ಚಿಕ್ಕಮಗಳೂರು

ಟ್ರ್ಯಾಕ್ಟರ್ ಜಫ್ತಿ: ರೈತರ ಪ್ರತಿಭಟನೆ

Published On :

ಕ.ಪ್ರ.ವಾರ್ತೆ  ಚಿಕ್ಕಮಗಳೂರು  ಜೂ. 12
ಬ್ಯಾಂಕ್‌ನವರು ಟ್ರ್ಯಾಕ್ಟರ್ ಜಫ್ತಿ ಮಾಡಿರುವುದನ್ನು ಖಂಡಿಸಿ ಕರ್ನಾಟಕ ರಾಜ್ಯ ರೈತ ಹಾಗೂ ಹಸಿರು ಸೇನೆ ನೇತೃತ್ವದಲ್ಲಿ ರೈತರು ಬುಧವಾರ ನಗರದ ಐ.ಜಿ. ರಸ್ತೆಯಲ್ಲಿರುವ ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಎದುರು ಪ್ರತಿಭಟನೆ ನಡೆಸಿದರು.
ರಾಜ್ಯ ರೈತ ಸಂಘದ ಕಾರ್ಯಾಧ್ಯಕ್ಷ ಕೆ.ಟಿ. ಗಂಗಾಧರ್ ಅವರ ನೇತೃತ್ವದಲ್ಲಿ ಬ್ಯಾಂಕ್ ಎದುರು ನಡೆದ ಪ್ರತಿಭಟನೆಗೆ ಸ್ಪಂದಿಸಿ ಬ್ಯಾಂಕಿನವರು ರೈತರಿಂದ ಜಫ್ತಿ ಮಾಡಿದ್ದ ಟ್ರ್ಯಾಕ್ಟರ್‌ವನ್ನು ಹಿಂದುರಿಗಿಸಿದ್ದರಿಂದ ಪ್ರತಿಭಟನೆಯನ್ನು ಕೈ ಬಿಡಲಾಯಿತು.
ಬ್ಯಾಂಕ್ ವರ್ತನೆಗೆ ಖಂಡನೆ: ತಾಲೂಕಿನ ಇಂದಾವರ ಗ್ರಾಮದ ರೈತ ಚಂದ್ರಪ್ಪಶೆಟ್ಟಿ ಅವರು 2007ರಲ್ಲಿ ಇಲ್ಲಿನ ಐ.ಜಿ. ರಸ್ತೆಯಲ್ಲಿರುವ ಸ್ಟೇಟ್ ಬ್ಯಾಂಕ್ ಆಫ್ ಮೈಸೂರಿನಲ್ಲಿ ಟ್ರ್ಯಾಕ್ಟರ್ ಖರೀದಿ ಮಾಡಲು 5 ಲಕ್ಷ ಸಾಲ ಪಡೆದುಕೊಂಡಿದ್ದರು. ಇದಕ್ಕೆ ಸರ್ಕಾರ 50 ಸಾವಿರ ಸಹಾಯಧನ ನೀಡಿತ್ತು.
   ಚಂದ್ರಪ್ಪಶೆಟ್ಟಿ ಅವರು 3.15 ಲಕ್ಷ ಸಾಲವನ್ನು ಮರುಪಾವತಿ ಮಾಡಿದ್ದರು. ಹೀಗಿದ್ದರೂ ಕೂಡ ಬ್ಯಾಂಕ್ 6.85 ಲಕ್ಷ ಬಾಕಿ ಇರುವುದಾಗಿ ಹೇಳಿ ಟ್ರ್ಯಾಕ್ಟರ್‌ವನ್ನು ಖಾಸಗಿಯವರಿಂದ ಜಫ್ತಿ ಮಾಡಿಸಿತ್ತು.
  ಇದನ್ನು ಖಂಡಿಸಿ ರೈತ ಸಂಘದ ಮುಖಂಡರು ಹಾಗೂ ಕಾರ್ಯಕರ್ತರು ಮತ್ತು ಇಂದಾವರ ಗ್ರಾಮಸ್ಥರು ಬ್ಯಾಂಕ್ ಎದುರು ಪ್ರತಿಭಟನೆ ನಡೆಸಿದರು.
ಇದೇ ವೇಳೆಯಲ್ಲಿ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಕರ್ನಾಟಕ ರಾಜ್ಯ ರೈತ ಸಂಘದ ಕಾರ್ಯಾಧ್ಯಕ್ಷ ಕೆ.ಟಿ. ಗಂಗಾಧರ್, ರೈತರು ಕಳೆದ ಮೂರು ವರ್ಷಗಳಿಂದ ಸಕಾಲದಲ್ಲಿ ಮಳೆಯಾಗದೆ ಸಂಕಷ್ಟದಲ್ಲಿದ್ದಾರೆ. ಇವರಿಗೆ ಜೀವನ ನಡೆಸುವುದೇ ಕಷ್ಟವಾಗಿದೆ.
ಇಂತಹ ಪರಿಸ್ಥಿತಿಯಲ್ಲಿ ಬ್ಯಾಂಕ್‌ಗಳು ರೈತರ ಸಾಲವನ್ನು ವಸೂಲಿ ಮಾಡಲು ಜಫ್ತಿಯಂತಹ ಕ್ರಮಕ್ಕೆ ಮುಂದಾಗಿರುವುದು ಅತ್ಯಂತ ಖಂಡನೀಯ ಎಂದು ಹೇಳಿದರು.
