದ್ದರೆ ಅದಕ್ಕೂ ಸಹಕರಿಸುತ್ತೇನೆ ಎಂದು ತಿಳಿಸಿದ ಅವರು, ಉರ್ದು ಶಾಲೆಗಳಲ್ಲಿ ಈ ಸಾಲಿನಿಂದ ನಲಿಕಲಿ ಆರಂಭವಾಗುತ್ತದೆ ಎಂದು ಹೇಳಿದರು.
ಪೋಷಕರ ತಾತ್ಸಾರ: ಪ್ರಗತಿಪರ ಸಂಘಟನೆ ಮುಖಂಡ ಬಿ. ಅಮ್ಜದ್ ಮಾತನಾಡಿ, ಜಾಗತೀಕರಣ ಯುಗದಲ್ಲಿ ವಿಜ್ಞಾನ ತಂತ್ರಜ್ಞಾನಗಳ ನಾಗಲೋಟದಲ್ಲಿ ಬೆಳೆಯುತ್ತಿದೆ. ಪೋಷಕರ ತಾತ್ಸಾರ ಮನೋಭಾವ, ಸರ್ಕಾರದ ತಪ್ಪು ಶಿಕ್ಷಣ ನೀತಿಗಳಿಂದ ಖಾಸಗಿ ಶಿಕ್ಷಣ ಸಂಸ್ಥೆಗಳು ನಾಯಿಕೊಡೆಯಂತೆ ತಲೆ ಎತ್ತುತ್ತಿವೆ. ಇದರಿಂದ ಸರ್ಕಾರಿ ಕನ್ನಡ ಮತ್ತು ಉರ್ದು ಶಾಲೆಯು ಅಳಿವಿನ ಅಂಚಿನಲ್ಲಿದೆ. ಇರುವ ಶಾಲೆಗಳಿಗೆ ಸರ್ಕಾರ ಮುತುವರ್ಜಿವಹಿಸಿ ಮೂಲ ಸೌಲಭ್ಯಗಳನ್ನು ಒದಗಿಸುವ ಮೂಲಕ ಬಡ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುವಲ್ಲಿ ಹೆಚ್ಚು ನಿಗಾವಹಿಸಿಬೇಕಾಗಿದೆ ಎಂದರು.
ಬೈತುಲ್ಮಾಲ್ ಸಂಸ್ಥೆ ಶಿಕ್ಷಣ ವಿಭಾಗದ ಅಧ್ಯಕ್ಷ ಮಹಮದ್ ಅಸ್ಲಂ ಮಾತನಾಡಿ, ಮಕ್ಕಳಿಗೆ ಶಿಕ್ಷಣ ಮತ್ತು ಆರೋಗ್ಯ ನೀಡಿದರೆ ಭವಿಷ್ಯದಲ್ಲಿ ಉತ್ತಮ ಪ್ರಜೆಯಾಗಲು ಸಾಧ್ಯ ಎಂಬುದನ್ನು ಅರಿತು ಕಳೆದ 12 ವರ್ಷದಿಂದ ಈ ಶಾಲೆಯಲ್ಲಿ ಎಲ್ಲಾ ಮಕ್ಕಳಿಗೆ ಪ್ರತಿವರ್ಷ 3 ಲಕ್ಷಕ್ಕೂ ಅಧಿಕ ಮೊತ್ತದ ಸಮವಸ್ತ್ರ ಪಠ್ಯ ಮತ್ತು ನೋಟ್ ಪುಸ್ತಕಗಳನ್ನು ನೀಡಿ ವಿದ್ಯಾರ್ಥಿಗಳಿಗೆ ಉತ್ತೇಜನ ನೀಡಲಾಗುತ್ತಿದೆ. ನಿಜವಾದ ಬದುಕು ಅಥೈಸಿಕೊಂಡವರು ಸರ್ಕಾರಿ ಶಾಲೆಗಳಲ್ಲಿ ವ್ಯಾಸಂಗ ಮಾಡಿ ಉನ್ನತ ಹುದ್ದೆ ತಲುಪಿದ್ದಾರೆಂದರು.
ಮುಖ್ಯೋಪಾದ್ಯಾಯ ನಹೀಂ ಅಹಮದ್, ಸಂಸ್ಥೆ ಅಧ್ಯಕ್ಷ ಶಾಹಿದ್ ಮಹಮದ್ ಗೌಸ್, ಉಪಾಧ್ಯಕ್ಷ ನಜೀರ್ ಅಹಮದ್, ಕಾರ್ಯದರ್ಶಿ ಮುಸ್ತಾಕ್ ಅಹಮದ್, ಶರೀಫ್ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

