ನಕ್ಸಲ್ ಪೀಡಿತ ಪ್ರದೇಶ ಅಭಿವೃದ್ಧಿಗೆ 12.50 ಕೋಟಿ: ಪ್ರಥಮ ಹಂತದಲ್ಲಿ ರು. 9.94 ಕೋಟಿ ಬಳಕೆ
ಕಪ್ರ ವಾರ್ತೆ, ಚಿಕ್ಕಮಗಳೂರು, ಜೂ.14
ಜಿಲ್ಲೆಯ ನಕ್ಸಲ್ ಪೀಡಿತ ಪ್ರದೇಶಗಳ ಅಭಿವೃದ್ಧಿ ಹಾಗೂ ಅಲ್ಲಿನ ನಿವಾಸಿಗಳಿಗೆ ಮೂಲಭೂತ ಸೌಲಭ್ಯ ನೀಡಲು ರಾಜ್ಯ ಸರ್ಕಾರ ಬಿಡುಗಡೆ ಮಾಡಿದ್ದ 12.50 ಕೋಟಿಯಲ್ಲಿ ಪ್ರಥಮ ಹಂತದಲ್ಲಿ 9.94 ಕೋಟಿ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗಿದೆ.
ಮೇ ಅಂತ್ಯದೊಳಗೆ ಕೆಲವು ಕಾಮಗಾರಿಗಳು ಪೂರ್ಣಗೊಂಡಿದ್ದು, ಇನ್ನು ಕೆಲವು ಕಾಮಗಾರಿಗಳು ಪ್ರಗತಿಯಲ್ಲಿವೆ. ಈ ಪ್ರದೇಶದಲ್ಲಿ ನಿರಂತರವಾಗಿ ಮಳೆ ಬೀಳುತ್ತಿರುವುದರಿಂದ ಕೆಲವು ಕಾಮಗಾರಿಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.
129 ಕಾಮಗಾರಿಗಳು: ಸರ್ಕಾರ ಬಿಡುಗಡೆ ಮಾಡಿದ್ದ ಹಣದಲ್ಲಿ ಮೂರು ತಾಲೂಕುಗಳಲ್ಲಿ 129 ಕಾಮಗಾರಿಗಳನ್ನು ತೆಗೆದುಕೊಳ್ಳಲು ಉದ್ದೇಶಿಸಲಾಗಿದ್ದು, ಇವುಗಳಲ್ಲಿ ಮೂಡಿಗೆರೆ- 37, ಕೊಪ್ಪ- 31 ಹಾಗೂ ಶೃಂಗೇರಿ ತಾಲೂಕಿನಲ್ಲಿ 61 ಕಾಮಗಾರಿಗಳನ್ನು ಗುರುತಿಸಿದ್ದು, ಈ ಪೈಕಿ ಮೂಡಿಗೆರೆ ತಾಲೂಕಿನಲ್ಲಿ 26, ಕೊಪ್ಪ- 24 ಹಾಗೂ ಶೃಂಗೇರಿ ತಾಲೂಕಿನಲ್ಲಿ 30 ಕಾಮಗಾರಿಗಳನ್ನು ತೆಗೆದುಕೊಳ್ಳಲಾಗಿದ್ದು, ಅವುಗಳ ಅಂದಾಜು ವೆಚ್ಚ 9.94 ಕೋಟಿ ಆಗಿದ್ದು, ಇದರಲ್ಲಿ ಮೂಡಿಗೆರೆ ತಾಲೂಕಿಗೆ 3.57 ಕೋಟಿ, ಕೊಪ್ಪ- 3.84 ಕೋಟಿ, ಶೃಂಗೇರಿ- 2.53 ಕೋಟಿ ಬಿಡುಗಡೆಗೆ ಆಡಳಿತಾತ್ಮಕ ಮಂಜೂರಾತಿ ನೀಡಲಾಗಿತ್ತು.
