ಚಿಕ್ಕಮಗಳೂರು

ಕಸ ವಿಲೇವಾರಿಗೆ ಗ್ರಾಮಸ್ಥರ ಅಡ್ಡಿ

Published On :

ಕ.ಪ್ರ.ವಾರ್ತೆ, ಚಿಕ್ಕಮಗಳೂರು, ಜು.24
ವೈಜ್ಞಾನಿಕವಾಗಿ ಕಸ ವಿಲೇವಾರಿ ಮಾಡುತ್ತಿಲ್ಲ ಎಂದು ಆರೋಪಿಸಿ ಇಂದಾವರ ಗ್ರಾಮಸ್ಥರು ಬುಧವಾರ ಪ್ರತಿಭಟನೆ ನಡೆಸಿದರು.
ಎಂದಿನಂತೆ ಬುಧವಾರ ನಗರದ ಕಸವನ್ನು ಸಂಗ್ರಹ ಮಾಡಿ ಅದನ್ನು ವಿಲೇವಾರಿ ಮಾಡಲು ಇಂದಾವರಕ್ಕೆ ತೆರಳಿದ್ದ ನಗರಸಭೆಯ ವಾಹನಗಳನ್ನು ತಡೆದ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು. ಇದರಿಂದಾಗಿ ಕಸ ತುಂಬಿದ್ದ ವಾಹನಗಳನ್ನು ಯಥಾಸ್ಥಿತಿಯಲ್ಲಿ ನಗರಸಭಾ ಆವರಣದಲ್ಲಿ ನಿಲ್ಲಿಸಲಾಗಿದೆ. ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಬಂದು ಆಶ್ವಾಸನೆ ನೀಡಿದ ಬಳಿಕ ಕಸ ವಿಲೇವಾರಿಗೆ ಅವಕಾಶ ಮಾಡಿಕೊಡಲಾಗುವುದು ಎಂದು ಗ್ರಾಮಸ್ಥರು ಪಟ್ಟು ಹಿಡಿದಿದ್ದಾರೆ.
ದೊಡ್ಡ ಸಮಸ್ಯೆ: ಚಿಕ್ಕಮಗಳೂರು ನಗರಸಭೆಗೆ ಕಸ ಸಂಗ್ರಹ ಮತ್ತು ವಿಲೇವಾರಿ ಒಂದು ಕಾಲದಲ್ಲಿ ದೊಡ್ಡ ಸಮಸ್ಯೆಯಾಗಿತ್ತು.
ಮನೆಗಳ ಕಸ ಎಲ್ಲೆಂದರಲ್ಲಿ ಬಿಸುಟು, ನಗರಸಭೆಯವರು ಸಂಗ್ರಹ ಮಾಡಿರುವ ಕಸ ನಗರದ ಹೊರ  ವಲಯದ ಬಯಲು ಪ್ರದೇಶದಲ್ಲಿ ವಿಲೇವಾರಿ ಮಾಡಲಾಗುತ್ತಿತ್ತು. ಇದರಿಂದ ನಗರದ ಸ್ವಚ್ಛತೆಗೆ ದಕ್ಕೆಯಾಗುತ್ತಿತ್ತು.
ಇದನ್ನು ಮನಗಂಡ ನಗರಸಭೆ ಮನೆಗಳಿಂದ ಕಸ ಸಂಗ್ರಹಕ್ಕೆ ಕ್ರಮ ಕೈಗೊಂಡಿತು. ಆರಂಭದಲ್ಲಿ ಸ್ವಚ್ಛತೆಗೆ ಟ್ರಸ್ಟ್‌ನವರು ಮನೆಗಳಿಂದ ಕಸ ಸಂಗ್ರಹ ಮಾಡುತ್ತಿದ್ದರು. ಇದೀಗ ಈ ಜವಾಬ್ದಾರಿಯನ್ನು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಗೆ ವಹಿಸಲಾಗಿದೆ.
ಇಂದಾವರಕ್ಕೆ ವಿಲೇವಾರಿ: ಇದೀಗ ನಗರಸಭೆ ಎಲ್ಲಾ 35 ವಾರ್ಡ್‌ಗಳಲ್ಲಿ ಮನೆ ಮನೆಗಳಿಂದ ಕಸ ಸಂಗ್ರಹ ಮಾಡಲಾಗುತ್ತಿದೆ. ಹೀಗೆ ಸಂಗ್ರಹ ಮಾಡಿರುವ ಕಸವನ್ನು ನಗರದಿಂದ ಸುಮಾರು 10 ಕಿ.ಮೀ. ದೂರದಲ್ಲಿರುವ ಇಂದಾವರ ಗ್ರಾಮದ ಸಮೀಪದಲ್ಲಿರುವ 20 ಎಕರೆ ಪ್ರದೇಶದಲ್ಲಿ ವಿಲೇವಾರಿ ಮಾಡಲಾಗುತ್ತಿದೆ.
