ಚಿಕ್ಕಮಗಳೂರು

ಡೆಂಘೀ ನಿಯಂತ್ರಿಸಲು ಇಲಾಖೆ ಹರಸಾಹಸ

Published On :

ಕ.ಪ್ರ.ವಾರ್ತೆ, ತರೀಕೆರೆ,  ಜೂ.3
ತಾಲೂಕಿನ ಕುಡ್ಲೂರು ಗ್ರಾಮದಲ್ಲಿ ಇಬ್ಬರು ಮಕ್ಕಳನ್ನು ಬಲಿ ತೆಗೆದುಕೊಂಡ ಡೆಂಘೀಯನ್ನು ನಿಯಂತ್ರಿಸಲು ಜಿಲ್ಲಾಡಳಿತ ಹಾಗೂ ಆರೋಗ್ಯ ಇಲಾಖೆ ಕಳೆದ ಮೂರ್ನಾಲ್ಕು ದಿನಗಳಿಂದ ಹರಸಾಹಸ ಮಾಡುತ್ತಿದೆ.
ಆರೋಗ್ಯ ಇಲಾಖೆ ಅಧಿಕಾರಿಗಳ ನಿದ್ದೆಗೆಡಿಸಿರುವ ಡೆಂಘೀ ಹತೋಟಿಗೆ ತರಲು ಜಿಲ್ಲಾ ಆರೋಗ್ಯಾಧಿಕಾರಿಗಳು, ತಾಲೂಕು ಆರೋಗ್ಯಾಧಿಕಾರಿಗಳು, ಆರೋಗ್ಯ ನಿರೀಕ್ಷಕರು, ಆಸ್ಪತ್ರೆ ಸಿಬ್ಬಂದಿ ಕುಡ್ಲೂರಿನಲ್ಲೇ ಹಗಲು ರಾತ್ರಿ ಮೊಕ್ಕಾಂ ಹೂಡಿದ್ದು, ಜನರಿಗೆ ಧೈರ್ಯ ತುಂಬುವ ಕಾರ್ಯ ನಿರ್ವಹಿಸುತ್ತಿದ್ದಾರೆ.
ದೊಡ್ಡ ಹಳ್ಳಿ: ತಾಲೂಕಿನಲ್ಲೇ ಕುಡ್ಲೂರು ಗ್ರಾಮ ಅತ್ಯಂತ ದೊಡ್ಡ ಹಳ್ಳಿ. ಇಲ್ಲಿ 600ಕ್ಕೂ ಹೆಚ್ಚು ಮನೆಯಿದ್ದು, ಅಧಿಕ ಜನಸಂಖ್ಯೆ ಹೊಂದಿದೆ. ಪಟ್ಟಣದ ಕೂಗಳತೆಯಲ್ಲೇ ಇರುವ ಕುಡ್ಲೂರು ಗ್ರಾಮದಲ್ಲಿ ಜನರನ್ನು ಕಾಡುತ್ತಿರುವ ಬಹು ದೊಡ್ಡ ಸಮಸ್ಯೆ ಎಂದರೆ ಶುದ್ಧ ಕುಡಿಯುವ ನೀರಿನ ತೊಂದರೆ.
ಈ  ಬೇಸಿಗೆಯ ಬರಗಾಲದಲ್ಲಿ ಕುಡ್ಲೂರು- ಕೊರಟೀಕೆರೆ ಗ್ರಾಮದ ಜನರು ಮತ್ತು ಜಾನುವಾರುಗಳು ಕುಡಿಯುವ ನೀರಿಗಾಗಿ ಅನುಭವಿಸಿದ ತೊಂದರೆ ಅಷ್ಟಿಷ್ಟಲ್ಲ. ಬೆಳಗಾಗಿ ಎದ್ದು ಮನೆ ಮುಂದೆ ನೀರು ಹಾಕಿ ಬಾಗಿಲು ಸಾರಿಸಿ ರಂಗೋಲಿ ಬಿಡಲು ಸಹ ನೀರಿಲ್ಲ. ಒಂದು ಬಕೇಟು ಅಥವಾ ಒಂದು ಚೆಂಬು ನೀರು ನೆಲಕ್ಕೆ ಚುಮುಕಿಸಿದರೆ ಅಷ್ಟು ನೀರು ನಷ್ಟ ಎನ್ನುವಂತಹ ಕಡು ಕಷ್ಟ ಗ್ರಾಮದಲ್ಲಿದೆ.
