ಚಿಕ್ಕಮಗಳೂರು

ಅರಣ್ಯ ಭೂಮಿ ತೆರವು ಸ್ಥಗಿತಗೊಳಿಸಿ

Published On :

ಕ.ಪ್ರ.ವಾರ್ತೆ, ಚಿಕ್ಕಮಗಳೂರು,  ಜೂ.4
ಮಲೆನಾಡು ಪ್ರದೇಶಗಳಲ್ಲಿ ಒತ್ತುವರಿಯಾಗಿರುವ ಅರಣ್ಯ ಭೂಮಿಯನ್ನು ತೆರವುಗೊಳಿಸಲು ಮುಂದಾಗಿರುವ ಪ್ರಕ್ರಿಯೆಯನ್ನು ತಕ್ಷಣ ಸ್ಥಗಿತಗೊಳಿಸಿ, ಸಂಬಂಧಿಸಿದ ಅಧಿಕಾರಿಗಳಿಗೆ ಸೂಕ್ತ ಆದೇಶ ನೀಡುವಂತೆ ಕೇಂದ್ರದ ಮಾಜಿ ಸಚಿವೆ ಡಿ.ಕೆ. ತಾರಾದೇವಿ ಸಿದ್ದಾರ್ಥ ರಾಜ್ಯ ಸರ್ಕಾರವನ್ನು ಆಗ್ರಹಿಸಿದ್ದಾರೆ.
ಒತ್ತುವರಿ ಭೂಮಿಯ ಪತ್ತೆಗಾಗಿ ರಾಜ್ಯ ಸರ್ಕಾರ ನೇಮಿಸಿರುವ ಡಾ. ಬಾಲಸುಬ್ರಹ್ಮಣ್ಯನ್ ನೇತೃತ್ವದ ಸಮಿತಿ ಚಿಕ್ಕಮಗಳೂರು ಜಿಲ್ಲೆಯಲ್ಲಿ ಸುಮಾರು 55 ಸಾವಿರ ಎಕರೆಯಷ್ಟು ಅರಣ್ಯ ಹಾಗೂ ಕಂದಾಯ ಇಲಾಖೆಯ ಜಮೀನು ಒತ್ತುವರಿಯಾಗಿರುವುದನ್ನು ಪತ್ತೆ ಹಚ್ಚಿದೆ.
ಈ ಜಮೀನನ್ನು ಡೀಮ್‌ಡ್ ಫಾರೆಸ್ಟ್ ಎಂದು ಪರಿಗಣಿಸಿ ತೆರವುಗೊಳಿಸಬಹುದೆಂದು ನೀಡಿರುವ ವರದಿಯನ್ನು ಆಧರಿಸಿ ಕಂದಾಯ ಹಾಗೂ ಅರಣ್ಯ ಇಲಾಖೆಗಳು ಒತ್ತುವರಿ ತೆರವಿಗೆ ಸಿದ್ಧತೆ ನಡೆಸಿವೆ. ಸರ್ಕಾರ ಈ ವರದಿಯನ್ನು ಒಂದು ಮಗ್ಗುಲಲ್ಲಿ ಮಾತ್ರ ನೋಡದೆ ವಿವಿಧ ಮಗ್ಗುಲುಗಳಲ್ಲಿ ಪರಾಮರ್ಶಿಸಬೇಕೆಂದು ಒತ್ತಾಯಿಸಿದರು.
ಮಾನವೀಯ ದೃಷ್ಟಿ: ಬಡವರು, ದಲಿತರು, ದುರ್ಬಲ ವರ್ಗದವರು, ಮಧ್ಯಮ ವರ್ಗದವರು ಸೇರಿದಂತೆ ಅನೇಕರು ಜಮೀನು ಒತ್ತುವರಿ ಮಾಡಿಕೊಂಡಿದ್ದು, ಅಧಿಕಾರಿಗಳ ಬೇಜವಾಬ್ದಾರಿತನದಿಂದಾಗಿ ಈ ರೀತಿ ಆಗಿದೆ ಎಂದ ಅವರು, ಈ ವಿಚಾರವನ್ನು ಕಾನೂನು ಮಟ್ಟದಲ್ಲಿ ಮಾತ್ರ ನೋಡದೆ, ಮಾನವೀಯ ದೃಷ್ಟಿಯಿಂದ ನೋಡಬೇಕು. ಈ ನಿಟ್ಟಿನಲ್ಲಿ ಜಿಲ್ಲಾಮಟ್ಟದಲ್ಲಿ ಜನಪ್ರತಿನಿಧಿಗಳು, ಅಧಿಕಾರಿಗಳು ಹಾಗೂ ಸಂಘ ಸಂಸ್ಥೆಗಳ ಮುಖಂಡರನ್ನು ಒಳಗೊಂಡ ಸಮಿತಿಯೊಂದನ್ನು ರಚಿಸಿ ಪುನರ್ ವಿಮರ್ಶಿಸಬೇಕೆಂದು ಅವರು ಸಲಹೆ ನೀಡಿದರು.
ಅಕ್ರಮ ಸಕ್ರಮ ಪ್ರಕ್ರಿಯೆ: ಒಂದು ಕಾಲದಲ್ಲಿ ದರಕಾಸ್ತು ಅರ್ಜಿ ಹಾಕಿಕೊಂಡರೆ ಮಂಜೂರಾಗಲು ಸಾಕಷ್ಟು ಕಾಲಾವಕಾಶ ಹಿಡಿಯುತ್ತಿತ್ತು. ಹೀಗಾಗಿ ಜಾಗವನ್ನು ಸಾಗುವಳಿ ಮಾಡಿಕೊಂಡು ಅಕ್ರಮ ಸಕ್ರಮ ಪ್ರಕ್ರಿಯೆಗೆ ಪೂರಕವಾಗಿ ಅರ್ಜಿ ಹಾಕಿಕೊಳ್ಳುವ ರೂಢಿ ಅನೇಕ ವರ್ಷಗಳಿಂದ ಪ್ರಚಲಿತದಲ್ಲಿದೆ. ಆಗ ಯಾರೂ ಇದನ್ನು ವಿರೋಧಿಸಿರಲಿಲ್ಲ.