ಇಂದಾವರ ಗ್ರಾಮದ ಸರ್ವೆ  ನಂಬರ್ 33 ರಲ್ಲಿ ನಗರಸಭೆಯ ಕಸ ವಿಲೇವಾರಿ ಮಾಡಲಾಗುತ್ತಿದೆ. ಕಸ ಗಬ್ಬು ನಾರುತ್ತಿದ್ದು, ಇಂದಾವರ ಗ್ರಾಮ ವಾಸನೆಯ ತಾಣವಾಗಿದೆ. ಇದರಿಂದ ನೊಣಗಳ ಸಂಖ್ಯೆಯೂ ಹೆಚ್ಚಳವಾಗಿದ್ದು, ಮನೆಯಲ್ಲಿ ಮಾಡಿರುವ ಅಡುಗೆ ಕಲುಷಿತವಾಗುತ್ತಿದೆ. ಸಾಂಕ್ರಾಮಿಕ ರೋಗ ಹರಡುತ್ತಿದೆ ಎಂದು ಗ್ರಾಮಸ್ಥರು ದೂರಿದ್ದಾರೆ.
ನಾಯಿ ಕಾಟ: ನಗರಸಭೆಯವರು ಹಿಡಿದ ನಾಯಿಗಳನ್ನು ಇಲ್ಲಿ ತಂದು ಬಿಡುತ್ತಿರುವುದರಿಂದ ಆ ನಾಯಿಗಳು ಗ್ರಾಮದ ದನಕರುಗಳು, ಕುರಿಗಳನ್ನು ಹಿಡಿದು ತಿನ್ನುತ್ತಿವೆ. ಅದುದರಿಂದ ಕಸ ವಿಲೇವಾರಿಗೆ ಕೆಲವು ಕ್ರಮಗಳನ್ನು ಅನುಸರಿಸಬೇಕು ಎಂದು ಆಗ್ರಹಿಸಿದ್ದಾರೆ.
ಸಂಜೆ 6 ಗಂಟೆಯ ನಂತರ ಕಸ ತಂದು ಸುರಿಯಬೇಕು. ವಿಲೇವಾರಿಯಾದ ಕಸದ ಮೇಲೆ ಅರ್ಧ ಅಡಿಯಾದರೂ ಮಣ್ಣನ್ನು  ಹಾಕಿ ಮುಚ್ಚಬೇಕು. ಇದೇ ಜಾಗದಲ್ಲಿ ಪ್ರತಿದಿನ ಔಷಧಿ ಸಿಂಪಡಣೆ ಮಾಡಬೇಕು. ಕಸ ವಿಲೇವಾರಿ ಜಾಗಕ್ಕೆ ಜಾನುವಾರುಗಳು  ಹೋಗದಂತೆ ಕ್ರಮ ವಹಿಸಬೇಕು.
ಇಂದಾವರ ಗ್ರಾಮದಲ್ಲಿ ಸೊಳ್ಳೆ ಮತ್ತು ನೊಣದ ಔಷಧಿ ಸಿಂಪಡಿಸಬೇಕು. ಕಸ ತರುವ ವಾಹನಗಳು ದಾರಿಯ ಉದ್ದಕ್ಕೂ ಕಸವನ್ನು ಚೆಲ್ಲುತ್ತಾ ಬರುತ್ತಿದ್ದು, ಅವುಗಳನ್ನು ಮುಚ್ಚುವ ವ್ಯವಸ್ಥೆ ಮಾಡಬೇಕು. ನಿಗದಿ ಪ್ರದೇಶದಲ್ಲಿ ಮಾತ್ರ ಕಸ ಹಾಕಬೇಕು.ಬೇಸಿಗೆ ಕಾಲದಲ್ಲಿ ಬೆಂಕಿ ಬೀಳದಂತೆ ಕ್ರಮ ವಹಿಸಬೇಕು. ಮಳೆಗಾಲದಲ್ಲಿ ಕಸದ ಕಲುಷಿತ ನೀರು ಕೆರೆಗಳಿಗೆ ಹರಿದು ಹೋಗದಂತೆ ತಡೆಗೋಡೆ ನಿರ್ಮಿಸಬೇಕು ಎಂದು ಒತ್ತಾಯಿಸಿದ್ದಾರೆ.
ಪ್ರತಿಭಟನೆಯಲ್ಲಿ ಇಂದಾವರ ಗ್ರಾಮ ಪಂಚಾಯ್ತಿ ಸದಸ್ಯರಾದ ಕೆಂಚಯ್ಯ, ಜಯಮ್ಮ, ಐ.ಡಿ. ಚಂದ್ರಶೇಖರ್, ಇಂದಾವರ ಲೋಕೇಶ್, ರಾಜಶೇಖರ್, ಗಿರೀಶ್, ಹರ್ಷ, ನಾಗೇಶ್ ಹಾಗೂ ಗ್ರಾಮಸ್ಥರು ಪಾಲ್ಗೊಂಡಿದ್ದರು.
1 ಕೋಟಿ ಪ್ಲಾನ್: ಚಿಕ್ಕಮಗಳೂರು ನಗರದಲ್ಲಿ ಪ್ರತಿದಿನ 42 ಟನ್ ಕಸ ಸಂಗ್ರಹವಾಗುತ್ತಿದೆ. ಇದರ ವಿಲೇವಾರಿಗೆ ನಗರಸಭೆ ಒಂದು ಕೋಟಿ ರುಪಾಯಿಗಳ ಪ್ಲಾನ್ ಮಾಡಿಕೊಂಡಿದೆ.
ಕಸದ ನೀರು ಸಂಗ್ರಹಕ್ಕೆ ಟ್ಯಾಂಕ್ ನಿರ್ಮಾಣ ಸೇರಿದಂತೆ ಕಸ ವೈಜ್ಞಾನಿಕವಾಗಿ ವಿಲೇವಾರಿ ಮಾಡಲು ಹಲವು ಕ್ರಮ ತೆಗೆದು ಕೊಂಡಿದ್ದು, ಈ ಸಂಬಂಧ ಟೆಂಡರ್ ಪ್ರಕ್ರಿಯೆಯೂ ಪೂರ್ಣಗೊಂಡಿದೆ.ಮಳೆಗಾಲ ಮುಗಿದ ಬಳಿಕ ಕಾಮಗಾರಿ ಆರಂಭಗೊಳ್ಳಲಿದೆ.

