ಚಿಕ್ಕಮಗಳೂರು

27ರಂದು ಟ್ರೇಡ್ ಯೂನಿಯನ್ ಪ್ರತಿಭಟನೆ

Published On :

ಕ.ಪ್ರ.ವಾರ್ತೆ, ಚಿಕ್ಕಮಗಳೂರು,  ಜು.21
ಸರ್ಕಾರಿ ಶಾಲೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ಬಿಸಿಯೂಟ ಕಾರ್ಯಕರ್ತೆಯರ ವೇತನ ಹೆಚ್ಚಳ ಹಾಗೂ ಗ್ಯಾಸ್ ಸಿಲಿಂಡರ್ ಮತ್ತು ಆಹಾರ ಧಾನ್ಯ ಪೂರೈಕೆಯಲ್ಲಿ ಆಗುತ್ತಿರುವ ಅವ್ಯವಹಾರವನ್ನು ವಿರೋಧಿಸಿ ಜು.27 ರಂದು ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಲು ತೀರ್ಮಾನಿಸಲಾಗಿದೆ ಎಂದು ಅಖಿಲ ಭಾರತ ಟ್ರೇಡ್ ಯೂನಿಯನ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿಜಯಕುಮಾರ್ ತಿಳಿಸಿದ್ದಾರೆ.
ಬಿಸಿಯೂಟ ಕಾರ್ಯಕರ್ತೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯ ಸೇರಿದಂತೆ ಹಲವು ಬೇಡಿಕೆಗಳನ್ನು ಈಡೇರಿಸಬೇಕೆಂದು ಆಗ್ರಹಿಸಿ ಅಂದು ಬೆಳಿಗ್ಗೆ 11 ಗಂಟೆಗೆ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಲಾಗುವುದು ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಅಕ್ಷರ ದಾಸೋಹ ಕಾರ್ಯಕ್ರಮ ಆರಂಭವಾಗಿ 10 ವರ್ಷ ಕಳೆದಿದ್ದರೂ ಹಲವಾರು ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವಲ್ಲಿ ಅಧಿಕಾರಿಗಳು ವಿಫಲವಾಗಿದ್ದಾರೆ. ಈ ಬಗ್ಗೆ ಚಳುವಳಿ, ಮನವಿ ಸಲ್ಲಿಸಿದರೂ ಯಾವುದೇ ಕ್ರಮ ಕೈಗೊಳ್ಳದ ಜಿಲ್ಲಾಡಳಿತದ ಕ್ರಮವನ್ನು ಸಂಘಟನೆ ತೀವ್ರವಾಗಿ ಖಂಡಿಸುತ್ತದೆ ಎಂದರು.
ಕಾರ್ಯಕರ್ತೆಯರನ್ನು ಸಿಜಿ ನಿರ್ವಹಣೆ ಮತ್ತು ಬರವಣಿಗೆ ಮಾಡಬೇಕು, ಎಲ್ಲಾ ಕಾರ್ಯಕರ್ತೆಯರಿಗೂ ವೇತನ ನೇರವಾಗಿ ಬ್ಯಾಂಕ್ ಖಾತೆಗೆ ಪಾವತಿಸಬೇಕು, ನಿರ್ದಿಷ್ಟವಾದ ಕೆಲಸವನ್ನು ಮಾತ್ರ ನಿರ್ವಹಿಸಬೇಕು ಎಂಬ ಹಲವು ಆದೇಶಗಳಿದ್ದರೂ ಯಾವುದು ಕೂಡ ಜಾರಿಗೆ ಬಂದಿಲ್ಲ ಎಂದು ತಿಳಿಸಿದ್ದಾರೆ.
ತೂಕದಲ್ಲಿ ವ್ಯತ್ಯಾಸ: ಶಾಲೆಗಳಿಗೆ ಪೂರೈಸಬೇಕಾದ ಅಕ್ಕಿ ಮತ್ತು ಆಹಾರ ಪದಾರ್ಥಗಳು ಒಂದು ಚೀಲಕ್ಕೆ 5 ರಿಂದ 8 ಕೆ.ಜಿ.ವರೆಗೆ ತೂಕದಲ್ಲಿ ವ್ಯತ್ಯಾಸ ಕಂಡುಬರುತ್ತಿದ್ದು, ಇದರಿಂದ ನಿರ್ವಹಣೆ ಮಾಡುವ ಕಾರ್ಯಕರ್ತೆಯರನ್ನು ಕಳ್ಳರಂತೆ ಬಿಂಬಿಸುವ ಘಟನೆಗಳು ನಡೆಯುತ್ತಿದ್ದು, ಇದರಿಂದ ಶಾಲಾ ಮಕ್ಕಳಿಗೆ ಅನ್ಯಾಯವಾಗುತ್ತಿದೆ ಎಂದು ಹೇಳಿದ್ದಾರೆ.
ಗ್ಯಾಸ್ ಸಿಲಿಂಡರ್ ಪೂರೈಸಲು ಸರ್ಕಾರ ಕಿ.ಮೀ.ಗೆ ದರ ನಿಗಧಿಪಡಿಸಿ ಹಣ ಪಾವತಿ ಮಾಡುತ್ತಿದ್ದರು, ಹಲವಾರು ಶಾಲೆಗಳು ಈ ಸೌಲಭ್ಯದಿಂದ ವಂಚಿತವಾಗಿದ್ದು, ಇದರಿಂದ ಕಾರ್ಯಕರ್ತೆಯರು ಅಡಿಕೆ ಕೆಲಸ ಬಿಟ್ಟು ಗ್ಯಾಸ್ ತರಲು ತೆರಳಬೇಕಾದ ಸ್ಥಿತಿ ನಿರ್ಮಾಣವಾಗಿದ್ದರೆ, ಕೆಲವು ಕಡೆ ಸೌದೆಯಲ್ಲಿ ಅಡಿಗೆ ತಯಾರಿಸಬೇಕಾಗಿದೆ ಎಂದಿದ್ದಾರೆ.
ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವಂತೆ ಆಗ್ರಹಿಸಿ ಜು.27 ರಂದು ಪ್ರತಿಭಟನೆ ನಡೆಸಲಾಗುವುದು ಎಂದು ಹೇಳಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.