ಜನ, ಜಾನುವಾರುಗಳಿಗೆ ಕುಡಿಯುವ ನೀರು ಕೊಟ್ಟು ಪುಣ್ಯ ಕಟ್ಕಳಿ ಎಂದು ಗ್ರಾಮದ ವೃದ್ಧೆಯೊಬ್ಬರು ಅಧಿಕಾರಿಗಳಿಗೆ ಕೈಜೋಡಿಸಿ ಮನವಿ ಮಾಡಿದರು.  
ಡೆಂಘಿ ಹರಡಲು ನೀರೇ ಕಾರಣ: ಕುಡ್ಲೂರು ಗ್ರಾಮದಲ್ಲಿ ಡೆಂಘೀ ಹರಡಲು ಕಾರಣವೇ ಸಮರ್ಪಕವಾದ ನೀರಿಲ್ಲದೆ ಇರುವುದು. ಗ್ರಾಮದಲ್ಲಿ ವಾರಕ್ಕೊಮ್ಮೆ ಕುಡಿಯುವ ನೀರು ಬಿಟ್ಟರೆ, ನೀರು ಮತ್ತೆ ಮುಂದಿನ ವಾರವೇ ಬರುವುದು ಎಂದು ಎಲ್ಲರೂ ನೀರನ್ನು ಸಂಗ್ರಹಿಸಿಟ್ಟುಕೊಳ್ಳಲು ಅನುವಾಗುವುದು ಸಹಜ.
ಹೀಗೆ ವಾರಗಟ್ಟಲೆ, ಹದಿನೈದು ದಿವಸಗಳಿಂದ ತೊಟ್ಟಿ, ಡ್ರಂ ಇತ್ಯಾದಿಗಳಲ್ಲಿ ಸಂಗ್ರಹಿಸಿಟ್ಟುಕೊಂಡ ನೀರಿನಲ್ಲಿ ಕ್ರಮೇಣ ಲಾರ್ವ, ಸೊಳ್ಳೆಗಳು ಹೇರಳವಾಗಿ ಉತ್ಪತ್ತಿಯಾಗಿ ದಿನ ಕಳೆದಂತೆ ಸೊಳ್ಳೆ ನಿಯಂತ್ರಣಕ್ಕೆ ಬಾರದಷ್ಟು ಹುಟ್ಟಿಕೊಂಡು ಜನರನ್ನು ಕಡಿದು  ಡೆಂಘೀ ಹರಡಲು ಕಾರಣವಾಗಿದೆ ಎಂದು ತಾಲೂಕು ಅಡಳಿತ ಮತ್ತು ಜಿಲ್ಲಾ ಆರೋಗ್ಯಾಧಿಕಾರಿಗಳು ಸಮಜಾಯಿಷಿ ನೀಡುತ್ತಾರೆ.
ಸುರಕ್ಷಿತ ಸ್ಥಳಕ್ಕೆ ಮಕ್ಕಳು: ಡೆಂಘೀ ಕಾಯಿಲೆಗೆ ಹೆದರಿ ಹೊರ ಊರಿನಿಂದ ನೆಂಟರು ಗ್ರಾಮಕ್ಕೆ ಬರಲು ಹೆದರುತ್ತಿದ್ದಾರೆ. ಮಕ್ಕಳು ಈ ದಿವಸದಲ್ಲಿ ಶಾಲೆಗೆ ಹೋಗಬೇಕಾಗಿತ್ತು, ಆದರೆ ಡೆಂಘೀಗೆ ಮಕ್ಕಳನ್ನು ಶಾಲೆಗೆ ಓದಲು ಕಳಿಸುವ ಬದಲು ಬೇರೆ ಊರಿನ ಸುರಕ್ಷಿತ ಸ್ಥಳಕ್ಕೆ ಮಕ್ಕಳನ್ನು ಕಳಿಸುವಂತಾಗಿದೆ ಹೇಗಾದರೂ ಮಾಡಿ ಡೆಂಘೀ ಕಾಯಿಲೆಯನ್ನು ಹತೋಟಿಗೆ ತನ್ನಿ ಎಂದು ಗ್ರಾಮಸ್ಥರ ಕೂಗು.