ಪ್ರಮುಖ ಬೇಡಿಕೆಗಳು
  ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಬಂದು ಆಶ್ವಾಸನೆ ನೀಡಿದ ಬಳಿಕ ಕಸ ವಿಲೇವಾರಿಗೆ ಅವಕಾಶ
  ನಗರಸಭೆಯವರು ಹಿಡಿದ ನಾಯಿಗಳನ್ನು ಇಲ್ಲಿ ತಂದು ಬಿಡುತ್ತಿರುವುದರಿಂದ ಆ ನಾಯಿಗಳು ದನಕರು, ಕುರಿ ಹಿಡಿದು ತಿನ್ನುತ್ತಿವೆ
  ಕಸ ತರುವ ವಾಹನಗಳು ದಾರಿಯ ಉದ್ದಕ್ಕೂ ಕಸವನ್ನು ಚೆಲ್ಲುತ್ತಾ ಬರುತ್ತಿದ್ದು, ಅವುಗಳನ್ನು ಮುಚ್ಚುವ ವ್ಯವಸ್ಥೆ ಮಾಡಬೇಕು
  ಮಳೆಗಾಲದಲ್ಲಿ ಕಸದ ಕಲುಷಿತ ನೀರು ಕೆರೆಗಳಿಗೆ ಹರಿದು ಹೋಗದಂತೆ ತಡೆಗೋಡೆ ನಿರ್ಮಿಸಬೇಕು

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.