ಚಿಕ್ಕಮಗಳೂರು

ಸಾಲ ಮನ್ನಾ: ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ

Published On :

ಕ.ಪ್ರ.ವಾರ್ತೆ,  ಚಿಕ್ಕಮಗಳೂರು, ಜೂ.26
ಹಳದಿ ಎಲೆ ರೋಗ ಪೀಡಿತ ಅಡಕೆ ತೋಟಗಳ ಮಾಲೀಕರ ಸಾಲ ಮನ್ನಾಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಲಾಗುವುದು ಎಂದು ಕೆಪಿಸಿಸಿ ಕಿಸಾನ್ ಘಟಕದ ಉಪಾಧ್ಯಕ್ಷ ಸಚಿನ್ ಮೀಗಾ ಹೇಳಿದ್ದಾರೆ.
ಹಳದಿ ಎಲೆ ರೋಗ ಪೀಡಿತ ಅಡಕೆ ತೋಟಗಳ ಮಾಲೀಕರ ಸಾಲವನ್ನು ಮನ್ನಾ ಮಾಡುವಂತೆ ಗೋರಖ್ ಸಿಂಗ್ ನೇತೃತ್ವದ ಸಮಿತಿ ಕೇಂದ್ರ ಸರ್ಕಾರಕ್ಕೆ ವರದಿ ಸಲ್ಲಿಸಿತ್ತು. ಈ ವರದಿ ಅನುಷ್ಟಾನಕ್ಕೆ ಸಂಬಂಧಿಸಿದಂತೆ ರಾಜ್ಯ ಹೈಕೋರ್ಟ್ ಕಳೆದ ವರ್ಷ ಸೆಪ್ಟಂಬರ್ 25 ರಂದು ಬೆಳೆಗಾರರ ಸಾಲ ಮನ್ನಾ ಅನುಷ್ಟಾನಗೊಳಿಸುವಂತೆ ಕೇಂದ್ರದ ಹಣಕಾಸು ಸಚಿವರಿಗೆ ಆದೇಶ ನೀಡಿತ್ತು. ಇದು, ಪಾಲನೆ ಆಗದ ಕಾರಣ ಹಣಕಾಸು ಕಾರ್ಯದರ್ಶಿಯವರ ವಿರುದ್ಧ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಲಾಗಿತ್ತು.
ಆದರೆ, ಕೇಂದ್ರ ಸರ್ಕಾರದ ಹಣಕಾಸು ಸಚಿವಾಲಯ ಅಡಿಕೆ ಬೆಳೆಗಾರರ ಸಾಲವನ್ನು 11 ವರ್ಷ ಮರು ಹೊಂದಾಣಿಕೆ ಮಾಡಿದ್ದೇವೆ. ಪುನಶ್ಚೇತನದಲ್ಲಿ ಹಣ ನೀಡಿದ್ದೇವೆ. ಆದ್ದರಿಂದ ಗೋರಕ್ ಸಿಂಗ್ ವರದಿಯನ್ನು ಪೂರ್ಣ ಪ್ರಮಾಣದಲ್ಲಿ ಅನುಷ್ಟಾನ ಮಾಡಲಿಕ್ಕೆ ಆಗದ್ದಿದ್ದರೂ ಹಲವಾರು ಯೋಜನೆಗಳನ್ನು ಅನುಷ್ಟಾನ ಮಾಡಿದ್ದೇವೆ. ಸಾಲ ಮನ್ನಾಕ್ಕೆ ಸರ್ಕಾರ ಒಪ್ಪುತ್ತಿಲ್ಲ ಎಂದು ಪ್ರಮಾಣ ಪತ್ರ ಸಲ್ಲಿಸಿದ್ದಾರೆ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಅರ್ಜಿ ವಜಾ: ಈ ಹಿನ್ನೆಲೆಯಲ್ಲಿ ನ್ಯಾಯಾಂಗ ನಿಂದನೆ ಅರ್ಜಿ ವಜಾ ಆಗಿದೆ. ಆದರೆ, ರಾಜ್ಯ ಉಚ್ಚ ನ್ಯಾಯಾಲಯ ಈಗಾಗಲೇ ಸಾಲ ಮನ್ನಾ ಅನುಷ್ಟಾನ ಮಾಡಿ ಎಂದು ಆದೇಶವಿರುವುದರಿಂದ ಈ ಆದೇಶವನ್ನು ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಲು ಅವಕಾಶ ನೀಡಿದೆ. ಈಗಾಗಲೇ ನೂರಾರು ರೈತರು ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿ ಎಂದು ಒತ್ತಡ ಹೇರುತ್ತಿದ್ದಾರೆ ಎಂದರು.
ಶೀಘ್ರ ಮೇಲ್ಮನವಿ: ಈ ಹಿನ್ನೆಲೆಯಲ್ಲಿ ಅಡಿಕೆ ಬೆಳೆಗಾರರ ಹಿತಾಸಕ್ತಿ ಕಾಪಾಡುವ ನಿಟ್ಟಿನಲ್ಲಿ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಲು ಉಚ್ಚ ನ್ಯಾಯಾಲಯ ನೀಡಿದ ಆದೇಶವನ್ನು ಹಣಕಾಸು ಸಚಿವಾಲಯ ಪಾಲಿಸಿಲ್ಲವೆಂದು ತೀರ್ಪಿನ ಆದೇಶದ ಪ್ರಕಾರ ಅಡಿಕೆ ಬೆಳೆಗಾರರ ಸಾಲ ಮನ್ನಾ ಮಾಡುವಂತೆ ಸುಪ್ರೀಂ ಕೋರ್ಟ್‌ಗೆ ಶೀಘ್ರದಲ್ಲಿ ಅಡಿಕೆ ಬೆಳೆಗಾರರೊಂದಿಗೆ ಚರ್ಚಿಸಿ ಮೇಲ್ಮನವಿ ಸಲ್ಲಿಸಲಾಗುವುದು ಎಂದು ಹೇಳಿದ್ದಾರೆ.
ಬೆಳೆಗಾರರ ಹಿತಕಾಯಲು ಸಿದ್ಧ: ಅಡಿಕೆ ಬೆಳೆಗಾರರ ವಿಚಾರದಲ್ಲಿ  ರಾಜಕೀಯ ಸೇರಿಸುವುದಿಲ್ಲ ಅಡಿಕೆ ಬೆಳೆಗಾರರು ಹಾಗೂ ರೈತರ ವಿಚಾರ ಬಂದಾಗ ನನಗೆ ರಾಜಕೀಯ ಪಕ್ಷಗಳಿಗಿಂತ ರೈತರ ಹಿತ ಕಾಪಾಡುವುದು ಮುಖ್ಯ. ಈಗಾಗಲೇ ಹಲವಾರು ಅಡಿಕೆ ಬೆಳೆಗಾರರರು ಸಾಲ ತೀರಿಸಲಾಗದೇ ಆತ್ಮಹತ್ಯೆಗೆ ಶರಣಾಗಿದ್ದಾರೆ. ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ಒಂದುಕಡೆ ನ್ಯಾಯಾಲಯ ಮತ್ತು ಸರ್ಕಾರದ ಮುಖ್ಯಸ್ಥರಲ್ಲಿ ಹೋರಾಟ ನಡೆಸುತ್ತೇನೆ. ಅಡಿಕೆ ಬೆಳೆಗಾರರ ಹಿತ ಕಾಪಾಡಲಾಗುವುದು ಎಂದಿದ್ದಾರೆ.