ಡೆಂಘೀ ಘಿ ಕಾಯಿಲೆ ನಿಯಂತ್ರಿಸುವ ಹಿನ್ನಲೆಯಲ್ಲಿ ಸೋಮವಾರ ಜಿಲ್ಲಾಧಿಕಾರಿ ಯಶವಂತ್ ಕುಡ್ಲೂರು ಗ್ರಾಮಕ್ಕೆ ಭೇಟಿ ನೀಡಿ ಗ್ರಾಮಸ್ಥರನ್ನು ಕಂಡು ಮಾತನಾಡಿಸಿದರು.
ಡೆಂಘಿ ಕಾಯಿಲೆಯಿಂದ ಮೃತಪಟ್ಟ ಕುಡ್ಲೂರು ಗ್ರಾಮದ ಇಬ್ಬರು ಮಕ್ಕಳ ಪೋಷಕರನ್ನು ಕಂಡು ಸಾಂತ್ವನ ಹೇಳಿದರು. ಕುಡಿವ ನೀರು ಸರಬರಾಜಿಗೆ ಹಣದ ಕಿಂಚಿತ್ ಅಡಚಣೆಯೂ ಇಲ್ಲ, ಎಷ್ಟು ಹಣ ಖರ್ಚಾದರೂ ಪರವಾಗಿಲ್ಲ, ಮೊದಲು ಗ್ರಾಮಕ್ಕೆ ಶುದ್ಧ ಕುಡಿಯುವ ನೀರು ಸರಬರಾಜು ಮಾಡಿ, ಗ್ರಾಮದಲ್ಲಿ ನೈರ್ಮಲ್ಯವನ್ನು ಕಾಪಾಡಿ, ಡೆಂಘಿ ನಿಯಂತ್ರಿಸಲು ಎಲ್ಲ ಮುನ್ನೆಚ್ಚರಿಕೆ ಕ್ರಮಗಳನ್ನು ತಡಮಾಡದೆ ಕೈಗೊಳ್ಳಬೇಕೆಂದು ಆಧಿಕಾರಿಗಳಿಗೆ ಜಿಲ್ಲಾಧಿಕಾರಿಗಳು ಸೂಚಿಸಿದರು.
ಪ್ರತಿ ಮನೆಗೂ ಭೇಟಿ: ತಹಸೀಲ್ದಾರ್ ರಂಜಿತ, ಜಿಲ್ಲಾ ಆರೋಗ್ಯಾಧಿಕಾರಿ ಡಾ. ನೀರಜ್, ತಾಲೂಕು ವೈದ್ಯಾಧಿಕಾರಿ ಡಾ. ಚಂದ್ರಶೇಖರ್, ತಾಪಂ ಕಾರ್ಯ ನಿರ್ವಹಣಾಧಿಕಾರಿ ದೇವರಾಜ್ ಅವರು ಕುಡ್ಲೂರು ಗ್ರಾಮದಲ್ಲಿ ಪ್ರತಿ ಮನೆಗೂ ಭೇಟಿ ನೀಡಿ ನೀರು ಸಂಗ್ರಹಿಸುವ ತೊಟ್ಟಿ, ಡ್ರಂ ಇತ್ಯಾದಿಗಳನ್ನು ಪರಿಶೀಲಿಸಿ , ಡೆಂಘಿ ನಿಯಂತ್ರಿಸುವ ಮುನ್ನೆಚ್ಚರಿಕಾ ಕ್ರಮಗಳನ್ನು ವಿವರಿಸಿದರು.
ಮ್ಯಾಮ್ಕೋಸ್ ನಿರ್ದೇಶಕ ಆರ್. ದೇವಾನಂದ್, ತಹಶೀಲ್ದಾರ್ ರಂಜಿತ, ಡಿ.ಎಚ್.ಒ.ಡಾ.ನೀರಜ್, ತಾ.ಆರೋಗ್ಯಾಧಿಕಾರಿ ಚಂದ್ರಶೇಖರ್, ಇ.ಒ.ದೇವರಾಜ್,  ಮತ್ತಿತರರ ತಾಲೂಕು ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.
ಡೆಂಘೀ ನಿಯಂತ್ರಿಸಲು ತೆಗೆದುಕೊಳ್ಳಬೇಕಾದ ಕ್ರಮಗಳನ್ನು ಕುರಿತು ಜಿಲ್ಲಾಧಿಕಾರಿಗಳು ಸಭೆ ನಡೆಸಿದರು.