ಅಧಿಕಾರಿಗಳ ಉದ್ಧಟತನ: ಕಳೆದ ವರ್ಷ ಮಾರ್ಚ್‌ನಲ್ಲಿ ರಿಜರ್ವ್ ಬ್ಯಾಂಕ್ ಆಫ್ ಇಂಡಿಯಾ ಎಲ್ಲಾ ಬ್ಯಾಂಕ್‌ಗಳಿಗೆ ಅನ್ವಯವಾಗುವಂತೆ ಆದೇಶ ಹೊರಡಿಸಿದೆ. ಅದರಲ್ಲಿ ರೈತರ ಸಾಲ ವಸೂಲಿ ಮಾಡಲು ಅವರ ಸ್ಥಿರ ಮತ್ತು ಚರಾಸ್ತಿಯನ್ನು ಜಫ್ತಿ ಮಾಡಬಾರದೆಂದು ಸೂಚನೆ ನೀಡಿದೆ. ಹಾಗಿದ್ದರೂ ಚಿಕ್ಕಮಗಳೂರಿನಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಟ್ರ್ಯಾಕ್ಟರ್‌ವನ್ನು ಜಫ್ತಿ ಮಾಡಿದೆ. ಇದು, ಅಧಿಕಾರಿಗಳು ಉದ್ಧಟನತನ. ಜಫ್ತಿ ಮಾಡಿದ ಟ್ರ್ಯಾಕ್ಟರ್‌ವನ್ನು ಕೂಡಲೇ ವಾಪಸ್ ನೀಡಬೇಕು ಆಗ್ರಹಿಸಿದರು.
ಸರ್ಕಾರ ಗುಟ್ಕಾ ನಿಷೇಧ ಮಾಡಿದೆ. ಹಳದಿ ಎಲೆ ರೋಗದಿಂದ ಅಡಕೆ ಬೆಳೆಗಾರರು ಕಂಗಾಲಾಗಿದ್ದಾರೆ. ಸಂಕಷ್ಟದಲ್ಲಿರುವ ರೈತರಿಗೆ ನೆರವು ನೀಡಲು ಗೋರಕ್‌ಸಿಂಗ್ ಅವರು ನೀಡಿರುವ ವರದಿ ಇಂದಿಗೂ ಜಾರಿಗೆ ಬಂದಿಲ್ಲ. ರೈತರು ಕಷ್ಟದಲ್ಲಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಬ್ಯಾಂಕ್‌ಗಳು ಜಫ್ತಿಗೆ ಮುಂದಾಗಿರುವುದು ಸರಿಯಲ್ಲ. ಇಂತಹ ದಾರಿಯಲ್ಲಿ ಬ್ಯಾಂಕ್‌ಗಳು ಮುನ್ನಡೆದರೆ ಮುಂದಿನ ದಿನಗಳಲ್ಲಿ ಉಗ್ರವಾದ ಹೋರಾಟವನ್ನು ರೂಪಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಪ್ರತಿಭಟನೆಯಲ್ಲಿ ರಾಜ್ಯ ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗುರುಶಾಂತಪ್ಪ, ಹಸಿರು ಸೇನೆಯ ಜಿಲ್ಲಾಧ್ಯಕ್ಷ ಎಚ್.ಕೆ. ಶಶಿಧರ್, ರೈತ ಸಂಘದ ಜಿಲ್ಲಾ ಗೌರವಾಧ್ಯಕ್ಷ ಕೆ.ಕೆ. ಕೃಷ್ಣೇಗೌಡ, ತಾಲೂಕು ಕಾರ್ಯದರ್ಶಿ ಟಿ.ಎಂ. ಮಂಜುನಾಥ್, ಸಹ ಕಾರ್ಯದರ್ಶಿ ಎಂ.ಎನ್. ರಮೇಶ್ ಹಾಗೂ ರೈತರು ಪಾಲ್ಗೊಂಡಿದ್ದರು. ಪ್ರತಿಭಟನೆಯ ಬಳಿಕ ರೈತ ಸಂಘದ ಮುಖಂಡರು ಬ್ಯಾಂಕಿನ ವ್ಯವಸ್ಥಾಪಕರೊಂದಿಗೆ ಮಾತುಕತೆ ನಡೆಸಿ, ಬಾಕಿ ಇರುವ ಸಾಲವನ್ನು ಮರುಪಾವತಿ ಮಾಡುವುದಾಗಿ ಚಂದ್ರಪ್ಪಶೆಟ್ಟಿ ಅವರು ಹೇಳಿದ ಬಳಿಕ ಜಫ್ತಿ ಮಾಡಿದ ಟ್ರ್ಯಾಕ್ಟರ್‌ವನ್ನು ಹಿಂದುರಿಗಿಸಲಾಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.