ಕಸ ಸಂಗ್ರಹ, ವಿಲೇವಾರಿಗೆ ಅಡಚಣೆ
ಕ.ಪ್ರ.ವಾರ್ತೆ,ಚಿಕ್ಕಮಗಳೂರು,ಜು.25
ನಗರದ ಕಸ ಸಂಗ್ರಹ ಮತ್ತು ವಿಲೇವಾರಿ ನಗರಸಭೆಗೆ ಸಮಸ್ಯೆಯಾಗಿ ಕಾಡಲು ಆರಂಭಿಸಿದೆ.
ಮಳೆಯಿಂದಾಗಿ ಮನೆ ಮನೆ ಕಸ ಸಂಗ್ರಹಕ್ಕೆ ತೊಂದರೆಯಾಗುತ್ತಿದೆ. ಇನ್ನೊಂದೆಡೆ ಸಂಗ್ರಹವಾಗಿರುವ ಕಸ ವಿಲೇವಾರಿಗೆ ಇಂದಾವರ ಗ್ರಾಮಸ್ಥರು ಅಡ್ಡಿಪಡಿಸಿದ್ದು, ಗುರುವಾರವೂ ಗ್ರಾಮಸ್ಥರು ಪ್ರತಿಭಟನೆ ಮುಂದುವರೆಸಿದ್ದರಿಂದ ನಗರಸಭೆಯವರು ಕಸ ವಿಲೇವಾರಿ ಎರಡನೇ ದಿನವೂ ಕೈಬಿಟ್ಟಿತು. ಮುಂದೇನು ಎಂಬ ಹೊಸ ಪ್ರಶ್ನೆ ಉದ್ಭವಗೊಂಡಿದೆ.
ಚಿಕ್ಕಮಗಳೂರು ನಗರದಲ್ಲಿ ಒಳ ಚರಂಡಿ ಕಾಮಗಾರಿಗೆ ತೆಗೆದಿರುವ ಮ್ಯಾನ್ಹೋಲ್ಗಳು ಸರಿಯಾದ ರೀತಿಯಲ್ಲಿ ಮುಚ್ಚದಿರುವುದರಿಂದ ನಗರದ ಬಹುತೇಕ ರಸ್ತೆಗಳು ಕೆಸರಾಗಿವೆ. ಇದರಲ್ಲೇ ಓಡಾಡುತ್ತಿರುವ ಜನರು ಹಿಡಿ ಶಾಪ ಹಾಕುತ್ತಿದ್ದಾರೆ. ತಕ್ಷಣಕ್ಕೆ ಇದಕ್ಕೆ ಪರಿಹಾರ ಕಂಡುಕೊಳ್ಳಲು ಸಾಧ್ಯವೇ ಇಲ್ಲದ ಪರಿಸ್ಥಿತಿ ನಿರ್ಮಾಣಗೊಂಡಿದೆ. ಈ ಸಮಸ್ಯೆ ಬಗೆಹರಿಯಬೇಕಾದರೆ ಮಳೆ ಪೂರ್ಣ ಪ್ರಮಾಣದಲ್ಲಿ ಬಿಡುವು ನೀಡಬೇಕು. ಆದರೆ, ಇಂದಿನ ಪರಿಸ್ಥಿತಿ ನೋಡಿದರೆ ಸದ್ಯ ಮಳೆ ಬಿಡುವು ನೀಡುವಂತೆ ಕಾಣುತ್ತಿಲ್ಲ. ಅದುದರಿಂದ ಕೆಸರಾದ ರಸ್ತೆಯಲ್ಲಿ ನಡೆಯುವುದನ್ನು ಜನರು ಸಹಿಸಿಕೊಳ್ಳಲೇಬೇಕು.
ಕಸ ಸಂಗ್ರಹ: ನಗರದ ಎಲ್ಲಾ 35 ವಾರ್ಡ್ಗಳಲ್ಲಿ ಮನೆ ಮನೆಗಳ ಕಸ ಸಂಗ್ರಹದ ಜವಬ್ದಾರಿಯನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವಹಿಸಿಕೊಂಡಿದೆ. ಇದಕ್ಕೆ ನಗರಸಭೆ ನೆರವು ನೀಡಿದೆ. ನಗರದ ಜನರು ಕೂಡ ಮನೆ ಮತ್ತು ಅಂಗಡಿಗಳಿಂದ ಕಸ ತೆಗೆದುಕೊಂಡು ಹೋಗುತ್ತಿರುವ ಸಂಸ್ಥೆಗೆ ಪ್ರತಿ ತಿಂಗಳು ನಿಗದಿತ ಶುಲ್ಕ ನೀಡುತ್ತಿದ್ದಾರೆ.