100 ವರ್ಷಗಳ ಹಿಂದೆ ಬ್ರಿಟಿಷರ ಕಾಲದಲ್ಲಿ ಮಂಜೂರಾದ ಪ್ರಕರಣಗಳಿವೆ. ಸ್ವಾತಂತ್ರ್ಯ ಬಂದ ಬಳಿಕ ಈ ಪ್ರಕರಣಗಳ ಮೇಲೆ ಸರಿಯಾಗಿ ಗಮನ ಹರಿಸದೆ ದಲಿತರು, ದುರ್ಬಲ ವರ್ಗದವರು ಸೇರಿದಂತೆ ಬಡವರು ಭೂಮಿ ತೆರವು ಮಾಡುವ ಪರಿಸ್ಥಿತಿಗೆ ಸಿಲುಕಿದ್ದಾರೆ.
ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳು ಕಾನೂನನ್ನು ಪ್ರಯೋಗ ಮಾಡುವ ಸಂದರ್ಭ ಕುರುಡಾಗಿ ಬಳಸದೆ ಜನಸ್ನೇಹಿಯಾಗಿ ವ್ಯವಹರಿಸಬೇಕು ಎಂದು ಸಲಹೆ ನೀಡಿದ ಅವರು, ಯಾವುದೇ ಕಾರಣಕ್ಕೂ ಸೂಕ್ತ ರೀತಿಯಲ್ಲಿ ಅಧ್ಯಯನ ಮಾಡದೆ ಅಧಿಕಾರಿಗಳು ಏಕಪಕ್ಷೀಯವಾಗಿ ಕ್ರಮ ಕೈಗೊಳ್ಳಲು ಅವಕಾಶ ನೀಡಬಾರದು. ಒಂದು ವೇಳೆ ಇದಕ್ಕೆ ಅವಕಾಶ ನೀಡಿದಲ್ಲಿ ಕಾನೂನು ಸುವ್ಯವಸ್ಥೆ ಹದಗೆಡುವ ಸಂಭವವಿದೆ. ಸರ್ಕಾರ ಈ ಕುರಿತು ಚರ್ಚಿಸಿ ತೀರ್ಮಾನ ತೆಗೆದುಕೊಳ್ಳಲಿ ಎಂದು ಹೇಳಿದರು.
ಅಡಕೆ ಬೆಳೆ ಕುಸಿದಿದೆ: ರಾಜ್ಯ ಸರ್ಕಾರ ಗುಟ್ಕಾ ನಿಷೇಧದ ಬಗ್ಗೆ ಪ್ರಸ್ತಾಪಿಸಿದ ಅವರು, ಹಳದಿ ಎಲೆ ರೋಗ ಬಾಧೆಯಿಂದ ತತ್ತರಿಸಿ ಅಡಕೆ ಬೆಳೆ ಕುಸಿದಿದೆ. ಇದೀಗ ಗುಟ್ಕಾ ನಿಷೇಧ ಮಾಡುತ್ತಾರೆನ್ನುವ ಬೆಳವಣಿಗೆಯಿಂದ ಕ್ವಿಂಟಲ್‌ಗೆ 19 ಸಾವಿರ ರು.ಗಳಷ್ಟಿದ್ದ ಬೆಲೆ 15 ಸಾವಿರ ರು.ಗಳಿಗೆ ಕುಸಿದಿದೆ ಎಂದು ಕೇಳಿದ್ದೇನೆ ಎಂದು ವಿಷಾದಿಸಿದರು.
ಏಕಾಏಕಿ ತೀರ್ಮಾನ ತೆಗೆದುಕೊಳ್ಳದೆ ಬೆಳೆಗಾರರ ಸಮಸ್ಯೆಗಳಿಗೆ ಸ್ಪಂದಿಸಿ, ಸಾಲಮನ್ನಾ, ಗೋರಖ್ ಸಿಂಗ್ ನೇತೃತ್ವದ ಸಮಿತಿಯ ವರದಿ ಅನುಷ್ಠಾನದ ಕಡೆಗೆ ಸರ್ಕಾರ ಗಮನ ಹರಿಸಲಿ. ಗುಟ್ಕಾ ನಿಷೇಧಿಸುವುದು ಅನಿವಾರ್ಯ. ಆದರೆ, ಬೆಳೆಗಾರರಿಗೆ ನಷ್ಟವಾಗುವಂತಹ ಸಂದರ್ಭಕ್ಕೆ ಅವಕಾಶ ನೀಡದೆ ಪರ್ಯಾಯ ವ್ಯವಸ್ಥೆ ರೂಪಿಸಿ, ಅವರಿಗೆ ಲಾಭವಾಗುವ ಹಾದಿಯ ಬಗ್ಗೆಯೂ ಚಿಂತನೆ ನಡೆಸಬೇಕು ಎಂದು ಸಲಹೆ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಕಾಂಗ್ರೆಸ್ ವಕ್ತಾರ ಮಹೇಶ್, ಡಾ. ವಿಜಯಕುಮಾರ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.