ಪ್ರಥಮ ಹಂತದಲ್ಲಿ ಮುಕ್ತಾಯಗೊಂಡ ಕಾಮಗಾರಿಗಳಿಗೆ 9.94 ಬಿಡುಗಡೆ ಮಾಡಬೇಕಾಗಿದ್ದು, ಇದರಲ್ಲಿ ಶೇ.50 ರಷ್ಟು ಅಂದರೆ 4.97 ಕೋಟಿ ಬಿಡುಗಡೆ ಮಾಡಲಾಗಿದೆ. ಇವುಗಳಲ್ಲಿ ಮೂಡಿಗೆರೆ ತಾಲೂಕಿಗೆ 1.78 ಕೋಟಿ, ಕೊಪ್ಪ ತಾಲೂಕಿಗೆ 1.92 ಕೋಟಿ ಹಾಗೂ ಶೃಂಗೇರಿ ತಾಲೂಕಿಗೆ 1.26 ಕೋಟಿ ಬಿಡುಗಡೆ ಮಾಡಲಾಗಿದೆ. ಇನ್ನುಳಿದ ಶೇ.50 ರಷ್ಟು ಹಣವನ್ನು ಬಿಡುಗಡೆ ಮಾಡಬೇಕಾಗಿದೆ. ಇದರ ಜತೆಗೆ ಪೂರ್ಣಗೊಂಡಿರುವ ಕಾಮಗಾರಿಗಳ ಬಿಲ್ ಜಿಲ್ಲಾಡಳಿತಕ್ಕೆ ಸಲ್ಲಿಸಲಾಗಿದ್ದು, ಹಣ ಬಿಡುಗಡೆಯ ಹಂತದಲ್ಲಿದೆ.
ಎಷ್ಟೇಷ್ಟು ಹಣ: ಮೂಡಿಗೆರೆ ತಾಲೂಕಿನ ನಕ್ಸಲ್ ಪೀಡಿತ ಪ್ರದೇಶಗಳಲ್ಲಿ ಗ್ರಾಮ ಪಂಚಾಯ್ತಿವಾರು ಕಾಮಗಾರಿಗಳನ್ನು ತೆಗೆದುಕೊಳ್ಳಲಾಗಿದೆ.
ಸಂಸೆ ಗ್ರಾಮ ಪಂಚಾಯ್ತಿಯಲ್ಲಿ 2.55 ಕೋಟಿ ವೆಚ್ಚದಲ್ಲಿ 15 ಕಾಮಗಾರಿಗಳಿಗೆ ಆಡಳಿತಾತ್ಮಕ ಮಂಜೂರಾತಿ ನೀಡಲಾಗಿದ್ದು, ಇವುಗಳಲ್ಲಿ 5 ಕಾಮಗಾರಿಗಳು ಮಾತ್ರ ಪೂರ್ಣಗೊಂಡಿವೆ. ಇವುಗಳ ಅಂದಾಜು ವೆಚ್ಚ 1.28 ಕೋಟಿ. ಕಳಸ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ 1.46 ಕೋಟಿ ವೆಚ್ಚದಲ್ಲಿ 13 ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದ್ದು, ಈ ಪೈಕಿ 10 ಕಾಮಗಾರಿಗಳು ಪೂರ್ಣಗೊಂಡಿವೆ. ಅದೇ ರೀತಿ ಹೊರನಾಡು ಗ್ರಾಮ ಪಂಚಾಯ್ತಿಗೆ 32.50 ಲಕ್ಷ, ಸುಂಕಸಾಲೆ ಗ್ರಾಮ ಪಂಚಾಯ್ತಿಗೆ 9.50 ಲಕ್ಷ, ತೋಟದೂರು ಪಂಚಾಯ್ತಿಗೆ 10 ಲಕ್ಷ, ಇಡಕಣಿ ಗ್ರಾಮ ಪಂಚಾಯ್ತಿಗೆ 25 ಲಕ್ಷ, ಮರಸಣಿಗೆ ಪಂಚಾಯ್ತಿಗೆ 20.75 ಲಕ್ಷ ಕಾಯ್ದಿರಿಸಲಾಗಿದ್ದು, ಮೂಡಿಗೆರೆ ತಾಲೂಕಿಗೆ ಬಿಡುಗಡೆಯಾಗಿರುವ 5 ಕೋಟಿಯಲ್ಲಿ 3.40 ಕೋಟಿ ಕಾಮಗಾರಿಗಳನ್ನು ಪ್ರಥಮ ಹಂತದಲ್ಲಿ ತೆಗೆದುಕೊಳ್ಳಲಾಗಿದೆ.
