ಚಿಕ್ಕಮಗಳೂರು

ಲೌಕಿಕ, ಅಲೌಕಿಕ ಅನುಭವದೊಂದಿಗೆ ಕೃತಿ ರಚನೆ

Published On :

ಚಿಕ್ಕಮಗಳೂರು: ಲೌಕಿಕ ಮತ್ತು ಅಲೌಕಿಕ ಅನುಭವದೊಂದಿಗೆ ಕೃತಿ ರಚಿಸುತ್ತಿದ್ದವರು ಅಜ್ಜಂಪುರ ಜಿ.ಸೂರಿ ಎಂದು ಕನ್ನಡ ಪೂಜಾರಿ ಹಿರೇಮಗಳೂರು ಕಣ್ಣನ್ ಹೇಳಿದರು.
 ಕಡೂರಿನ ಅಜ್ಜಂಪುರ ಜಿ. ಸೂರಿ ಸಾಂಸ್ಕೃತಿಕ ಪ್ರತಿಷ್ಠಾನ ಹಾಗೂ ಯುರೇಕಾ ಅಕಾಡೆಮಿ ಸಂಯುಕ ಆಶ್ರಯದಲ್ಲಿ ಭಾನುವಾರ ಸಂಜೆ ನಗರದ ಯುರೇಕಾ ಸಭಾಂಗಣದಲ್ಲಿ ಅಜ್ಜಂಪುರ ಜಿ. ಸೂರಿ ಅವರ 106ನೇ ಕೃತಿ ಅಜ್ಞಾತ ಸುಂದರಿ  ಲೋಕಾರ್ಪಮೆಗೊಳಿಸಿ ಮಾತನಾಡಿದ ಅವರು, ಅಧ್ಯಯನ ಮತ್ತು ಜೀವನಾನುಭವ ಇವರ ಕೃತಿಯ ವೈಶಿಷ್ಠ್ಯ ಎಂದರು.
ಅವಲೋಕನ ಮುಖ್ಯ: ಯಾವುದೇ ಕೃತಿಗಳನ್ನು ಕೊಂಡಾಡುವುದಕ್ಕಿಂತ ಅವಲೋಕನ ಮುಖ್ಯ. ಓದಿದ್ದನ್ನು ಹಲವರೊಂದಿಗೆ ಹಂಚಿಕೊಳ್ಳುವುದರಿಂದ ಪರಸ್ಪರ ತಿಳಿವಳಿಕೆ ಹೆಚ್ಚಾಗುತ್ತದೆ. ಕೃತಿಯ ವಿವಿಧ ಮಜಲುಗಳು ಅರಿವಿಗೆ ಬರುತ್ತದೆ ಎಂದರು.
 ಕೃತಿಯ ಕೊನೆಯಲ್ಲಿ ಕೃತಿಕಾರನ ಪರಿಚಯ ಮತ್ತು ಸಾಧನೆ ಮುದ್ರಿಸಬೇಕು. ಇದರಿಂದ ಕೃತಿಚೌರ್ಯ ನಿಯಂತ್ರಿಸಬಹುದು ಕಣ್ಣನ್ ಸಲಹೆ ನೀಡಿದರು.
ಅಕ್ಷರ ಅವಿನಾಶಿ: ಅಕ್ಷರ ಎಂದೂ ಅವಿನಾಶಿ. 2000ರಲ್ಲಿ ಸೂರಿ ಅವರು ಬರೆದ ಕೃತಿ 2013 ರಲ್ಲಿ ಬಿಡುಗಡೆಗೊತ್ತಿರುವುದೇ ಇದಕ್ಕೆ ನಿದರ್ಶನ. ಸಾಹಿತ್ಯ ಸಿಂಚನದಿಂದ ಮನಸ್ಸು ಅಭಿವ್ಯಕ್ತಗೊಂಡು ಅರಳುತ್ತದೆ. ಗ್ರಂಥಾಲಯ  ನಿಜ ಅರ್ಥದಲ್ಲಿ ಅಜ್ಞಾತ ಸುಂದರಿಯರು ಎಂದು ಚಟಾಕಿ ಹಾರಿಸಿದ ಕಣ್ಣನ್, ಇಂದಿನ ಬಹುತೇಕ ಜನರು ಅಧ್ಯಯನ ಕಳೆದುಕೊಂಡಿರುವುದರಿಂದ ಅಧ್ವಾನದತ್ತ ಕುಸಿಯುತ್ತಿದ್ದೇವೆ ಎಂದರು.
 ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಚಟ್ನಳ್ಳಿ ಮಹೇಶ್ ಸಮಾರಂಭ ಉದ್ಘಾಟಿಸಿ ಮಾತನಾಡಿ, ಬರಹಗಾರನಿಗೆ ಇರಬೇಕಾದ ಹಿತ ಮಿತ ಮತ್ತು ಸತ್ಯ ಎಲ್ಲಾ ಗುಣಗಳೂ ಸೂರಿಯವರಲ್ಲಿತ್ತು.  ಹಾಗಾಗಿ ಮನ ಬೆಳಗಿಸುವ ಕೃತಿಗಳನ್ನೇ ಅವರು ಕೊಟ್ಟಿದ್ದಾರೆ. ಅವರ ಬರವಣಿಗೆ ಹೃದಯ ಅರಳಿಸಿ ಭಾವಸಂಸ್ಕಾರ ನೀಡುತ್ತದೆ.  ಬುದ್ಧಿ ಮತ್ತು ಭಾವಗಳ ಸಮನ್ವಯದ ಸಾಹಿತ್ಯ ಸೃಷ್ಟಿಯಿಂದ ಸಮಾಜಕ್ಕೆ ಹಿತವಿದೆ ಎಂದರು.
ಕೃತಿ ರಚನೆಯಲ್ಲಿ ಸೆಂಚುರಿ: ಆಯಸ್ಸಿನಲ್ಲಿ ಸೆಂಚುರಿ ಹೊಡೆಯದಿದ್ದರೂ, ಕೃತಿ ರಚನೆಯಲ್ಲಿ ಸೆಂಚುರಿ ಹೊಡೆದ  ಅಜ್ಜಂಪುರ ಸೂರಿ, ಬದುಕಿದ ರೀತಿ, ಉಳಿಸಿದ ನೀತಿ, ಗಳಿಸಿದ ಪ್ರೀತಿ ಅಪಾರ. ಅವರ ಸೂಕ್ಷ್ಮಗಣ್ಣಿನ ನೋಟ, ಭಾಷೆಯ ಮೇಲಿನ ಹಿಡಿತ ಅಗಾಧ. ಭಾಷಾಂತರವಷ್ಟೇ ಅಲ್ಲ, ಕೆಲವರಿಗಷ್ಟೇ ಸಿದ್ಧಿಸುವ ಭಾವಾಂತರ ಇವರ ವೈಶಿಷ್ಠ್ಯ ಎಂದು ಮಹೇಶ್ ಹೇಳಿದರು.
 ಕ.ಸಾ.ಪ. ಅಧ್ಯಕ್ಷರಾಗಿದ್ದಾಗ ಕನ್ನಡದ ಕಂಪನ್ನು ಜಿಲ್ಲಾದ್ಯಂತ ಪಸರಿಸಿದ್ದ ಸೂರಿ ಆ ಅವಧಿಯಲ್ಲಿ ಅವರ ಬರವಣಿಗೆ ಕುಂಠಿತವಾಗಿದ್ದನ್ನೂ ಲೆಕ್ಕಿಸಲಿಲ್ಲ ಎಂದು ಮುಖ್ಯ ಅತಿಥಿಗಳಾಗಿದ್ದ ಜಿಲ್ಲಾ ಕನ್ನಡ ಪರಿಷತ್ ಅಧ್ಯಕ್ಷ ನಾ.ಸು. ಶಿವಸ್ವಾಮಿ ಹೇಳಿದರು.
 ಒಳ್ಳೆಯ ಅನುವಾದಕರಾಗಿದ್ದ ಸೂರಿ ಅವರ ಅಪ್ರಕಟಿತ ಎಲ್ಲ ಕೃತಿಗಳೂ ಪ್ರಕಟಗೊಳ್ಳಬೇಕು. ಮುಗ್ಧಮನಸ್ಸಿನ ವಿನಮ್ರತೆಯ ಪ್ರತಿರೂಪ ಅವರಾಗಿದ್ದರು ಎಂದು ಸಾಹಿತಿ ರವಿ ಬಸಪ್ಪ ಹೇಳಿದರು. ಯುರೇಕಾ ಅಕಾಡೆಮಿ ಪ್ರಾಂಶುಪಾಲ ದೀಪಕ್ ದೊಡ್ಡಯ್ಯ ಅಧ್ಯ್ಯಕ್ಷತೆ ವಹಿಸಿದ್ದರು.
 ವಾಣಿನಾಯ್ಡು ಮಾತನಾಡಿದರು. ಟ್ರಸ್ಟಿ ಪ್ರಭುಕುಮಾರ್ ಉಪಸ್ಥಿತರಿದ್ದರು. ಪ್ರತಿಷ್ಠಾನದ ಅಧ್ಯಕ್ಷ ಸೂರಿ ಶ್ರೀನಿವಾಸ್ ಸ್ವಾಗತಿಸಿದರು, ಸಾಹಿತಿ  ಅಶೋಕ್ ವಂದಿಸಿದರು. ವಕೀಲ ಬಿ.ಆರ್. ಜಗದೀಶ್ ಕಾರ್ಯಕ್ರಮ ನಿರೂಪಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.