ಪರಿಹಾರಕ್ಕೆ ಒತ್ತಾಯ
ಕ.ಪ್ರ.ವಾರ್ತೆ, ತರೀಕೆರೆ,  ಜೂ.3
ಡೆಂಘೀಯಿಂದ ಮೃತಪಟ್ಟ ಮಕ್ಕಳ ಕುಟಂಬಕ್ಕೆ ಸೂಕ್ತ ಪರಿಹಾರ ನೀಡಬೇಕು ಎಂದು  ಮ್ಯಾಮ್ಕೋಸ್ ನಿರ್ದೇಶಕ ಆರ್. ದೇವಾನಂದ್ ಜಿಲ್ಲಾಧಿಕಾರಿಗಳಲ್ಲಿ ಒತ್ತಾಯಿಸಿದ್ದಾರೆ.
ಕುಡ್ಲೂರು ಗ್ರಾಮದ ಒಂದೇ ಕುಟಂಬದ ಸಹೋದರರಿಬ್ಬರ ಮಕ್ಕಳು ಶಂಕಿತ ಡೆಂಘೀಯಿಂದ ಮೃತಪಟ್ಟಿದ್ದು, ಆ ಮಕ್ಕಳ ಪೋಷಕರ ಮನೆಗೆ ಜಿಲ್ಲಾಧಿಕಾರಿ ಯಶವಂತ್ ಭೇಟಿ ನೀಡಿ ಪೋಷಕರಿಗೆ ಸಾಂತ್ವನ ಹೇಳಿದರು.
ಡೆಂಘೀ ನಿಯಂತ್ರಿಸುವ ಹಿನ್ನೆಲೆಯಲ್ಲಿ ಸೋಮವಾರ ಕುಡ್ಲೂರು ಗ್ರಾಮಕ್ಕೆ ಭೇಟಿ ನೀಡಿದ ಜಿಲ್ಲಾಧಿಕಾರಿ ಯಶವಂತ್ ಅವರಿಗೆ, ಗ್ರಾಮದಲ್ಲಿ ಮಿತಿಮೀರಿ ಹರಡಿರುವ ಡೆಂಘೀ ಬಗ್ಗೆ ಜಿಲ್ಲಾಡಳಿತ, ತಾಲೂಕು ಅಡಳಿತ ಹಾಗು ವಿಶೇಷವಾಗಿ ಆರೋಗ್ಯ ಇಲಾಖೆ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳನ್ನು ವಿವರಿಸಿ ಡೆಂಘೀಯಿಂದ ಮಕ್ಕಳನ್ನು ಕಳೆದುಕೊಂಡ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.
ಶುದ್ಧ ನೀರು: ಗ್ರಾಮದಲ್ಲಿ ಮೊದಲು ಶುದ್ಧ ಕುಡಿಯುವ ನೀರು ಸರಬರಾಜು ಮಾಡಿ, ಗ್ರಾಮಕ್ಕೆ ನೀರು ಸರಬರಾಜು ಮಾಡುವ ನೀರಿನ ನೆಲತೊಟ್ಟಿ ಮತ್ತು ಮೇಲು ತೊಟ್ಟಿಯನ್ನು ಶುಭ್ರವಾಗಿ ತೊಳೆಯದೇ ಎಷ್ಟೋ ತಿಂಗಳಾಗಿದೆ, ಮೊದಲು ಆ ತೊಟ್ಟಿ ಶುದ್ದೀಕರಿಸಲು ಮತ್ತು ಗ್ರಾಮದಲ್ಲಿ  ನೈರ್ಮಲ್ಯವನ್ನು  ಕಾಪಾಡಲು ಸಂಬಂದಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿ ಎಂದು  ಜಿಲ್ಲಾಧಿಕಾರಿಗಳನ್ನು ಗ್ರಾಮಸ್ಥರು ಒತ್ತಾಯಿಸಿದರು.
ಜಿಲ್ಲಾ ಆರೋಗ್ಯಾಧಿಕಾರಿ ಡಾ. ನೀರಜ್, ತಹಸೀಲ್ದಾರ್ ರಂಜಿತ, ತಾಲೂಕು ವೈದ್ಯಾಧಿಕಾರಿ ಡಾ. ಚಂದ್ರಶೇಖರ್ ಇತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.