ಕೊಪ್ಪ ತಾಲೂಕಿನ ಗುಡ್ಡೆತೋಟ ಪಂಚಾಯ್ತಿ ವ್ಯಾಪ್ತಿಯಲ್ಲಿ 168 ಲಕ್ಷ ವೆಚ್ಚದಲ್ಲಿ ಕಾಮಗಾರಿಗಳನ್ನು ತೆಗೆದುಕೊಳ್ಳಲಾಗಿದ್ದು, ಈ ಪೈಕಿ ಪ್ರಥಮ ಹಂತದಲ್ಲಿ 118.40 ಲಕ್ಷ ವೆಚ್ಚದಲ್ಲಿ ಕಾಮಗಾರಿಗಳನ್ನು ತೆಗೆದುಕೊಳ್ಳಲಾಗಿದ್ದು, ಇಲ್ಲಿನ 10 ಕಾಮಗಾರಿಗಳಲ್ಲಿ 7 ಕಾಮಗಾರಿಗಳು ಪೂರ್ಣಗೊಂಡಿವೆ. ಅಗಳಗಂಡಿ ಪಂಚಾಯ್ತಿಗೆ 174 ಲಕ್ಷ ಕಾಮಗಾರಿಗಳಿಗೆ ನಿಗಧಿಪಡಿಸಲಾಗಿದ್ದು, ಈ ಪೈಕಿ 114 ಲಕ್ಷ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಅತ್ತಿಕೊಡಿಗೆ ಪಂಚಾಯ್ತಿಗೆ 158 ಲಕ್ಷ ಕಾಮಗಾರಿಗೆ ವೆಚ್ಚ ಮಾಡಲಾಗುತ್ತಿದ್ದು, ಇದರಲ್ಲಿ 291 ಲಕ್ಷದ ಕಾಮಗಾರಿ ಪ್ರಗತಿಯಲ್ಲಿವೆ.
ನೆಮ್ಮಾರು ಪಂಚಾಯ್ತಿಗೆ 72 ಲಕ್ಷ: ಶೃಂಗೇರಿ ತಾಲೂಕಿನ ಕೆರೆ ಪಂಚಾಯ್ತಿಯಲ್ಲಿ 23 ಕಾಮಗಾರಿಗಳಿಗೆ 178.50 ಲಕ್ಷ ಅಂದಾಜು ಪಟ್ಟಿ ಸಲ್ಲಿಸಲಾಗಿದ್ದು, ಇದರಲ್ಲಿ ಪ್ರಥಮ ಹಂತದಲ್ಲಿ 48.70 ಲಕ್ಷ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗಿದೆ. ನೆಮ್ಮಾರು ಪಂಚಾಯ್ತಿಯಲ್ಲಿ 72 ಲಕ್ಷ ವೆಚ್ಚದಲ್ಲಿ 10 ಕಾಮಗಾರಿಗಳನ್ನು ತೆಗೆದುಕೊಳ್ಳಲಾಗಿದ್ದು, 41.50 ಲಕ್ಷದ ಕಾಮಗಾರಿ ಪ್ರಗತಿಯಲ್ಲಿದೆ. ಕೂತುಗೋಡು ಪಂಚಾಯ್ತಿಯಲ್ಲಿ 9 ಲಕ್ಷ, ಬೇಗಾರು ಪಂಚಾಯ್ತಿ ವ್ಯಾಪ್ತಿಯಲ್ಲಿ 93 ಲಕ್ಷ, ಮೆಣಸೆ ಗ್ರಾಪಂನಲ್ಲಿ 15 ಲಕ್ಷ, ಮರ್ಕಲ್ ಪಂಚಾಯ್ತಿಯಲ್ಲಿ 132.50 ಲಕ್ಷದಲ್ಲಿ ಪ್ರಥಮ ಹಂತದಲ್ಲಿ ಕಾಮಗಾರಿಯನ್ನು ತೆಗೆದುಕೊಳ್ಳಲಾಗಿದೆ.
ಈ ಮೂರು ತಾಲೂಕುಗಳಲ್ಲಿ ಕೈಗೆತ್ತಿಕೊಂಡಿರುವ ಕಾಮಗಾರಿಗಳನ್ನು ನಿರ್ಮಿತಿ ಕೇಂದ್ರ ಹಾಗೂ ಭೂ ಸೇನಾ ನಿಗಮಕ್ಕೆ ವಹಿಸಲಾಗಿದೆ. ಸದ್ಯ ಮಳೆಯಾಗುತ್ತಿರುವುದರಿಂದ ಎರಡನೇ ಹಂತದ ಕಾಮಗಾರಿಗಳನ್ನು ಮಳೆಗಾಲ ಮುಗಿದ ಬಳಿಕ ತೆಗೆದುಕೊಳ್ಳಲಾಗುವುದು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