ರೈತರಿಗೆ ಅನುಕೂಲಗಳೇನು?
 ಅಡಕೆ ಬೆಳೆಗಾರರ ಹಿತಾಸಕ್ತಿ ಕಾಪಾಡುವ ನಿಟ್ಟಿನಲ್ಲಿ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಲು ಉಚ್ಚ ನ್ಯಾಯಾಲಯ ನೀಡಿದ ಆದೇಶವನ್ನು ಹಣಕಾಸು ಸಚಿವಾಲಯ ಪಾಲಿಸಿಲ್ಲವೆಂದು ತೀರ್ಪು.
 ಹಳದಿ ಎಲೆ ರೋಗ ಪೀಡಿತ ಅಡಿಕೆ ತೋಟಗಳ ಮಾಲೀಕರ ಸಾಲವನ್ನು ಮನ್ನಾ ಮಾಡುವಂತೆ ಗೋರಖ್ ಸಿಂಗ್ ನೇತೃತ್ವದ ಸಮಿತಿ ಕೇಂದ್ರ ಸರ್ಕಾರಕ್ಕೆ ವರದಿ ಸಲ್ಲಿಕೆ.
 ಈ ವರದಿ ಅನುಷ್ಟಾನಕ್ಕೆ ಸಂಬಂಧಿಸಿದಂತೆ ರಾಜ್ಯ ಹೈಕೋರ್ಟ್ ಕಳೆದ ವರ್ಷ ಸೆ. 25ರಂದು ಬೆಳೆಗಾರರ ಸಾಲ ಮನ್ನಾ ಅನುಷ್ಟಾನಗೊಳಿಸುವಂತೆ ಕೇಂದ್ರ ಹಣಕಾಸು ಸಚಿವರಿಗೆ ಆದೇಶ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.