ಆದರೆ, ಮಳೆ ಆರಂಭವಾದ ದಿನದಿಂದ ನಗರದ ಬಹಳಷ್ಟು ಬಡಾವಣೆಗಳಲ್ಲಿ ಪ್ರತಿ ದಿನ ಕಸ ಸಂಗ್ರಹವಾಗುತ್ತಿಲ್ಲ. ಇದಕ್ಕೆ ಕಾರಣ- ಒಳ ಚರಂಡಿ ಕಾಮಗಾರಿಯಿಂದಾಗಿ ರಸ್ತೆಗಳೆಲ್ಲವೂ ಹಾಳಾಗಿವೆ. ಕಸದ ಗಾಡಿಗಳು ಹೋಗಲಾರದಂತಹ ಬಡಾವಣೆಗಳಲ್ಲಿ ಕಸ ಸಂಗ್ರಹಿಸಲು ಟಿಪ್ಪರ್ಗಳನ್ನು ಬಳಸಲಾಗುತ್ತಿದೆ. ಅವು ಸಂಚರಿಸಲಾಗದಷ್ಟು ರಸ್ತೆಗಳು ಹಾಳಾಗಿವೆ. ಇಂತಹ ಪರಿಸ್ಥಿತಿಯಲ್ಲಿ ಕಸ ಸಂಗ್ರಹಣೆ ಕಷ್ಟವಾಗಿದ್ದರಿಂದ ಕೆಲವು ಕಸ ಸಂಗ್ರಹಗಾರರು ಕೆಲಸಕ್ಕೆ ಗುಡ್ ಬೈ ಹೇಳಿದ್ದಾರೆ. ಇದರಿಂದಾಗಿ ನಿತ್ಯ ಮನೆಗಳಿಂದ ಕಸ ಸಂಗ್ರಹವಾಗುತ್ತಿಲ್ಲ. ಬಹಳಷ್ಟು ಮನೆಗಳಲ್ಲಿ ವಾರಗಟ್ಟಲೆ ಕಸ ಇಟ್ಟುಕೊಳ್ಳಲಾಗುತ್ತಿದೆ.
ವಿಲೇವಾರಿ: ನಗರದಲ್ಲಿ ಪ್ರತಿ ದಿನ 42 ಟನ್ ಕಸ ಸಂಗ್ರಹವಾಗುತ್ತಿದೆ. ಅದನ್ನು ವಿಲೇವಾರಿ ಮಾಡಬೇಕಾದ ಸ್ಥಳದಲ್ಲಿ ವೈಜ್ಞಾನಿಕವಾಗಿ ಕಸ ವಿಲೇವಾರಿ ಮಾಡಬೇಕೆಂದು ಆಗ್ರಹಿಸಿ ಇಂದಾವರ ಗ್ರಾಮಸ್ಥರು ನಡೆಸುತ್ತಿರುವ ಪ್ರತಿಭಟನೆ ಗುರುವಾರವೂ ಮುಂದುವರೆದಿತ್ತು. ಪೌರಾಯುಕ್ತರ ಹಾಗೂ ಅಪರ ಜಿಲ್ಲಾಧಿಕಾರಿಗಳ ಮಾತನ್ನು ಗ್ರಾಮಸ್ಥರು ಕೇಳದೆ ಹೋಗಿದ್ದರಿಂದ ನಗರಸಭೆ ಕಸ ವಿಲೇವಾರಿಯ ಗೋಜಿಗೆ ಹೋಗಲಿಲ್ಲ. ಮಳೆಗಾಲದಲ್ಲಿ ಕಾಲ ಕಾಲಕ್ಕೆ ಕಸ ಸಂಗ್ರಹ ಮತ್ತು ವಿಲೇವಾರಿ ಆಗದೆ ಹೋದರೆ ಕಸದ ಕೇಂದ್ರಗಳು ಸಾಂಕ್ರಾಮಿಕ ರೋಗಗಳ ಉತ್ಪತ್ತಿಯ ತಾಣವಾಗಲಿವೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

