ಚಿಕ್ಕಮಗಳೂರು

ಅಧಿಕಾರಿಗಳ ನಿರ್ಲಕ್ಷ್ಯ; ಸಿಗದ ಸಿಲ್ವರ್ ಸಸಿ

Published On :

ಚಿಕ್ಕಮಗಳೂರು: ಸಹಾಯಧನ ಯೋಜನೆಯಡಿ ತೋಟಗಾರಿಕೆ ಇಲಾಖೆ ಮತ್ತು ಸಾಮಾಜಿಕ ಅರಣ್ಯ ಇಲಾಖೆಯಿಂದ ವಿತರಿಸಬೇಕಾದ ಮೆಣಸಿನ ಬಳ್ಳಿಗಳು ಮತ್ತು ಸಿಲ್ವರ್ ಸಸಿಗಳು ರೈತರಿಗೆ ಸರಿಯಾದ ಸಮಯಕ್ಕೆ ಸಿಗದ ಕಾರಣ ತೊಂದರೆ ಅನುಭವಿಸುವಂತಾಗಿದೆ ಎಂದು ಕೆಳಗೂರು ಗ್ರಾಪಂ ಸದಸ್ಯ ಆಸೀಫ್ ಆರೋಪಿಸಿದ್ದಾರೆ.
 ಕಳೆದ ಎರಡು ವರ್ಷಗಳಿಂದಲೂ ಇದೇ ಸಮಸ್ಯೆ ಮುಂದುವರಿದಿದೆ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ದೂರು ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಈ ಬಾರಿ ಉತ್ತಮ ಪ್ರಮಾಣದ ಮಳೆ ಬಿದ್ದಿದೆ. ಸಮಯಕ್ಕೆ ಸರಿಯಾಗಿ ಈ ಎರಡೂ ಇಲಾಖೆಗಳಿಂದ ಸರ್ಕಾರ ನೀಡುವ ಮೆಣಸು ಬಳ್ಳಿ ಮತ್ತು ಸಿಲ್ವರ್ ಸಸಿಗಳು ಸಿಕ್ಕಿದ್ದರೆ ರೈತರಿಗೆ ಅನುಕೂಲವಾಗುತ್ತಿತ್ತು. ಆದರೆ, ಗ್ರಾಪಂನಿಂದ ನಾಲ್ಕು ತಿಂಗಳ ಮೊದಲೇ ಫಲಾನುಭವಿಗಳ ಪಟ್ಟಿಯನ್ನು ಕಳಿಸಿಕೊಟ್ಟಿದ್ದರೂ ಈ ವರೆಗೂ ರೈತರಿಗೆ ಯಾವುದೇ ಪ್ರಯೋಜನವಾಗಿಲ್ಲ ಎಂದು ಹೇಳಿಕೆಯಲ್ಲಿ ದೂರಿದ್ದಾರೆ.
ಬೇಜವಾಬ್ದಾರಿ ಉತ್ತರ: ತೋಟಗಾರಿಕೆ ಇಲಾಖೆ ಈ ವಿಚಾರದಲ್ಲಿ ಬೇಜವಾಬ್ದಾರಿ ಉತ್ತರ ನೀಡುತ್ತಿದೆ. ಮೆಣಸಿನ ಬಳ್ಳಿಗಳನ್ನು ಈ ವರೆಗೆ ನೀಡದಿರುವ ಬಗ್ಗೆ ಪ್ರಶ್ನಿಸಿದರೆ ನಾವು ಈಗ ಮೆಣಸಿನ ಕಡ್ಡಿಗಳನ್ನು ನೆಡುತ್ತಿದ್ದೇವೆ ಎಂದು ಉತ್ತರಿಸುತ್ತಾರೆ. ಇತ್ತ ಫಲಾನುಭವಿಗಳು ಗ್ರಾಪಂ ಕಚೇರಿಗೆ ಬಂದು ಮೆಣಸು ಬಳ್ಳಿಗಳನ್ನು ನೀಡುವಂತೆ ಒತ್ತಾಯಿಸುತ್ತಿದ್ದಾರೆ. ಅವರಿಗೆ ಸಮಾಧಾನ ಪಡಿಸುವುದು ಗ್ರಾಪಂಗೆ ಕಷ್ಟವಾಗುತ್ತಿದೆ ಎಂದು ತಿಳಿಸಿದ್ದಾರೆ.
ಗುಣಮಟ್ಟದ್ದಾಗಿರುವುದಿಲ್ಲ: ಮೆಣಸುಬಳ್ಳಿಗಳನ್ನು ನೆಡಲು ಇದು ಸೂಕ್ತ ಕಾಲವಾಗಿದೆ. ಈ ಹಿನ್ನೆಲೆಯಲ್ಲಿ ಸ್ಥಳೀಯವಾಗಿ ಬಳ್ಳಿಗಳನ್ನು ಖರೀದಿಸುತ್ತೇವೆ ಎಂದರೆ ಅದಕ್ಕೆ ಇಲಾಖೆ ಒಪ್ಪುವುದಿಲ್ಲ. ಇದಕ್ಕೆ ಅನುಮತಿ ಕೊಟ್ಟರೆ ಉತ್ತಮ ಗುಣಮಟ್ಟದ ಬಳ್ಳಿಗಳು ಸಿಗುತ್ತವೆ. ಇಲಾಖೆ ಒದಗಿಸುವ ಬಳ್ಳಿಗಳು ಗುಣಮಟ್ಟದ್ದಾಗಿರುವುದಿಲ್ಲ. ನಿರೀಕ್ಷಿತ ಮಟ್ಟದಲ್ಲಿ ಅದರಿಂದ ಫಸಲು ಲಭಿಸುವುದಿಲ್ಲ ಈ ಹಿನ್ನೆಲೆಯಲ್ಲಿ ಸ್ಥಳೀಯವಾಗಿ ಬಳ್ಳಿಗಳನ್ನು ಖರೀದಿಸಲು ಅವಕಾಶ ನೀಡಬೇಕೆಂದು ಆಗ್ರಹಿಸಿದ್ದಾರೆ. ಸಾಮಾಜಿಕ ಅರಣ್ಯ ಇಲಾಖೆ ಫಲಾನುಭವಿಗಳ ಒಳಿತನ್ನು ಕಡೆಗಣಿಸುತ್ತಿದೆ. ತಿಂಗಳುಗಟ್ಟಲೆ ಫಲಾನುಭವಿಗಳನ್ನು ಕಚೇರಿ ಬಾಗಿಲಿಗೆ ಅಲೆಸಿ ಬರಿಗೈನಲ್ಲಿ ವಾಪಾಸು ಕಳಿಸುತ್ತಿದೆ. ಹಳ್ಳಿಗಳಿಂದ ನಗರದ ಕಚೇರಿಗೆ ಕೆಲಸ ಕಾರ್ಯಬಿಟ್ಟು ಬರುವ ಫಲಾನುಭವಿಗಳು ನಿರಾಶೆಯಿಂದ ವಾಪಾಸಾಗಬೇಕಿದೆ.
ದೂರದ ನರ್ಸರಿಗಳಿಂದ ಸಸಿ: ನಿಯಮದ ಪ್ರಕಾರ ಬೇಡಿಕೆಗನುಸಾರ ಸಿಲ್ವರ್ ಸಸಿಗಳನ್ನು ಇಲಾಖೆ ಸಬ್ಸಿಡಿ ದರದಲ್ಲಿ ಆಯಾ ಗ್ರಾಪಂಗಳ ಬಾಗಿಲಿಗೆ ತಂದು ಇಳಿಸಬೇಕಿದೆ. ನಂತರ ಗ್ರಾಪಂನಿಂದ ಬಿಲ್ ಪಡೆಯಬೇಕಿರುತ್ತದೆ. ಆದರೆ, ಸಾಮಾಜಿಕ ಅರಣ್ಯ ಇಲಾಖೆ ಇಲ್ಲದ ಸಬೂಬು ಹೇಳುತ್ತಾ ಖಾಸಗಿ ನರ್ಸರಿಗಳಿಗೆ ಚೀಟಿ ಕೊಡುತ್ತೇವೆ ಅಲ್ಲಿಂದ ಸಸಿಗಳನ್ನು ಪಡೆದುಕೊಳ್ಳಿ ಎಂದು ಹೇಳುತ್ತಾರೆ. ದೂರದ ನರ್ಸರಿಗಳಿಂದ ಸಸಿಗಳನ್ನು ತರಲು ವಾಹನದ ಬಾಡಿಗೆ, ಕನಿಷ್ಠ ಎರಡು ಮಂದಿಗೆ ಕೂಲಿ ಎಲ್ಲವನ್ನೂ ಲೆಕ್ಕ ಹಾಕಿದರೆ ಖಾಸಗಿಯವರಲ್ಲಿ ಹಣ ಕೊಟ್ಟು ಕೊಂಡಷ್ಟೇ ಖರ್ಚು ತಗುಲುತ್ತದೆ ಇದರಿಂದ ನಷ್ಟವೇ ಹೆಚ್ಚಾಗುತ್ತದೆ ಎಂದಿದ್ದಾರೆ.
 ಇತ್ತೀಚೆಗೆ ನಡೆದ ಗ್ರಾಪಂ ಸಭೆ ಸಂದರ್ಭದಲ್ಲಿ ಫಲಾನುಭವಿಗಳು ಇದೇ ವಿಚಾರಕ್ಕೆ ಸಂಬಂಧಿಸಿದಂತೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಇತ್ತ ಗಮನ ಹರಿಸಿ ಸೂಕ್ತ ಸಂದರ್ಭಕ್ಕೆ ಫಲಾನುಭವಿಗಳಿಗೆ ಸೌಲಭ್ಯ ಕಲ್ಪಿಸಲು ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.
 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.